ರಾಜ್ಯ ಸಚಿವ ಸಂಪುಟದ ವಿಶೇಷ ಸಭೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ (ಏ.24) ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯಿತು.
ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಸಿಎಂ, ಮಹದೇಶ್ವರ ಬೆಟ್ಟದಲ್ಲಿ ಐತಿಹಾಸಿಕವಾದ ಸಚಿವ ಸಂಪುಟ ಸಭೆ ನಡೆಸಿದ್ದೇವೆ. ರಾಜ್ಯದ ನಾಲ್ಕು ವಿಭಾಗಗಳಲ್ಲಿ ಸಭೆ ನಡೆಸಲು ತೀರ್ಮಾನಿಸಿ ಈಗಾಗಲೇ ಕಲಬುರಗಿ ಆಗಿದೆ. ಈಗ ಮೈಸೂರು ವಿಭಾಗದ್ದು ನಡೆದಿದೆ. ಮುಂದಿನ ದಿನಗಳಲ್ಲಿ ಬೆಳಗಾವಿ ಹಾಗೂ ಬೆಂಗಳೂರು ವಿಭಾಗದ ಸಭೆಯನ್ನು ಮಾಡಲಿದ್ದೇವೆ. ಬೆಳಗಾವಿ ವಿಭಾಗದ್ದು ವಿಜಯಪುರ ಹಾಗೂ ಬೆಂಗಳೂರು ವಿಭಾಗದ್ದನ್ನು ನಂದಿ ಬೆಟ್ಟದಲ್ಲಿ ನಡೆಸಲು ತೀರ್ಮಾನಿಸಿದ್ದೇವೆ ಎಂದರು.
ಮೈಸೂರು ವಿಭಾಗದ 78 ವಿಷಯಗಳ ಬಗ್ಗೆ ಚರ್ಚೆ ಆಗಿದೆ. ಕಲಬುರಗಿ ವಿಭಾಗದಲ್ಲಿ 56 ವಿಷಯಗಳ ತೀರ್ಮಾನ ಆಗಿತ್ತು. ಈಗ 3,647 ಕೋಟಿ ರೂಪಾಯಿ ಮೊತ್ತದ ಯೋಜನೆಗಳಿಗೆ ಸಭೆಯಲ್ಲಿ ಅನುಮೋದನೆ ದೊರೆತಿದೆ. ಲೋಕೋಪಯೋಗಿ, ನೀರಾವರಿ, ಸಣ್ಣ ನೀರಾವರಿ, ಇಂಧನ, ಆರೋಗ್ಯ, ಆರ್‌ಡಿಪಿಆರ್ ಇಲಾಖೆ, ಕೆರೆಗಳಿಗೆ ನೀರು, ಬುಡಕಟ್ಟು ಅಭಿವೃದ್ಧಿ, ಹಾಡಿಗಳಿಗೆ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ತಿಳಿಸಿದರು.

ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳು
- ಸಣ್ಣ ನೀರಾವರಿ ಮತ್ತು ಜಲ ಸಂಪನ್ಮೂಲ ಇಲಾಖೆಗಳ ವತಿಯಿಂದ 29 ಕಾಮಗಾರಿಗಳನ್ನು 1,787.87 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ. ಈ ಮೂಲಕ ಮೈಸೂರು ಕಂದಾಯ ವಿಭಾಗದ ಜಿಲ್ಲೆಗಳ ಜಲಾಶಯ, ಕೆರೆಗಳು, ಕಾಲುವೆಗಳ ಅಭಿವೃದ್ಧಿ ಮಾಡುವುದರಿಂದ ಈ ಭಾಗದ ನೀರಾವರಿ ಚಟುವಟಿಕೆಗಳನ್ನು ಸಮಗ್ರವಾಗಿ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತದೆ.
- ಪರಿಶಿಷ್ಟ ಪಂಗಡದ ಜನರು ವಾಸಿಸುವ ಪ್ರದೇಶಗಳ ಅಭಿವೃದ್ಧಿಗಾಗಿ ಪ್ರಮುಖವಾಗಿ ನಾಲ್ಕು ವಿಷಯಗಳಿಗೆ 203.2 ಕೋಟಿ ರೂ.ಗಳನ್ನು ವಿನಿಯೋಗಿಸಲು ನಿರ್ಧರಿಸಲಾಗಿದೆ.
- ಪರೋಕ್ಷವಾಗಿ ಮಾನವ-ಆನೆ ಸಂಘರ್ಷ ತಡೆಗಟ್ಟಲು 210.2 ಕೋಟಿ ರೂ.ಗಳನ್ನು ಒದಗಿಸಲಾಗಿದೆ.
- ಮೈಸೂರು ಭಾಗದ ನಗರಗಳ ಜನರ ಕುಡಿಯುವ ನೀರಿನ ಯೋಜನೆಗಳಿಗಾಗಿ ನಗರಾಭಿವೃದ್ಧಿ ಇಲಾಖೆ ವತಿಯಿಂದ 315 ಕೋಟಿ ರೂ., ಈ ಭಾಗದ ಜಿಲ್ಲೆಗಳ ಜನರ ಆರೋಗ್ಯ ಸುಧಾರಣೆಗೆ 228.14 ಕೋಟಿ ರೂ. ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಸುಮಾರು 300 ಕೋಟಿ ರೂ.ಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ.
- ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಚಿಕ್ಕ ಕಲ್ಲೂರಿನಲ್ಲಿ ಶ್ರೀ ಮಂಟೇಸ್ವಾಮಿ, ಶ್ರೀ ರಾಚಪ್ಪಾಜಿ ಹಾಗೂ ಶ್ರೀ ಸಿದ್ದಪ್ಪಾಜಿ ಕ್ಷೇತ್ರಗಳ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಸಂಪುಟ ಸಭೆ ತೀರ್ಮಾನಿಸಿದೆ.
- ಮೈಸೂರಿನ ಇಲವಾಲದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಿಸಲು ಉದ್ದೇಶಿಸಿದೆ.
- ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ನಂಜನಗೂಡು ತಾಲೂಕಿನ ಬದನವಾಳು ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ಗ್ರಾಮಕ್ಕೆ ಮಹಾತ್ಮ ಗಾಂಧಿಯವರೂ ಭೇಟಿ ಕೊಟ್ಟಿದ್ದರು. ಅದರ ನೆನಪಿಗಾಗಿ ಶತಮಾನೋತ್ಸವ ಭವನ ಮತ್ತು ಗ್ರಾಮೀಣ ಅಭಿವೃದ್ಧಿ ಕೇಂದ್ರವನ್ನು ನಿರ್ಮಿಸಲು ತೀರ್ಮಾನಿಸಿದೆ.
- ರನ್ ವೇ ವಿಸ್ತರಣೆ ಸೇರಿದಂತೆ ಮೈಸೂರು ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
- ಬುಡಕಟ್ಟು ಸಮುದಾಯದ ಜನರು ವಾಸಿಸುವ ಪ್ರದೇಶದಲ್ಲಿ ರಸ್ತೆ, ಚರಂಡಿ, ವಿದ್ಯುತ್ ದೀಪ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
- ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳ ವಿವಿಧ ತಾಲೂಕುಗಳಲ್ಲಿ ಕೆರೆಗಳನ್ನು ತುಂಬಿಸುವ, ಆಸ್ಪತ್ರೆಗಳ ಹಾಸಿಗೆ ಸಾಮರ್ಥ್ಯವನ್ನು ವಿಸ್ತರಿಸುವ, ವಿವಿಧ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸುವ ತೀರ್ಮಾನವನ್ನೂ ಇಂದು ನಡೆದ ಸಭೆಯಲ್ಲಿ ಕೈಗೊಳ್ಳಲಾಗಿದೆ.
- ಚಾಮರಾಜನಗರದಲ್ಲಿ ಹೊಸ ಪ್ರವಾಸಿ ಮಂದಿರ ನಿರ್ಮಾಣ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಮಾಡಲು ಮತ್ತು ಕ್ರೀಡಾಂಗಣ ಅಭಿವೃದ್ಧಿಗೆ 15 ಕೋಟಿ ರೂ. ನೀಡಲು ಸಂಪುಟ ಸಭೆ ಒಪ್ಪಿದೆ.
- ಕೊಳ್ಳೇಗಾಲದಲ್ಲಿ ಜಿಲ್ಲಾಸ್ಪತ್ರೆ ನಿರ್ಮಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಈಗ ಇರುವ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ 250 ಹಾಸಿಗೆಗಳ ಆಸ್ಪತ್ರೆ ಮಾಡಲಾಗುವುದು. ಹೊಸ ತಾಲೂಕಾದ ಹನೂರಿನಲ್ಲಿ ತಾಲೂಕು ಭವನ, ತಾಲೂಕು ಆಸ್ಪತ್ರೆ (50 ಹಾಸಿಗೆ ಸಾಮರ್ಥ್ಯ) ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ.
ಮಂಗಳೂರು | ಚಲಿಸುತ್ತಿದ್ದ ಬಸ್‌ನಲ್ಲೆ ಯುವತಿ ಮೇಲೆ ಕಂಡಕ್ಟರ್‌ನಿಂದ ಲೈಂಗಿಕ ದೌರ್ಜನ್ಯ


