ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ.
2013ರಿಂದ ಕೆನಡಾದ ಲಿಬರಲ್ ಪಕ್ಷದ ನಾಯಕ ಹಾಗೂ 2015ರಿಂದ ಪ್ರಧಾನಿಯಾಗಿರುವ ಟ್ರುಡೋ, ಈ ಎರಡೂ ಹುದ್ದೆಗಳಿಂದ ಕೆಳಗಿಳಿಯಲಿದ್ದಾರೆ ಎಂದು ತಿಳಿದು ಬಂದಿದೆ.
ಬುಧವಾರ (ಜ.8) ಒಟ್ಟಾವೊದಲ್ಲಿ ಲಿಬರಲ್ ಪಕ್ಷದ ಕಾಕಸ್ ಸಮಿತಿ ಸಭೆ ನಡೆಯಲಿದೆ. ಅದಕ್ಕೂ ಮುನ್ನ ಟ್ರುಡೋ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.
ಕಳೆದ ಒಂದು ತಿಂಗಳಿನಿಂದ ಟ್ರುಡೋ ನೇತೃತ್ವದ ಲಿಬರಲ್ ಪಕ್ಷದ ಸರ್ಕಾರದಲ್ಲಿ ಆಂತರಿಕ ಅಸಮಾಧಾನ ಉಂಟಾಗಿದೆ. ಟ್ರುಡೋ ನಾಯಕತ್ವದ ವಿರುದ್ದ ಅವರ ಪಕ್ಷದ ಸಂಸದರೇ ಅಪಸ್ವರ ಎತ್ತಿದ್ದಾರೆ. ಹಣಕಾಸು ಸಚಿವೆ ಕ್ರಿಸ್ಟಿನಾ ಫ್ರಿಲ್ಯಾಂಡ್ ಅವರು ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಖಲಿಸ್ತಾನ್ ಪ್ರತ್ಯೇಕವಾದಿಗಳ ವಿಚಾರದಲ್ಲೂ ಟ್ರುಡೋ ನಾಯಕತ್ವ ಮತ್ತು ಭಾರತದ ನಡುವೆ ಸಂಬಂಧ ಹಳಸಿದೆ. ಟ್ರುಡೋ ಸರ್ಕಾರ ಕೆನಡಾದಲ್ಲಿರುವ ಖಲಿಸ್ತಾನಿಗಳ ಪರ ಹೇಳಿಕೆ ನೀಡುತ್ತಿರುವುದನ್ನು ಭಾರತ ಖಂಡಿಸಿದೆ.
ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತ ಸರ್ಕಾರದ ಕೈವಾಡವಿದೆ ಎಂದು ಟ್ರುಡೋ ಸರ್ಕಾರದ ಮಂತ್ರಿಗಳು ಮತ್ತು ಅಧಿಕಾರಿಗಳು ಆರೋಪಿಸಿದ್ದಾರೆ. ಇದು ದ್ವಿಪಕ್ಷೀಯ ಸಂಬಂಧ ಹಾಳಾಗಲು ಕಾರಣವಾಗಿದೆ. ಈ ನಡುವೆ ಟ್ರುಡೋ ರಾಜೀನಾಮೆ ಸುದ್ದಿ ಮಹತ್ವ ಪಡೆದುಕೊಂಡಿದೆ.
ಕೆನಡಾದ ಹೌಸ್ ಆಫ್ ಕಾಮನ್ಸ್‌ನಲ್ಲಿ ಲಿಬರಲ್ ಪಕ್ಷದ 153 ಸಂಸದರಿದ್ದಾರೆ. ಈ ಪೈಕಿ 20ಕ್ಕೂ ಅಧಿಕ ಮಂದಿ ಪ್ರಧಾನಿ ಟ್ರುಡೋ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕಾರಣಕ್ಕೆ ಸಂಭವನೀಯ ಮುಜುಗರ ತಪ್ಪಿಸಿಕೊಳ್ಳಲು ಟ್ರುಡೋ ರಾಜೀನಾಮೆ ಮುಂದಾಗಿದ್ದಾರೆ ಎಂದು ವರದಿಗಳು ವಿವರಿಸಿವೆ.
ಇದನ್ನೂ ಓದಿ : ಸ್ಫೇನ್ ದಂಪತಿಯ ದತ್ತುಪುತ್ರಿ 20 ವರ್ಷದ ನಂತರ ಹೆತ್ತವರ ಹುಡುಕುತ್ತಾ ಒಡಿಶಾಗೆ….


