ಮಹಿಳೆಯರ ವಿಚಾರದಲ್ಲಿ ನಮ್ಮ ಸಮಾಜ ಇನ್ನು ಎಷ್ಟು ಹಿಂದುಳಿದಿದೆ ಎಂಬುದು ಪದೇ ಪದೇ ಸಾಬೀತಾಗುತ್ತಿರುತ್ತದೆ. ಈ ಇಪ್ಪತ್ತೊಂದನೇ ಶತಮಾನದಲ್ಲಿಯೂ ಭಾರತದ ಹಲವು ಪುರುಷರ ತಲೆಗಳು ಕ್ರಿ.ಪೂ ಕಾಲದಂತೆಯೇ ಯೋಚಿಸುತ್ತವೆ ಎಂಬುದನ್ನು ಮಧ್ಯಪ್ರದೇಶದ ರಾಜಕಾರಣಿಗಳು ಸಾಬೀತುಪಡಿಸುತ್ತಿದ್ದಾರೆ. “ಯಾವುದೇ ಮಹಿಳೆಯು ಕೆಲಸಕ್ಕಾಗಿ ಮನೆಯಿಂದ ಹೊರಹೋದರೆ ಅವರು ತಾವಾಗಿಯೇ ಸರ್ಕಾರದ ಬಳಿ ನೋಂದಣಿ ಮಾಡಿಸಬೇಕು ಮತ್ತು ಸರ್ಕಾರ ಅವರನ್ನು ಟ್ಯ್ರಾಕ್ ಮಾಡಲಾಗುತ್ತದೆ” ಎಂದು ಅಲ್ಲಿನ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು. ಈ ಬೆನ್ನಲ್ಲೆ ಪುರುಷಾಧಿಪತ್ಯ ವಿಚಾರದಲ್ಲಿ ನಾವೇನು ಕಡಿಮೆಯಿಲ್ಲವೆಂಬ ಜಿದ್ದಿಗೆ ಬಿದ್ದಿರುವ ಕಾಂಗ್ರೆಸ್ ಮುಖಂಡ “ಹುಡುಗಿಯರು 15 ವರ್ಷಕ್ಕೆ ಮಕ್ಕಳೆರುತ್ತಾರೆ, ಹಾಗಿದ್ದಮೇಲೆ ಮದುವೆ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಹೆಚ್ಚಿಸುವುದೇಕೆ” ಎಂದು ಪ್ರಶ್ನಿಸುವ ಮೂಲಕ ತಮ್ಮ ಸನಾತನ ಕಸವನ್ನು ಹೊರಹಾಕಿದ್ದಾರೆ.
ಮಧ್ಯಪ್ರದೇಶದಲ್ಲಿ ಹೆಣ್ಣು ಮಕ್ಕಳ ಮದುವೆ ವಯಸ್ಸಿನ ಮಿತಿಯನ್ನು 18 ರಿಂದ 21 ವರ್ಷಕ್ಕೆ ಹೆಚ್ಚಿಸುವ ಕುರಿತು ಚರ್ಚೆ ನಡೆಯುತ್ತಿದೆ. ಈ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳು ಮಹಿಳೆಯರನ್ನು ಮತ್ತಷ್ಟು ಬಂಧಿಯಾಗಿಸುವ ಹುನ್ನಾರದಲ್ಲಿ ನಿರತರಾಗಿವೆ. ಮಹಿಳೆಯರನ್ನು ಕೇವಲ ಮಕ್ಕಳನ್ನು ಹೆರುವ ಯಂತ್ರಗಳಾಗಿಯೇ ನೋಡುತ್ತಿದ್ದಾರೆಯೇ ಹೊರತು ಮಹಿಳೆಯರು ಸಹ ಮನುಷ್ಯರು, ಅವರಿಗೆ ಭಾವನೆಗಳಿವೆ, ಅವರಿಗೂ ಸಮಾನ ಹಕ್ಕುಗಳಿವೆ ಎಂಬ ಕನಿಷ್ಠ ಜ್ಞಾನವನ್ನು ಈ ರಾಜಕಾರಣಿಗಳು ಮರೆತ್ತಿದ್ದಾರೆ.
ಇದನ್ನೂ ಓದಿ: ಹೆಣ್ಣುಮಕ್ಕಳು 15ನೇ ವಯಸ್ಸಿನಲ್ಲಿ ಮಕ್ಕಳನ್ನು ಪಡೆಯಬಹುದು – ಕಾಂಗ್ರೆಸ್ ಮುಖಂಡನ ವಿವಾದಾತ್ಮಕ ಹೇಳಿಕೆ
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಹಿಳೆಯರ ಸುರಕ್ಷತೆಗಾಗಿ ಸಮ್ಮಾನ್ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿದ್ದಾರೆ. ಆ ವೇಳೆ ಮಹಿಳೆಯರು ಮನೆಯಿಂದ ಹೊರಗೆ ದುಡಿಯಲು ಹೋದರೆ ಅವರು ಸರ್ಕಾರದ ಬಳಿ ದಾಖಲು ಮಾಡಿಕೊಳ್ಳಬೇಕು. ಸರ್ಕಾರ ಅವರನ್ನು ನಿರಂತರವಾಗಿ ಟ್ಯ್ರಾಕ್ ಮಾಡುತ್ತದೆ ಎಂದಿದ್ದಾರೆ. ಅಂದರೆ ಮಹಿಳೆಯರ ರಕ್ಷಣೆಗಾಗಿ ಮೂಲಭೂತವಾಗಿ ಏನು ಮಾಡಬೇಕು ಎಂಬುದೇ ಸರ್ಕಾರಕ್ಕೆ ಗೊತ್ತಿಲ್ಲ. ಸರ್ಕಾರ, ಸಮಾಜ ಮತ್ತು ಸಂಪತ್ತಿನಲ್ಲಿ ಮಹಿಳೆಯರಿಗೆ ಸಮಪಾಲು ನೀಡಿದಾಗ ಮಾತ್ರ ಅವರ ರಕ್ಷಣೆ ಸಾಧ್ಯ ಎಂದು ಮಹಿಳಾ ಸಂಘಟನೆಗಳು ಆಗ್ರಹಿಸುತ್ತಿವೆ. ಆದರೆ ಸರ್ಕಾರ ಮಾತ್ರ ಅವರನ್ನು ಟ್ಯ್ರಾಕ್ ಮಾಡುತ್ತೇವೆ ಎನ್ನುತ್ತದೆ.
ಇನ್ನು ಕಳೆದ ಕಾಂಗ್ರೆಸ್ ಸರ್ಕಾರದಲ್ಲಿ ಪಿಡಬ್ಲೂಡಿ ಸಚಿವರಾಗಿದ್ದ, ಮಾಜಿ ಸಿಎಂ ಕಮಲ್ ನಾಥ್‌ರವರ ಆಪ್ತ ಎನ್ನಲಾದ ಕಾಂಗ್ರೆಸ್ ಮುಖಂಡ ಸಜ್ಜನ್ ಸಿಂಗ್ ವರ್ಮಾ ಹುಡುಗಿಯರಿಗೆ 15 ವರ್ಷಕ್ಕೆ ಮದುವೆ ಮಾಡಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ಹುಡುಗಿಯರು 15 ವರ್ಷಕ್ಕೆ ಮಕ್ಕಳೆರುತ್ತಾರೆ. ಇದನ್ನು ನಾನು ಕಂಡುಹಿಡಿದುದ್ದಲ್ಲ. ಹಲವು ವೈದ್ಯರುಗಳೇ ಹೇಳಿದ್ದಾರೆ. ಹಾಗಾಗಿ 18 ವರ್ಷಕ್ಕೆ ಅವರಿಗೆ ಮದುವೆ ಮಾಡುವುದು ಸರಿಯಿದೆ. ಹುಡುಗಿಯರ ಮದುವೆಯ ವಯಸ್ಸನ್ನು ಹೆಚ್ಚಿಸುವುದು ಬೇಡ” ಎಂದು ಅವರು ವಾದಿಸಿದ್ದಾರೆ.
ಮುಂದುವರಿದು “ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೆಣ್ಣು ಮಕ್ಕಳ ಮದುವೆಯ ವಯಸ್ಸಿನ ಮಿತಿಯನ್ನು 18 ರಿಂದ 21 ವರ್ಷಕ್ಕೆ ಹೆಚ್ಚಿಸಲು ಹೊರಟಿದ್ದಾರೆ. ಇದನ್ನು ಮಾಡಲು ಅವರೇನು ವಿಜ್ಞಾನಿಗಳೆ ಅಥವಾ ವೈದ್ಯರೇ” ಎಂದು ಪ್ರಶ್ನಿಸಿದ್ದಾರೆ.
ಇನ್ನು ಈ ವಿಚಾರದಲ್ಲಿ ಬಿಜೆಪಿ ಮುಖಂಡರು ಸಜ್ಜನ್ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಮತ್ತು ಕಾರ್ಯದರ್ಶಿಯಾಗಿ ಸೋನಿಯಾಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಇದ್ದು ಇಂತಹ ಹೇಳಿಕೆ ಕೊಡುವವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಬಾರದು ಎಂದು ಆಗ್ರಹಿಸಿದ್ದಾರೆ.
ಮಕ್ಕಳ ಹಕ್ಕುಗಳ ಸಂರಕ್ಷಣೆಯ ರಾಷ್ಟ್ರೀಯ ಆಯೋಗವು ಸಜ್ಜನ್ ವರ್ಮಾ ಅವರಿಗೆ ನೋಟಿಸ್ ನೀಡಿದ್ದು, ಎರಡು ದಿನಗಳಲ್ಲಿ ವಿವರಣೆಯನ್ನು ನೀಡುವಂತೆ ಆದೇಶಿಸಿದೆ. ಆದರೆ ಕಾಂಗ್ರೆಸ್ ಮುಖಂಡರು ಸಜ್ಜನ್ ಹೇಳಿಕೆಯನ್ನು ಸಮರ್ಥಿಸಿಕೊಳ್ಳದೆ, ಅವರು ಮುಖ್ಯಮಂತ್ರಿಗಳು ಕೇವಲ ಪ್ರಚಾರಕ್ಕಾಗಿ ಹೇಳಿಕೆ ಕೊಡುವುದನ್ನು ವಿರೋಧಿಸಿದ್ದಾರೆ ಅಷ್ಟೇ ಎಂದು ತೇಪೆ ಹಚ್ಚಲು ಮುಂದಾಗಿದ್ದಾರೆ.
ಒಟ್ಟಿನಲ್ಲಿ ಕಾಂಗ್ರೆಸ್ ಬಿಜೆಪಿ ಎರಡೂ ಪಕ್ಷಗಳಿಗೂ ಮಹಿಳೆಯರ ವಿಚಾರದಲ್ಲಿ ಸಂವೇದನಾಶೀಲತೆ ಹೊಂದಿಲ್ಲ ಎಂಬುದನ್ನು ಈ ಘಟನೆಗಳು ನಿರೂಪಿಸುತ್ತವೆ.
ಇದನ್ನೂ ಓದಿ: ರೈತ ಮಹಿಳಾ ದಿನ: ರೈತರಿಗೆ ಬೆಂಬಲ ಘೋಷಿಸಿ ದೇಶವ್ಯಾಪಿ ಪ್ರತಿಭಟನೆ ನಡೆಸಲು ಮಹಿಳೆಯರ ನಿರ್ಧಾರ
