ಕೆನಡಾ ತನ್ನ ಚುನಾವಣೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿದೆ, ಆದರೆ ಈ ಆರೋಪವನ್ನು ಭಾರತವು ತಳ್ಳಿಹಾಕಿದೆ.
2019 ಮತ್ತು 2021ರ ಸಾರ್ವತ್ರಿಕ ಚುನಾವಣೆಗಳಲ್ಲಿ ಭಾರತ ಮತ್ತು ಪಾಕಿಸ್ತಾನ ದೇಶಗಳ ರಹಸ್ಯ ಹಸ್ತಕ್ಷೇಪವನ್ನು ಉಲ್ಲೇಖಿಸಿ ಕೆನಡಾದ ಬೇಹುಗಾರಿಕಾ ಸಂಸ್ಥೆಯು ವರ್ಗೀಕರಿಸದ ಸಾರಾಂಶವನ್ನು ಬಿಡುಗಡೆ ಮಾಡಿದೆ. ಭಾರತವು ಈ ಆರೋಪವನ್ನು ‘ಆಧಾರರಹಿತ’ ಎಂದು ಕರೆದಿದೆ.
ಕೆನಡಿಯನ್ ಸೆಕ್ಯುರಿಟಿ ಇಂಟೆಲಿಜೆನ್ಸ್ ಸರ್ವೀಸ್(CSIS), ಕೆನಡಾದ ಚುನಾವಣಾ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರಲು ಭಾರತ ಮತ್ತು ಪಾಕಿಸ್ತಾನ ಸಂಘಟಿತ ಪ್ರಯತ್ನಗಳನ್ನು ಮಾಡುತ್ತಿದೆ ಹೇಳುತ್ತದೆ. ಆದರೆ, ಭಾರತವು ಈ ಆರೋಪಗಳನ್ನು ಕಟುವಾಗಿ ನಿರಾಕರಿಸಿದೆ.
CSIS ದಾಖಲೆಗಳು 2021ರಲ್ಲಿ, ಭಾರತ ಸರ್ಕಾರವು ಖಲಿಸ್ತಾನಿ ಚಳುವಳಿ ಅಥವಾ ಪಾಕಿಸ್ತಾನದ ಪರವಾದ ನಿಲುವುಗಳ ಬಗ್ಗೆ ಸಹಾನುಭೂತಿ ಹೊಂದಿರುವ ಭಾರತೀಯ ಮೂಲದ ಮತದಾರರಿಗೆ ಆಶ್ರಯ ನೀಡುವ ನಿರ್ದಿಷ್ಟ ಜಿಲ್ಲೆಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದೆ. ಭಾರತ ಸರ್ಕಾರ 2021ರಲ್ಲಿ ಹಸ್ತಕ್ಷೇಪದ ಉದ್ದೇಶದಿಂದ ಭಾರತ ಸರ್ಕಾರ ನಕಲಿ ಏಜೆಂಟರನ್ನು ಬಳಸುವುದು ಸೇರಿದಂತೆ ರಹಸ್ಯ ಚಟುವಟಿಕೆಗಳನ್ನು ನಡೆಸಿರುವ ಸಾಧ್ಯತೆ ಇದೆ ಎಂದು ಸಿಎಸ್ಐಎಸ್ ಆಪಾದಿಸಿದೆ.
ಅಂತೆಯೇ, 2019ರಲ್ಲಿ ಪಾಕಿಸ್ತಾನ ಸರ್ಕಾರದ ಅಧಿಕಾರಿಗಳು ಕೆನಡಾದ ರಾಜಕೀಯದೊಳಗೆ ಪಾಕಿಸ್ತಾನದ ಹಿತಾಸಕ್ತಿಗಳನ್ನು ಮುನ್ನಡೆಸುವ ಗುರಿಯನ್ನು ಹೊಂದಿರುವ ರಹಸ್ಯ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂದು ಹೇಳಿದೆ. ಭಾರತವು ಈ ಕುರಿತ ಆರೋವನ್ನು ನಿರಾಕರಿಸಿ ಇತರ ರಾಷ್ಟ್ರಗಳ ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿ ಹಸ್ತಕ್ಷೇಪ ಮಾಡದಿರುವ ತನ್ನ ಬದ್ಧತೆಯನ್ನು ಉಲ್ಲೇಖಿಸಿದೆ. ಭಾರತೀಯ ಹಸ್ತಕ್ಷೇಪದ ಆರೋಪಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಣಧೀರ ಜೈಸ್ವಾಲ್, ಭಾರತದ ಆಂತರಿಕ ವಿಚಾರಗಳಲ್ಲಿ ಕೆನಡಾ ಹಸ್ತಕ್ಷೇಪ ಮಾಡುತ್ತಿದೆ ಎಂಬ ಪ್ರತ್ಯಾರೋಪ ಮಾಡಿದರು.
ಜನವರಿಯಲ್ಲಿ, ಕೆನಡಾ ತನ್ನ ರಾಷ್ಟ್ರೀಯ ಚುನಾವಣೆಗಳಲ್ಲಿ ವಿದೇಶಿ ಹಸ್ತಕ್ಷೇಪದ ಆರೋಪಗಳ ಬಗ್ಗೆ ತನಿಖೆ ಮಾಡುವ ಬಗ್ಗೆ ಹೇಳಿತ್ತು, ಬ್ಲೂಮ್‌ಬರ್ಗ್ ವರದಿಯ ಪ್ರಕಾರ ಭಾರತದ ಮೇಲೆ ನಿರ್ದಿಷ್ಟ ಗಮನವನ್ನು ಕೇಂದ್ರೀಕರಿಸಿದೆ. ಕೆನಡಾದ ಆಯೋಗವು ಈ ಬಗ್ಗೆ ವಿಚಾರಣೆ ನಡೆಸುತ್ತಿರುವ ಬಗ್ಗೆ ಮಾದ್ಯಮ ವರದಿಗಳು ನಮ್ಮ ಗಮನಕ್ಕೆ ಬಂದಿದೆ. ಕೆನಡಾದ ಚುನಾವಣೆಯಲ್ಲಿ ಭಾರತದ ಹಸ್ತಕ್ಷೇಪದ ಎಲ್ಲಾ ಆಧಾರರಹಿತ ಆರೋಪಗಳನ್ನು ನಾವು ಬಲವಾಗಿ ತಿರಸ್ಕರಿಸುತ್ತೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಚೀನಾ ದೇಶವು, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಆಡಳಿತಕ್ಕೆ ಸಹಾನುಭೂತಿ ಹೊಂದಿರುವ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಕೆನಡಾದ ಚುನಾವಣೆಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದೆ ಎಂಬ ಗುಪ್ತಚರ ವರದಿಗಳಿಗೆ ಪ್ರತಿಕ್ರಿಯೆಯಾಗಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಈ ಕುರಿತು ತನಿಖೆಗೆ ಸೂಚಿಸಿದ್ದರು.
ಜೂ.18ರಂದು ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಪಂಜಾಬಿ ಪ್ರಾಬಲ್ಯದ ಸರ್ರೆ ನಗರದಲ್ಲಿರುವ ಗುರುನಾನಕ್ ಸಿಖ್ ಗುರುದ್ವಾರದ ಪಾರ್ಕಿಂಗ್ ಸ್ಥಳದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆ ನಡೆದಿತ್ತು. ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ ಸಂಭಾವ್ಯ ಕೈವಾಡದ ಬಗ್ಗೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಸೆಪ್ಟೆಂಬರ್‌ನಲ್ಲಿ ಆರೋಪಿಸಿದ್ದರು. ಟ್ರುಡೊ ಅವರ ಆರೋಪಗಳನ್ನು ಭಾರತವು ಅಸಂಬದ್ಧ ಎಂದು ತಿರಸ್ಕರಿಸಿತ್ತು. ಆ ಬಳಿಕ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಹದಗೆಟ್ಟಿದ್ದವು. ಎರಡೂ ದೇಶಗಳ ರಾಜತಾಂತ್ರಿಕ ಅಧಿಕಾರಿಗಳ ಉಚ್ಛಾಟಣೆಯು ನಡೆದಿತ್ತು. ಭಾರತವು ಕೆನಡಾದ ನಾಗರಿಕರಿಗೆ ವೀಸಾಗಳನ್ನು ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಎರಡೂ ದೇಶಗಳ ನಡುವಿನ ಹಳಸಿದ್ದ ಸಂಬಂಧ ಸಂಪೂರ್ಣವಾಗಿ ಸರಿ ದಾರಿಗೆ ಬರುವ ಮೊದಲೇ ಭಾರತದ ವಿರುದ್ಧ ಕೆನಡಾ ಇದೀಗ ಮತ್ತೊಂದು ಆರೋಪವನ್ನು ಮಾಡಿದೆ.
ಇದನ್ನು ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂಪತ್ತಿನ ಮರು ಹಂಚಿಕೆಗೆ ಸಮೀಕ್ಷೆ ನಡೆಸುತ್ತೇವೆ: ರಾಹುಲ್ ಗಾಂಧಿ


