ಇಂಡಿಗೋದ ದೇಶೀಯ ಕಾರ್ಯಾಚರಣೆಗಳು ಸತತ ಐದನೇ ದಿನವೂ ಅಸ್ತವ್ಯಸ್ತಗೊಂಡಿದ್ದರಿಂದ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಶನಿವಾರ (ಡಿಸೆಂಬರ್ 6) ವಿಮಾನ ಟಿಕೆಟ್ ದರಗಳ ಮೇಲೆ ತಾತ್ಕಾಲಿಕ ಮಿತಿಯನ್ನು ವಿಧಿಸಿದೆ.
ನಿಗದಿತ ಮಾನದಂಡಗಳ ಯಾವುದೇ ಉಲ್ಲಂಘನೆ ಕಂಡುಬಂದರೆ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ತಕ್ಷಣದ ಸರಿಪಡಿಸುವ ಕ್ರಮ ಬೇಕಾಗುತ್ತದೆ ಎಂದು ಸಚಿವಾಲಯ ಹೇಳಿದೆ.
ಪ್ರಯಾಣಿಕರ ಹಣವನ್ನು ವಿಳಂಬವಿಲ್ಲದೆ ಮರುಪಾವತಿಸಲು ಸರ್ಕಾರ ಇಂಡಿಗೋಗೆ ನಿರ್ದೇಶನ ನೀಡಿದೆ. ರದ್ದಾದ ಎಲ್ಲಾ ವಿಮಾನಗಳ ಮರುಪಾವತಿ ಪ್ರಕ್ರಿಯೆಯನ್ನು ಭಾನುವಾರ ರಾತ್ರಿ 8 ಗಂಟೆಯೊಳಗೆ ಪೂರ್ಣಗೊಳಿಸಬೇಕೆಂದು ಆದೇಶಿಸಿದೆ.
ಇಂಡಿಗೋ ವಿಮಾನಗಳ ಹಾರಾಟದಲ್ಲಿ ಉಂಟಾದ ಅಡಚಣೆಯ ಲಾಭವನ್ನು ಪಡೆದುಕೊಂಡು ಕೆಲ ವಿಮಾನಯಾನ ಕಂಪನಿಗಳು ಪ್ರಯಾಣಿಕರಿಂದ ಹೆಚ್ಚಿನ ಹಣ ಪೀಕುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಶನಿವಾರ ಹೇಳಿದೆ.
ದುಬಾರಿ ಬೆಲೆಗಳಿಂದ ಪ್ರಯಾಣಿಕರನ್ನು ರಕ್ಷಿಸಲು ಎಲ್ಲಾ ಅಧಿಕಾರಗಳನ್ನು ಬಳಸಿಕೊಂಡು ನ್ಯಾಯಯುತ ಬೆಲೆಯನ್ನು ಸರ್ಕಾರ ಖಾತ್ರಿಪಡಿಸಿದೆ ಎಂದು ಸಚಿವಾಲಯ ತಿಳಿಸಿದೆ.
ಪರಿಸ್ಥಿತಿ ತಿಳಿಯಾಗುವವರೆಗೆ ಈ ಪ್ರಯಾಣ ದರ ಮಿತಿ ಚಾಲ್ತಿಯಲ್ಲಿ ಇರಲಿದೆ ಎಂದಿದೆ.
ಪ್ರಯಾಣಿಕರಿಗೆ ಸಹಾಯ ಮಾಡಲು ಮತ್ತು ಹಣವನ್ನು ತಡವಿಲ್ಲದೆ ಹಿಂತಿರುಗಿಸಲು ವಿಶೇಷ ಸಹಾಯ ಕೇಂದ್ರಗಳನ್ನು ಸ್ಥಾಪಿಸುವಂತೆ ಸರ್ಕಾರ ಇಂಡಿಗೋಗೆ ಸೂಚಿಸಿದೆ. ವಿಮಾನ ರದ್ದತಿ ಮತ್ತು ವಿಳಂಬವಾದ ಕಾರಣದಿಂದ ಪ್ರಯಾಣಿಕರಿಂದ ಬೇರ್ಪಟ್ಟ ಲಗೇಜ್‌ಗಳನ್ನು ಕಂಡುಹಿಡಿದು, ಮುಂದಿನ 48 ಗಂಟೆಗಳೊಳಗೆ ಅವರಿಗೆ ತಲುಪಿಸಬೇಕು ಎಂದು ಆದೇಶಿಸಿದೆ.
ವಿಮಾನಯಾನ ಸಂಸ್ಥೆಗಳು ಸಿಬ್ಬಂದಿಗೆ ವಾರಕ್ಕೊಮ್ಮೆ ವಿಶ್ರಾಂತಿ ನೀಡುವ ಬಗ್ಗೆ ನೀಡಿದ್ದ ಸೂಚನೆಗಳನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ ಹಿಂತೆಗೆದುಕೊಂಡ ಮರುದಿನ ಸರ್ಕಾರ ನಿರ್ದೇಶನಗಳನ್ನು ನೀಡಿದೆ.


