Homeಅಂಕಣಗಳುಆ ವಾರದ ಕಣ್ಣೋಟ | ಗೌರಿ ಲಂಕೇಶ್ಮಂಡೂರಿನಲ್ಲಿ ಒಂದು ಸಂಭ್ರಮ: ಸಂಘಟಿತ ಹೋರಾಟಕ್ಕೆ ಸಿಕ್ಕ ಜಯ

ಮಂಡೂರಿನಲ್ಲಿ ಒಂದು ಸಂಭ್ರಮ: ಸಂಘಟಿತ ಹೋರಾಟಕ್ಕೆ ಸಿಕ್ಕ ಜಯ

ಮಂಡೂರಿನ ಜನ ತಮ್ಮ ಸಂಘಟಿತ ಹೋರಾಟದಿಂದಲೇ ತಮ್ಮ ಊರಿಗೆ ಹಿಡಿದ ಶಾಪವನ್ನು ಹೊಗಲಾಡಿಸಿದ್ದಾರೆ. ಅವತ್ತು ಮಂಡೂರಿನ ಜನರ ಸಂಭ್ರಮದಲ್ಲಿ 'ಜನಶಕ್ತಿ’ ಎಂತಹದ್ದು ಎಂಬುದು ಎದ್ದು ಕಾಣಿಸುತ್ತಿತ್ತು...

- Advertisement -
- Advertisement -

ಕಳೆದ ಭಾನುವಾರ ಮಂಡೂರಿನಲ್ಲಿ ಹಬ್ಬದ ವಾತಾವರಣ. ಮಂಡೂರು ಮತ್ತು ಸುತ್ತಮುತ್ತಲಿನ ಹಳ್ಳಿಗಳ ಮಹಿಳೆಯರು ಬೆಳಗ್ಗೆಯೇ ತಮ್ಮ ಮನೆಕೆಲಸಗಳನ್ನು ಮುಗಿಸಿ, ನೀಟಾದ ಸೀರೆ ತೊಟ್ಟು, ಕೂದಲಲ್ಲಿ ಹೂಮುಡಿದು ಹಾಜರಾಗಿದ್ದರು. ಯುವಕರು ಉತ್ಸಾಹದಿಂದ ಓಡಾಡುತ್ತಿದ್ದರು. ಮಕ್ಕಳು ಅಲ್ಲಲ್ಲಿ ಆಟದಲ್ಲಿ ಮುಳುಗಿದ್ದರು. ಹತ್ತಾರು ವೃದ್ಧರೂ ಕಾರ್ಯಕ್ರಮ ಶುರುವಾಗಲು ಕಾಯುತ್ತಿದ್ದರು.

ಕಾರಣ: ಕಳೆದ ವರ್ಷ ಅವರೆಲ್ಲ ಜೊತೆಗೂಡಿ ನಡೆಸಿದ ಹೋರಾಟ ಯಶಸ್ವಿಯಾಗಿತ್ತು. ಅವರೆಲ್ಲರಿಗೆ ನೈತಿಕ ಬೆಂಬಲ ನೀಡಿದ್ದಲ್ಲದೆ ಅವರ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ರವಿಕೃಷ್ಣ ರೆಡ್ಡಿ ಅವರಿಗೆ ಸನ್ಮಾನಿಸಿ ಧನ್ಯವಾದಗಳನ್ನು ವ್ಯಕ್ತಪಡಿಸಲು ಮಂಡೂರಿನ ಜನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಎಲ್ಲರಿಗೂ ಗೊತ್ತಿರುವಂತೆ ಮಂಡೂರು ಹೋದ ವರ್ಷ ದೊಡ್ಡ ಸುದ್ದಿಯಾಗಿತ್ತು. ಕಳೆದ ಏಳು ವರ್ಷಗಳಿಂದ ಬೆಂಗಳೂರಿನ ಜನ ಪ್ರತಿದಿನ `ಉತ್ಪಾದಿಸುವ’ 4,500 ಟನ್ ಕಸವನ್ನು ನಗರಪಾಲಿಕೆಯ ಗುತ್ತಿಗೆದಾರರು ಮಂಡೂರಿಗೆ ಸಾಗಿಸಿ ಅಲ್ಲಿ ಬಿಸಾಡುತ್ತಿದ್ದರು. ನೋಡುನೋಡುತ್ತಿದ್ದಂತೆ ಅಲ್ಲಿನ 150 ಎಕರೆಗಳಲ್ಲಿ ಕಸದ ಬೆಟ್ಟಗಳೇ ನಿರ್ಮಾಣವಾದವು. 2013ರ ಹೊತ್ತಿಗೆ ಅಲ್ಲಿ ಒಟ್ಟು ಬಿಸಾಡಿದ್ದ ಕಸದ ರಾಶಿ 40 ಲಕ್ಷ ಟನ್‍ನಷ್ಟಾಯಿತು.

ಈ ಕಸದ ರಾಶಿಯಿಂದಾಗಿ ಎಲ್ಲೆಡೆ ಗಬ್ಬುನಾತ. ವಾಯು ಮಾಲಿನ್ಯದ ಜೊತೆಗೆ ಕುಡಿಯುವ ನೀರು ವಿಷಕಾರಿ ಆಯಿತು. ನಾಯಿ ಮತ್ತು ಸೊಳ್ಳೆಗಳ ಕಾಟ ನಿರಂತರವಾಯಿತು. ಸೊಳ್ಳೆಗಳು ಕಾಯಿಲೆಗಳನ್ನು ಹಬ್ಬಿಸುವುದರಿಂದ ಸುತ್ತಮುತ್ತ ಹಳ್ಳಿಗಳ ಮಕ್ಕಳು ಅನಾರೋಗ್ಯಪೀಡಿತರಾದರು. ಹಿರಿಯರು ಶ್ವಾಸಕೋಶ ಸಮಸ್ಯೆಗಳಿಗೆ ಬಲಿಯಾಗಲಾರಂಭಿಸಿದರು. ಆದರೆ ಕಸ ವಿಲೇವಾರಿ ಮಾಡುತ್ತಿದ್ದ ಗುತ್ತಿಗೆದಾರರೊಂದಿಗೆ ರಾಜಕಾರಣಿಗಳು ಕೈಜೋಡಿಸಿದ್ದರಿಂದ ಮಂಡೂರಿನ ಜನತೆಯ ಗೋಳನ್ನು ಕೇಳುವವರೇ ಇಲ್ಲದಂತಾಗಿತ್ತು.

ದಿನನಿತ್ಯ ಅಲ್ಲಿನ ಜನರು ಅನುಭವಿಸುತ್ತಿದ್ದ ಕಷ್ಟಗಳು ಅಸಹನೀಯವಾದಾಗ ಅವರು ಅಧಿಕಾರಸ್ಥರನ್ನು ಎಡತಾಕಲಾರಂಭಿಸಿದರು. ಆಗ ಶಾಸಕರಾಗಿದ್ದ ಬಿಜೆಪಿಯ ನಿಂಬಾವಳಿ “ನಿಮ್ಮ ಸಮಸ್ಯೆ ಬಗೆಹರಿಸುತ್ತೇನೆ’’ ಎಂದರೆ ಹೊರತು ಆ ನಿಟ್ಟಿನಲ್ಲಿ ಏನನ್ನೂ ಮಾಡಲಿಲ್ಲ. ಇನ್ನು ನಗರಪಾಲಿಕೆಯ ಅಧಿಕಾರಿಗಳು “ಪರ್ಯಾಯ ವ್ಯವಸ್ಥೆಯನ್ನು ಮಾಡುವವರೆಗೂ ಸಹಕರಿಸಿ, ಸಮಯ ಕೊಡಿ’’ ಎನ್ನುತ್ತಿದ್ದರೇ ಹೊರತು ಅಲ್ಲಿ ಕಸದ ರಾಶಿಯನ್ನು ಹಾಕುವುದನ್ನು ಮಾತ್ರ ನಿಲ್ಲಿಸಲಿಲ್ಲ, ಪರ್ಯಾಯವನ್ನೂ ಹುಡುಕಲಿಲ್ಲ.

ಕೊನೆಗೂ ಮಂಡೂರಿನ ಜನರ ತಾಳ್ಮೆಯ ಕಟ್ಟಲೆ ಒಡೆಯಿತು. ಯಾವ ರಾಜಕಾರಣಿಯನ್ನಾಗಲಿ, ನಗರಪಾಲಿಕೆಯ ಅಧಿಕಾರಿಯನ್ನಾಗಲಿ ನಂಬದೆ ಹೋರಾಟ ಮಾಡಲು ನಿರ್ಧರಿಸಿದರು. “ಇನ್ನು ಮುಂದೆ ಯಾವ ಕಾರಣಕ್ಕೂ ನಮ್ಮೂರಲ್ಲಿ ಕಸ ಹಾಕಲು ಬಿಡುವುದಿಲ್ಲ’’ ಎಂದು ಎದ್ದು ನಿಂತರು. ಆಗ ಅವರ ನೆರವಿಗೆ ಧಾವಿಸಿದ್ದು ದೊರೆಸ್ವಾಮಿಯವರು. ಕಸದ ಲಾರಿಗಳು ತಮ್ಮೂರನ್ನು ಪ್ರವೇಶಿಸದಂತೆ ಊರಿನ ಅಂಚಿನಲ್ಲೇ ಅಡ್ಡಗಟ್ಟಿ ನಿಂತರು. ಆಗ ಪೊಲೀಸರು ನಿಷೇಧಾಜ್ಞೆಯನ್ನು ಘೋಷಿಸಿ ಲಾರಿಗಳು ಮುಂದೆ ಸಾಗುವಂತೆ ನೋಡಿಕೊಂಡರು. ಲಾರಿಗಳು ಊರಿನ ಹತ್ತಿರ ಬಂದರೆ ತಾನೆ ಮುಂದೆ ಸಾಗುವುದು ಎಂದು ತರ್ಕಿಸಿದ ಗ್ರಾಮಸ್ಥರು ಅವುಗಳನ್ನು ಹೈವೇಯಲ್ಲೇ ತಡೆಗಟ್ಟಲಾರಂಭಿಸಿದರು. ಅಲ್ಲಿಗೂ ಪೊಲೀಸರು ಬಂದಾಗ ತಮ್ಮ ಹೋರಾಟವನ್ನು ಕೆ.ಆರ್. ಪುರಂವರೆಗೂ ತೆಗೆದುಕೊಂಡು ಹೋದರು.

ಅಷ್ಟು ಹೊತ್ತಿಗೆ ರವಿಕೃಷ್ಣ ರೆಡ್ಡಿ ಕೂಡ ಮಂಡೂರು ಹೋರಾಟಗರರ ಜೊತೆ ಸೇರಿದ್ದರು. ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ದೊರೆಸ್ವಾಮಿಯವರ ಮಾರ್ಗದರ್ಶನದಲ್ಲಿ ಜೂನ್ 1 ರಿಂದ ಸರಣಿ ಉಪವಾಸ ಪ್ರಾರಂಭಿಸಲು ನಿರ್ಧರಿಸಿದರು. ದೊರೆಸ್ವಾಮಿಯವರಿಗೆ 96 ವರ್ಷ ವಯಸ್ಸಾಗಿದ್ದರೂ ಪ್ರತಿದಿನ ತಮ್ಮ ಮನೆಯಿಂದ ಸುಮಾರು 40 ಕಿಲೋಮೀಟರ್ ದೂರವಿರುವ ಮಂಡೂರಿಗೆ ಹೋಗಿ ಅಲ್ಲಿನ ಜನರ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದರು. ಇಷ್ಟೆಲ್ಲ ಆಗುತ್ತಿದ್ದರೂ ಸರ್ಕಾರ “ಸಮಸ್ಯೆ ಬಗೆಹರಿಸುವುದಕ್ಕೆ ಆರು ತಿಂಗಳ ಸಮಯ ಕೊಡಿ’’ ಎನ್ನುತ್ತಿದ್ದರೆ ಹೊರತು ಅದಕ್ಕಿಂತ ಹೆಚ್ಚಿನದ್ದೇನನ್ನೂ ಮಾಡಲು ಮುಂದಾಗಲಿಲ್ಲ.

ಆಗ ದೊರೆಸ್ವಾಮಿಯವರು “ಬಂಧನಕ್ಕೆ ಒಳಗಾದರೂ ಪರವಾಗಿಲ್ಲ, ನೀವೆಷ್ಟು ಶಾಪಗ್ರಸ್ಥರು ಎಂಬುದು ಅಧಿಕಾರಿಗಳಿಗೆ ಅರ್ಥವಾಗಬೇಕು. ನಿಮ್ಮಲ್ಲಿ ಎಷ್ಟು ಜನ ಬಂಧನಕ್ಕೆ ಸಿದ್ಧರಿದ್ದೀರಿ? ಅವರೆಲ್ಲರ ಹೆಸರುಗಳನ್ನು ಪಟ್ಟಿ ಮಾಡಿ’’ ಎಂದು ಸೂಚಿಸಿದರು. ನೂರಕ್ಕು ಹೆಚ್ಚು ಜನರು ಸಿದ್ಧರಿದ್ದರು. ಆದರೆ ಅಚ್ಚರಿಯ ಸಂಗತಿ ಯಾವುದೆಂದರೆ ಮಂಡೂರಿನ ಮಹಿಳೆಯರೂ ಆ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿದ್ದರು.

ಪರಿಸ್ಥಿತಿ ಬಿಗಡಾಯಿಸಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಈ ಸಮಸ್ಯೆಯನ್ನು ಬಗೆಹರಿಸಲು ಮುಂದಾದರು. ಅವರು ಕರೆದ ಸಭೆಗೆ ಮಂಡೂರಿನ ನೂರಾರು ಜನ ಹಾಜರಾದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದರಲ್ಲದೆ ತಮ್ಮ ಚಿಕ್ಕಪುಟ್ಟ ಮಕ್ಕಳನ್ನೂ ಕರೆತಂದಿದ್ದರು. ಆ ಸಭೆಯಲ್ಲಿ ಅಧಿಕಾರಿಗಳು ಮತ್ತದೆ ಅಸಹಾಯಕತೆ ವ್ಯಕ್ತಪಡಿಸಿದರಲ್ಲದೆ ಮತ್ತೆ ಕಾಲಾವಕಾಶವನ್ನು ಕೋರಿದರು.

ತಮ್ಮ ಬದುಕೇ ನರಕವಾಗಿದ್ದರೂ ಮುಖ್ಯಮಂತ್ರಿ ಕರೆದಿದ್ದ ಸಭೆಯಲ್ಲೂ ತಮಗೆ ಪರಿಹಾರ ಸಿಗದಿದ್ದಾಗ ಮಹಿಳೆಯರೆಲ್ಲ ಕಣ್ಣೀರಿಟ್ಟರು. ದೊರೆಸ್ವಾಮಿಯವರು ಹೇಳುವಂತೆ “ಆ ಕ್ಷಣ ಸಿದ್ದರಾಮಯ್ಯನವರಿಗೆ ಇಲ್ಲಿನ ಜನರ ಕಷ್ಟಗಳು ಅರ್ಥವಾಯಿತು. ಮಹಿಳೆಯರು ಕಣ್ಣೀರು ಹಾಕುವಂತೆ ಮಾಡಿರುವುದು ಸರಿಯಲ್ಲ, ಇದನ್ನು ಬಗೆಹರಿಸಬೇಕೆಂದು ಅವರು ನಿರ್ಧರಿಸಿದರು. 2014ರ ನವೆಂಬರ್ ತಿಂಗಳ ನಂತರ ಮಂಡೂರಿನಲ್ಲಿ ಕಸವನ್ನು ಹಾಕುವುದಿಲ್ಲ ಎಂದು ಅವತ್ತು ಸಿದ್ದರಾಮಯ್ಯ ಮಾತು ಕೊಟ್ಟರು. ಅದರಂತೆ ನಡೆದುಕೊಂಡಿದ್ದಾರೆ.’’

ಮಂಡೂರು ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಮಹಿಳೆಯರೇ ಕಾರ್ಯಕ್ರಮಕ್ಕೂ ದೊಡ್ಡ ಸಂಖ್ಯೆಯಲ್ಲಿ ಹಾಜರಾಗಿದ್ದರು. ಬೆಂಗಳೂರು ಎಂಬ ಬೃಹತ್ ನಗರದ ಪಾಪಿಷ್ಟ ನಿವಾಸಿಗಳು ತಮ್ಮ ಸೋಂಬೇರಿತನದಿಂದಾಗಿ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸದೆ ಇರುವುದರಿಂದ, ಪ್ಲಾಸ್ಟಿಕ್ ಬಳಕೆಯನ್ನು ಮುಂದುವರೆಸಿರುವುದರಿಂದ, ಭ್ರಷ್ಟ ರಾಜಕಾರಣಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿರುವುದರಿಂದ, ಅಧಿಕಾರಿಗಳು ಜನರ ಸಂಕಷ್ಟಗಳಿಗೆ ಸ್ಪಂದಿಸದಿರುವುದರಿಂದ ಮಂಡೂರು ಎಂಬ ಒಂದು ಪುಟ್ಟ ಹಳ್ಳಿ ಯಾವ ತಪ್ಪು ಮಾಡದಿದ್ದರೂ ಶಾಪಗ್ರಸ್ತವಾಗಿತ್ತು.

ಆದರೆ ಮಂಡೂರಿನ ಜನ ತಮ್ಮ ಸಂಘಟಿತ ಹೋರಾಟದಿಂದಲೇ ತಮ್ಮ ಊರಿಗೆ ಹಿಡಿದ ಶಾಪವನ್ನು ಹೊಗಲಾಡಿಸಿದ್ದಾರೆ. ಅವತ್ತು ಮಂಡೂರಿನ ಜನರ ಸಂಭ್ರಮದಲ್ಲಿ ‘ಜನಶಕ್ತಿ’ ಎಂತಹದ್ದು ಎಂಬುದು ಎದ್ದು ಕಾಣಿಸುತ್ತಿತ್ತು…

ಫೆಬ್ರವರಿ 4, 2015


ಇದನ್ನು ಓದಿ: ಅಪ್ಪನ ಆ ಭಾಷಣ ಮತ್ತು ಜಾಗೃತ ಸಾಹಿತ್ಯ ಸಮಾವೇಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...