2070ರ ವೇಳೆಗೆ ಭಾರತವು ನಿವ್ವಳ ಶೂನ್ಯ ಇಂಗಾಲ ಹೊರ ಸೂಸುವಿಕೆಯನ್ನು ಸಾಧಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಗ್ಲಾಸ್ಗೋದಲ್ಲಿ ನಡೆದ ಕಾನ್ಫರೆನ್ಸ್ ಆಫ್ ಪಾರ್ಟೀಸ್26 (ಸಿಒಪಿ26) ಶೃಂಗಸಭೆಯಲ್ಲಿ ಭರವಸೆ ನೀಡಿದ್ದಾರೆ.
ಜಾಗತಿಕ ತಾಪಮಾನವನ್ನು ತಡೆಗಟ್ಟಿ ಜಗತ್ತನ್ನು ಉಳಿಸುವ ಶಂಗಸಭೆಯೆಂದೇ ಖ್ಯಾತವಾಗಿದ್ದ ಈ ಸಮಾವೇಶದಲ್ಲಿ, ಹವಾಮಾನ ಪರಿಸ್ಥಿತಿಯನ್ನು ಸುಧಾರಿಸುವ ಭರವಸೆಯನ್ನು ಭಾರತ ಜಗತ್ತಿಗೆ ನೀಡಿದೆ. 2070ರ ವೇಳೆಗೆ ಭಾರತವು ಇಂಗಾಲವನ್ನು ತಟಸ್ಥಗೊಳಿಸುವ ಗುರಿಯನ್ನು ಹೊಂದಿದೆ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ.
2030ರ ವೇಳೆಗೆ ಭಾರತವು ತನ್ನ ಶಕ್ತಿಯ ಶೇ. 50ರಷ್ಟನ್ನು ನವೀಕರಿಸಬಹುದಾದ ಇಂಧನ ಮೂಲಗಳಿಂದ ಪಡೆಯಲಿದೆ. ಭಾರತವು ತನ್ನ ಇಂಗಾಲದ ಹೊರಸೂಸುವಿಕೆಯನ್ನು 2030ರವರೆಗೆ ಒಂದು ಬಿಲಿಯನ್ ಟನ್‌ಗಳಷ್ಟು ಕಡಿಮೆ ಮಾಡುತ್ತದೆ. ಭಾರತವು 2030ರ ವೇಳೆಗೆ 500 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನವನ್ನು ಸ್ಥಾಪಿಸಲಿದೆ ಎಂದು ತಿಳಿಸಿದ್ದಾರೆ.
ಹವಾಮಾನ ಪರಿಸ್ಥಿತಿಯನ್ನು ಸುಧಾರಿಸಲು, ಶ್ರೀಮಂತ ಅಭಿವೃದ್ಧಿ ಹೊಂದಿದ ದೇಶಗಳು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮತ್ತು ಹೆಚ್ಚು ದುರ್ಬಲರಿಗೆ ಸಹಾಯ ಮಾಡಲು ಕನಿಷ್ಠ 1 ಟ್ರಿಲಿಯನ್ ಡಾಲರ್ ಹಣಕಾಸು ಸಹಾಯಹಸ್ತ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಕಾರ್ಬನ್ ತಡೆಯುವ ತಂತ್ರಜ್ಞಾನಗಳು ತುಂಬಾ ದುಬಾರಿಯಾಗಿವೆ. ಹೀಗಾಗಿ ಸದ್ಯಕ್ಕೆ ಕಾರ್ಯಗತಗೊಳಿಸುವುದು ಕಷ್ಟ. ಹೀಗಾಗಿ ಮುಂದಿನ 49 ವರ್ಷಗಳಲ್ಲಿ ಗುರಿ ಮುಟ್ಟುವುದಾಗಿ ಭಾರತ ಹೇಳಿದೆ.
ಭಾರತ ಹಾಗೂ ಇಂಗಾಲ ಸೂಸುವ ಇತರೆ ರಾಷ್ಟ್ರಗಳು ನಿವ್ವಳ ಶೂನ್ಯ ಕಾರ್ಬನ್ ಹೊರಸೂಸುವಿಕೆಯ ಗಡುವನ್ನು ತಿಳಿಸಬೇಕು ಎಂದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸೂಚಿಸಿದ ಒಂದು ತಿಂಗಳ ಬಳಿಕ ಭಾರತದ ಬದ್ಧತೆ ಹೊರಬಿದ್ದಿದೆ. ಕೇಂದ್ರ ಪರಿಸರ ಸಚಿವಾಲಯದ ಕಾರ್ಯದರ್ಶಿ ಆರ್.ಪಿ.ಗುಪ್ತಾ ಅವರು ಭಾರತವು ನಿವ್ವಳ-ಶೂನ್ಯ ಗುರಿಯನ್ನು ನಿಗದಿಪಡಿಸುವುದಿಲ್ಲ ಎಂದು ಹೇಳಿದ್ದರು. ಏಕೆಂದರೆ ಆ ಗುರಿಯನ್ನು ಸಾಧಿಸುವುದಕ್ಕಿಂತ ಕಡಿಮೆ ಹೊರಸೂಸುವಿಕೆಯ ಮಾರ್ಗವು ಹೆಚ್ಚು ಮುಖ್ಯವೆಂದು ಅವರು ವಾದಿಸಿದ್ದರು.
ಹವಾಮಾನ ಬದಲಾವಣೆಯ ಕುರಿತು ತಜ್ಞರ ನಿರ್ಣಾಯಕ ಸಮಿತಿ – ಯುಎನ್ ಇಂಟರ್‌ಗವರ್ನಮೆಂಟಲ್ ಪ್ಯಾನೆಲ್ ಆನ್ ಕ್ಲೈಮೇಟ್ ಚೇಂಜ್ (ಐಪಿಸಿಸಿ) 2010ರಿಂದ 2030ರ ವೇಳೆಗೆ ಜಾಗತಿಕ ಹೊರಸೂಸುವಿಕೆಗಳು 45%ರಷ್ಟು ಇಳಿಯಬೇಕು ಎಂದು ಈಗಾಗಲೇ ಹೇಳಿದೆ.
ಇದನ್ನೂ ಓದಿರಿ: ಏರುತ್ತಿರುವ ಜಾಗತಿಕ ತಾಪಮಾನ: ಈ ಶತಮಾನದ ಅಂತ್ಯದೊಳಗೆ ಮಂಗಳೂರು-ಮುಂಬೈ ಸಮುದ್ರ ಸಮಾಧಿ!


