ಕುರ್ದಿಶ್ ನೇತೃತ್ವದ ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್ (ಎಸ್‌ಡಿಎಫ್) ಜೊತೆಗಿನ ಎರಡು ವಾರಗಳ ಭಾರೀ ಕಾದಾಟದ ನಂತರ, ಸಿರಿಯಾದ ಸರ್ಕಾರಿ ಪಡೆಗಳು ಉತ್ತರ ಮತ್ತು ಈಶಾನ್ಯ ಸಿರಿಯಾದ ಹಲವಾರು ಪ್ರಮುಖ ಪ್ರದೇಶಗಳ ಮೇಲೆ ಹಿಡಿತ ಸಾಧಿಸಿವೆ ಎಂದು ವರದಿಯಾಗಿದೆ.
ಭಾನುವಾರ (ಜ.18) ಎರಡೂ ಪಕ್ಷಗಳು ದೇಶವನ್ನು ಮತ್ತೆ ಒಗ್ಗೂಡಿಸುವ ಗುರಿಯನ್ನು ಹೊಂದಿರುವ ತಕ್ಷಣದ ಕದನ ವಿರಾಮವನ್ನು ಘೋಷಿಸಿವೆ ಎಂದು ವರದಿ ಹೇಳಿದೆ.
ಕದನ ವಿರಾಮಕ್ಕೂ ಮುನ್ನ, ಸಿರಿಯಾ ಸೇನೆಯು ತನ್ನ ಮಿಲಿಟರಿ ವಾಯುನೆಲೆ ಮತ್ತು ತಬ್ಕಾ ಅಣೆಕಟ್ಟು (ಸಿರಿಯಾದ ಅತಿದೊಡ್ಡ) ಒಳಗೊಂಡ ಆಯಕಟ್ಟಿನ ಪಟ್ಟಣವಾದ ತಬ್ಕಾವನ್ನು ವಶಪಡಿಸಿಕೊಂಡಿದೆ. ದೇಶದ ಅತಿದೊಡ್ಡ ಅಲ್-ಒಮರ್ ತೈಲ ಕ್ಷೇತ್ರ ಕೂಡ ಸೇನೆಯ ವಶವಾಗಿದೆ.
ಎಸ್‌ಡಿಎಫ್ ಗುಂಪುಗಳನ್ನು ಯೂಫ್ರಟಿಸ್ ನದಿಯ ಪೂರ್ವಕ್ಕೆ ಹಿಮ್ಮೆಟ್ಟಿಸಿದ ಸರ್ಕಾರಿ ಪಡೆಗಳು, ರಕ್ಕಾ ಮತ್ತು ಅಲೆಪ್ಪೊದ ಪೂರ್ವಕ್ಕೆ ಡೀರ್ ಹಫರ್ ಹಾಗೂ ಮಸ್ಕಾನಾ ಸೇರಿದಂತೆ ಹಲವು ಪಟ್ಟಣಗಳಿಗೆ ಪ್ರವೇಶಿಸಿವೆ.
ಅಧ್ಯಕ್ಷ ಅಹ್ಮದ್ ಅಲ್-ಶರಾ ಮತ್ತು ಎಸ್‌ಡಿಎಫ್ ನಾಯಕ ಮಜ್ಲೌಮ್ ಅಬ್ದಿ ಅವರು 14 ಅಂಶಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಎಲ್ಲಾ ಎಸ್‌ಡಿಎಫ್ ಪಡೆಗಳು ಯೂಫ್ರಟಿಸ್ ನದಿಯ ಪೂರ್ವಕ್ಕೆ ಹಿಂದೆ ಸರಿಯಬೇಕು ಎಂಬುವುದು ಒಪ್ಪಂದದ ಪ್ರಮುಖ ಅಂಶವಾಗಿದೆ.
ದೀರ್ ಎಜ್-ಜೋರ್, ರಖ್ಖಾ ಮತ್ತು ಹಸಾಕಾ ಪ್ರಾಂತ್ಯಗಳ ಸಂಪೂರ್ಣ ಆಡಳಿತವನ್ನು ಸರ್ಕಾರಕ್ಕೆ ಹಸ್ತಾಂತರಿಸಬೇಕು. ಎಸ್‌ಡಿಎಫ್ ಸಂಘಟನೆಯನ್ನು ವಿಸರ್ಜಿಸಿ, ಅದರ ಹೋರಾಟಗಾರರನ್ನು ಸಿರಿಯನ್ ರಾಷ್ಟ್ರೀಯ ಸೈನ್ಯಕ್ಕೆ ಸೇರಿಸಿಕೊಳ್ಳಲಾಗುವುದು ಎಂಬುವುದು ಒಪ್ಪಂದಲ್ಲಿದೆ.
ಈ ಬೆಳವಣಿಗೆಯ ಭಾಗವಾಗಿ, ಸಿರಿಯಾ ಸರ್ಕಾರವು ಕುರ್ದಿಶ್ ಭಾಷೆಯನ್ನು ರಾಷ್ಟ್ರೀಯ ಭಾಷೆಯೆಂದು ಅಧಿಕೃತವಾಗಿ ಗುರುತಿಸಿದೆ ಮತ್ತು ಕುರ್ದಿಶ್ ಸಿರಿಯನ್ನರಿಗೆ ನಾಗರಿಕತ್ವವನ್ನು ಮರುಸ್ಥಾಪಿಸಿದೆ ಎಂದು ವರದಿಯಾಗಿದೆ.
ಈ ಒಪ್ಪಂದವು 2024ರಲ್ಲಿ ಅಸ್ಸಾದ್ ಆಡಳಿತದ ಪತನದ ನಂತರ ಸಿರಿಯಾವನ್ನು ಪುನರ್ ಏಕೀಕರಣಗೊಳಿಸುವತ್ತ ಮಹತ್ವದ ಹೆಜ್ಜೆಯೆಂದು ಪರಿಗಣಿಸಲಾಗಿದೆ.


