ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಐದು ದಿನಗಳ ಕಾಲ ನಡೆದ ಕಾದಾಟಕ್ಕೆ ಬುಧವಾರ ತಡರಾತ್ರಿ ಬ್ರೇಕ್ ಬಿದ್ದಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಇದೇ ಶನಿವಾರ (ಮೇ 21) ಮಧ್ಯಾಹ್ನ 12.30ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಕಗ್ಗಂಟನ್ನು ಪರಿಹರಿಸುವುದರಲ್ಲಿಯೇ ಹೈರಾಣಾಗಿರುವ ಕಾಂಗ್ರೆಸ್ ಹೈಕಮಾಂಡ್‌ಗೆ ಇದೀಗ ಸಚಿವ ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆಯ ಜಂಜಾಟ ಶುರುವಾಗಲಿದೆ.
ಸಿದ್ದರಾಮಯ್ಯ, ಶಿವಕುಮಾರ್ ಅವರು ನಾಯಕತ್ವಕ್ಕಾಗಿ ಸೆಣಸಾಟ ನಡೆಸಿದ್ದರು. ಇದನ್ನು ಬಗೆಹರಿಸಲು ನಾನಾ ಪ್ರಯತ್ನ ನಡೆದರೂ ಇಬ್ಬರೂ ತಮ್ಮ ನಿಲುವಿಗೆ ಅಂಟಿಕೊಂಡರು. ಸಿಎಮ ಸ್ಥಾನ ತಮಗೆ ಯಾಕೆ ದಕ್ಕಬೇಕು ಎನ್ನುವ ಬಗ್ಗೆ ವರಿಷ್ಠರ ಮುಂದೆ ವಾದ ಮಂಡಿಸಿದ್ದರು. ಇಬ್ಬರೂ ಪಟ್ಟು ಬಿಡದಿದ್ದಾಗ, ಹೈಕಮಾಂಡ್‌ಗೆ ದೊಡ್ಡತಲೆನೋವಾಗಿ ಪರಿಣಮಿಸಿತು. ‘ಸಂಧಾನ ಸೂತ್ರ’ವನ್ನು ಹೆಣೆದ ಕಾಂಗ್ರೆಸ್ ವರಿಷ್ಠರು ಕೊನೆಗೂ ಇಬ್ಬರನ್ನೂ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. 2013-2018ರ ಅವಧಿಯಲ್ಲಿ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಸಿದ್ದರಾಮಯ್ಯ ಅವರು ಇದೇ 20ರಿಂದ ತಮ್ಮ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಸಂಧಾನ ಯಶಸ್ವಿಯಾದ ಬಳಿಕ ಇಬ್ಬರನ್ನೂ ಒಟ್ಟಿಗೆ ನಿಲ್ಲಿಸಿ ಕೈ ಎತ್ತಿ ಹಿಡಿದು ‘ಒಗ್ಗಟ್ಟು’ ಪ್ರದರ್ಶಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಸರ್ಕಾರ ರಚನೆಯ ಹಾದಿಗೆ ಸುಗಮವಾಗಿದೆ ಎನ್ನುವ ಸಂದೇಶ ರವಾನಿಸಿದರು. ಒಂದೇ ವಿಮಾನದಲ್ಲಿ ಬೆಂಗಳೂರಿಗೆ ಬಂದ ಇಬ್ಬರು ನಾಯಕರು ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗಿಯಾದರು.
ಇದನ್ನೂ ಓದಿ: ಸಿಎಂ ಆಯ್ಕೆ ವಿಳಂಬಕ್ಕೆ ಬಿಜೆಪಿ ಟೀಕೆ; ಉದಾಹರಣೆ ಸಹಿತ ತಿರುಗೇಟು ನೀಡಿದ ಜೈರಾಮ್ ರಮೇಶ್
ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಅದೇ ದಿನ 20ಕ್ಕೂ ಹೆಚ್ಚು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಎಐಸಿಸಿ ಪ್ರದಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಪ್ರಕಟಸಿದ್ದಾರೆ. ಸಚಿವ ಸಂಪುಟದಲ್ಲಿ ಯಾರಿರಬೇಕು ಎಂಬುದನ್ನು ನಿಶ್ಚಯಿಸಲು ಇಬ್ಬರು ನಾಯಕರು ಶುಕ್ರವಾರವೇ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಈ ಸಮಾರಂಭದಲ್ಲಿ ಬಿಜೆಪಿಯೇತರ ವಿರೋಧ ಪಕ್ಷಗಳ ನಾಯಕರು, ವಿವಿಧ ರಾಜ್ಯಗಳ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಭಾಗಿಯಾಗಲಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ 135 ಶಾಸಕರು ಆಯ್ಕೆಯಾಗಿರುವುದರಿಂದ ಯಾರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂಬ ತೀರ್ಮಾನ ಕೈಗೊಳ್ಳುವುದು ಪರಿಷ್ಕರಿಗೆ ಸವಾಲಾಗಿದೆ. ಅನೇಕ ನಾಯಕರು ಈಗಾಗಲೇ ಸಚಿವ ಸ್ಥಾನಕ್ಕೆ ತಮ್ಮ ಹಕ್ಕು ಮಂಡಿಸಿದ್ದಾರೆ. ಜಾತಿ, ಪ್ರಾದೇಶಿಕತೆ ಹಾಗೂ ಸಿದ್ದರಾಮಯ್ಯ ಶಿವಕುಮಾರ್ ಅವರ ಆಪ್ತ ಬಣದ ವಾದವನ್ನು ಮುಂದಿಟ್ಟು, ಶಾಸಕರು, ಹಕ್ಕೊತ್ತಾಯ ಮಂಡಿಸುವುದರಿಂದಾಗಿ, ಆಯ್ಕೆ ಮತ್ತು ಖಾತೆ ಹಂಚಿಕೆ ವರಿಷ್ಟರನ್ನು ಇಕ್ಕಟ್ಟಿಗೆ ದೂಡುವ ಸಾಧ್ಯತೆಯೂ ಇದೆ. ಇಬ್ಬರು ನಾಯಕರು, ತಮ್ಮ ಆಪ್ತರಿಗೆ ಸಚಿವ ಸ್ಥಾನ ಹಾಗೂ ಆಯಕಟ್ಟಿನ ಖಾತೆ ಕೊಡಿಸಬೇಕಿರುವುದರಿಂದಾಗಿ ಈ ಪ್ರಕ್ರಿಯೆ ಮೇಲೆ ಎಲ್ಲರ ಕುತೂಹಲ ನೆಟ್ಟಿದೆ.


