Homeಮುಖಪುಟವಸುದೈವ ಕುಟುಂಬಕಂ ಎಂಬ ಪ್ರಾಚೀನ ಪರಿಕಲ್ಪನೆ ಹವಾಮಾನ ಬದಲಾವಣೆಯ ಪ್ರಕ್ರಿಯೆಯನ್ನು ಹಿಮ್ಮೆಟ್ಟಿಸಲು ಸಾಧ್ಯವೇ?

ವಸುದೈವ ಕುಟುಂಬಕಂ ಎಂಬ ಪ್ರಾಚೀನ ಪರಿಕಲ್ಪನೆ ಹವಾಮಾನ ಬದಲಾವಣೆಯ ಪ್ರಕ್ರಿಯೆಯನ್ನು ಹಿಮ್ಮೆಟ್ಟಿಸಲು ಸಾಧ್ಯವೇ?

- Advertisement -
- Advertisement -

ವಿಶ್ವಸಂಸ್ಥೆಯ ಹವಾಮಾನ ಬದಲಾವಣೆಯ ಸಮ್ಮೇಳನದ 26ನೇ ಕಾನ್ಫರನ್ಸ್ ಆಫ್ ಪಾರ್ಟೀಸ್ (ಸಿಒಪಿ)ಯು ಇಂಗ್ಲೆಂಡಿನ ಗ್ಲಾಸ್‌ಗೋನಲ್ಲಿ ಇಟಲಿಯ ಸಹಭಾಗಿತ್ವದೊಂದಿಗೆ ಅಕ್ಟೋಬರ್ 31ರಿಂದ ನವೆಂಬರ್ 12ರವರೆಗೆ ನಡೆಯಲಿದೆ. ಈ ನಿರ್ಣಾಯಕವಾದ ಜಾಗತಿಕ ಸಮ್ಮೇಳನ ಆಯೋಜಿಸಿರುವಾಗ, ಈ ಜಗತ್ತು ಹಿಂದೆಂದಿಗಿಂತಲೂ ಹೆಚ್ಚು ವಿಭಜಿತವಾಗಿರುವ ಸಮಯದಲ್ಲಿದೆ ಮತ್ತು ಅದರಲ್ಲೂ ವಿಶೇಷವಾಗಿ ಈ ಸಮ್ಮೇಳನದಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ನಮ್ಮ ಭೂಮಿಯ ಮೇಲೆ ಅತ್ಯಂತ ನಿರ್ಣಾಯಕವಾದ ಪರಿಣಾಮ ಬೀರಲಿವೆ ಎಂಬುದನ್ನು ಪರಿಗಣಿಸಿದಾಗ ಇದರ ಗಂಭೀರತೆ ತಿಳಿಯುತ್ತದೆ. ಈ ಹಿಂದೆ ಮಾಡ್ರಿಡ್‌ನಲ್ಲಿ ನಡೆದ ಸಮ್ಮೇಳನವು ಯಶಸ್ವಿಯಾಗಿದ್ದಿಲ್ಲ ಹಾಗೂ ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ಈ ಸಿಒಪಿ 2020ರಲ್ಲಿ ನಡೆಯಲಿಲ್ಲ. ಹಾಗಾಗಿ ಹವಾಮಾನ ವೈಪರೀತ್ಯದ ಸಮಸ್ಯೆಯನ್ನು ಮತ್ತು ಅದು ತಂದಿರುವ ಸವಾಲುಗಳನ್ನು ಬಗೆಹರಿಸುವಲ್ಲಿ ಒಂದು ಜಾಗತಿಕ ಒಪ್ಪಂದವನ್ನು ಮುಂದೆ ತೆಗೆದುಕೊಂಡು ಹೋಗಬಹುದು ಎಂಬ ನಿರೀಕ್ಷೆ ಈ ಸಮ್ಮೇಳನದ ಮೇಲೆ ಇದೆ.

ಈ ನಿರೀಕ್ಷೆಯು ಜನವರಿ ತಿಂಗಳಲ್ಲಿ ಅಮೆರಿಕದ ಯುಎಸ್ ಕ್ಯಾಪಿಟಲ್ ಮೇಲೆ ನಡೆದ ದಾಳಿಯಿಂದ ಮುರಿದುಹೋಗಲಿದೆ ಎಂದು ಭಾಸವಾಗಿತ್ತು. ಚುನಾವಣೆಯಲ್ಲಿ ಸೋಲು ಕಂಡಿದ್ದ ಡೊನಾಲ್ಡ್ ಟ್ರಂಪ್, ಹೇಗಾದರೂ ಮಾಡಿ ಅಧಿಕಾರ ಉಳಿಸಿಕೊಳ್ಳಬೇಕು ಎಂದು ಈ ದಾಳಿಗೆ ಸ್ವತಃ ಪ್ರಚೋದನೆ ನೀಡಿದ್ದರು. ಆದರೆ ಟ್ರಂಪ್ ಅಧಿಕಾರ ಕಳೆದುಕೊಂಡ ನಂತರ, ಹವಾಮಾನ ವೈಪರೀತ್ಯವನ್ನು ಗಂಭೀರವಾಗಿ ಪರಿಗಣಿಸಿ, ಅನ್ನು ಬಗೆಹರಿಸುವ ಆಸಕ್ತಿ ಹೊಂದಿದ್ದ ಜೋ ಬೈಡೆನ್ ಅವರು ಅಧಿಕಾರಕ್ಕೆ ಬಂದರು. ಆಗ ಒಂದು ರೀತಿಯ ನೆಮ್ಮದಿಯ ನಿಟ್ಟುಸಿರು ಕಾಣಿಸಿಕೊಂಡಿತ್ತು. ಅದೂ ಸಾಂಕ್ರಾಮಿಕದಿಂದ ಲಕ್ಷಾಂತರ ಜನ ಸಾಯುತ್ತಿರುವ ಸಮಯದಲ್ಲಿ ಆದ ಈ ಬದಲಾವಣೆ ವಿಶೇಷವಾಗಿತ್ತು. ಅದರಲ್ಲೂ ಹವಾಮಾನ ವಿಷಯಕ್ಕೆ ವಿಶೇಷ ರಾಯಭಾರಿಯಾಗಿ ಅನಿರೀಕ್ಷಿತವಾಗಿ ಜಾನ್ ಕೆರಿ ಅವರನ್ನು ಬೈಡೆನ್ ನೇಮಿಸಿದಾಗಲಂತೂ ಜಗತ್ತು ಸರಿಯಾದ ದಿಕ್ಕಿನಲ್ಲಿ ಚಲಿಸಲಿದೆ ಎಂದೆನಿಸಿತ್ತು.

ಅಮೆರಿಕ ತನ್ನ ಹವಾಮಾನ ಕಾರ್ಯಪ್ರಕ್ರಿಯೆಯಲ್ಲಿ ಏನು ಮಾಡುತ್ತೆ ಎಂಬುದು ಜಾಗತಿಕ ಪರಿಣಾಮ ಹೊಂದಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯ; ಏಕೆಂದರೆ, 1751ರಿಂದಲೇ ಜಗತ್ತಿನ ಒಟ್ಟು ಹೊರಸೂಸುವಿಕೆಯ ಕನಿಷ್ಟ 25%ಕ್ಕಿಂತಲೂ ಹೆಚ್ಚು ಅಮೆರಿಕದಿಂದಲೇ ಆಗಿದೆ. ಅದರಲ್ಲಿ ಯುರೋಪ್ 20% ಭಾಗ ಹೊಂದಿದ್ದರೆ, ಚೀನಾ 13%, ರಷಿಯಾ 7% ಹಾಗೂ ಭಾರತವು ಇಂತಹ ಐತಿಹಾಸಿಕ ಹೊರಸೂಸುವಿಕೆಗೆ ಕೊಡುಗೆ ನೀಡಿವೆ. ಇದನ್ನು ಇನ್ನೊಂದು ರೀತಿಯಲ್ಲಿ ನೋಡಬೇಕೆ? ಪರ್‌ಕ್ಯಾಪಿಟಾ ಹೊರಸೂಸುವಿಕೆಯನ್ನು ನೋಡುವ. ಒಬ್ಬ ಸರಾಸರಿ ಅಮೆರಿಕನ್ ವ್ಯಕ್ತಿಗೆ ಒಂದು ವರ್ಷಕ್ಕೆ 20 ಟನ್‌ಗಳಷ್ಟು ಕಾರ್ಬನ್ ಡೈಆಕ್ಸೈಡ್‌ಅನ್ನು ಹೊರಸೂಸುವಿಕೆ ಇದೆ, ಅದರ ಹೋಲಿಕೆಯಲ್ಲ ಒಬ್ಬ ರಷಿಯನ್ 17 ಟನ್, ಒಬ್ಬ ಜಪಾನಿನ, ಚೈನಾದ ಅಥವಾ ಯುರೋಪಿನ ವ್ಯಕ್ತಿ 6-7 ಟನ್ ಹಾಗೂ ಒಬ್ಬ ಭಾರತೀಯ ಕೇವಲ 2 ಟನ್ ಹೊರಸೂಸುವಿಕೆಗೆ ಕಾರಣವಾಗುತ್ತಾಳೆ/ನೆ. ಈ ಅಂಕಿಅಂಶಗಳಿಂದ ಹವಾಮಾನ ವೈಪರೀತ್ಯವನ್ನು ಹಿಮ್ಮೆಟ್ಟಿಸುವ ಪ್ರಕ್ರಿಯೆಯಲ್ಲಿ ಸಾಮಾನ್ಯವಾದ ಅದರ ಜೊತೆಗೆ ಭಿನ್ನ ಜವಾಬ್ದಾರಿ ಏಕೆ ನಿರ್ಣಾಯಕ ಎಂಬುದು ತಿಳಿಯುತ್ತದೆ.

ಮನುಕುಲಕ್ಕೆ ಒದಗಿರುವ ಹಿಂದೆಂದೂ ಕಾಣದ ಸವಾಲನ್ನು ಎದುರಿಸುವಲ್ಲಿ ನಮ್ಮ ರಾಜಕೀಯವನ್ನು ಸರಿಪಡಿಸುತ್ತಿರುವಾಗ, ಹಾಗೂ ಭೂಮಿಯ ಹೆಚ್ಚಿನ ಜೀವವೈವಿಧ್ಯತೆ ನಾಶವಾಗುತ್ತಿರುವಾಗ, ಇಂಟರ್‌ಗವರ್ನಮೆಂಟಲ್ ಪ್ಯಾನಲ್ ಆನ್ ಕ್ಲೈಮೆಟ್ ಚೇಂಜ್ ತನ್ನ ಇತ್ತೀಚಿನ ಮೌಲ್ಯಮಾಪನದ ವರದಿಯಲ್ಲಿ ಹೀಗೆ ಹೇಳಿದೆ; “ಮಾನವಜನ್ಯ ಗ್ರೀನ್‌ಹೌಸ್ ಅನಿಲ ಹೊರಸೂಸುವಿಕೆಗಳು ಕೈಗಾರಿಕಾ ಪೂರ್ವ ಯುಗದಿಂದ ಹೆಚ್ಚಿವೆ, ಇವುಗಳು ಮುಖ್ಯವಾಗಿ ಅರ್ಥಿಕ ಅಭಿವೃದ್ಧಿ ಮತ್ತು ಜನಸಂಖ್ಯೆಯ ಹೆಚ್ಚಳದ ಕಾರಣದಿಂದ ಆಗಿವೆ ಹಾಗೂ ಈಗ ಹಿಂದೆ ಎಂದೂ ಕಾಣದಷ್ಟು ಹೆಚ್ಚಿವೆ. ಇದರಿಂದ ವಾತಾವರಣದಲ್ಲಿ ಕಾರ್ಬನ್ ಡೈಆಕ್ಸೈಡ್, ಮಿಥೇನ್ ಮತ್ತು ನೈಟ್ರಸ್ ಆಕ್ಸೈಡ್‌ಗಳ ಪ್ರಮಾಣವು ಕನಿಷ್ಠ ಕಳೆದ 8 ಲಕ್ಷ ವರ್ಷಗಳಲ್ಲಿ ಕಾಣದಷ್ಟು ಪ್ರಮಾಣದಲ್ಲಿವೆ. ಹಾಗೂ ಇವುಗಳೊಂದಿಗೆ ಇತರ ಮಾನವಜನ್ಯ ಕಾರಣಗಳೊಂದಿಗೆ ಇವುಗಳ ಪರಿಣಾಮಗಳು ಇಡಿಯಾಗಿ ಹವಾಮಾನ ವ್ಯವಸ್ಥೆಯಲ್ಲಿ ಕಾಣಿಸಿಕೊಂಡಿವೆ ಹಾಗೂ 20ನೇ ಶತಮಾನದ ಮಧ್ಯದಿಂದ ಕಾಣಿಸಿಕೊಂಡಿರುವ ತಾಪಮಾನ ಹೆಚ್ಚಳದ ಪ್ರಮುಖ ಕಾರಣವಾಗಿರುವ ಎಲ್ಲಾ ಸಾಧ್ಯತೆಗಳಿವೆ”. ಹೊರಸೂಸುವಿಕೆಯಲ್ಲಿ ಇನ್ನೂ ಹೆಚ್ಚಳವನ್ನು ನಿಲ್ಲಿಸುವುದು ಅತ್ಯಗತ್ಯ, ಇದು 2015ರ ಪ್ಯಾರಿಸ್ ಕ್ಲೈಮೆಟ್ ಒಪ್ಪಂದ ಅನುಗುಣವಾಗಿ ತಾಪಮಾನದಲ್ಲಿ 1.5 ಸೆಲ್ಷಿಯಸ್ ಹೆಚ್ಚಳದ ಮಿತಿಯನ್ನು ಮೀರದ ಗುರಿ ತಲುಪಬೇಕಾದರೆ ಹೊಸ ಹೊರಸೂಸುವಿಕೆಗಳನ್ನು ಗಣನೀಯವಾಗಿ ತಗ್ಗಿಸಬೇಕಾಗುತ್ತದೆ ಹಾಗೂ ಕಾರ್ಬನ್ ಸಿಕ್ವೆಸ್ಟ್ರೇಷನ್ ಹೆಚ್ಚಿಸಬೇಕಾಗುತ್ತದೆ (ವಾತಾವರಣದಲ್ಲಿರುವ ಕಾರ್ಬನ್ ಡೈಆಕ್ಸೈಡ್ ಅನಿಲವನ್ನು ಹಿಡಿದು ಬೇರೆ ರಾಸಾಯನಿಕವಾಗಿ ಬದಲಿಸುವ ತಂತ್ರಜ್ಞಾನ).

ಹಾಗಾಗಿ ಬೈಡೆನ್ ತೈಲಕ್ಕಾಗಿ ಸಾರ್ವಜನಿಕ ಸ್ಥಳಗಳ ಮೇಲೆ ಹೊಸ ಡ್ರಿಲಿಂಗ್‌ಅನ್ನು ನಿಲ್ಲಿಸಿದಾಗ, ಆ ನಡೆಯನ್ನು ಪ್ರಶಂಸಿಸಲಾಯಿತು. ಈ ಡ್ರಿಲಿಂಗ್‌ಗಳೇ ಅಮೆರಿಕದ ಗ್ರೀನ್‌ಹೌಸ್ ಅನಿಲ ಹೊರಸೂಸುವಿಕೆಯ ಕಾಲು ಭಾಗಕ್ಕೆ ಕಾರಣವಾಗಿವೆ. ಆದರೆ ಈ ನಡೆಗೆ ಪ್ರತಿರೋಧ ಕಾಣಿಸಿಕೊಂಡಿತು, ಮೊದಲಿಗೆ ರಿಪಬ್ಲಿಕನ್ನರಿಂದ ಹಾಗೂ ಕೆಲವು ಡೆಮಾಕ್ರಟರಿಂದ ಹಾಗೂ ನಂತರ ಲೌಸಿಯಾನ ರಾಜ್ಯದ ಜಿಲ್ಲಾ ನ್ಯಾಯಾಲಯವು ಈ ಅಧ್ಯಕ್ಷೀಯ ಆದೇಶಕ್ಕೆ ತಡೆನೀಡಿತು. ಆದರೆ, ಟ್ರಂಪ್ ಅತ್ಯಂತ ಅಹಂಕಾರದಿಂದ ಹೊರನಡೆದ ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಬೈಡೆನ್ ಅವರು ಮತ್ತೆ ಬದ್ಧರಾಗಿದ್ದಾರೆ. ಅವರು ತಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತ ಕೀಸ್ಟೋನ್ ಎಕ್ಸ್‌ಎಲ್ ಪೈಪ್‌ಲೈನ್‌ಗೆ ನೀಡಿದ್ದ ಅನುಮತಿಯನ್ನು ರದ್ದುಗೊಳಿಸಿದರು, ಅದರಿಂದ ಕೆನಡಾದ ಪ್ರಧಾನಿ ಮುಜುಗರ ಅನುಭವಿಸಬೇಕಾಗಿ ಬಂತು, ಹಾಗೂ ತದನಂತರ ಕೆನಡಾದ ಕಡೆಯಿಂದ ಅದರ ನಿರ್ಮಾಣವನ್ನು ನಿಲ್ಲಿಸಬೇಕಾಯಿತು. ಆದರೆ ಇದು ನಿಜವಾದ ಹವಾಮಾನ ಬಿಕ್ಕಟ್ಟು ಪರಿಹರಿಸುವ ಕಾರ್ಯಪ್ರಕ್ರಿಯೆ ಅಲ್ಲ, ಇದು ಪರಿಸರ ರಕ್ಷಣೆ ಮತ್ತು ಹವಾಮಾನ ಪ್ರಕ್ರಿಯೆಗೆ ಟ್ರಂಪ್ ಮಾಡಿದ ಗಂಭೀರ ಹಾನಿಯನ್ನು ಸರಿಪಡಿಸುವ ಕ್ರಮವಷ್ಟೆ ಆಗಿದೆ.

ವಿಶ್ವದಾದ್ಯಂತ ವಿಶೇಷವಾಗಿ ಚೀನಾ ಮತ್ತು ಭಾರತದಲ್ಲಿ ಕೋವಿಡ್ ಸಾಂಕ್ರಾಮಿಕದಿಂದ ಆದ ಆರ್ಥಿಕ ಕುಸಿತದ ಕಾರಣದಿಂದ ಕೈಗಾರಿಕಾ ಉತ್ಪಾದನೆಯನ್ನು ಹೆಚ್ಚಿಸುವುದಕ್ಕೆ ರಾಜಕೀಯ ಪ್ರಕ್ರಿಯೆ ವೇಗ ಪಡೆಯುತ್ತಿದೆ. ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ್ದರೂ ಈ ದೇಶಗಳ ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆಯ ಒಟ್ಟಾರೆ ಐತಿಹಾಸಿಕ ಪಾಲು ಅಮೆರಿಕ ಮತ್ತು ಯುರೋಪ್ ದೇಶಗಳ ಐತಿಹಾಸಿಕ ಪಾಲಿಗೆ ಹೋಲಿಸಲು ಆಗುವುದಿಲ್ಲ. ಹಾಗೂ ಪಶ್ಚಿಮದ ದೇಶಗಳಿಂದ ಗಣನೀಯವಾಗಿ ಹಾನಿ ಆಗಿರುವುದರಿಂದ ತಮ್ಮ ಆರ್ಥಿಕ ಪ್ರಗತಿಗೆ ಕುಂದಾಗಬಾರದು ಎಂದು ಈ ಮೇಲೆ ಹೇಳಿದ ವಾದವನ್ನು ಈ ದೇಶಗಳು ಜಾಗತಿಕ ಮಾತುಕತೆಗಳಲ್ಲಿ ಮತ್ತೆ ಬಳಸಲಿವೆ. ಆದರೆ, ಈಗ ಏನು ಮಾಡಬೇಕು ಎಂಬುದರ ಬಗ್ಗೆ ಪ್ರಶ್ನೆಗಳು ಬರುತ್ತವೆ, ಏಕೆಂದರೆ ಐಪಿಸಿಸಿಯು ನಾವು ಈಗಾಗಲೇ ಅಪಾಯಕಾರಿ ಟಿಪಿಂಗ್ ಪಾಯಿಂಟ್‌ನಿಂದ ಮುಂದೆ ಸರಿದಿದ್ದು ಹಾಗೂ ತಾಪಮಾನದಲ್ಲಿ 2.5 ಸೆಲ್ಷಿಯಸ್ ಹೆಚ್ಚಳದ ದುರಂತಕಾರಿ ಪರಿಣಾಮಗಳನ್ನು ಎದುರಿಸುವ ದಾರಿಯಲ್ಲಿದ್ದೇವೆ ಎಂದು ಎಚ್ಚರಿಕೆ ನೀಡಿದೆ.

2019ರ ಮೇ ತಿಂಗಳಲ್ಲಿ, ಜೀವವೈವಿಧ್ಯತೆ ಮತ್ತು ಪರಿಸರವ್ಯವಸ್ಥೆಯ ಸೇವೆಗಳ ಮೇಲಿನ ಅಂತರಸರಕಾರೀಯ ವಿಜ್ಞಾನಾಧಾರಿತ-ನೀತಿ ವೇದಿಕೆಯು (the Intergovernmental Science-Policy Platform on Biodiversity and Ecosystem Services -IPBES), ಜೀವವೈವಿಧ್ಯತೆ ಮತ್ತು ಪರಿಸರ ವ್ಯವಸ್ಥೆಯ ಮೇಲೆ ತನ್ನ ಪ್ರಸಿದ್ಧವಾದ ಜಾಗತಿಕ ಮೌಲ್ಯಮಾಪನದ ವರದಿಯನ್ನು ಬಿಡುಗಡೆ ಮಾಡಿತು. ಇದರಿಂದ ವಿಶ್ವದಾದ್ಯಂತ ಪತ್ರಿಕೆಗಳಲ್ಲಿ, ಸುದ್ದಿ ಮಾಧ್ಯಮದಲ್ಲಿ ಹೆಡ್‌ಲೈನ್‌ಗಳು ಬಂದವು, ಅದಕ್ಕೆ ಒಂದು ಅಂಕಿ ಅಂಶ ಕಾರಣವಾಗಿತ್ತು: ’1 ದಶಲಕ್ಷ ಸಸ್ಯಗಳು ಮತ್ತು ಪ್ರಾಣಿಗಳು ಈಗ ಅಳಿವಿನ ಅಂಚಿನಲ್ಲಿವೆ’ ಎಂಬುದು. ನಮ್ಮ 200 ವರ್ಷಗಳ ಕೈಗಾರಿಕೆ ಮತ್ತು ಗ್ರಾಹಕೀಯ ಅಭಿವೃದ್ಧಿಯಿಂದ, ಹಾಗೂ ಇತ್ತೀಚಿನ ಹೆಚ್ಚುತ್ತಿರುವ ಬಂಡವಾಳಶಾಹಿ ಜಾಗತೀಕರಣದಿಂದ, ನಾವುಗಳು ಊಹಿಸಲೂ ಕಷ್ಟವಾಗುವಷ್ಟು ಸಂಖ್ಯೆಯಲ್ಲಿ ಜೀವಿಗಳನ್ನು ನಮ್ಮ ಭೂಮಿಯಿಂದ ಕಣ್ಮರೆಯಾಗುವಂತೆ ಮಾಡುತ್ತಿದ್ದೇವೆ ಎಂಬ ಕಹಿ ಮತ್ತು ಕಟು ಸತ್ಯದ ಹೇಳಿಕೆಗಿಂತ ಇನ್ನೂ ಏನು ಬೇಕು. ನಮಗೆ ಇನ್ನೂ ತಿಳಿಯದ ವಿಷಯವೇನೆಂದರೆ, ಇಂತಹ ಅಳಿವುಗಳ ಕಾರಣದಿಂದ ನಮ್ಮ ಆಹಾರ ಉತ್ಪಾದನೆಯ ಮೇಲೆ ಅನಾಹುತಕಾರಿ ಮಟ್ಟದ ಕಡಿತವಾಗಲಿದ್ದು ಹಾಗೂ ಅದರಿಂದ ಆಗುವ ಪರಿಣಾಮಗಳನ್ನು ನಾವು ಊಹಿಸಲಷ್ಟೆ ಸಾಧ್ಯ.

ಆದರೂ, ಸೋರಿಕೆಯಾದ ಸರಕಾರಿ ದಾಖಲೆಗಳ ಆಧಾರದ ಮೇಲೆ ಬಿಬಿಸಿ ವರದಿ ಮಾಡಿದಂತೆ, ’ಹಲವಾರು ದೇಶಗಳು ಮತ್ತು ಸಂಸ್ಥೆಗಳು’ ಈ ಪ್ರಸಕ್ತ ವರದಿಯು ಶಿಫಾರಸ್ಸು ಮಾಡಿದಂತೆ ಅಷ್ಟು ಶೀಘ್ರವಾಗಿ ಫಾಸಿಲ್ ಫ್ಯೂಯೆಲ್ (ಪೆಟ್ರೋಲಿಯಮ್, ಕಲ್ಲಿದ್ದಲಿನಂತಹ ಇಂಧನಗಳು) ಬಳಕೆಯನ್ನು ಕಡಿಮೆ ಮಾಡುವ ಅವಶ್ಯಕತೆ ಇಲ್ಲ ಎಂದು ವಾದ ಮಾಡುತ್ತಿವೆ’. ಇನ್ನೂ ಆಘಾತಕಾರಿಯಾಗಿ, ಸೌದಿ ತೈಲ ಸಚಿವಾಲಯದ ಸಲಹೆಗಾರರೊಬ್ಬರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ’ಎಲ್ಲಾ ಸ್ತರಗಳಲ್ಲಿ ತುರ್ತಾದ ಮತ್ತು ವೇಗವರ್ಧಿತವಾಗಿ ಹವಾಮಾನ ವೈಪರೀತ್ಯವನ್ನು ಹಿಮ್ಮೆಟ್ಟಿಸುವ ಕ್ರಿಯೆಗಳು’ ಎಂಬ ಪದಗಳನ್ನೇ ತೆಗೆದುಹಾಕಬೇಕು ಎಂದು ಬೇಡಿಕೆಯನ್ನಿಟ್ಟಿದ್ದರು. ಹಾಗೂ ಇಂತಹ ರಾಜಕೀಯ ಕೇವಲ ತೈಲ ನಿರ್ಮಿಸುವ ದೇಶಗಳಿಗೇ ಸೀಮಿತವಾಗಿಲ್ಲ. ಭಾರತದಲ್ಲಿ, ನರೇಂದ್ರ ಮೋದಿ ನೇತೃತ್ವದ ಆಡಳಿತದ ಗೊಂದಲಕಾರಿಯಾದ ’ಆತ್ಮನಿರ್ಭರ’ ನೀತಿಗಳನ್ನಿಟ್ಟುಕೊಂಡು, ಕೇವಲ ಖನಿಜ ಸಂಪತ್ತು ಮಾತ್ರವಲ್ಲದೇ ಅರಣ್ಯಗಳು, ಕರಾವಳಿ ಪ್ರದೇಶಗಳು, ನದಿಗಳು, ಕೆರೆಗಳು, ನವೀಕರಿಸಬಹುದಾದ ಇಂಧನ, ನಗರ ಪ್ರದೇಶ ಹಾಗೂ ಅದರೊಂದಿಗೆ ನೀರನ್ನು ಕೂಡ ವ್ಯಾಪಾರೀಕರಣಗೊಳಿಸಿ, ಅದರಿಂದ ಹೂಡಿಕೆದಾರರು ಹೆಚ್ಚಿನ ಸಂಪತ್ತು ಸೃಷ್ಟಿಸುವ ದಾರಿಗಳನ್ನು ಕಂಡುಕೊಳ್ಳಲಾಗುತ್ತಿದೆ. ಹಾಗೂ ಎಲ್ಲರಿಗೂ ತಿಳಿದಂತೆ, ಈ ಹೂಡಿಕೆದಾರರು ಮೇಲ್ತುದಿಯ 1% ಆದಾಯ ಗಳಿಸುವವರಾಗಿದ್ದು ಹಾಗೂ ಮೋದಿಯ ನೀತಿಗಳ ಬೆಂಬಲಿಗರಾಗಿದ್ದಾರೆ.

ಇವೆಲ್ಲವೂ ಒಂದು ಗಂಭೀರ ಪ್ರಶ್ನೆಗೆ ಎಡೆಮಾಡುತ್ತವೆ; ಪಶ್ಚಿಮ ಘಟ್ಟಗಳಲ್ಲಿ ಮತ್ತು ಹಿಮಾಲಯದೆಲ್ಲೆಡೆ ಆದ ಇತ್ತೀಚಿನ ಅನುಭವಗಳು, ಅಲ್ಲಿ ಸಂಭವಿಸಿದ ಹವಾಮಾನ ವೈಪರೀತ್ಯ ಸಂಬಂಧಿ ಘಟನೆಗಳಯ, ಮೂಲಸೌಕರ್ಯವನ್ನು ಧ್ವಂಸಮಾಡಿರುವುದು ಮತ್ತು ಸರಕಾರಿ ಪ್ರತಿಕ್ರಿಯೆಗಳನ್ನು ಸಂಪೂರ್ಣವಾಗಿ ದುರ್ಬಲಗೊಳಿಸಿದ್ದನ್ನು ನಾವು ಹೇಗೆ ಅರ್ಥೈಸಿಕೊಳ್ಳಬೇಕು? ಲಕ್ಷಾಂತರ ಜನರು ಸರ್ವಸ್ವವನ್ನು ಕಳೆದುಕೊಂಡಾಗಲೂ ಹವಾಮಾನ ವೈಪರೀತ್ಯದಿಂದ ಹಾಗೂ ಜೀವವೈವಿಧ್ಯತೆಯ ನಾಶದಿಂದ ನಮ್ಮ ಜೀವಗಳು ಮತ್ತು ಜೀವನೋಪಾಯಗಳು ಹೇಗೆ ಗಂಭೀರವಾಗಿ ಅಪಾಯಕ್ಕೊಳಗಾಗಿವೆ ಎಂಬುದರ ಬಗ್ಗೆ ಒಂದಿಷ್ಟು ಚಿಂತನೆ ಮಾಡುವ ಅಥವಾ ಅದನ್ನು ನಿಜ ಎಂದು ಒಪ್ಪಿಕೊಳ್ಳುವ ಮನಸ್ಥಿತಿ ಕಾಣಿಸುತ್ತಿಲ್ಲ.

ಗ್ಲಾಸ್‌ಗೊ ಸಮ್ಮೇಳನವೂ ವಿಫಲವಾಗುವ ಆತಂಕ ಹೆಚ್ಚುತ್ತಿದೆ ಏಕೆಂದರೆ ಈ ಸಮ್ಮೇಳನದಲ್ಲಿ ’ಲಸಿಕೆ ಅಪಾರ್ಥೀಡ್’ (ಲಸಿಕೆ ಎಲ್ಲ ದೇಶಗಳಿಗೂ ಸಮನಾಗಿ ಹಂಚಿಕೆಯಾಗದಿರುವಿಕೆಯಿಂದ) ಕಾರಣದಿಂದ ಅಭಿವೃದ್ಧಿ ಹೊಂದುತ್ತಿರುವ ದೇಶದ ಸರಕಾರಗಳ ಪ್ರತಿನಿಧಿಗಳು ಹಾಗೂ ನಾಗರಿಕ ಸಮಾಜದ ವೀಕ್ಷಕರು ಭಾಗವಹಿಸುವುದು ಅನುಮಾನವಾಗಿದೆ. ಹಾಗೂ ಈಗ ವಿಭಜನೆಯ ರಾಜಕೀಯ ಎಲ್ಲೆಡೆ ವೇಗವಾಗಿ ಹರಡುತ್ತಿರುವುದು, ಅದು ಆಳವಾಗಿ ನೆಲೆಯೂರುವುದನ್ನು ಭಾರತದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿಯೂ ಕಾಣುತ್ತಿದ್ದೇವೆ. ಬಹುಸಂಖ್ಯಾತರ ಕ್ಷೇತ್ರೀಯವಾದದೊಂದಿಗೆ, ಭಯದ ಮತ್ತು ವಿಭಜನೆಯ ವಾತಾವರಣವನ್ನು ಸೃಷ್ಟಿಸಿ, ಮಾನವತೆಯನ್ನು ಒಂದುಗೂಡಿಸುವ ವಾತಾವರಣವನ್ನು ಸೃಷ್ಟಿಸುವ ಸಾಧ್ಯತೆಯು ಕಳೆದುಹೋಗಿದೆ. ನಿಜಾರ್ಥದಲ್ಲಿ ನಾವು ಇದೇ ಸಮಯದಲ್ಲಿ ಎರಡು ಆಳವಾದ ಆದರೆ ಅತ್ಯಂತ ಸರಳವಾದ ಪದಗಳನ್ನು ಅಂತರ್ಗತಗೊಳಿಸಬೇಕಿದೆ, ಬಹುಶಃ ಈ ಪದಗಳು ಹರಪ್ಪನ್ ನಾಗರಿಕತೆಯ ಸಮಯದಿಂದಲೇ ನಮಗೆ ಹಸ್ತಾಂತರಗೊಂಡಿವೆ, ಅವು; “ವಸುದೈವ ಕುಟುಂಬಕಂ”.

ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ಲಿಯೋ ಎಫ್. ಸಾಲ್ಡಾನಾ

ಲಿಯೋ ಎಫ್. ಸಾಲ್ಡಾನಾ
ಬೆಂಗಳೂರಿನಲ್ಲಿ ವಾಸಿಸುತ್ತಿರುವ ಲಿಯೋ, ಪರಿಸರ ಬೆಂಬಲ ಗುಂಪುಗಳ ಮೂಲಕ ಸಾಮಾಜಿಕ, ಆರ್ಥಿಕ ಮತ್ತು ಪರಿಸರ ನ್ಯಾಯಕ್ಕಾಗಿ ಕೆಲಸ ಮಾಡುತ್ತಿದ್ದಾರೆ.


ಇದನ್ನೂ ಓದಿ: ಹವಾಮಾನ ಬಿಕ್ಕಟ್ಟು; ಇಡೀ ಭೂಮಿ ಧಗಿಸುವ ಮೊದಲು ಎಚ್ಚೆತ್ತುಕೊಳ್ಳಬೇಕಿದೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇರಾನ್‌ ಮಹಿಳೆಯರ ದಿಟ್ಟ ಹೋರಾಟ: ಮೊರಾಲಿಟಿ ಪೊಲೀಸ್‌ ವ್ಯವಸ್ಥೆ ರದ್ದು

1
ಇರಾನ್‌ ದೇಶದ ಕಟ್ಟುನಿಟ್ಟಾದ ಮಹಿಳಾ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಂಧನದ ಸಮಯದಲ್ಲಿ ಮಹ್ಸಾ ಅಮಿನಿ ಎಂಬ ಮಹಿಳೆ ಸಾವಿಗೀಡಾದ ಬಳಿಕ ಸ್ಫೋಟಿಸಿದ ಮಹಿಳಾ ಹೋರಾಟಕ್ಕೆ ಆರಂಭಿಕ ಜಯ ಸಿಕ್ಕಿದೆ....