Homeಮುಖಪುಟಈ ಕೋರಾನಾ ಟೈಮಲ್ಲಿ ಒಳ್ಳೆ ಕೆಲಸ ಮಾಡ್ತಿರೋ ಒಬ್ಬ ಮುಸ್ಲಿಮನೂ ಈ ಮೀಡಿಯಾದವರಿಗೆ ಸಿಗೋದಿಲ್ವ ಸರ್?

ಈ ಕೋರಾನಾ ಟೈಮಲ್ಲಿ ಒಳ್ಳೆ ಕೆಲಸ ಮಾಡ್ತಿರೋ ಒಬ್ಬ ಮುಸ್ಲಿಮನೂ ಈ ಮೀಡಿಯಾದವರಿಗೆ ಸಿಗೋದಿಲ್ವ ಸರ್?

ಕೊರೊನಾ ವಾರಿಯರ್‌ ಆಗಿ ಕೆಲಸ ಮಾಡುತ್ತಿರುವ ಸಾಧಿಕ್ ಸೈಲಾನಿಯವರ ಅನುಭವ ಮಾತುಗಳು

- Advertisement -
- Advertisement -

ಈ ಕೊರೊನಾ ಸಂಕಷ್ಟ ದಿನಗಳಲ್ಲಿ ಮುಸ್ಲಿಮ್ ಸಮುದಾಯದ ಮೇಲೆ ಹಲವಾರು ರೀತಿಯ ಆರೋಪಗಳನ್ನು ದಿನನಿತ್ಯ ನಾವು ಕೇಳುತ್ತಲೇ ಇದ್ದೇವೆ. ಅದರ ನಡುವೆ ಮುಸ್ಲಿಂ ಸಮುದಾದಲ್ಲೂ ಕೂಡ ಸಾವಿರಾರು ಕೋರಾನಾ ವಾರಿಯರ್ಸ್ ಇದ್ದಾರೆ. ಅಂಥ ಒಬ್ಬ ಸ್ವಯಂ ಸೇವಕ ಸಾಧಿಕ್ ಸೈಲಾನಿ ಅವರನ್ನು ಯುವ ಬರಹಗಾರ ಹನುಮಂತ ಹಾಲಿಗೇರಿ ಮಾತನಾಡಿಸಿದ್ದಾರೆ. ಬನ್ನಿ ಅವರ ಮಾತುಗಳನ್ನು ಕೇಳೋಣ.
**

ನಮಸ್ತೆ ಸಾರ್, ನೀವು ಹೇಳಿದ ಮಾರುತಿ ನಗರದ ಸ್ಲಂನಲ್ಲಿರೋರಿಗೆ ಈಗ ತಲುಪಿಸಿ ಬಂದ್ವಿ ಸರ್, ತುಂಬಾ ಬಡವ್ರು ಅವ್ರು. ಅವರು ಹೆಸರು ಕೊಟ್ಟಿದ್ದು ಒಳ್ಳೆಯದಾಯ್ತು ಸರ್. ಇದ್ರಲ್ಲಿ ನಮ್ಮದೇನು ಇಲ್ಲ ಸರ್. ಎಲ್ಲ ನಮ್ಮ ಹಿರಿಯರ ದೊಡ್ಡತನ ಇದು. ರಹಮತ್ ಗ್ರೂಪ್‌ ಅಂಥ ಒಂದೈತೆ ಸರ್. ನಮ್ಮ ಹಿರಿಯರೆಲ್ಲ ಸೇರ್ಕೊಂಡು ಈ ಟ್ರಸ್ಟ್ ಮಾಡಿಕೊಂಡವ್ರೆ. ಈ ಟ್ರಸ್ಟಿಗೆ ನಮ್ಮ ಕಮ್ಯುನಿಟಿ ಬುಜಿನೆಸ್ ಮನ್ಸ್ ಒಂದಿಷ್ಟು ದೇಣಿಗೆ ಕೊಡ್ತಾರೆ. ಅದನ್ನು ಬಳಸಿಕೊಂಡು ಇದುವರೆಗೂ ಬೆಂಗಳೂರು ಮತ್ತು ಅದರ ಸುತ್ತಮುತ್ತಲೆಲ್ಲ 10 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಫ್ಯಾಮಿಟಿ ಕಿಟ್ ಹಂಚಿದಿವಿ ಸರ್. ಇನ್ನು ಹಂಚ್ತಿದ್ದಿವಿ. ಇದ್ರಲ್ಲಿ ಅರ್ದಕ್ಕೆ ಅರ್ದದಷ್ಟು ಹಿಂದುಗಳು, ಕ್ರಿಶ್ಚಿಯನ್ರಿಗೂ ಹಂಚಿದಿವಿ ಅನ್ನೋ ಸಮಾಧಾನ ಐತೆ.

ನಾವು ಇದಕ್ಕೋಸ್ಕರಾನೆ ಒಂದು ಒಂದು ಕಾಲ್ ಸೆಂಟರ್ ಒಪೆನ್ ಮಾಡಿದ್ದಿವಿ. ದಿನಾ ಅಲ್ಲಿಗೆ ಸಾವಿರಾರು ಕಾಲ್ ಬರುತ್ತೆ. ಕೆಲವ್ರು ಇದು ಮುಸ್ಲಿಂ ಸಂಘಟನೆ ಅಂತ ಕಾಲ್ ಮಾಡಲ್ಲ. ಮಾಡಿದ್ರೂ ಬೇಡ ಬಿಡಿ ಅಂತಾರೆ. ಅದ್ರಲ್ಲಿ ಅವರದೇನು ತಪ್ಪಿಲ್ಲ ಬಿಡಿ ಸರ್, ಮೀಡಿಯಾದವರು ನಮ್ಮ ಅವರ ನಡುವೆ ಹಂಗ ತಂದಿಟ್ಟವ್ರೆ. ನಮ್ಮ ರಹಮತ್ ಗುಂಪಿನಲ್ಲಿ 200ಕ್ಕೂ ಹೆಚ್ಚು ವಾಲಂಟಿಯರ್ಸ್ ಇದ್ದಿವಿ ಸರ್. ನಮ್ಮಗಳದ್ದೇ ಬೈಕು, ಆಟೋ ಕಾರುಗಳಲ್ಲಿ ದಿನನಿತ್ಯವು ಸಾವಿರಾರು ಜನಕ್ಕೆ ರೇಷನ್ ಕಿಟ್ ತಲುಪಿಸುತ್ತಿದ್ದೇವೆ. ಮೊದಲೆಲ್ಲ ನಮಗೆ ಆಪೀಸರ್ಸು ಪಾಸ್ ಕೊಡಕ್ಕೆ ಹಿಂದೆ ಮುಂದೆ ನೊಡ್ತಿದ್ರು ಸರ್. ಈಗ ಅಂಥ ಅಧಿಕಾರಿಗಳೇ ಈಗ ಶಹಬ್ಬಾಷ್ ಗಿರಿ ಕೊಡ್ತಾವ್ರೆ ಸರ್ ಖುಷಿಯಾಗುತ್ತೆ. ನಮ್ಮ ಟ್ರಸ್ಟನ ಹಿರಿಯರಾದ ಮುಖ್ತಿ ಸುಹೇಬ್ ಸಾಬ್ ಅನ್ನೋರು ನಮಗೆ ಮಾರ್ಗದರ್ಶನ ಇದನ್ನೆಲ್ಲ ಲೀಡ್ ಮಾಡ್ತಾವ್ರೆ.

ಹೊರಗಡೆ ವಾತಾವರಣ ಸರಿಯಿಲ್ಲ ಸರ್. ನಮಗೂ ಗೊತ್ತು. ಜನ ನಮ್ಮನ್ನು ಅನುಮಾನದಿಂದ ನೋಡ್ತಾರೆ. ಎಲ್ಲೋ ಒಬ್ಬ ಮುಸ್ಲಿಂ ತಪ್ಪು ಮಾಡಿದ್ರೆ ಆ ತಪ್ಪನ್ನು ನಮ್ಮ ಇಡೀ ಸಮುದಾಯಕ್ಕೆ ಕಟ್ತಾರೆ. ಮೀಡಿಯಾದವರು ತೊರಿಸಿದ್ದನ್ನೇ ತೋರಿಸಿ ತೋರಿಸಿ ಜನರ ಮೈಂಡ್ ಕೆಡಿಸಿಬಿಟ್ಟವ್ರೆ. ಸಾಬ್ರು ಉಗುಳು ಹಚ್ಚಿದ ನೊಟುಗಳನ್ನು ರಸ್ತೆ ಮೇಲೆ ಚೆಲ್ಲಿ ಕೋರೊನಾ ಹರಡುವಂತೆ ಮಾಡುತ್ತಾರೆ. ಸಾಬರು ಹಣ್ಣು ತರಕಾರಿಗಳಿಗೆ ಉಗುಳು ಹಚ್ಚಿ ಮಾರಾಟ ಮಾಡ್ತಾರೆ. ಒಂದಾ? ಎರಡಾ? ಎಂಥೆಂಥ ಫೇಕ್ ನ್ಯೂಸ್ ಹಬ್ಬಿಸ್ತಾರೆ ನೋಡಿ ಸಾರ್. ನಮ್ಮ ಮಂದಿ ಇಂಥ ಸಣ್ಣಪುಟ್ಟ ವ್ಯಾಪಾರ ಮಾಡ್ಕೊಂಡೆ ಬದುಕ್ತಾವ್ರೆ ನಿಜ. ಗಿರಾಕಿಗಳೆ ದೇವ್ರು ಅಂತ ನಂಬಿರೋ ನಮಗೆ ಗಿರಾಕಿಗಳನ್ನೆ ಸಾಯ್ಸೋದಕ್ಕೆ ಮನಸ್ಸು ಬರುತ್ತಾ ಸಾರ್?

ರಸ್ತೆ ಮೇಲೆ ದುಡ್ಡು ಎಸೆಯಕ್ಕೆ ನಮಗೇನು ದುಡ್ಡು ಜಾಸ್ತಿಯಾಗಿದೆಯಾ? ನಾವು ದೇಶ ಹಾಳು ಮಾಡಕ್ಕೆ ಹುಟ್ಟಿದವರು ಅಂತ ಜನ ಮಾತಾಡಿಕೊಳ್ತಾರೆ ಸರ್. ಇಂಥ ಪೇಕ್ ನ್ಯೂಸ್ ಗಳನ್ನು ನೋಡಿ ನೊಡಿ ಜನ ಈಗ ನಮ್ಮಂದಿ ಹತ್ರ ವ್ಯಾಪಾರ ಮಾಡ್ತಿಲ್ಲ ಸರ್. ಏನ್ಮಾಡೋದು ಹೇಳಿ. ನಮ್ಮ ಕಮ್ಯುನಿಟಿ ಮೇಲೆ ಬಂದಿರೋ ಈ ಡ್ಯಾಮೇಜನ್ನು ಯಾರು ಸರಿ ಮಾಡ್ತಾರೆ ಹೇಳಿ.

ಈ ಕೋರಾನಾ ಟೈಮಲ್ಲಿ ಒಳ್ಳೆ ಕೆಲಸ ಮಾಡಿರೋ ಒಬ್ಬ ಮುಸ್ಲಿಮನೂ ಈ ಮೀಡಿಯಾದವರಿಗೆ ಸಿಗಲ್ವೇನು ಸರ್? ಖಂಡಿತ ಸಿಗ್ತಾರೆ ಸರ್. ಇವರಿಗೆ ಕಣ್ಣು ಸರಿ ಇಲ್ಲ ಅಷ್ಟೇ. ಮೊನ್ನೆ ಮಧ್ಯ ಪ್ರದೇಶದ ಇಂಧೋರ್‌ ಸುದ್ದಿ ಗೊತ್ತಲ್ಲ ನಿಮಗೆ. ಪಾಪ ಒಬ್ಬ ಹಿಂದೂ ತಾಯಿ ಕೋರಾನಾ ಬಂದು ಸತ್ತರೆ, ಖಬರಸ್ತಾನಕ್ಕೆ ಆಕಿ ಹೆಣ ಒಯ್ಯಲಿಕ್ಕೆ ಯಾರೂ ಇರಲಿಲ್ಲ. ನಮ್ಮ ಸಾಬಿ ಹುಡುಗರೇ ಒಯ್ದು ಸಂಸ್ಕಾರ ಮಾಡಿದ್ರು. ಇನ್ನು ಮಹಾರಾಷ್ಟ್ರದಲ್ಲಿ ಕೊರಾನಾ ಬಂದ ಪೇಶೆಂಟನ್ನ ಹಿಂದೂ ರುದ್ರಭೂಮಿಯಲ್ಲಿ ಸಂಸ್ಕಾರ ಮಾಡಿಸಲಿಕ್ಕೆ ಒಪ್ಪಲಿಲ್ಲ ಸರ್. ಆದ್ರೆ ನಮ್ಮ ಜನ ತಮ್ಮ ಖಬರಸ್ಥಾನಕ್ಕ ತಂದು ಸಂಸ್ಕಾರ ಮಾಡಿದ್ರು. ಇಂಥ ಕಷ್ಟ ಕಾಲದಲ್ಲಿ ಜಮೀನು ಮಾರಿ ಹೆಲ್ಪ್ ಮಾಡ್ತಿರೋರು, ಬಾಡಿಗೆ ಮನ್ನಾ ಮಾಡಿದವರು ಇಂಥವರೆಲ್ಲ ಸಿಗೋದು ನಮ್ಮ ಕಮ್ಯುನಿಟಿಯಲ್ಲಿ ಸರ್. ಆದ್ರೆ ಇಂಥವ್ಯಾರು ಈ ಟಿವಿಯವರಿಗೆ ಕಾಣೋದೇ ಇಲ್ಲ. ಏನ್ ಮಾಡಕ್ಕಾಗುತ್ತೆ ಹೇಳಿ?

ನಮಗೂ ತುಂಬಾ ನೋವಾಗುತ್ತೆ. ಆದ್ರೆ ನಮ್ಮ ಇಮಾಮ್ (ಗುರುಗಳು) ಸಯ್ಯದ್ ಮೊಹಮ್ಮದ್ ತಲ್ಹಾಸಾಬ್ ಇದ್ದಾರಲ್ಲ. ಅರು ಹೇಳೋದು “ಯಾವುದಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ವಿಚಾರ ಮಾಡ್ಕೋತ ಕುಂಡ್ರು ಕಾಲ ಅಲ್ಲ ಇದು. ಸುಮ್ನೆ ಕೆಲಸ ಮಾಡ್ತಾ ಹೋಗಿ ಅಷ್ಟೆ. ಕೆಲಸ.. ಕೆಲಸ.. ಕೆಲಸ.. ಅಷ್ಟೇ. ಮೇಲಿನಿಂದ ದೇವರು ಎಲ್ಲ ನೊಡ್ತಿರ್ತಾನೆ. ಅಂತ ನಮ್ಮನ್ನೆಲ್ಲ ಹುರಿದುಂಬಿಸುತ್ತಿದ್ದಾರೆ.

ಮೀಡಿಯಾದವ್ರು ಎಷ್ಟೇ ಪೇಕ್ ನ್ಯೂಸ್ ಹಬ್ಬಸಲಿ ಸರ್. ಆದ್ರೆ ಹೊರಗಡೆ ಪ್ರಪಂಚ ಬೇರೆನೇ ಐತೆ. ನಾವೆಲ್ಲ ಒಂದೇ ತಾಯಿಯ, ಒಂದೇ ದೇಶದ ಮಕ್ಕಳು. ನಾವುಗಳೆಲ್ಲ ಅನೂನ್ಯವಾಗಿಯೇ ಇದ್ದೇವೆ. ಕೆಲವರು ಪಿತೂರಿಯಿಂದ ಹಿಂಗೆಲ್ಲ ಆಗ್ತಿದೆ ಅಷ್ಟೆ. ಜನ ಈಗ ನಿಜಕ್ಕೂ ಕಷ್ಟದಲ್ಲಿದ್ದಾರೆ ಸರ್. ಅವರಿಗೆ ಈಗ ಧರ್ಮ, ಗಿರ್ಮ ಏನು ಬೇಡ. ಊಟ ಬೇಕು ಅಷ್ಟೆ. ಯಾರೆ ಊಟ ಕೊಟ್ಟರೂ ಅವರೇ ಅವರ ಪಾಲಿನ ದೇವ್ರು. “ನೀವೇ ನಮ್ಮ ಪಾಲಿನ ದೇವರು ಕಣಪ್ಪ. ನಿಮಗೆ ಒಳ್ಳೆದಾಗಲಿ” ಅಂತ ಮನಸ್ಸು ಬಿಚ್ಚಿ ಹಾರೈಸ್ತಾರೆ ಸರ್. ಆ ಹಾರೈಕೆಯೇ ನಮಗೆ ಮತ್ತಷ್ಟು ಕೆಲಸ ಮಾಡುವಂತೆ ಹುರಿದುಂಬಿಸುತ್ತೆ.

ಈಗ ರಂಜಾನ್ ತಿಂಗಳು. ಇದೊಂದು ಪವಿತ್ರ ಕಾರ್ಯ ಅನಕೊಂಡು ಇಷ್ಟೆಲ್ಲ ಕೆಲಸ ಮಾಡ್ತಿದ್ದಿವಿ. ಇನ್ನೊಂದು ಗೊತ್ತಿರ್ಲಿ ಸರ್. ನಾವು ಯಾವತ್ತು ನಾವು ಕೊಟ್ಟಿದ್ದನ್ನು ಅವರು ತುಗೊಂಡಿದ್ದನ್ನು ಫೊಟೋ ಹಿಡಿಯಲ್ಲ ಸರ್. ಕೆಲವರು ಅರ್ಧ ಕೇಜಿ ರೈಸ್ ಕೊಡುವಾಗಲೂ ತಮ್ಮ ಜೊತೆಗೆ ಕ್ಯಾಮರಾಮೆನ್ ಕರ್ಕೊಂಡು ಬಂದಿರ್ತಾರೆ. ಆದ್ರೆ ನಮ್ಮಂದಿ ಹಾಗಲ್ಲ. ಕೊಡುವ ಕೈ ಯಾವತ್ತು ಕೂಡ ಇನ್ನೊಬ್ಬರಿಗೆ ಹೇಳಿಕೊಬಾರದು. ಎಡಗೈಯಿಂದ ಕೊಟ್ಟಿದ್ದು ಬಲಗೈಗೆ ಗೊತ್ತಾಗಬಾರದು ಅಂತ ನಂಬಿರೋರು ನಾವು. ಇದನ್ನು ನಮ್ಮ ಗುರು ಹೇಳಿಕೊಟ್ಟವ್ರೆ. ಹೀಗಾಗಿ ನಾವು ಎಲ್ಲೂ ಕೂಡ ರೇಷನ್ ಕಿಟ್ ನೀಡುವಾಗ ನಮ್ಮ ಮುಖ ಕಾಣುವಂತೆ ಪೊಟೋ ತೆಗೆಯಲ್ಲ. ಆದ್ರೂ ನಮ್ಮದು ಟ್ರಸ್ಟ್ ಅಲ್ವಾ ಸರ್? ಹಾಗಾಗಿ ಲೆಕ್ಕಪತ್ರಕ್ಕೋಸ್ಕರ ನಾವು ಕಿಟ್ ಕಷ್ಟದಲ್ಲಿರೋ ಜನರ ಮನೆ ಮುಂದೆ ಇಟ್ಟು ಫೊಟೋ ತಗೋತಿವಿ ಅಷ್ಟೇ.

ನಾವು ಈ ಕೊರೋನಾ ಟೈಮನಲ್ಲಿ ಅಷ್ಟೆ ಅಲ್ಲ, ವರ್ಷಪೂರ್ತಿನೂ ನಮ್ಮ ಟ್ರಸ್ಟ್ ದಿಂದ ಒಂದಿಷ್ಟು ಒಳ್ಳೆ ಕೆಲ ಮಾಡ್ತಾನೆ ಬರ್ತಿದ್ದಿವಿ. ದಿನಾಲೂ ಬೆಳಗ್ಗೆ ಬೋರಿಂಗ್ ಆಸ್ಪತ್ರೆ, ಅಂಬೇಡ್ಕರ್, ಸಂಜಯಗಾಂಧಿ, ಕಿದ್ವಾಯಿ ಹಾಸ್ಪಿಟಲ್ ಗಳಿಗೆ ಹೋಗಿ 800ಕ್ಕೂ ಹೆಚ್ಚು ರೋಗಿಗಳಿಗೆ ಹಣ್ಣು ಹಂಚಿ ಬರ್ತಿದ್ದಿವಿ. ಯಾರು ಏನೇ ಅನ್ನಲಿ. ನಾವು ಈ ಕೆಲಸ ನಿಲ್ಲಸಲ್ಲ ಸರ್. ಈ ಕೆಲಸ ನಮಗೆ ಖುಷಿ ಕೊಡ್ತಿದೆ. ಮೇಲೆ ದೇವರು ನೋಡ್ತಿರ್ತಾನೆ. ಇಷ್ಟೇ ಹೇಳಕ್ಕಿದ್ದಿದ್ದು.


ಇದನ್ನೂ ಓದಿ: ಗುಡ್‌ ನ್ಯೂಸ್‌: ಹಿಂದೂ ಯುವಕನಿಗೆ ರಕ್ತದಾನ ಮಾಡಲು ಉಪವಾಸ ವ್ರತ ಮುರಿದ ಮುಸ್ಲಿಂ ಮಹಿಳೆ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...