ದೇಶವ್ಯಾಪಿ ಜಾತಿ ಗಣತಿಗೆ ಮತ್ತೊಮ್ಮೆ ಒತ್ತಾಯಿಸಿರುವ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ವ್ಯವಸ್ಥೆಯಿಂದ ಹೊರಗುಳಿದಿರುವ ಶೇಖಡ 90ರಷ್ಟು ಜನರಿಗಾಗಿ ಜಾತಿ ಗಣತಿಯ ಅಗತ್ಯವಿದೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ಆಯೋಜಿಸಲಾಗಿದ್ದ ‘ಸಂವಿಧಾನ್ ಸಮ್ಮಾನ್ ಸಮ್ಮೇಳನ’ ದಲ್ಲಿ ಭಾಗವಹಿಸಿ ಮಾತನಾಡಿದ ಅವರು “ಶೇ. 90ರಷ್ಟು ಮಂದಿ ವ್ಯವಸ್ಥೆಯಿಂದ ಹೊರಗಿದ್ದಾರೆ. ಅವರ ಬಳಿ ಕೌಶಲ ಹಾಗೂ ಜ್ಞಾನವಿದ್ದರೂ, ವ್ಯವಸ್ಥೆಯೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ. ಇದೇ ಕಾರಣಕ್ಕಾಗಿ ನಾವು ಜಾತಿ ಗಣತಿಗೆ ಆಗ್ರಹಿಸುತ್ತಿದ್ದೇವೆ ಎಂದಿದ್ದಾರೆ.
ಸಮಾಜದ ವಿವಿಧ ವರ್ಗಗಳ ಪಾಲುದಾರಿಕೆಯನ್ನು ಖಾತರಿಪಡಿಸುವುದಕ್ಕೂ ಮುನ್ನ, ಅವುಗಳ ಸಂಖ್ಯೆಯನ್ನು ಗಣತಿ ಮಾಡಬೇಕಾದ ಅಗತ್ಯವಿದೆ. ಕಾಂಗ್ರೆಸ್ ಪಾಲಿಗೆ ಜಾತಿ ಗಣತಿಯು ನೀತಿ ನಿರೂಪಣೆಯ ಬುನಾದಿಯಾಗಿದೆ. ಜಾತಿ ಗಣತಿ ಇಲ್ಲದೆ ನಾವು ನೈಜ ಭಾರತದಲ್ಲಿ ನೀತಿ ನಿರೂಪಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನಮಗೆ ದತ್ತಾಂಶ ಬೇಕಿದೆ. ಎಷ್ಟು ಮಂದಿ ದಲಿತರು, ಇತರೆ ಹಿಂದುಳಿದ ವರ್ಗಗಳು, ಆದಿವಾಸಿಗಳು, ಮಹಿಳೆಯರು, ಅಲ್ಪಸಂಖ್ಯಾತರು ಹಾಗೂ ಸಾಮಾನ್ಯ ಜಾತಿಯ ಜನರಿದ್ದಾರೆ ಎಂಬುವುದು ಬೇಕಿದೆ. ನಾವು ಈ ಜಾತಿ ಗಣತಿಯ ಆಗ್ರಹದ ಮೂಲಕ ಸಂವಿಧಾನವನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದೇವೆ. ಸಂವಿಧಾನವು ಕೇವಲ ಶೇ. 10ರಷ್ಟು ಜನರಿಗೆ ಮಾತ್ರವಲ್ಲ, ಬದಲಿಗೆ ದೇಶದ ಎಲ್ಲಾ ನಾಗರಿಕರಿಗೂ ಸೇರಿದ್ದು ಎಂದಿದ್ದಾರೆ.
ಇದನ್ನೂ ಓದಿ : ಮೇಲಾಧಿಕಾರಿಗಳು, ಪತ್ರಕರ್ತನಿಂದ ಕಿರುಕುಳ ಆರೋಪ : ದಲಿತ ಪೊಲೀಸ್ ಕಾನ್‌ಸ್ಟೇಬಲ್ ಆತ್ಮಹತ್ಯೆ


