ಪಾವ್ಲೊ ಫ್ರೆಯರೆ ಎಂಬ ಹೆಸರು ಶಿಕ್ಷಣ ಕ್ಷೇತ್ರದಲ್ಲಿ ಜನಜನಿತ. ಜನಪರ-ದಮನಿತರ ಪರವಾದ ಒಂದು ಶಿಕ್ಷಣ ವ್ಯವಸ್ಥೆಯ ಪರಿಕಲ್ಪನೆಯನ್ನು ಕಟ್ಟಿಕೊಡುವಲ್ಲಿ ಇವರ ಪಾತ್ರ ಗಣನೀಯ. ಅವರ ನಿಲುವುಗಳನ್ನು ಅರ್ಥಮಾಡಿಕೊಳ್ಳಬೇಕಾದಲ್ಲಿ ಅವರು ಬೆಳೆದುಬಂದ ಹಾದಿಯ ಬಗ್ಗೆ ಒಂದು ಸ್ಥೂಲ ಪರಿಚಯವನ್ನು ನಾವು ತಿಳಿಯಲೇಬೇಕಾಗುತ್ತದೆ.
ಫ್ರೆಯರೆ 1921ರಲ್ಲಿ ಈಶಾನ್ಯ ಬ್ರೆಜಿಲ್‌ನಲ್ಲಿ ಜನಿಸಿದರು.1930ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತೀವ್ರ ಹಸಿವಿನಿಂದ ಬ್ರೆಜಿಲ್ ಜನತೆ ತತ್ತರಿಸಿದ್ದ ಕಾಲಘಟ್ಟದಲ್ಲಿ ತಮ್ಮ ಬಾಲ್ಯವಸ್ಥೆಯನ್ನು ಕಳೆದವರು ಫ್ರೆಯರೆ. ೧೩ನೇ ವಯಸ್ಸಿಗಾಗಲೇ ಅವರ ತಂದೆ ತೀರಿಕೊಂಡ ಕಾರಣ, ಒಂದಷ್ಟು ವರ್ಷಗಳ ಕಾಲ ಅವರ ಶಿಕ್ಷಣವು ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ, ಬಡವರ-ದಮನಿತರ ಪರ ಐಕ್ಯಮತವನ್ನು ಎಳೆವಯಸ್ಸಿನಲ್ಲಿಯೇ ಬೆಳೆಸಿಕೊಂಡರು. ರ್ಚುಗಳ ವ್ಯವಸ್ಥೆಯ ಕಡು ಟೀಕಾಕಾರರಾದರೂ ಕ್ಯಾಥೊಲಿಕ್ ಕ್ರಿಸ್ತ ಧರ್ಮದ ಪ್ರಗತಿಪರ ನಿಲುವುಗಳು, ಮಾರ್ಕ್ಸ್‌ವಾದ, ಹೆಗೆಲ್‌ರ ಮನೋವಿಕಾಸ ವಿಜ್ಞಾನ (ಫೆನೊಮೆನಾಲಜಿ), ವಸಾಹತು ವಿರೋಧಿ ನಿಲುವುಗಳು, ಮಾನವತಾವಾದ ಮತ್ತು ಜಾನ್ ಡ್ಯೂಯಿ ಅವರ ಶಿಕ್ಷಣದ ಬಗೆಗಿನ ವಿಚಾರಧಾರೆ ಫ್ರೆಯರೆ ಅವರ ತತ್ವಗಳನ್ನು ಮತ್ತು ಅವನ್ನು ಕಾರ್ಯರೂಪಕ್ಕೆ ತರಲು ಅವರು ನಡೆಸಿದ ಪ್ರಯತ್ನಗಳನ್ನು ಪ್ರಭಾವಿಸಿದೆ.
1947ರಲ್ಲಿ ಎಸ್.ಇ.ಎಸ್.ಐ ಸಂಸ್ಥೆಯಲ್ಲಿ, ಬ್ರೆಜಿಲ್‌ನ ಅನಕ್ಷರಸ್ಥ ರೈತಾಪಿ ಮತ್ತು ಕಾರ್ಮಿಕ ವರ್ಗದ ಜೊತೆಯಲ್ಲಿ ಕೆಲಸ ಮಾಡುತ್ತಾ 1959ರಲ್ಲಿ ತಮ್ಮ ಡಿ.ಎಲ್.ಎಡ್ ಪದವಿಗಾಗಿ ಅಂದಿನ ಬ್ರೆಜಿಲ್‌ನ ಶಿಕ್ಷಣ ವ್ಯವಸ್ಥೆಯ ಬಗ್ಗೆ ಮಹಾಪ್ರಬಂಧವನ್ನು ಫ್ರೆಯರೆ ಮಂಡಿಸುತ್ತಾರೆ. 1961ರಲ್ಲಿ ತಾವು ಜನಿಸಿದ ನಗರವಾದ ರೆಸಿಫ್‌ನ ಪುರಸಭಾಧ್ಯಕ್ಷರು ಅನಕ್ಷರತೆ ಹೋಗಲಾಡಿಸಲು ಕಾರ್ಯಕ್ರಮವನ್ನು ರೂಪಿಸಿಲು ಫ್ರೆಯಿರೆ ಅವರನ್ನು ಕೇಳಿಕೊಂಡಾಗ, ದಮನಿತರಿಗೆ ಕೇವಲ ಸಾಕ್ಷರತೆ ಸಿಕ್ಕರೆ ಸಾಲದು ಎಂಬುದನ್ನು ಮನಗಂಡು, ಪ್ರಜಾತಾಂತ್ರಿಕವಾದ ಸಂಸ್ಕೃತಿ ಮತ್ತು ದೇಶೀಯ ಪರಂಪರೆಯನ್ನು ಬೆಳೆಸುವ ಸಲುವಾಗಿ ’ಕಲ್ಚರಲ್ ಸರ್ಕಲ್’ಗಳನ್ನು ಸ್ಥಾಪಿಸಿದರು. ಈ ಕಾರಣದಿಂದಾಗಿ ಭೂರಹಿತ ಕೃಷಿಕಾರ್ಮಿಕರ ಮತ್ತು ದುಡಿಯುವ ವರ್ಗಗಳು ಎಚ್ಚತ್ತು ತಮ್ಮ ಹೋರಾಟಗಳನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡವು. ಆದರೆ, 1964ರಲ್ಲಿ ಅಮೆರಿಕದ ಬಲಪ್ರಯೋಗದಿಂದಾಗಿ ಸೇನಾ ದಂಗೆ (military coup) ಉಂಟಾಗಿ ಬ್ರೆಜಿಲ್‌ನ ಸರ್ಕಾರವು ಪಥನವಾದಾಗ, ಫ್ರೆಯಿರೆ ಅವರ ಮೇಲೆ ’ಕ್ರೈಸ್ತ ವಿರೋಧಿ’, ’ಮಾರ್ಕ್ಸ್‌ವಾದಿ’ ಎಂದೆಲ್ಲಾ ಆರೋಪ ಹೊರಿಸಿ ಅವರನ್ನು ಸುಮಾರು 75 ದಿನಗಳ ಕಾಲ ಬಂಧನದಲ್ಲಿರಿಸಲಾಯಿತು. ಅಲ್ಲಿಯೇ ಅವರು ತಮ್ಮ ಮೊದಲ ಪುಸ್ತಕವನ್ನು ಬರೆಯಲು ಆರಂಭಿಸಿದ್ದು. ತದನಂತರ 1980ರವರೆಗೆ ದೇಶಬಾಹಿರವಾಗಿ ಉಳಿದ ಫ್ರೆಯರೆ, ಶಿಕ್ಷಣತಜ್ಞರಾಗಿ ಮಾತ್ರವಲ್ಲದೇ ಹೋರಾಟಗಾರರಾಗಿ ಬೊಲಿವಿಯಾ, ಚಿಲಿ, ಸ್ವಿಟ್ಜರ್ಲ್ಯಾಂಡ್ ಹಾಗು ಅಮೆರಿಕದಲ್ಲಿ ನೆಲೆಸಿ, ತಮ್ಮ ಶೈಕ್ಷಣಿಕ ತತ್ವಗಳನ್ನು ಇನ್ನಷ್ಟು ವಿಸ್ತರಿಸಿ ಬರೆದು, ಸಾಧ್ಯವಾದಲ್ಲೆಲ್ಲಾ ಅದನ್ನು ಕಾರ್ಯರೂಪಕ್ಕೆ ತರಲಾರಂಭಿಸಿದರು.

ಅವರು ಶಿಕ್ಷಣದ ಬಗ್ಗೆ ಹಲವಾರು ಮಹತ್ವದ ಕೃತಿಗಳನ್ನು ರಚಿಸಿದ್ದರೂ, ಅವರ ಮೊದಲನೇ ಪುಸ್ತಕವಾದ ’ಪೆಡಗಾಜಿ ಆಫ್ ದಿ ಒಪ್ರೆಸ್ಡ್’ ಇಂದಿಗೂ ಒಂದು ಮಹತ್ತರ ಕೃತಿಯಾಗಿದೆ. ಅದರಲ್ಲಿ ಅವರು ಮುಖ್ಯವಾಗಿ ಮಾನವೀಕರಣವೇ (humanization) ಮನುಷ್ಯನ ಮುಖ್ಯ ಧ್ಯೇಯ ಎಂದು ಪ್ರತಿಪಾದಿಸಿದ್ದಾರೆ ಮಾತ್ರವಲ್ಲದೇ, ಅಮಾನವೀಕರಣವು (dehumanization) ವಿಧಿಲಿಖಿತವಲ್ಲವೆಂದೂ, ಅದು ಕೇವಲ ವ್ಯವಸ್ಥಿತ ದಬ್ಬಾಳಿಕೆ-ಶೋಷಣೆಯ ಫಲ ಎಂಬುದನ್ನು ಪ್ರತಿಪಾದಿಸಿ ಮನಗಾಣಿಸುತ್ತಾರೆ. ದಬ್ಬಾಳಿಕೆ-ಶೋಷಣೆಯ ಕಾರಣದಿಂದಾಗಿ ಶೋಷಿತರು ಮಾತ್ರವಲ್ಲದೇ ಶೋಷಕರು ಕೂಡ ಮಾನವೀಕರಣವನ್ನು ಹೊಂದಲು ಅಸಾಧ್ಯವಾಗುತ್ತದೆ ಎಂದು ಪ್ರತಿಪಾದಿಸುತ್ತಾರೆ. ಅದಕ್ಕೆ ಅವರು ನೀಡುವ ಮುಖ್ಯ ಕಾರಣವೆಂದರೆ, ಶೋಷಕರು ತಮ್ಮ ಪರಿಸರವನ್ನು ಕೇವಲ ಇತರರನ್ನು ಶೋಷಿಸಲು ಒಂದು ಅಸ್ತ್ರವನ್ನಾಗಿ ನೋಡುತ್ತಾರೆಯೇ ವಿನಃ ಅದರಾಚೆಗೆ ತಮ್ಮ ಪರಿಸರವನ್ನು ಅರ್ಥೈಸುವಲ್ಲಿ ವಿಫಲರಾಗುತ್ತಾರೆ. ಆದ್ದರಿಂದ ಅವರೂ ಕೂಡ ಅಮಾನವೀಯರಾಗಿಯೇ ಉಳಿಯುತ್ತಾರೆ ಎಂಬುದನ್ನು ತಿಳಿಸುತ್ತಾರೆ. ಅಂತೆಯೇ, ಈ ಶೋಷಿತ ವ್ಯವಸ್ಥೆಯಿಂದ ಶೋಷಕ-ಶೋಷಿತರಿಬ್ಬರನ್ನೂ ವಿಮೋಚಿಸಲು ಕೇವಲ ಶೋಷಿತರಿಗೆ ಮಾತ್ರವೇ ಸಾಧ್ಯವಾಗುತ್ತದೆ ಮತ್ತು ಶೋಷಿತರೇ ಅದಕ್ಕೆ ಪ್ರಯತ್ನಿಸಬೇಕು ಎಂಬುದನ್ನು ವಾದಿಸುತ್ತಾರೆ. ಆದರೆ ಶೋಷಿತರು ಎಲ್ಲರನ್ನೂ (ತಮ್ಮನ್ನು ಮತ್ತು ಶೋಷಕರನ್ನೂ) ವಿಮೋಚಿಸುವತ್ತ ಸಾಗಬೇಕಾದ ದಾರಿಯಲ್ಲಿ ಬಹಳ ಎಚ್ಚರವಹಿಸಬೇಕಾಗುತ್ತದೆ. ಇದರಲ್ಲಿ, ಶೋಷಕರನ್ನು ಕಂಡು ಅವರ ನಡೆಯನ್ನೇ ಶೋಷಿತರೂ ಕೂಡ ಅನುಸರಿಸುವ ಅಪಾಯವಿದೆ. ಹೀಗೇನಾದರೂ ನಡೆದರೆ,
ಅವರು ಶೋಷಕರ ಶೋಷಿತರಾಗುತ್ತಾರೆ ವಿನಃ ಯಾರನ್ನೂ ವಿಮೋಚಿಸಲಾಗುವುದಿಲ್ಲ ಎಂಬುದನ್ನು ವಿವರಿಸುತ್ತಾರೆ. ಅಲ್ಲದೆಯೇ, ಶೋಷಿತರು ತಮ್ಮ ನಿಲುವುಗಳು-ಜೀವನಾನುಭವಗಳನ್ನು ಆಧರಿಸಿ ತಮ್ಮ ಹೋರಾಟಗಳನ್ನು ತಮ್ಮ ನಿರ್ದಿಷ್ಟ ಕಾರ್ಯವಿಧಾನದೊಂದಿಗೆ (agency)
ಕಟ್ಟಿಕೊಳ್ಳಲಾಗದಿದ್ದರೆ, ಯಾವುದೇ ಕ್ರಾಂತಿಯು ಸಾಧ್ಯವಿಲ್ಲ ಎಂಬುದನ್ನು ಗಟ್ಟಿಯಾಗಿ ಪ್ರತಿಪಾದಿಸುತ್ತಾ, ಈ ರೀತಿಯ ಏಜನ್ಸಿಯನ್ನು ನಿರಾಕರಿಸಿದ ಎಲ್ಲಾ ಕ್ರಾಂತಿಗಳೂ ವಿಫಲವೆಂಬುದನ್ನು ವಾದಿಸುತ್ತಾರೆ. ಈ ನಿಲುವುಗಳನ್ನೇ ಶಿಕ್ಷಣ ಕ್ಷೇತ್ರಕ್ಕೆ ಅನ್ವಯಿಸುತ್ತಾ, ಯಜಮಾನಿಕೆ-ದಬ್ಬಾಳಿಕೆಯು ’ಮೂಕ ಸಂಸ್ಕೃತಿಯನ್ನು’ ಸೃಷ್ಟಿಸಿ ಬೆಳೆಸಲು ಪ್ರಯತ್ನಿಸುತ್ತದೆ. ಆದ್ದರಿಂದ, ಈ ದಬ್ಬಾಳಿಕೆಗಳನ್ನು ಎದುರುಗೊಳ್ಳಲು ಶಿಕ್ಷಣವು ’ವಿಮರ್ಶಾತ್ಮಕ ಚಿಂತನೆ’ಯನ್ನು ಬೆಳೆಸಬೇಕಾಗುತ್ತದೆ. ತಟಸ್ಥವಾದ ಶಿಕ್ಷಣವೆಂಬುದಿಲ್ಲ. ಶಿಕ್ಷಣ ಯಥಾಸ್ಥಿತಿವಾದಿಯೋ ಇಲ್ಲವೇ ವಿಮೋಚನಾ ಹಾದಿಯೋ ಆಗಿರುತ್ತದೆ. ಆದ್ದರಿಂದ ಶಿಕ್ಷಣವೆಂಬುದು ಒಂದು ರಾಜಕೀಯ ಕ್ರಿಯೆಯೇ ಆಗಿದೆ. ಈ ಸಾಮಾನ್ಯವಾದ ರಾಜಕೀಯ ಕ್ರಿಯೆಯಲ್ಲಿ ದಮನಿತರ-ಶೋಷಿತರ ವಿರೋಧಿಯಾದ ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳನ್ನು ಖಾಲಿಪಾತ್ರೆಯಂತೆ ತಿಳಿದು ಅದರಲ್ಲಿ ಕೇವಲ ಮಾಹಿತಿ ತುಂಬುವುದೇ ಶಿಕ್ಷಣ ಎಂದು ನಂಬಿರುತ್ತದೆ ಎನ್ನುತ್ತಾರೆ. ಅಂದಿನ (ಇಂದಿಗೂ ನಡೆದು ಬಂದಿರುವ) ’ಬ್ಯಾಂಕಿಂಗ್ ವ್ಯವಸ್ಥೆ’ಯ ಮಾದರಿಯ ಉದಾಹರಣೆ ಮೂಲಕ ಟೀಕಿಸುತ್ತಾ ಶಿಕ್ಷಕರು ಹಾಗು ವಿದ್ಯಾರ್ಥಿಗಳೆಲ್ಲರೂ ಒಟ್ಟಿಗೆ ಸಂವಾದದಲ್ಲಿ ಪಾಲ್ಗೊಂಡು ಕಲಿಯುತ್ತಲೇ, ಪರಸ್ಪರರ ಪ್ರಜ್ಞೆಯನ್ನು ಉನ್ನತಗೊಳಿಸುವತ್ತ ಸಾಗಬೇಕು ಎಂಬುದನ್ನು ವಾದಿಸಿದ್ದಾರೆ.
ಈ ಮೂಲಕ ಮುಖ್ಯವಾಗಿ ಶಿಕ್ಷಣ ವ್ಯವಸ್ಥೆಯೂ ಒಂದು ರಾಜಕೀಯ ಕ್ರಿಯೆಯೇ ಎಂದು ಪ್ರತಿಪಾದಿಸುತ್ತಾ, ಅದನ್ನು ದಮನಿತರ-ಶೋಷಿತರ ಪರವಾಗಿಸಬೇಕು ಮತ್ತು ಅದು ಹೇಗೆ ಸಾಧ್ಯವೆಂಬುದನ್ನು ತಮ್ಮ ತತ್ವಚಿಂತನೆ ಮತ್ತು ಸತತ ಕಾರ್ಯಪ್ರಯತ್ನಗಳ ತೋರಿಸಿಕೊಟ್ಟವರು ಫ್ರೆಯರೆ. ಅವರ ನಿಲುವುಗಳನ್ನು ಮತ್ತು ಅವರ ಪದನೆರಕೆಯನ್ನೇ ಇಂದು ಜಾಗತಿಕ ನವಉದಾರವಾದಿ ವ್ಯವಸ್ಥೆಯು, ಮತ್ತು ಭಾರತದ ಮಟ್ಟದಲ್ಲಿ ಹಿಂದುತ್ವವಾದಿ-ಬ್ರಾಹ್ಮಣಶಾಹಿ ವ್ಯವಸ್ಥೆಯು ತನ್ನ ಕೈವಶ ಮಾಡಿಕೊಂಡು, ಅದನ್ನು ವಿರೂಪಗೊಳಿಸಿ ಸಾಗುತ್ತ ಇಂದು ಹೆಮ್ಮರವಾಗಿ ಬೆಳೆದಿರುವ ಪ್ರಕ್ರಿಯೆಯನ್ನು ನಾವಿಂದು ಸೂಕ್ಷ್ಮವಾಗಿ ಅವಲೋಕಿಸಬೇಕಿದೆ ಮತ್ತು ಮುಂದಿನ ಹೆಜ್ಜೆಗಳನ್ನು ನಿರ್ಧರಿಸಬೇಕಿದೆ.

ಐತಿಹಾಸಿಕವಾಗಿ ಅಕೆಡೆಮಿಕ್ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಕಂಡ, ಬಲಾಢ್ಯ ರಾಷ್ಟ್ರಗಳ, ಅದರಲ್ಲೂ, ’ಗ್ಲೋಬಲ್ ನಾರ್ಥ್’ನಲ್ಲಿ ಹುಟ್ಟು ಪಡೆದ ಪರಿಕಲ್ಪನೆಗಳೇ ಹೆಚ್ಚು ಮಹತ್ವಪೂರ್ಣ ಎನಿಸಿರುವುದು ಇಂದಿಗೂ ಒಂದು ಸಮಸ್ಯೆಯೇ. ಇದನ್ನು ಪ್ರಶ್ನಿಸುವ ಮತ್ತು ’ಥರ್ಡ್ ವರ್ಲ್ಡ್’ ಅಥವಾ ’ಗ್ಲೋಬಲ್ ಸೌತ್’ನ ವ್ಯವಸ್ಥೆಗಳನ್ನು ಮತ್ತು ಸಂದರ್ಭಗಳನ್ನು ಅರ್ಥೈಸುವಲ್ಲಿ ಮತ್ತು ಇಲ್ಲಿನ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಅಲ್ಲಿನ ಪರಿಕಲ್ಪನೆಗಳನ್ನು ಇಲ್ಲಿನ ಸಂದರ್ಭಕ್ಕೆ ಕಸುವುಗೊಳಿಸದೆ, ಯಥಾವತ್ತಾಗಿ ಅನ್ವಯಿಸುವುದು ಒಂದು ಚಾಳಿಯಾಗಿಯೇ ಉಳಿದಿದೆ ಎಂದರೆ ತಪ್ಪಾಗಲಾರದೇನೋ. ಈ ರೀತಿಯ ನಿಲುವುಗಳನ್ನು ವಿರೋಧಿಸುವ, ಗ್ಲೋಬಲ್ ಸೌತ್‌ನದ್ದೇ ಆದ ಬಹಳಷ್ಟು ಪರಿಕಲ್ಪನೆಗಳು ಇತ್ತೀಚಿನ ಕಾಲಮಾನದಲ್ಲಿ ನಮಗೆ ಲಭ್ಯವಿದ್ದರೂ ಇವನ್ನು ಅಕೆಡೆಮಿಕ್ ಕ್ಷೇತ್ರ ಇಂದಿಗೂ ಕೂಡ ದೊಡ್ಡಮಟ್ಟದಲ್ಲಿ ಮಾನ್ಯ ಮಾಡಲು ನಿರಾಕರಿಸಿ ದಮನಕಾರಿ ಆಸ್ಥೆಗಳನ್ನು ರಕ್ಷಿಸಿಕೊಂಡಿದೆ. ಆದರೆ, ಈ ರೀತಿ ಗ್ಲೋಬಲ್ ನಾರ್ತ್‌ನ ಪರಿಕಲ್ಪನೆಗಳನ್ನು ವಿರೋಧಿಸುವ ಗ್ಲೋಬಲ್ ಸೌತ್‌ನ ರಾಷ್ಟ್ರಗಳಲ್ಲಿ ಬೆಳೆದುಬಂದ ’ರಾಷ್ಟ್ರೀಯತೆ’ಯನ್ನು ಪ್ರತಿಪಾದಿಸುವ ಪರಿಕಲ್ಪನೆಗಳು ಇಲ್ಲಿನ ವೈರುಧ್ಯ-ವಿವಿಧತೆಗಳನ್ನು, ದಮನಿತರ ಪರವಾದ ನಿಲುವುಗಳನ್ನು ಅಂಗೀಕರಿಸಿಲ್ಲ. ಅಂತೆಯೇ, ಇದರಾಚೆಗೆ, ’ಗ್ಲೋಬಲ್ ನಾರ್ತ್’ ಎಂಬ ಪರಿಕಲ್ಪನೆಗಳೂ ಕೂಡ ಅಲ್ಲಿನ ದಮನಿತ ಸಮುದಾಯವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂಬುದನ್ನೂ ಕೂಡ ನಾವಿಂದು ಮರೆಯಬಾರದು. ಆದ್ದರಿಂದ, ಜಗತ್ತಿನೆಲ್ಲೆಡೆ ವಿವಿಧ ರಾಷ್ಟ್ರಗಳಲ್ಲಿ ಬೆಳೆದುಬಂದ ದಮನಿತರ ಪರವಾದ ನಿಲುವುಗಳನ್ನು ಮತ್ತು ಸಿದ್ಧಾಂತ-ಪರಿಕಲ್ಪನೆಗಳನ್ನು ಅಧ್ಯಯಿಸಿ, ಅವು ಭಾರತದ ಸನ್ನಿವೇಶಗಳಿಗೆ ಎಷ್ಟು ಉಪಯೋಗಕಾರಿಯಾಗಬಹುದು ಎಂಬುದನ್ನು ಅರಿಯುವ ನಿಟ್ಟಿನಲ್ಲಿ ಬಹಳಷ್ಟು ಕೆಲಸಗಳು ನಡೆಯಬೇಕಿದೆ. ಅದರಲ್ಲಿಯೂ ವಸಾಹತು ದೇಶಗಳಾದ ಬ್ರೆಜಿಲ್ ಮತ್ತು ಚಿಲಿಗಳಲ್ಲಿ ಆ ಸಂದರ್ಭದಲ್ಲಿಯೇ ಬೆಳೆದು, ಜಗ್ಗತ್ತಿನೆಲ್ಲೆಡೆ ಪಸರಿಸಿರುವ ಚಿಂತನೆ-ಚಿಂತಕನೊಟ್ಟಿಗೆ ನಾವು ಸಂವಾದ ನಡೆಸಬೇಕಾಗಿದೆ.
ಶಿಕ್ಷಣತಜ್ಞರಾದ ಕೃಷ್ಣ ಕುಮಾರರು, 1997ರಲ್ಲಿ ಫ್ರೆಯಿರೆ ನಿಧನರಾದ ಸಂದರ್ಭದಲ್ಲಿ ಅವರ ಕೊಡುಗೆಯನ್ನು ನೆನೆಯುತ್ತಾ ಭಾರತದ ಸನ್ನಿವೇಶದಲ್ಲಿ, ಫ್ರೆಯರೆ ಅವರ ಕೊಡುಗೆಯನ್ನು ವಿಮರ್ಶಿಸುವ ಮತ್ತು ಅದರಿಂದ ಒಂದಷ್ಟು ಕಲಿಕೆಯನ್ನು ಮೈಗೂಡಿಸಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ ಎನ್ನುತ್ತಾರೆ. ಆದರೆ, 2004-ರ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಹಿಂದುತ್ವವಾದಿ ಸರ್ಕಾರದ ಮಂತ್ರಿಮಂಡಲದಲ್ಲಿ ಶಿಕ್ಷಣ ಸಚಿವರಾಗಿದ್ದ (ಮಾನವ ಸಂಪನ್ಮೂಲ), ಮುರಳಿ ಮನೋಹರ ಜೋಶಿ ಎಂಬ ಬ್ರಾಹ್ಮಣ ಮತ್ತು ಬ್ರಾಹ್ಮಣೀಯ ಸಿದ್ಧಾಂತವನ್ನು ಪ್ರತಿಪಾದಿಸುವ ವ್ಯಕ್ತಿಯ ಮೂಲಕ ರಾಷ್ಟ್ರೀಯ ಮಟ್ಟದಲ್ಲಿಯೇ ಶಿಕ್ಷಣವನ್ನು ಕೇಸರೀಕರಣಗೊಳಿಸಿ ಹಾಳುಗೆಡಿಸಿ ಸಲಾಯಿತು. ಇದರ ಮೇಲೆಯೂ ಫ್ರೆಯಿರೆಯ ಚಿಂತನೆಯೊಂದಿಗೆ ನಾವು ಸಂವಾದಿಸದಿರುವುದು ದುರಂತವೇ ಸರಿ. ಈ ರೀತಿಯ ಸಂವಾದವಾಗಿರುವ ಕೆಲಸಗಳನ್ನು ನಾವು ನಮ್ಮ ಕೈಬೆರಳುಗಳಲ್ಲಿ ಎಣಿಸಬಹುದಾಗಿದೆ. ಅದರಲ್ಲೂ ಹೆಚ್ಚಿನದಾಗಿ, ಟ್ಯಾಗೋರ್, ಗಾಂಧಿ ಮತ್ತು ಫ್ರೆಯಿರೆಯ ಶಿಕ್ಷಣ ಕ್ಷೇತ್ರದ ಚಿಂತನೆಗಳ ತುಲನಾತ್ಮಕ ಅಧ್ಯಯನವೇ ಆಗಿರುವದನ್ನು ನಾವು ಇಲ್ಲಿ ಗಮನಿಸಬೇಕು.
ಕರ್ನಾಟಕದ ಸಂದರ್ಭದಲ್ಲೂ ಈ ರೀತಿಯ ಪ್ರಯತ್ನಗಳು ಕಡಿಮೆಯೇ ಎನ್ನಬಹುದು. ಡಾ. ಮಹಾಬಲೇಶ್ವರ ರಾವ್ ಅವರು ಬರೆದಿರುವ, ಚಿಂತನ ಪುಸ್ತಕ ಪ್ರಕಟಿಸಿರುವ ಪುಸ್ತಕವನ್ನು ಹೊರತುಪಡಿಸಿದರೆ ಫ್ರೆಯಿರೆ ಜೀವನದ ಬಗ್ಗೆಯಾಗಲೀ, ಅವರ ಚಿಂತನಗಳ ಬಗ್ಗೆಯಾಗಲಿ ಹೆಚ್ಚು ಮಾಹಿತಿ ಸಿಕ್ಕದು.
2021 ಪಾವ್ಲೊ ಫ್ರೆಯಿರೆ ಯವರು ಜನ್ಮ ಶತಮಾನೋತ್ಸವ ವರ್ಷವಾದ್ದರಿಂದ ಮತ್ತು ’ಪೆಡಗೋಜಿ ಆಫ್ ದಿ ಒಪ್ರೆಸ್ಡ್’ Pedagogy of the Oppressed ಪುಸ್ತಕ ಆಂಗ್ಲ ಭಾಷೆಯಲ್ಲಿ ಪ್ರಕಟಣೆಗೊಂಡು 51ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಮತ್ತು ಜನವಿರೋಧಿ ರಾಷ್ಟ್ರೀಯ ಶಿಕ್ಷಣ ನೀತಿ-2021 ಸಂಸತ್ತಿನಲ್ಲಿ ಚರ್ಚೆಗೆ, ಮಂಡನೆಗೆ ಮತ್ತು ಅನುಮೋದನೆಗೆ ಅವಕಾಶವೇ ನೀಡದೇ, ಅದನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲು ಹೊರಟಿರುವ ಸಂದರ್ಭದಲ್ಲಿ, ಅದರಲ್ಲೂ ’ಕರ್ನಾಟಕದಲ್ಲೇ ಮೊದಲು’ ಎಂದು ನಮ್ಮ ಉನ್ನತ ಶಿಕ್ಷಣ ಮಂತ್ರಿಯವರೂ ಭಾರಿ ಉತ್ಸುಕತೆಯಿಂದ ಜಾರಿ ಮಾಡಲು ಹೊರಟಿರುವುದರಿಂದ ಈ ಮಹಾನ್ ಶಿಕ್ಷಣ ತಜ್ಞನ ಚಿಂತನೆಗಳ ಬಗ್ಗೆ ಮತ್ತೆ ಅವಲೋಕಿಸುವುದು ಅಗತ್ಯವಾದೀತು. ಶಿಕ್ಷಣ ಕ್ಷೇತ್ರದಲ್ಲಿ ಅಲ್ಪಸ್ವಲ್ಪ ಉಳಿದಿರುವ ಪ್ರಜಾತಂತ್ರ ಮತ್ತು ದಮನಿತರ ಪರ ನಿಲುವುಗಳನ್ನೂ ಅಳಿಸಲಿಕ್ಕೆ ತಯಾರಾಗಿರುವ ಪ್ರಭುತ್ವದಡಿಯಲ್ಲಿ ಶಿಕ್ಷಣ ಸಿಲುಕಿ ಉಸಿರುಗಟ್ಟಿ ಸಾಯದಿರಲಿ. ಪಾವ್ಲೋ ಫ್ರೆಯಿರೆ ಅವರ ಚಿಂತನೆಗಳು ತನ್ನೆಲ್ಲಾ ಇತಿಮಿತಿಗಳ ನಡುವೆಯೂ ನಮಗೆ ದಾರಿತೋರಲಿ.
- ಶಶಾಂಕ್, NIASನಲ್ಲಿ ಸಂಶೋಧನಾ ವಿದ್ಯಾರ್ಥಿ
————————————————————————————————————————————
ಇದನ್ನೂ ಓದಿ: ಇದು ಫ್ಯಾಸಿಸ್ಟರು, ಬಂಡವಾಳಿಗರು V/S ದಮನಿತರ ಸ್ವಾಭಿಮಾನದ ನಡುವಿನ ಹೋರಾಟ…!


