ಕೋವಿಡ್ ಹರಡದಂತೆ ತಡೆಯಲು ಸಂಘ-ಸಂಸ್ಥೆಗಳ ಸಹಕಾರ ಕೋರಿ ಜಿಲ್ಲಾಧಿಕಾರಿಗಳು ತಮ್ಮ ಕಚೇರಿಯಲ್ಲಿ ಸಭೆ ಕರೆದಿದ್ದರು. ಆದರೆ ಸಭೆಯಲ್ಲಿ ಬಿಜೆಪಿ ಮುಖಂಡರು ಇದ್ದರೆ ಹೊರತು ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಕೊರತೆ ಎದ್ದುಕಾಣುತ್ತಿತ್ತು.
ಯಾವ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಸಹಕಾರವನ್ನು ಕೋರಬೇಕಿತ್ತೋ ಅದನ್ನು ಬಿಟ್ಟು ಉಳಿದಿದ್ದನ್ನು ಜಿಲ್ಲಾಡಳಿತ ಮಾಡಿತ್ತು. ಕೋವಿಡ್ ಸಂದರ್ಭದಲ್ಲಿ ಬಡವರಿಗೆ ನೆರವಾದವರು, ಕ್ವಾರಂಟೈನ್ ಮತ್ತು ಐಸೋಲೇಶನ್ ನಲ್ಲಿಟ್ಟಿದ್ದವರಿಗೆ ಆಹಾರ ನೀಡಿ ಅವರ ನೋವನ್ನು ಆಪ್ತವಾಗಿ ಆಲಿಸಿದವರಿಗೆ ಮಾತ್ರ ಸಭೆಗೆ ಆಹ್ವಾನವಿರಲಿಲ್ಲ. ಹಾಗಾಗಿ ಇದು ಸಂಘಸಂಸ್ಥೆಗಳ ಸಭೆಯಾಗದೇ, ಬಿಜೆಪಿ ಪದಾಧಿಕಾರಿಗಳ ಸಭೆಯಾಗಿದ್ದು ವಿಶೇಷವಾಗಿತ್ತು..
ಸಭೆಯಲ್ಲಿ ಸಂಸದ ಜಿ.ಎಸ್.ಬಸವರಾಜು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಬ್ಬಾಕ ರವಿ, ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಶಿವಪ್ರಸಾದ್, ಮಾಜಿ ಶಾಸಕರಾದ ಷಫಿ ಅಹಮದ್, ರಫೀಕ್ ಅಹಮದ್, ಡಿಸಿ, ಪೊಲೀಸ್ ವರಿಷ್ಠ, ಎಸಿ, ತಹಶೀಲ್ದಾರ್, ನಗರಸಭೆ ಆಯುಕ್ತ ಭೂಬಾಲನ್, ಜಾಮೀಯ ಮಸೀದಿ ಮುತುವಲ್ಲಿ ಮಾತ್ರ ಭಾಗವಹಿಸಿದ್ದರು. ಕೊರೋನ ವಿರುದ್ದದ ಹೋರಾಟ ಯಶಸ್ವಿಯಾಗಿದೆ. ಯಾವುದೇ ಸಮಸ್ಯೆ ಇಲ್ಲ ಎಂಬ ರೀತಿ ಚರ್ಚೆ ನಡೆಯುತ್ತಿತ್ತು. ಮಧ್ಯಪ್ರವೇಶಿಸಿದ ಸಾಮಾಜಿಕ ಕಾರ್ಯಕರ್ತರು ಸಾಕಷ್ಟು ಸಮಸ್ಯೆ ಇದೆ. ಸಂಘ ಸಂಸ್ಥೆಗಳ ಸಭೆ ಅಂದ್ರೆ ಇದೇನಾ ಎಂದು ಜಿಲ್ಲಾದಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ಸಭೆಯ ದಾಟಿಯೇ ಬದಲಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಅವರು ತಹಶೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವ್ಯವಸ್ಥೆ ಇರುವುದು ಕಂಡುಬಂದರೆ ಸಸ್ಪೆಂಡ್ ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಉಪವಿಭಾಗಾಧಿಕಾರಿ ಮಾತ್ರ ತಹಶೀಲ್ದಾರ್ ಪರ ವಕಾಲತ್ತು ವಹಿಸಿ ಮಾತನಾಡಲು ತೊಡಗಿದರು. ಆಗ ಸಾಮಾಜಿಕ ಕಾರ್ಯಕರ್ತರೊಬ್ಬರು ಮೊಬೈಲ್ ಮೂಲಕ ಕ್ವಾರಂಟೈನ್ ನಲ್ಲಿರುವ ವ್ಯಕ್ತಿಯನ್ನು ಸಂಪರ್ಕಿಸಿ ಸತ್ಯ ಹೇಳುವಂತೆ ಡಿಸಿಗೆ ಮೊಬೈಲ್ ಕೊಟ್ಟಿದ್ದಾರೆ. ಆಗ ಕ್ವಾರಂಟೈನ್ ಮತ್ತು ಐಸೋಲೇಷನ್ ನಲ್ಲಿರುವವರು ಅನುಭವಿಸುತ್ತಿರುವ ಕಷ್ಟಗಳ ದರ್ಶನ ಜಿಲ್ಲಾಧಿಕಾರಿಗಳಿಗೆ ಆಗಿದೆ.
ಈ ಪ್ರಕರಣದಿಂದ ಸತ್ಯ ಗೋಚರಿಸುವಂತೆ ಮಾಡಿದೆ. ಅಲ್ಲದೆ ಕೆಳಹಂತದ ಅಧಿಕಾರಿಗಳು ಮಾಹಿತಿ ಮುಚ್ಚಿಡುವುದು ಇದರಿಂದ ತಿಳಿಯುತ್ತದೆ. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ನಡುವೆ ಸಮನ್ವಯದ ಕೊರತೆ ಇದೆ. ಕ್ವಾರಂಟೈನ್ ನಲ್ಲಿರುವವರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ. ಸಾಮಾನ್ಯ ರೋಗಿಗಳಿಗೆ ಶ್ರೀದೇವಿ ನರ್ಸಿಂಗ್ ಹೋಂನಲ್ಲಿ ಡಬಲ್ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಆರೋಪಿಸಿದೆ.
ಕೊರೊನ ವಾರಿಯರ್ ಗಳಾಗಿ ದುಡಿಯುತ್ತಿರುವ ಎಲ್ಲರ ಮಾಹಿತಿ ಎಲ್ಲರಿಗೂ ದೊರೆಯುವಂತಾಗಬೇಕು. ಪೌರ ಕಾರ್ಮಿಕರು ಸೇರಿದಂತೆ ಎಲ್ಲರಿಗೂ ಸುರಕ್ಷಾ ಸಲಕರಣೆಗಳನ್ನು ನೀಡಬೇಕು ಎಂದು ಒಕ್ಕೂಟ ಆಗ್ರಹಿಸಿದೆ.
ಇದನ್ನೂ ಓದಿ: ಈ ಕೋರಾನಾ ಟೈಮಲ್ಲಿ ಒಳ್ಳೆ ಕೆಲಸ ಮಾಡ್ತಿರೋ ಒಬ್ಬ ಮುಸ್ಲಿಮನೂ ಈ ಮೀಡಿಯಾದವರಿಗೆ ಸಿಗೋದಿಲ್ವ ಸರ್?


