ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಿಂದ ಬಿಜೆಪಿಯೊಳಗೆ ಬಿರುಕುಂಟಾಗಿದ್ದು, ಪಕ್ಷದ ಮುಖಂಡರು ಯಡಿಯೂರಪ್ಪನವರ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, “ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಯಾವ ಶಾಸಕರಿಗೆ ಅಸಮಾಧಾನ ಇದೆಯೋ, ಅಂಥವರು ದೆಹಲಿಗೆ ಹೋಗಿ ದೂರು ನೀಡಲಿ. ನನಗೆ ಅಭ್ಯಂತರವಿಲ್ಲ” ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಅತೃಪ್ತ ಶಾಸಕರು ಮನಸ್ಸಿಗೆ ಬಂದಂತೆ ಮಾತನಾಡಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಮಾಡಬಾರದು. ಯಾವುದೇ ಬೆಳವಣಿಗೆಯಾದರೂ ಪಕ್ಷದ ವರಿಷ್ಠರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಪಕ್ಷದ ವರಿಷ್ಠರಿಗೆ ಯಾವುದು ಸರಿ ತಪ್ಪು ಎಂಬುದು ತಿಳಿದಿದೆ. ನಮ್ಮ ಶಾಸಕರು ವಿನಾಕಾರಣ ಹೇಳಿಕೆ ನೀಡುವ ಬದಲು ದೂರು ನೀಡಲಿ” ಎಂದು ಹೇಳಿದರು.
ಇದನ್ನೂ ಓದಿ: ಸಂಪುಟ ವಿಸ್ತರಣೆ-ಸ್ಫೋಟಗೊಂಡ ಭಿನ್ನಮತ: ನಮ್ಮ ಭಿಕ್ಷೆಯಿಂದಲೇ ಯಡಿಯೂರಪ್ಪ ಸಿಎಂ ಆಗಿದ್ದು..!
ರಾಜ್ಯದಲ್ಲಿ ಸಂಪುಟ ವಿಸ್ತರಣೆಯ ಕಾವು ಬಿಜೆಪಿ ಒಳಗೆ ಏರುತ್ತಲೇ ಇದೆ. ಒಬ್ಬರ ನಂತರ ಮತ್ತೊಬ್ಬರು ತಮ್ಮ ಅಸಮಾಧಾನವನ್ನು ನೇರವಾಗಿಯೇ ಹೊರಹಾಕುತ್ತಿದ್ದಾರೆ. ಬಿಜೆಪಿಗೆ ವಲಸೆ ಬಂದವರಲ್ಲಿಯೇ ಒಡಕುಂಟಾಗಿದೆ. ಇನ್ನು ಬಿಜೆಪಿಯ ಒಳಗೆ ಹಲವು ವರ್ಷಗಳಿಂದ ದುಡಿದವರಿಗೆ ಅವಕಾಶ ನೀಡಿಲ್ಲ ಎಂದು ಮೂಲ ಬಿಜೆಪಿಗರು ಆರೋಪಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಸಂಪುಟ ವಿಸ್ತರಣೆಯ ಕಾವು ಭಿನ್ನಮತವಾಗಿ ಮಾರ್ಪಟ್ಟು ಈಗ ಸ್ಫೋಟಗೊಂಡಿದೆ.
ಒಟ್ಟಾರೆಯಾಗಿ ಈಗ ಬಿಜೆಪಿಯ ಒಳಗೆ ಬಿರುಕು ಬಿಡಲು ಪ್ರಾರಂಭವಾಗಿದ್ದು, ಇದು ಬಿರುಸಾಗುತ್ತಲೇ ಇದೆ. ಬಹುಶಃ ಈ ತಾಪತ್ರಯದಿಂದಲೆ ಯಡಿಯೂರಪ್ಪನವರು ಇಷ್ಟುದಿನ ಸಂಪುಟ ವಿಸ್ತರಣೆಗೆ ಮೀನ-ಮೇಷ ಎಣಿಸುತ್ತಿದ್ದರು ಎನಿಸುತ್ತಿದೆ. ಈ ಭಿನ್ನಮತೀಯರ ಅಸಮಾಧಾನವನ್ನು ಹತ್ತಿಕ್ಕಲು ಯಡಿಯೂರಪ್ಪನವರು ಯಾವ ತಂತ್ರ ಬಳಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: ಹೆಣ್ಣುಮಕ್ಕಳು 15ನೇ ವಯಸ್ಸಿನಲ್ಲಿ ಮಕ್ಕಳನ್ನು ಪಡೆಯಬಹುದು – ಕಾಂಗ್ರೆಸ್ ಮುಖಂಡನ ವಿವಾದಾತ್ಮಕ ಹೇಳಿಕೆ


