Homeಮುಖಪುಟಸೌಹಾರ್ದತೆಗೆ-ಸಮಾನತೆಗೆ ಕರ್ನಾಟಕ ಚಳವಳಿಗಳ ಕೊಡುಗೆ ಮತ್ತು ಅವುಗಳ ಸೋಲು

ಸೌಹಾರ್ದತೆಗೆ-ಸಮಾನತೆಗೆ ಕರ್ನಾಟಕ ಚಳವಳಿಗಳ ಕೊಡುಗೆ ಮತ್ತು ಅವುಗಳ ಸೋಲು

- Advertisement -
- Advertisement -

ಕರ್ನಾಟಕ ರಾಜ್ಯದ ಚಳವಳಿಗಳ ವಿಶೇಷ ಲಕ್ಷಣವೆಂದರೆ ಅವು ತಮ್ಮ ಉದ್ದೇಶಿತ ಸಾಮಾಜಿಕ ರಚನೆಗಳ ಪಲ್ಲಟಗಳನ್ನು ತರುವುದರಲ್ಲಿ ವಿಫಲವಾಗದಿದ್ದರೂ ಈ ಪಲ್ಲಟಗಳಿಗೆ ವಿಚಾರವಾದದ ಪ್ರಜ್ಞೆಯನ್ನು ಬೆಳೆಸಿದವು. ಇದು ಎಲ್ಲಾ ನಾಡುಗಳ ಚಳವಳಿಗಳ ಸೀಮಿತವಾದ ಸಾಫಲ್ಯವೆಂದು ವಾದಿಸಬಹುದಾಗಿದೆ. ಅಥವಾ ಕೆಲವು ಸಿದ್ಧಾಂತಗಳು ನಂಬುವಂತೆ ಇದು ಚಳವಳಿಗಳ ನ್ಯೂನತೆಯ ದ್ಯೋತಕವಾಗಿರಬಹುದು. ಒಂದು ಕಾಲದಲ್ಲಿ, ಕರ್ನಾಟಕದಲ್ಲಿ, ವಿಶೇಷವಾಗಿ ಮಲೆನಾಡಿನಲ್ಲಿ ನಡೆದ ಸಮಾಜವಾದಿ ಚಳವಳಿಯ ಸಾಧನೆಯೇನು ಎಂದು ಕೇಳಲಾಗಿದೆ. ಉಳುವವನೆ ನೆಲದೊಡೆಯ ಎನ್ನುವ ಘೋಷಣೆಯೊಂದಿಗೆ ಗಣಪತಿಯಪ್ಪನವರ ನೇತೃತ್ವದಲ್ಲಿ ಕಾಗೋಡಿನಲ್ಲಿ ಚಳವಳಿ ನಡೆಯಿತು. ಅದಕ್ಕೆ ಲೋಹಿಯಾಯವರ ಮತ್ತು ಸಮಾಜವಾದಿ ಪಕ್ಷದ ಬೆಂಬಲ ದೊರೆಯಿತು (ಚಳವಳಿಯ ಕೊನೆಯ ಹಂತದಲ್ಲಿ). ಅದು ಸಮಾಜವಾದಿಗಳಿಗೆ ಚೈತನ್ಯವನ್ನು ಕೊಟ್ಟಿತೆ ಹೊರತು ಭೂಹಂಚಿಕೆ, ಭೂ ಒಡೆತನಗಳಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ.

ಅನೇಕ ವರ್ಷಗಳ ನಂತರ ಈ ಚಳವಳಿಯ ಹಿಂದಿನ ಉದ್ದೇಶವನ್ನು ದೇವರಾಜ ಅರಸರು ಭೂಸುಧಾರಣೆಗಳ ಮೂಲಕ ಸ್ವಲ್ಪಮಟ್ಟಿಗೆ ಈಡೇರಿಸಿದರು. ಹಿಂದುಳಿದ ಜಾತಿಗಳ ಬೆಂಬಲದಿಂದ ಅರಸರು ಕಾಂಗ್ರೆಸ್ ರಾಜಕೀಯದ ಚೌಕಟ್ಟಿನ ಒಳಗೆಯೇ ತಂದ ಬದಲಾವಣೆಗಳಿಂದ ಇದು ಸಾಧ್ಯವಾದದ್ದು. ಆದರೆ ಭೂಮಾಲೀಕರ ಪಕ್ಷವಾದ ಕಾಂಗ್ರೆಸ್ ಬಹುಬೇಗನೆ ಭೂಸುಧಾರಣೆ ಕಾನೂನಿನ ತಿದ್ದುಪಡಿಗಳ ಮೂಲಕ ಅದನ್ನು ನಿಶ್ಚೇತನಗೊಳಿಸಿತು. ಇತ್ತೀಚಿಗೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ಭ್ರಷ್ಟ ವಿದ್ಯಮಾನವಾದ ಭೂಸುಧಾರಣೆ ಕಾನೂನಿನ ತಿದ್ದುಪಡಿಯಿಂದ ಆ ಚಳವಳಿಯ ಕೊನೆಯ ಕುರುಹೂ ಉಳಿಯದಂತಾಯಿತು. ಕಾಯಿದೆಯನ್ನು ಹಿಂದಿನ ದಿನಾಂಕದಿಂದ ಜಾರಿಗೊಳಿಸಿದ್ದರಿಂದ ಕೋರ್ಟುಗಳಲ್ಲಿದ್ದ ಸಾವಿರಾರು ಕೇಸುಗಳು ’ಪರಿಹಾರವಾದವು’. ಒಂದು ಕೇಸಿಗೆ ನಿರ್ದಿಷ್ಟ ಇಷ್ಟು ಎಂಬಂತೆ ಭೂಮಿಯ ಇಂದಿನ ಬೆಲೆಯ ಆಧಾರದ ಮೇಲೆ ಬಿ.ಜೆ.ಪಿ. ಸರಕಾರವು ಪಡೆದಿರಬಹುದಾದ ಲಂಚದ ಒಟ್ಟು ಮೊತ್ತ ಎಷ್ಟಾಗಿರಬಹುದು?

ಇದೆಲ್ಲದರ ಮಧ್ಯ ಹಿಂದುಳಿದ ಜಾತಿಗಳ ರಾಜಕೀಯವು ಕರ್ನಾಟಕದಲ್ಲಿ ಬೆಳೆದದ್ದು ನಿಜವೆ. ಇದರಿಂದ ಈ ಜಾತಿಗಳಿಗೆ ಸಾಮಾಜಿಕ ನ್ಯಾಯವೇನೂ ಸಿಕ್ಕಲಿಲ್ಲ. ಆದರೆ ಕರ್ನಾಟಕ ರಾಜಕೀಯದಲ್ಲಿ ಪ್ರಬಲ ಹಾಗೂ ಮಧ್ಯಮ ಶೂದ್ರ ಜಾತಿಗಳ ಮತ್ತು ಹಿಂದುಳಿದ ಜಾತಿಗಳ ಮಧ್ಯದ ಸಮೀಕರಣಗಳು ಬದಲಾದವು. ಈಗಿನ ಹೊಸ ತಿರುವು ಏನೆಂದರೆ ಈ ಶೂದ್ರ ಹಿಂದುಳಿದ ಜಾತಿಗಳೇ ಕರ್ನಾಟಕದ ಬಲಪಂಥೀಯ ಕೋಮುವಾದಿ ರಾಜಕೀಯದ ಕಾಲಾಳುಗಳಾಗಿವೆ. ಇತ್ತೀಚಿನ ವರ್ಷಗಳಲ್ಲಿ ಬಿ.ಜೆ.ಪಿ. ಪಕ್ಷ ಸೇರಿರುವ ದಲಿತ ನಾಯಕರು ಹಾಗೂ ಹಿಂಬಾಲಕ ದಲಿತರು ಆಕ್ರಮಣಕಾರಿ ಕೋಮುವಾದಿ ರಾಜಕೀಯದ ಅತ್ಯಂತ ಪ್ರಬಲ ಸಮರ್ಥಕರಾಗಿದ್ದಾರೆ. ಅಂಬೇಡ್ಕರ್ ಕೇಂದ್ರಿತ ದಲಿತ ರಾಜಕೀಯವು ಕರ್ನಾಟಕದಲ್ಲಿ ಒಂದು ಶಕ್ತಿಯಾಗಿ ಬೆಳೆಯಲೇ ಇಲ್ಲ. ಆದರೆ ಅದೇ ಹೊತ್ತಿಗೆ ದಲಿತ ಸಂಘರ್ಷ ಸಮಿತಿಯ ಹೋರಾಟಗಳು, ಸಾಂಸ್ಕೃತಿಕ ರಾಜಕೀಯ ಹಾಗೂ ಒಂದು ಕಾಲದಲ್ಲಿದ್ದ ಸಂಘಟನೆಯ ಬಲ, ಇವೆಲ್ಲಾ ದಲಿತ ಸಮುದಾಯಗಳಲ್ಲಿ ಹುಟ್ಟಿಸಿದ ಪ್ರಜ್ಞೆಯು ಅಸಾಮಾನ್ಯವಾದುದು.

ಈ ದ್ವಂದ್ವಗಳನ್ನು ಚರ್ಚಿಸಿದ್ದಕ್ಕೆ ಕಾರಣವೆಂದರೆ ಕರ್ನಾಟಕದ ತಥಾಕಥಿತ ಬಹುತ್ವ, ಸೌಹಾರ್ದ, ಉದಾರವಾದಗಳು ಕೂಡ ಚಾರಿತ್ರಿಕವಾಗಿ ವಿರೋಧಾಭಾಸಗಳಿಂದಲೇ ಕೂಡಿವೆ. ’ಮನುಷ್ಯ ಜಾತಿ ತಾನೊಂದೆ ವಲಂ’ ಎಂದು ಪಂಪ ಹೇಳಿದಾಗ ಕನ್ನಡ ನಾಡಿನ ಅನೇಕ “ಸಾಮ್ರಾಜ್ಯ”ಗಳು ವರ್ಣ ಹಾಗೂ ಜಾತಿ ಅಸಮಾನತೆಯನ್ನು ಗಟ್ಟಿಗೊಳಿಸುವ ವೈದಿಕ ವರ್ಣಾಶ್ರಮ ಪದ್ಧತಿಯನ್ನು ಬೆಂಬಲಿಸುವುದೇ ತಮ್ಮ ಪ್ರತಿಷ್ಠೆಯಾಗಿರಿಸಿಕೊಂಡಿದ್ದವು. ದೇವಸ್ಥಾನಗಳನ್ನು ತೀವ್ರವಾಗಿ ವಿರೋಧಿಸಿದ ವಚನಕಾರ ಚಳವಳಿಯ ಹಿಂದುಮುಂದಿನ ಶತಮಾನಗಳಲ್ಲಿ ರಾಜಸತ್ತೆಗಳು ದೇವಾಲಯ ನಿರ್ಮಾಣವನ್ನೇ ತಮ್ಮ ಪ್ರಧಾನ ಕಾರ್ಯವನ್ನಾಗಿಸಿಕೊಂಡವು. ಈ ಕಾಲವು ಜೈನ, ಶೈವ, ವೈಷ್ಣವ ಮತಗಳ ಪರಸ್ಪರ ಹೋರಾಟದ (ಹಿಂಸೆಯೂ ಸೇರಿದಂತೆ) ಕಾಲವಾಗಿತ್ತು. ಜೈನ ಬಸದಿಗಳನ್ನು ನಿರ್ನಾಮ ಮಾಡಿ ದೇವಾಲಯಗಳನ್ನು ಕಟ್ಟುವುದು ವ್ಯಾಪಕವಾಗಿ ನಡೆಯಿತು. ಕಲ್ಯಾಣ ಕರ್ನಾಟಕದ ಅನುಭಾವಿ ಹಾಗೂ ಸೂಫಿ ಪರಂಪರೆಗಳು, ಅವುಗಳಿಂದ ಹುಟ್ಟಿಕೊಂಡ ಸಂಕರ ಪರಂಪರೆಗಳು ಸ್ಥಳೀಯ ಸಂಸ್ಕೃತಿಗಳನ್ನು ಗಾಢವಾಗಿ ಪ್ರಭಾವಿಸಿದರೂ ವಿಜಯನಗರ ಸಾಮ್ರಾಜ್ಯವು ಮೊದಲ ಬಾರಿಗೆ ’ಹಿಂದೂ ಸಾಮ್ರಾಜ್ಯ ಸುರತ್ರಾಣ’ನೆಂಬ ಬಿರುದು ಹೊತ್ತ ದೊರೆಯನ್ನು ಅಧಿಕಾರಕ್ಕೆ ತಂದಿತು. ದೇವಾಲಯ ಕೇಂದ್ರಿತ ಹಂಪಿ ಸುತ್ತಲಿನ ಸಮಾಜವು ಸಾಂಪ್ರದಾಯಿಕ ಶ್ರೇಣೀಕೃತ ಸಮಾಜವೇ ಆಗಿತ್ತು ಎನ್ನುವುದು ಇತಿಹಾಸಕಾರರ ಖಚಿತವಾದ ಅಭಿಪ್ರಾಯ. ವಿಜಯನಗರದ ಪತನ ಮತ್ತು ಹಂಪಿಯ ನಿರ್ನಾಮದ ನಂತರ ಕರ್ನಾಟಕದ ಚರಿತ್ರೆಯಲ್ಲಿ ಮುಸ್ಲಿಮ್ ವಿರೋಧಿ ಕೋಮುವಾದಿ ವ್ಯಾಖ್ಯಾನವು ಅದೆಷ್ಟು ಪ್ರಬಲವಾಗಿ ಬೆಳೆಯುತ್ತದೆಯೆಂದರೆ ಅದರಿಂದ ಬಿಡುಗಡೆ ಅಸಾಧ್ಯವೆಂದೇ ತೋರುತ್ತದೆ.

ಈ ಎಲ್ಲ ವಿದ್ಯಮಾನಗಳ ನಡುವೆ ಸೌಹಾರ್ದತೆ ಎನ್ನುವುದು ಇರಲೇ ಇಲ್ಲವೆ? ಬಹುತ್ವವೆನ್ನುವುದು ಕೇವಲ ಒಂದು ಮಿಥ್ಯೆಯೆ? ಇಲ್ಲ. ತರೀಕೆರೆ ರಹಮತ್ ಅವರು ನಮಗೆ ಕಟ್ಟಿಕೊಟ್ಟಿರುವ ಸಂಸ್ಕೃತಿಗಳ ಅಧ್ಯಯನಗಳು ಬಹು ವಿಸ್ತಾರವಾದ, ಸಂಕೀರ್ಣವಾದ ಬಹುತ್ವದ ಲೋಕವೊಂದು ಇಂದಿಗೂ ಜೀವಂತವಾಗಿರುವುದನ್ನು ಸಾಬೀತುಮಾಡಿವೆ. ಅಲ್ಲಿಂದ ಹೊರಟು ಕರ್ನಾಟಕ ಸಂಸ್ಕೃತಿಯನ್ನು back formation ಕ್ರಮದಲ್ಲಿ ಕಲ್ಪಿಸಿಕೊಂಡರೆ ಅದು ಬಹುತ್ವ ಹಾಗೂ ಸೌಹಾರ್ದದ ಗಟ್ಟಿಯಾದ ನೆಲೆಯಾಗಿ ಕಾಣುತ್ತದೆ. ಸಂಕರ ನಂಬಿಕೆಗಳ, ಭಾಷೆಗಳ ಹಾಗೂ ಸಂಕರ ಸಂಸ್ಕೃತಿಗಳ ಅನೇಕ ಕಲೆಗಳ ಆಚೆಗೆ ವ್ಯಾಪಾರ, ಪ್ರಯಾಣ, ವಲಸೆಗಳು, ಇಲ್ಲಿಯ ಕಸುಬುಗಳು, ಆಹಾರ ಪದ್ಧತಿಗಳು, ಇವುಗಳನ್ನು ಅಧ್ಯಯನ ಮಾಡಿದರೆ ಬಹುತ್ವವು ಇಲ್ಲಿಯ ಚರಿತ್ರೆಯ ಅನಿವಾರ್ಯತೆಯಾಗಿತ್ತು ಎಂದೇ ತೋರುತ್ತದೆ. ಆದರೆ ಈ ಬಹುತ್ವವು, ಸಾಮರಸ್ಯವು ದಲಿತ ಸಮುದಾಯಗಳ ಹೊರಗುಳಿಯುವಿಕೆಯನ್ನು ಬದಲಾಯಿಸಲು ಸ್ವಲ್ಪವಾದರೂ ಪ್ರಭಾವಿಸಿತು ಎಂದು ಹೇಳಲು ಆಧಾರಗಳಿಲ್ಲ. ಹಾಗೆಯೆ ಅನೇಕ ಕಸುಬುದಾರ ಜಾತಿಗಳು ಲಿಂಗಾಯತ ಧರ್ಮಕ್ಕೆ ಸೇರಿಕೊಂಡರೂ ಕ್ರಮೇಣವಾಗಿ ಲಿಂಗಾಯತ ಉಪಜಾತಿಗಳಾಗಿ ಪರಿವರ್ತನೆ ಹೊಂದಿ ಶ್ರೇಣೀಕರಣಕ್ಕೆ ಒಳಗೊಂಡವು ಎನ್ನುವುದಕ್ಕೆ ಚರಿತ್ರೆಯ ದಾಖಲೆಗಳ ಅವಶ್ಯಕತೆಯೂ ಇಲ್ಲ. ಇಂದಿನ ಲಿಂಗಾಯತ ಜಾತಿಯೊಳಗಿನ ಉಪಜಾತಿಗಳನ್ನು ನೋಡಿದರೆ ಸಾಕು. ಹಾಗಿದ್ದರೆ ವಚನಕಾರ ಚಳವಳಿಯಂಥ ಅಸದೃಶವಾದ ಜಾತಿವಿರೋಧಿ ಚಳವಳಿಯು ಅಂತಿಮವಾಗಿ ಶ್ರೇಣೀಕೃತವಾದ ಸಮುದಾಯವೊಂದರಲ್ಲಿ ಪರ್ಯವಸನ ಹೊಂದಿತೆ? ವಚನಕಾರ ಚಳವಳಿಯು ಅಮೂರ್ತ ಆದರ್ಶಪರ
rhetoric ಆಗಿ ಉಳಿದು ಅಸಮಾನತೆಯ ಸಮಾಜವೊಂದರ ಮರುಹಂಬಲವಾಗಿ ಮಾತ್ರ ಉಳಿಯಿತೆ?

ಚರಿತ್ರೆಯ ಬಗ್ಗೆ ಇಂಥ ಸಂದೇಹಗಳು ನನಗೆ ಗಟ್ಟಿಯಾಗಿದ್ದು ಬಾಬಾ ಸಾಹೇಬ ಅಂಬೇಡ್ಕರ್ ಅವರು ತಮ್ಮ ಪಾಕಿಸ್ತಾನ ಕುರಿತು ಕೃತಿಯಲ್ಲಿ ಆ ಕಾಲದಲ್ಲಿ ಅತ್ಯಂತ ವಿವಾದಿತವಾಗಿದ್ದ, ಆದರೆ ರಾಜಕೀಯವಾದ ಅಷ್ಟೇ ಪ್ರಬಲವಾಗಿದ್ದ “ಎರಡು ರಾಷ್ಟ್ರಗಳು” (Two nations theory) ಸಿದ್ಧಾಂತವನ್ನು ಪರಿಶೀಲಿಸುತ್ತಾ, ಒಂದು ಕಾಲಾವಧಿಯಲ್ಲಿ ನಡೆದ ಹಿಂದು-ಮುಸ್ಲಿಮ್ ಸಂಘರ್ಷಗಳ ಸುದೀರ್ಘವಾದ ಪಟ್ಟಿ ಹಾಗೂ ವಿವರಗಳನ್ನು ಕೊಡುತ್ತಾರೆ. ಈ ವಿವರಗಳು ಸಾರ್ವಜನಿಕ ವಲಯದಲ್ಲಿ ಪತ್ರಿಕೆಗಳ ಮೂಲಕ ಪರಿಚಿತವಾದ ಸಂಗತಿಗಳೇ ಆಗಿದ್ದವು. ಹಾಗೆಯೆ ಜಾತಿವಿನಾಶ (Annhilaton of Caste) ಕೃತಿ ಮಾತ್ರವಲ್ಲ, ಅವರ ಇನ್ನೂ ಅನೇಕ ಬರಹಗಳಲ್ಲಿ ದಲಿತರ ಮೇಲೆ ಆಗಿರುವ ಹಿಂಸೆಯ ವಿವರವಾದ ವರ್ಣನೆಯಿದೆ. ಇವುಗಳು ಕೂಡ ವಿಶ್ವಾಸಾರ್ಹವಾದ ಪತ್ರಿಕೋದ್ಯಮದಿಂದ ಪಡೆದಿರುವಂಥಹವೇ. ಇವೆಲ್ಲ ಕೇವಲ ಗತಕಾಲದ ಬಗ್ಗೆ ತಳಮಳ ಹುಟ್ಟಿಸುವ ಸಂಗತಿಗಳಲ್ಲ, ನಮ್ಮ ಕಾಲದ ಭಾರತದ ದಿನನಿತ್ಯದ ಘಟನೆಗಳ ವರ್ಣನೆಗಳಂತಿವೆ. ಅಂದರೆ ’ಬದಲಾಗದ ಭಾರತ’ವೆನ್ನುವುದು ಕೇವಲ ಓರಿಯಂಟಲಿಸ್ಟ್ ಪುರಾಣವಲ್ಲ. ಅಂಥ ಒಂದು ಭಾರತವೂ ಇದೆ.

ರಹಮತ್‌ರ ಸಂಶೋಧನೆಯ ಇನ್ನೊಂದು ಕರ್ನಾಟಕವೂ ಇದೆ. ಒಂದು ಕಾಲದ ಸೌಹಾರ್ದ ಕರ್ನಾಟಕವು ಅವನತಿಗೊಂಡು ಇಂದಿನ ಜಾತಿಗ್ರಸ್ತ ಕೋಮುವಾದಿ ಕರ್ನಾಟಕವು ನಿರ್ಮಾಣವಾಯಿತು ಎಂದು ಇನ್ನೊಂದು ಪುರಾಣವನ್ನು ಕಟ್ಟುವುದೂ ಸಮರ್ಪಕವಲ್ಲ. ಏಕೆಂದರೆ ಅಂಥ ಪುರಾಣದ ಸಮರ್ಥನೆಗಾಗಿ, ಈ ಅವನತಿಗೆ ಕಾರಣವೆಂದು ಆಧುನಿಕತೆಯನ್ನು, ರಾಷ್ಟ್ರವಾದವನ್ನು, ಆರ್ಥಿಕ ವ್ಯವಸ್ಥೆಯನ್ನು ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸತೊಡಗುತ್ತವೆ. ಇವೆಲ್ಲವು ಅರ್ಧ ಸತ್ಯಗಳು ಮತ್ತು ಯಾಕೆಂದರೆ ಅಸಮಾನತೆಗಳಿಗೆ, ಜಾತೀಯತೆಯ ಕ್ರೌರ್ಯಕ್ಕೆ ದೀರ್ಘಕಾಲದ ಇತಿಹಾಸವಿದೆ. ಇವುಗಳ ಬೆನ್ನೇರಿ ರಾಷ್ಟ್ರವಾದವು ಈಗ ಕರ್ನಾಟಕವನ್ನು ಭೀಕರವಾದ ಹಿಂಸೆಯ ತಾಣವನ್ನಾಗಿಸುತ್ತದೆ. ಇಲ್ಲದಿದ್ದರೆ ಮುಖ್ಯಮಂತ್ರಿ ಬೊಮ್ಮಾಯಿಯವರು ದೆಹಲಿ ಮತ್ತು ನಾಗಪುರಗಳಿಂದ ಪಡೆದುಕೊಂಡು ಬಂದ ನಿರ್ದೇಶನಗಳನ್ನು ಇಷ್ಟು ತ್ವರಿತವಾಗಿ ಜಾರಿಗೆ ತಂದು ಕರ್ನಾಟಕವನ್ನೇ ಅಪಾಯಕ್ಕೊಡ್ಡುವುದು ಸಾಧ್ಯವಾಗುತ್ತಿರಲಿಲ್ಲ.

ಜಗತ್ತಿನ ಅತ್ಯಂತ radical ಆದ ಸಾಂಸ್ಕೃತಿಕ ಚಳವಳಿಯ ನೆನಪುಗಳಿರುವ ಲಿಂಗಾಯತ ಸಮುದಾಯವು ಕೋಮುವಾದಿ ರಾಜಕೀಯ ಹಾಗೂ ಪಕ್ಷದ ಬೆಂಬಲಕ್ಕೆ ನಿಂತುಕೊಂಡು ಕರ್ನಾಟಕ ಸಂಸ್ಕೃತಿಯ ವಿನಾಶದ ಬಹುಮುಖ್ಯ ಸಾಧನವಾಗುತ್ತಿರಲಿಲ್ಲ. ಇಂದಿಗೂ ಬಹುಪಾಲು ಲಿಂಗಾಯತರು ತಾವು ಕೇವಲ ಒಂದು ರಾಜಕೀಯ ಪಕ್ಷವನ್ನು ಚುನಾವಣೆಗಳಲ್ಲಿ ಬೆಂಬಲಿಸಿದ್ದೇವೆಯೆ ಹೊರತು ಕೋಮುವಾದಕ್ಕೂ ತಮಗೂ ಸಂಬಂಧವಿಲ್ಲವೆನ್ನುವ ಭ್ರಮೆಯಲ್ಲಿದ್ದಾರೆ. ಆದರೆ ತಮ್ಮ ರಾಜಕೀಯ ಆಯ್ಕೆಯಿಂದಾಗಿ ರಾಷ್ಟ್ರದಲ್ಲಿ ಈಗ ಬಲವಾಗಿ ಬೇರೂರಿರುವ ಫ್ಯಾಸಿಸ್ಟ್ ವ್ಯವಸ್ಥೆಗೆ ತಾವು ಪ್ರಮುಖ ಕಾರಣರೂ ಎಂದು ನಂಬಲು ಸಿದ್ಧರಾಗಿಲ್ಲ. ಮಠಗಳ ರಾಜಕೀಯದಿಂದಾಗಿ ಅಧಿಕಾರ ಮತ್ತು ಆಸ್ತಿಗಳ ಹಪಾಹಪಿಯಿಂದಾಗಿ, ವಚನಕಾರ ಚಳವಳಿಯ ಮೌಲ್ಯಗಳಿಗೂ ಇಂದಿನ ಲಿಂಗಾಯತ ಸಮಾಜಕ್ಕೂ ಯಾವುದೇ ವೈಚಾರಿಕ ಭಾವನಾತ್ಮಕ ನಿಬಂಧಗಳು ಇಲ್ಲದಂತಾಗಿದೆ.

ಕರ್ನಾಟಕದ ದಲಿತ ಚಳವಳಿಯು ತನ್ನ ಅಂತಿಮ ಗುರಿಯು ಜಾತಿವಿನಾಶವೆಂದು ನಂಬಿತ್ತು. ಸಮಾನತೆಯನ್ನು ತನ್ನ ಉದ್ದೇಶವಾಗಿ ಸ್ವೀಕರಿಸಿತ್ತು. ಹೀಗಾಗಿ 70 ಹಾಗೂ 80ರ ದಶಕಗಳ ಪ್ರಗತಿಪರ ಚಳವಳಿಗಳೊಂದಿಗೆ ತನ್ನ ವೈಚಾರಿಕ ನಿಂಬಂಧವನ್ನು ಜೀವಂತವಾಗಿರಿಸಿಕೊಂಡಿದ್ದವು ದಲಿತ ಸಂಘಟನೆಗಳು. ಭಾರತದ ಚರಿತ್ರೆಯಲ್ಲಿ ಆತ್ಯಂತಿಕವಾದ ಹಿಂಸೆ ಹಾಗೂ ಅವಮಾನಗಳಿಗೆ ಈಡಾದ ಸಮುದಾಯಗಳು ಸಂಘಟನೆಯಾಗಬೇಕು ಮತ್ತು ದಲಿತರು ತಮ್ಮ ರಾಜಕೀಯ, ನಾಗರಿಕ ಹಕ್ಕುಗಳನ್ನು ಮಂಡಿಸಲು ಈ ಸಂಘಟನೆಯು ವೇದಿಕೆಯಾಗಬೇಕು ಎನ್ನುವುದು ಅಂಬೇಡ್ಕರ್ ಅವರ ಖಚಿತ ನಿಲುವಾಗಿತ್ತು. ಹೀಗಾಗಿ ಅವರು ತಮ್ಮ ಜೀವನದಲ್ಲಿ ಯಾವುದೇ ಒಂದು ದಲಿತ ಜಾತಿ ಸಂಘಟನೆಯನ್ನು ಕಟ್ಟಲೂ ಇಲ್ಲ ಪ್ರೋತ್ಸಾಹಿಸಲೂ ಇಲ್ಲ. ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿಯೂ ತನ್ನ ಉತ್ಕರ್ಷದ ದಿನಗಳಲ್ಲಿ ಇದನ್ನೇ ಪಾಲಿಸಿತು.

ಆದರೆ ಕರ್ನಾಟಕದ ಅಧಿಕಾರ ರಾಜಕೀಯದ ಲಕ್ಷಣವೆಂದರೆ ಜಾತಿ ಆಧಾರಿತ lobbying. ಇದು ಅದರ ಪ್ರಮುಖ ಸೂತ್ರವಾಗಿದೆ. ಇದು ವಸಾಹತುಶಾಹಿ ಕಾಲದಲ್ಲಿ, ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ, ಲಿಂಗಾಯತ ಹಾಗೂ ಒಕ್ಕಲಿಗ ಜಾತಿ ಸಂಘಟನೆಗಳು ಸ್ಥಾಪನೆಯದಾಗಿನಿಂದ ಪ್ರಬಲವಾದ ರಾಜಕೀಯ ಅಸ್ತ್ರವಾಯಿತು. ಇದೇ ಸೂತ್ರ ಹಾಗೂ ಮಾದರಿಯನ್ನು ದಲಿತ ಜಾತಿ ಸಂಘಟನೆಗಳು ಅನುಕರಿಸಿದವು, ಅಲ್ಲದೆ ಅಸಮಾನತೆ ಮತ್ತು ಸಾಮಾಜಿಕ ಅನ್ಯಾಯಗಳ ವಾದಗಳನ್ನು ಮುಂದಿಟ್ಟು ಈ ಸಮಸ್ಯೆಗಳಿಗೆ ರಾಜಕೀಯ ಪರಿಹಾರವೆಂದರೆ ಜಾತಿ ಸಂಘಟನೆಗಳನ್ನು ಬಲಪಡಿಸಿಕೊಂಡು ಒಂದು pressure group ಆಗಿ ಮತ್ತು ಅದಕ್ಕೂ ಮುಖ್ಯವೆಂದರೆ ವೋಟ್ ಬ್ಯಾಂಕ್ ಆಗಿ ಕೆಲಸ ಮಾಡುವುದು ಈ ಸಂಘಟನೆಗಳ ಉದ್ದೇಶವಾಯಿತು. ಇದರ ಪರಿಣಾಮವೆಂದರೆ ಈಗ ಕರ್ನಾಟಕದಲ್ಲಿ ಜಾತಿ ವಿನಾಶ ಅಥವಾ ಜಾತಿವಿನಾಶದ ಸಿದ್ಧಾಂತಗಳ ಮೇಲೆ ದಲಿತ ಸಂಘಟನೆಯನ್ನು ಕಟ್ಟುವುದು ಶಾಶ್ವತವಾಗಿ ಅಸಾಧ್ಯವಾಗಿದೆ. ಅಷ್ಟು ಮಾತ್ರವಲ್ಲ ಇದನ್ನು ನಿರೀಕ್ಷಿಸುವುದು ಮೇಲ್ಜಾತಿ ಚಿಂತಕರ ಒಳಸಂಚು ಎನ್ನುವ ವಾತಾವರಣವೇ ಸೃಷ್ಟಿಯಾಗಿದೆ.

ಚಳವಳಿಗಳ ಅವನತಿಯ ಪರಿಣಾಮವನ್ನು ಕರ್ನಾಟಕದ ನಾಗರಿಕ ಸಮುದಾಯದ (civil society) ನೈತಿಕ ಹಾಗೂ ವೈಚಾರಿಕ ಅವನತಿಗಳಲ್ಲಿ ಗುರುತಿಸಬಹುದಾಗಿದೆ. ಜಾತಿ ವ್ಯವಸ್ಥೆಯ ವಿರೋಧ, ಜಾತ್ಯತೀತ ಚಿಂತನೆ, ಸಾಮಾಜಿಕ ನ್ಯಾಯ ಹಾಗೂ ಸಮಾನತೆಗಳು ನಾಗರಿಕ ಸಮುದಾಯಕ್ಕೆ ಅರ್ಥಹೀನವಾಗಿ ಕಾಣುತ್ತಿವೆ. ಅಷ್ಟು ಮಾತ್ರವಲ್ಲ ಈ ಮೌಲ್ಯಗಳನ್ನು ಅಪಹಾಸ್ಯ ಮಾಡಿ, ಕ್ಷುಲ್ಲಕ ಮಾಡಿ ಅವಶ್ಯವಾದಾಗ ಇವುಗಳ ವಿರುದ್ಧ ನಡೆಯುವ ಹಿಂಸಾತ್ಮಕ ಘಟನೆಗಳಿಗೆ ಬೆಂಬಲ ನೀಡುವುದು ಸಾಮಾನ್ಯವಾಗಿಬಿಟ್ಟಿದೆ. ಶಿಕ್ಷಿತ ಮೇಲ್ಜಾತಿ ಹಾಗೂ ಮಧ್ಯಮವರ್ಗದ ಜನರಲ್ಲಿ ಈ ವಿದ್ಯಮಾನವು ಇಂದು ಸ್ವೀಕೃತವಾದ ನಡವಳಿಕೆಯಾಗಿದೆ. ಒಂದೆರಡು ವರ್ಷಗಳಿಂದ ನಾನು ಸಾಮಾಜಿಕ ಮಾಧ್ಯಮಗಳಲ್ಲಿ ಈ ನಾಗರಿಕ ಸಮುದಾಯದ ಪ್ರತಿಕ್ರಿಯೆಗಳನ್ನು ಕುತೂಹಲದಿಂದ ಗಮನಿಸುತ್ತಾ ಬಂದಿದ್ದೇನೆ. ಅದರಲ್ಲೂ ಜಾತಿ ಹಾಗೂ ಕೋಮುವಾದಿ ಧೋರಣೆಗಳ ಪರವಾಗಿರುವ ತಾಣಗಳನ್ನು ನೋಡುತ್ತೇನೆ.

ಉದಾಹರಣೆಗೆ ಚಕ್ರವರ್ತಿ ಸೂಲಿಬೆಲೆಯಂಥ ಅಗ್ನಿಭಕ್ಷಕರು ವಿಷವನ್ನು ಬಿತ್ತುತ್ತಿದ್ದಾಗ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕವಾಗಿ ಸೇರಿ ಭಕ್ತಿಯಿಂದ ಅವರ ಮಾತುಗಳನ್ನು ಕೇಳುವ ನಾಗರಿಕರನ್ನು ನೋಡಿದ್ದೇನೆ. ಅಲ್ಪಸಂಖ್ಯಾತರು ಹಾಗೂ ದಲಿತರ ವಿರುದ್ಧ ಪೋಸ್ಟ್ ಮಾಡುವವರ ಹೇಳಿಕೆಗಳನ್ನು ಅಭ್ಯಾಸ ಮಾಡಿದ್ದೇನೆ. (ಉದಾಹರಣೆಗೆ ಒಂದು ಸಾಮಾಜಿಕ ತಾಣದ ಚರ್ಚೆಯಲ್ಲಿ ಒಬ್ಬ ಮಹಿಳೆ ’ನಮ್ಮ ಬ್ರಾಹ್ಮಣ ಜಾತಿಗಳಲ್ಲಿ ನಾವು ಶವಗಳಿಗೆ ಅಗ್ನಿ ಸಂಸ್ಕಾರ ಮಾಡುತ್ತೇವೆ ಹೂಳುವುದಿಲ್ಲ, ಆದ್ದರಿಂದಲೇ ನಮ್ಮ ಜಾತಿ ಶ್ರೇಷ್ಠ’ ಎಂದು ಬರೆದರು.) ಹೀಗಾಗಿ ನಮ್ಮ ಆತಂಕಕ್ಕೆ ಕಾರಣವಾಗಬೇಕಾಗಿರುವುದು ಕೋಮುವಾದಿ ನಾಯಕರುಗಳಲ್ಲ ಬದಲಾಗಿ ನಮ್ಮ ನಾಗರಿಕ ಸಮುದಾಯವೇ. ಅದು ತೀವ್ರವಾದ ಮನುಷ್ಯ ವಿರೋಧಿ ನಿಲುವುಗಳಿರುವ ಹಿಂಸಾಪಶುವಾಗಿದೆ. ಮಾತಿನ ಹಿಂಸೆಯಿಂದ (verbal violence) ಹಿಂಸಾನಂದವನ್ನು ಪಡೆಯುವ ಮಾನಸಿಕ ರೋಗಿಯ ಸಾಲಿಗೆ ಬಂದು ತಲುಪಿದೆ.

ಕರ್ನಾಟಕದ ಜನಪರ ಚಳವಳಿಗಳ ಈ ಹಿಂದಿನ ಸಾಧನೆಯೆಂದರೆ ಎಲ್ಲಾ ವಿರೋಧಾಭಾಸಗಳ ನಡುವೆ ಒಂದಿಷ್ಟು ಉದಾರವಾದಿ, ಪ್ರಜಾಸತ್ತಾತ್ಮಕ ಧೋರಣೆಗಳನ್ನು ಸ್ವಲ್ಪಮಟ್ಟಿಗೆ ಇಟ್ಟುಕೊಂಡಿದ್ದ ನಾಗರಿಕ ಸಮುದಾಯವನ್ನು ಕ್ರಿಯಾಶೀಲವಾಗಿ ಇಟ್ಟುದದಾಗಿತ್ತು. ’ಲಂಕೇಶ್ ಪತ್ರಿಕೆ’ ಈ ಸಮುದಾಯದ ವೇದಿಕೆ ಹಾಗೂ ಅಭಿವ್ಯಕ್ತಿಯಾಗಿತ್ತು. ಈಗ ಇಂಥ ನಾಗರಿಕ ಸಮುದಾಯವನ್ನು ಕಟ್ಟುವುದು ಅಸಾಧ್ಯವಾಗಿದೆ. ಆದ್ದರಿಂದಲೇ ಆಶ್ಚರ್ಯಕರವಾದ ವೇಗದಲ್ಲಿ ಕರ್ನಾಟಕವು ಫ್ಯಾಸಿಸ್ಟ್ ಸಮಾಜವಾಗುತ್ತಿದೆ. ಕರ್ನಾಟಕದ ಯಾವುದೇ ಮುಖ್ಯಮಂತ್ರಿಯು ಈವರೆಗೆ ಕ್ರಿಯೆ ಪ್ರತಿಕ್ರಿಯೆಯ ಆಧಾರದ ಮೇಲೆ ಕೋಮುವಾದಿ ಹಿಂಸೆಗೆ ನೇರವಾಗಿ ಸಾರ್ವಜನಿಕವಾಗಿ ಬೆಂಬಲವನ್ನು ನೀಡಿರಲಿಲ್ಲ. ಹೀಗೆ ಮಾಡುವುದರೊಂದಿಗೆ ಕರ್ನಾಟಕ ಸಂಸ್ಕೃತಿಯ ಅವಸಾನಕ್ಕೆ ಕರೆ ನೀಡಲಾಗಿದೆ. ಈ ಸಂಸ್ಕೃತಿಗೆ ಪರ್ಯಾಯವಾಗಿ ಅಖಿಲ ಭಾರತೀಯ ಸಂಸ್ಕೃತಿಯು ಅನುಷ್ಠಾನಗೊಳ್ಳಲಿದೆ.

ಪ್ರೊ.ರಾಜೇಂದ್ರ ಚೆನ್ನಿ

ಪ್ರೊ. ರಾಜೇಂದ್ರ ಚೆನ್ನಿ
ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು, ಕಥೆಗಾರರು, ವಿಮರ್ಶಕರು ಮತ್ತು ಸಂಸ್ಕೃತಿ ಚಿಂತಕರು. ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗಾಗಿ ನಡೆಯುತ್ತಿರುವ ದಕ್ಷಿಣಾಯನ ಅಭಿಯಾನದ ಸಂಚಾಲಕರು


ಇದನ್ನೂ ಓದಿ: ವಸುದೈವ ಕುಟುಂಬಕಂ ಎಂಬ ಪ್ರಾಚೀನ ಪರಿಕಲ್ಪನೆ ಹವಾಮಾನ ಬದಲಾವಣೆಯ ಪ್ರಕ್ರಿಯೆಯನ್ನು ಹಿಮ್ಮೆಟ್ಟಿಸಲು ಸಾಧ್ಯವೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...