ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಜಯಂತಿಯಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು, “ಆರ್‌ಎಸ್‌ಎಸ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಗುರಿಗಳು ಒಂದೇ ಆಗಿವೆ- ಭಾರತವನ್ನು ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡುವುದು” ಎಂದು ಹೇಳಿದ್ದರು. ಈ ಹೇಳಿಕೆಗೆ ಸ್ವತಃ ಸುಭಾಸ್ ಚಂದ್ರ ಬೋಸ್ ಅವರ ಮೊಮ್ಮಗ ಸೋಮವಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ಬಲಪಂಥೀಯ ಸಿದ್ದಾಂತಕ್ಕೂ ಸುಭಾಷ್ ಚಂದ್ರ ಬೋಸ್ ಅವರ ವಿಚಾರಗಳಿಗೆ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ” ಎಂದು ಮೋಹನ್ ಭಾಗವತ್ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ. “ಆರ್‌ಎಸ್‌ಎಸ್ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಮತ್ತು ನೇತಾಜಿಯನ್ನು ಒಟ್ಟಿಗೆ ಅನುಸರಿಸಲು ಸಾಧ್ಯವಿಲ್ಲ. ಇಂದಿನವರೆಗೆ ಎಲ್ಲರನ್ನೂ ಒಳಗೊಳ್ಳುವ ಮತ್ತು ಜಾತ್ಯತೀತರಾಗಿದ್ದ ಏಕೈಕ ನಾಯಕ” ಎಂದು 2020 ರಲ್ಲಿ ಬಂಗಾಳದ ಬಿಜೆಪಿ ಉಪಾಧ್ಯಕ್ಷ ಸ್ಥಾನದಿಂದ ಕೈಬಿಡಲ್ಪಟ್ಟ ಚಂದ್ರ ಕುಮಾರ್ ಬೋಸ್ ಹೇಳಿದ್ದಾರೆ.
“ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಏನು ಬೇಕು ಎಂಬುದರ ಬಗ್ಗೆ ಸ್ಪಷ್ಟವಾಗಿರಬೇಕು, ನೀವು ಸಾವರ್ಕರ್ ಮತ್ತು ನೇತಾಜಿಯನ್ನು ಒಟ್ಟಿಗೆ ಅನುಸರಿಸಲು ಸಾಧ್ಯವಿಲ್ಲ, ಅವರು ಒಂದೇ ಪುಟದಲ್ಲಿ ಇರಲು ಸಾಧ್ಯವಿಲ್ಲ” ಎಂದು ಬೋಸ್ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ನೇತಾಜಿ ಸುಭಾಷ್ ಚಂದ್ರ ಬೋಸ್ ನೆನಪು: ಆರ್‌ಎಸ್‌ಎಸ್ ಬಚ್ಚಿಡುವ ಸತ್ಯಗಳಿವು
ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಮೋಹನ್ ಭಾಗವತ್, “ಆರ್‌ಎಸ್‌ಎಸ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಗುರಿಗಳು ಒಂದೇ ಆಗಿವೆ – ಭಾರತವನ್ನು ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡುವುದು” ಎಂದು ಹೇಳಿದ್ದಾರೆ.
“ನಾವು ನೇತಾಜಿಯನ್ನು ಸ್ವಾತಂತ್ರ್ಯ ಹೋರಾಟಕ್ಕೆ ಅವರ ಅಮೂಲ್ಯ ಕೊಡುಗೆಗಳಿವೆ ಎನ್ನುವ ವಿಚಾರಕ್ಕೆ ಮಾತ್ರ ಸ್ಮರಿಸುವುದಲ್ಲ, ಅವರ ಗುಣಗಳನ್ನು ನಾವು ಅಳವಡಿಸಿಕೊಳ್ಳಬೇಕಿದೆ. ಅವರು ಬಯಸಿದ ಭಾರತದ ಕನಸು ಇನ್ನೂ ಈಡೇರಿಲ್ಲ. ಅದನ್ನು ಸಾಧಿಸಲು ಕೆಲಸ ಮಾಡಬೇಕು” ಎಂದು ಭಾಗವತ್ ಹೇಳಿದರು.
“ಸುಭಾಸ್‌ಬಾಬು ಅವರ ಆದರ್ಶಗಳು ನಮ್ಮ ಮುಂದೆ ಇದೆ. ಅವರು ಹೊಂದಿದ್ದ ಗುರಿಗಳು ನಮ್ಮ ಗುರಿಗಳೂ ಒಂದೇ ಆಗಿವೆ. ಭಾರತವು ಪ್ರಪಂಚದ ಒಂದು ಸಣ್ಣ ಭಾಗವಾಗಿದೆ. ಆದರೆ ನಾವು ಜಗತ್ತಿಗೆ ಪರಿಹಾರವನ್ನು ನೀಡುವಂತಾಗಬೇಕು ಎಂದು ಹೇಳಿದ್ದರು. ನಾವೆಲ್ಲರೂ ಈಗ ಅದರ ಕಡೆಗೆ ಕೆಲಸ ಮಾಡಬೇಕು” ಎಂದರು.
ಆ ಗುರಿಯನ್ನು ಸಾಧಿಸುವುದು ಅತ್ಯಗತ್ಯ ಎಂದು ಒತ್ತಿಹೇಳುತ್ತಾ, “ಗುರಿ ಸಾಧಿಸಲು ವಿಭಿನ್ನ ಮಾರ್ಗಗಳಿರಬಹುದು, ಮತ್ತು ಇವುಗಳನ್ನು ‘isms’ (ಸಿದ್ಧಾಂತಗಳು) ಎಂದು ವಿವರಿಸಲಾಗಿದೆ, ಅವುಗಳು ಭಿನ್ನವಾಗಿರಬಹುದು ಆದರೆ ಮುಖ್ಯವಾದುದು ಗುರಿಯಾಗಿದೆ” ಎಂದು ಹೇಳುವ ಮೂಲಕ ಮೋಹನ್ ಭಾಗವತ್ ಅವರು ತಮ್ಮ ಸಿದ್ದಾಂತಕ್ಕೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಿದ್ದಾಂತಗಳು ಭಿನ್ನವಾಗಿವೆ ಎನ್ನುವ ವಿಚಾರವನ್ನು ಒಪ್ಪಿಕೊಂಡಂತೆ ತೋರುತ್ತದೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸ್ಪಷ್ಟವಾಗಿ ಜಾತ್ಯಾತೀತ ಸಿದ್ದಾಂತವನ್ನು ಹೊಂದಿದ್ದರು. ಆದರೆ ಮೋಹನ್ ಭಾಗವತ್ ಅವರು ಹೇಳುವ ಬಲಪಂಥೀಯ ಸಿದ್ದಾಂತ ಅದಕ್ಕೆ ತದ್ವಿರುದ್ಧವಾಗಿದೆ. ಬೋಸ್ ಅವರೊಟ್ಟಿಗೆ ತಮ್ಮ ಸಿದ್ದಾಂತವನ್ನು ಸಾಮ್ಯತೆ ಮಾಡಿಕೊಳ್ಳಲು ಮೋಹನ್ ಭಾಗವತ್ ಹಾಗೂ ಸಂಘಪರಿವಾರದ ನಾಯಕರು ಮೇಲಿಂದ ಮೇಲೆ ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ಇದಕ್ಕೆ ಈಗ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರ ಕುಮಾರ್ ಬೋಸ್ ಸರಿಯಾಗಿ ಉತ್ತರ ನೀಡಿದ್ದಾರೆ.


