ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಸಮೀಕ್ಷೆ)ಯ ಕುರಿತು ಚರ್ಚಿಸಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳವಾರ ಕಾಂಗ್ರೆಸ್‌ನ ಒಕ್ಕಲಿಗ ಶಾಸಕರ ಸಭೆಯನ್ನು ಕರೆದಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ತಮ್ಮ ಸಮುದಾಯವಾದ ಒಕ್ಕಲಿಗರಿಂದ ವ್ಯಕ್ತವಾಗುತ್ತಿರುವ ಕಳವಳಗಳ ನಡುವೆ ಶಿವಕುಮಾರ್ ಈ ಸಭೆಯನ್ನು ಕರೆದಿದ್ದಾರೆ.
ಸಮೀಕ್ಷೆಯ ಪ್ರಕಾರ, 48 ಉಪಜಾತಿಗಳಲ್ಲಿ ಒಕ್ಕಲಿಗ ಸಮುದಾಯದ ಜನಸಂಖ್ಯೆ 61.58 ಲಕ್ಷ ಎಂದು ಅಂದಾಜಿಸಲಾಗಿದೆ. ಕಾಂಗ್ರೆಸ್ ಪಕ್ಷವು ಶಿವಕುಮಾರ್ ಸೇರಿದಂತೆ 21 ಒಕ್ಕಲಿಗ ಶಾಸಕರನ್ನು ಹೊಂದಿದೆ. ಮಂಗಳವಾರದ ಸಭೆ ಶಿವಕುಮಾರ್ ಅವರ ಅಧಿಕೃತ ನಿವಾಸದಲ್ಲಿ ನಡೆಯಲಿದೆ ಎಂದು ಪತ್ರಿಕೆ ಹೇಳಿದೆ.
“ನಾನು ಇನ್ನೂ ವರದಿಯನ್ನು ಅಧ್ಯಯನ ಮಾಡುತ್ತಿದ್ದೇನೆ. ನಮ್ಮ ಶಾಸಕರ ಸಭೆಯನ್ನು ಕರೆದಿದ್ದು, ನಾವು ವರದಿಯ ಬಗ್ಗೆ ಚರ್ಚಿಸುತ್ತೇವೆ. ಎಲ್ಲರ ಗೌರವವನ್ನು ಎತ್ತಿಹಿಡಿಯುವ ಮತ್ತು ಯಾರ ಭಾವನೆಗಳಿಗೂ ನೋವಾಗದಂತೆ ನಮ್ಮ ಸಲಹೆಗಳು ಇರುತ್ತವೆ” ಎಂದು ಶಿವಕುಮಾರ್ ಹೇಳಿದ್ದಾಗಿ ಪತ್ರಿಕೆ ವರದಿ ಮಾಡಿದೆ.
2015ರ ಈ ಜಾತಿ ಸಮೀಕ್ಷೆ ವರದಿಯನ್ನು ರದ್ದುಗೊಳಿಸುವಂತೆ 2023ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉಲ್ಲೇಖಿಸಿ ಅರ್ಜಿಯೊಂದು ಸಲ್ಲಿಸಲಾಗಿತ್ತು. ಅದರಲ್ಲಿ ಶಿವಕುಮಾರ್ ಕೂಡಾ ಸಹಿ ಮಾಡಿದ್ದರು.
ಈ ಮಧ್ಯೆ, ಜಾತಿ ಸಮೀಕ್ಷೆ ವರದಿಯ ವಿರೋಧದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೌನ ಪಾಲಿಸಿದ್ದಾರೆ. “ಈ ವಿಷಯದ ಬಗ್ಗೆ ಚರ್ಚಿಸಲು ನಾವು ಏಪ್ರಿಲ್ 17 ರಂದು ವಿಶೇಷ ಸಚಿವ ಸಂಪುಟ ಸಭೆ ಕರೆದಿದ್ದೇವೆ. ಚರ್ಚೆಯ ನಂತರ, ನಾನು (ಈ ವಿಷಯದ ಬಗ್ಗೆ) ಮಾತನಾಡುತ್ತೇನೆ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
‘ವರದಿಯನ್ನು ಅಧ್ಯಯನ ಮಾಡಲು ಸಮಿತಿಯನ್ನು ರಚಿಸಿ’
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಈ ವರದಿಗಳನ್ನು ವಿಶ್ಲೇಷಿಸಲು ತಜ್ಞರನ್ನು ಒಳಗೊಂಡ ಸಮಿತಿ ಅಥವಾ ಸಂಪುಟ ಉಪಸಮಿತಿಯನ್ನು ರಚಿಸುವ ಬಗ್ಗೆ ಪರಿಗಣಿಸುವಂತೆ ಕಾಂಗ್ರೆಸ್ ಎಂಎಲ್‌ಸಿ ದಿನೇಶ್ ಗೂಳಿಗೌಡ ಸೋಮವಾರ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರನ್ನು ಕೇಳಿಕೊಂಡಿದ್ದಾರೆ.
“ಇದು ಹಲವಾರು ಸಮುದಾಯಗಳಲ್ಲಿ ದಿಗ್ಭ್ರಮೆಯನ್ನುಂಟು ಮಾಡಿದೆ. ಸರ್ಕಾರ ಮತ್ತು ಕಾಂಗ್ರೆಸ್ ಉದ್ದೇಶದ ಬಗ್ಗೆ ತಪ್ಪು ಗ್ರಹಿಕೆಗಳನ್ನು ಬೆಳೆಯಲು ನಾವು ಅನುಮತಿ ನೀಡಬಾರದು. ಅಲ್ಲದೆ, ಸಾರ್ವಜನಿಕರಲ್ಲಿ ಗೊಂದಲವನ್ನು ಪರಿಹರಿಸಲು, ತಜ್ಞರ ಸಮಿತಿ ಅಥವಾ ಸಂಪುಟ ಉಪಸಮಿತಿಯನ್ನು ರಚಿಸಬೇಕು” ಎಂದು ಗೂಳಿಗೌಡ ಅವರು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರಿಗೆ ಬರೆದ ಪತ್ರಗಳಲ್ಲಿ ತಿಳಿಸಿದ್ದಾರೆ.
ಮರು ಸಮೀಕ್ಷೆ?
2015 ರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಜಾತಿವಾರು ಜನಸಂಖ್ಯಾ ಅಂದಾಜಿನ ಕುರಿತು ವಿವಾದಗಳು ಉದ್ಭವಿಸುತ್ತಿರುವುದರಿಂದ, ಸಂಪುಟ ಸಚಿವರ ಒಂದು ಬಣವು ಸಮುದಾಯಗಳ ಮರು ಸಮೀಕ್ಷೆಗೆ ನಡೆಸುವಂತೆ ಪ್ರತಿಪಾದಿಸುತ್ತಿವೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
“ಹೇಗಿದ್ದರೂ ನಾವು (ಆಂತರಿಕ ಮೀಸಲಾತಿ ಉದ್ದೇಶಕ್ಕಾಗಿ) ಪರಿಶಿಷ್ಟ ಜಾತಿಗಳ ಸಮೀಕ್ಷೆಯನ್ನು ನಡೆಸುತ್ತಿದ್ದೇವೆ. ಇದರ ಜೊತೆಗೆಯೆ ಇತರ ಸಮುದಾಯಗಳ ಸಮೀಕ್ಷೆಯನ್ನು ಏಕೆ ಮಾಡಬಾರದು?” ಎಂದು ಸರ್ಕಾರದ ಸಚಿವರೊಬ್ಬರು ವಾದಿಸಿದ್ದಾರೆ ಎಂದು ಪತ್ರಿಕೆ ಹೇಳಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ರಾಜ್ಯ ಸರ್ಕಾರದ ವಿರುದ್ಧ ಸಾರಿಗೆದಾರರ ಅನಿರ್ದಿಷ್ಟಾವಧಿ ಮುಷ್ಕರ ಆರಂಭ

