ವಿವಾದಾತ್ಮಕ ಕೃಷಿ ಮಸೂದೆಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಹೋರಾಡುತ್ತಿರುವ ರೈತರನ್ನು ಕೇಂದ್ರ ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿ ವಿರೋಧಿಸಿ ಪಂಜಾಬ್ ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ತಮ್ಮ ಪದ್ಮ ವಿಭೂಷಣ ಪ್ರಶಸ್ತಿಯನ್ನು ವಾಪಸ್ ಮಾಡಿದ್ದಾರೆ. ಭಾರತದ ಎರಡನೇ ಅತ್ಯುನ್ನತ ಪ್ರಶಸ್ತಿಯನ್ನು ವಾಪಸ್ ಮಾಡಿರುವ ಅವರು ಕೇಂದ್ರ ಸರ್ಕಾರ ರೈತರಿಗೆ ದ್ರೋಹ ಬಗೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿರೋಮಣಿ ಅಕಾಲಿ ದಳದ ಮುಖಂಡರಾಗಿರುವ 92 ವರ್ಷದ ಪ್ರಕಾಶ್ ಸಿಂಗ್ ಬಾದಲ್ 2015 ರಲ್ಲಿ ಈ ಪ್ರಶಸ್ತಿ ಪಡೆದಿದ್ದರು. ಆದರೆ ಈಗ ಹೋರಾಟನಿರತ ರೈತರೊಂದಿಗೆ ಕೈಜೋಡಿಸಿರುವ ಅವರು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಿರೋಮಣಿ ಅಕಾಲಿ ದಳವು ಈ ಕಾಯ್ದೆಗಳನ್ನು ವಿರೋಧಿಸಿ 3 ತಿಂಗಳ ಹಿಂದೆಯಷ್ಟೇ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿತ್ತು.

ದೆಹಲಿಯಲ್ಲಿ ಪ್ರತಿಭಟಿಸುತ್ತಿರು ರೈತರಿಗೆ ದೇಶ-ವಿದೇಶಗಳಿಂದ ಬೆಂಬಲದ ಮಹಾಪೂರವೇ ಹರಿದುಬಂದಿದೆ. ರೈತರಿಗೆ ಬೆಂಬಲ ವ್ಯಕ್ತಪಡಿಸುವ ಸಲುವಾಗಿ ಡಿಸೆಂಬರ್ 05 ರಂದು ಪಂಜಾಬ್‌ನ ಹತ್ತಾರು ಕ್ರೀಡಾಪಟುಗಳು, ಕೋಚ್‌ಗಳು ತಮ್ಮ ಪ್ರಶಸ್ತಿ ಫಲಕಗಳನ್ನು ವಾಪಸ್ ಮಾಡಿ, ದೆಹಲಿಗೆ ಮೆರವಣಿಗೆ ಹೊರಡಲು ನಿರ್ಧಿರಿಸಿದ್ದಾರೆ.

ರೈತರು ಹಲವು ತಿಂಗಳುಗಳಿಂದ ಶಾಂತಿಯುತ ಹೋರಾಟ ನಡೆಸುತ್ತಿದ್ದಾರೆ. ಅವರ ನೋವು ಕೇಳದ ಕೇಂದ್ರ ಸರ್ಕಾರ ಅವರ ಮೇಲೆ ಲಾಠಿ, ಜಲಫಿರಂಗಿ, ಅಶ್ರವಾಯು ಬಳಸುತ್ತಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅರ್ಜುನ ಪ್ರಶಸ್ತಿ ವಿಜೇತ ಒಲಂಪಿಕ್ ಹಾಕಿ ಆಟಗಾರ ಸಜ್ಜನ್ ಸಿಂಗ್ ಚೀಮಾ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಇಂದು ಕೇಂದ್ರ ಸರ್ಕಾರವು ರೈತಮುಖಂಡರೊಂದಿಗೆ ನಾಲ್ಕನೇ ಸುತ್ತಿನ ಮಾತುಕತೆ ನಡೆಸುತ್ತಿದೆ. ಸಂಸತ್ ಅಧಿವೇಶನ ಕರೆದು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ರೈತರು ಒತ್ತಾಯಿಸಿದ್ದಾರೆ. ಇಂದು ಕೊನೆ ದಿನ ಎಂದು ಎಚ್ಚರಿಕೆ ಸಹ ನೀಡಿದ್ದಾರೆ.


ಇದನ್ನೂ ಓದಿ: ಕೇಂದ್ರದೊಂದಿಗೆ ರೈತ ಮುಖಂಡರ ಸಭೆ: ಸಂಸತ್ ಅಧಿವೇಶನ ಕರೆದು ಕಾಯ್ದೆಗಳನ್ನು ಹಿಂತೆಗೆದುಕೊಳ್ಳಲು ರೈತರ ತಾಕೀತು

LEAVE A REPLY

Please enter your comment!
Please enter your name here