ಹತ್ತನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ನೀಡಲಾಗಿದ್ದ ಸಮಾಜ ಸುಧಾರಕ ನಾರಾಯಣಗುರು ಹಾಗೂ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರ ಕುರಿತ ಪಾಠವನ್ನು ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಕೈಬಿಟ್ಟಿರುವುದು ಸ್ಪಷ್ಟವಾಗಿದೆ.
ಪಠ್ಯಪುಸ್ತಕ ಪರಿಶೀಲನಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರು, “ನಾರಾಯಣಗುರು ಪಾಠವನ್ನು ಕೈಬಿಟ್ಟಿಲ್ಲ. ಏಳು ಮತ್ತು ಎಂಟನೇ ತರಗತಿ ಎರಡೂ ಕಡೆಯೂ ಉಳಿಸಿಕೊಳ್ಳಲಾಗಿದೆ” ಎಂದು ಹೇಳುತ್ತಾ ಬಂದಿದ್ದರು. ಆದರೆ ಹತ್ತನೇ ತರಗತಿ ಸಮಾಜ ವಿಜ್ಞಾನದಲ್ಲಿ ನಾರಾಯಣ ಗುರುಗಳ ಪಾಠ ಇಲ್ಲ ಎಂಬುದು ಕರ್ನಾಟಕ ಪಠ್ಯ ಪುಸ್ತಕ ಸಂಘದ ವೆಬ್‌ಸೈಟ್‌ನಲ್ಲಿರುವ ಪಿಡಿಎಫ್‌ಗಳಿಂದ ಸ್ಪಷ್ಟವಾಗುತ್ತದೆ.
7ನೇ ತರಗತಿಯಲ್ಲಿ ಅಳವಡಿಸಲಾಗಿರುವ ‘ಸಮಾಜ ಸುಧಾರಕರ ಕುರಿತ ಪಾಠ’ವನ್ನು 10ನೇ ತರಗತಿಯಲ್ಲಿ ವಿಸ್ತರಿಸಲಾಗಿದೆ. 7ನೇ ತರಗತಿಯಲ್ಲಿ ಇದ್ದ ಅನೇಕ ಮಹನೀಯರ ವಿವರಗಳನ್ನು ಹತ್ತನೇ ತರಗತಿಯಲ್ಲಿ ಮುಂದುವರಿಸಲಾಗಿದ್ದರೂ ಮಹಾನ್ ಮಾನವತಾವಾದಿ ನಾರಾಯಣಗುರುಗಳ ವಿವರಗಳನ್ನು ಸಮಿತಿ ಕೈಬಿಟ್ಟಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಏಳನೇ ತರಗತಿ ಸಮಾಜ ವಿಜ್ಞಾನ ಭಾಗ-2ರಲ್ಲಿ ಮೊದಲ ಪಾಠವಾಗಿ ‘ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು’ ಪಾಠವನ್ನು ಇಡಲಾಗಿದೆ. ಭಾರತದ ಸಮಾಜ ಸುಧಾಕರ ಪರಿಚಯವನ್ನು ಈ ಪಾಠವು ಮಕ್ಕಳಿಗೆ ಪರಿಚಯ ಮಾಡಿಕೊಡುತ್ತದೆ. ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಿಸಿರುವ ಪಾಠದಲ್ಲಿ- ಬ್ರಹ್ಮ ಸಮಾಜದ ಸ್ಥಾಪಕ ರಾಜರಾಮ ಮೋಹನ್ ರಾಯ್, ಪ್ರಾರ್ಥನಾ ಸಮಾಜದ ಆತ್ಮಾರಾಮ್ ಪಾಂಡುರಂಗ, ಮಹಾದೇವ ಗೋವಿಂದ ರಾನಡೆ, ಸತ್ಯಶೋಧಕ ಸಮಾಜದ ಮಹಾತ್ಮ ಜ್ಯೋತಿಬಾ ಫುಲೆ, ಆರ್ಯ ಸಮಾಜದ ಸ್ವಾಮಿ ದಯಾನಂದ ಸರಸ್ವತಿ, ರಾಮಕೃಷ್ಣ ಮಿಷನ್‌ನ ಶ್ರೀ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರ ಪರಿಚಯ ಸೇರಿದಂತೆ ಥಿಯಸಾಫಿಕಲ್ ಸೊಸೈಟಿ, ಅಲಿಘರ್ ಚಳವಳಿ ಮತ್ತು ಸರ್ ಸಯ್ಯದ್ ಅಹ್ಮದ್ ಖಾನ್, ಶ್ರೀ ನಾರಾಯಣಗುರುಗಳ ಕುರಿತು ತಿಳಿಸಿಕೊಡಲಾಗಿದೆ.
ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿ ರೂಪಿಸಲಾದ ಏಳನೇ ತರಗತಿಯ ಸಮಾಜ ವಿಜ್ಞಾನ ಭಾಗ 2ರ ಪುಸ್ತಕದ ಪಾಠ ನಾಲ್ಕು “ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆ”ಯಲ್ಲಿ ಸಮಾಜ ಸುಧಾರಕರನ್ನು ಪರಿಚಯಿಸಲಾಗಿತ್ತು. ಈಗ ಉಳಿಸಿಕೊಳ್ಳಲಾಗಿರುವ ಪಠ್ಯದ ಜೊತೆಗೆ ಮಹಿಳಾ ಸಮಾಜ ಸುಧಾರಕಿಯರ ಪರಿಚಯವನ್ನೂ ಮಕ್ಕಳಿಗೆ ಮಾಡಿಕೊಡಲಾಗಿತ್ತು. ಸಾವಿತ್ರಿಬಾಯಿ ಫುಲೆ, ತಾರಾಬಾಯಿ ಶಿಂಧೆ, ಪಂಡಿತ್ ರಮಾಬಾಯಿ ಅವರ ವಿವರಗಳಿದ್ದವು. ಮಹಿಳಾ ಸಮಾಜ ಸುಧಾರಕಿಯರ ವಿವರಗಳಿಗೆ ಚಕ್ರತೀರ್ಥ ಸಮಿತಿ ಕತ್ತರಿ ಪ್ರಯೋಗ ಮಾಡಿದೆ. ಏಳನೇ ತರಗತಿಯಲ್ಲಿ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಪಾಠ ಈ ಹಿಂದಿನ ಪಠ್ಯದಲ್ಲೂ ಇರಲಿಲ್ಲ. ಈಗಿನ ಪಠ್ಯದಲ್ಲೂ ಏಳನೇ ತರಗತಿಯಲ್ಲಿ ಇರಲಿಲ್ಲ. ಆದರೆ ಹತ್ತನೇ ತರಗತಿ ಪಠ್ಯದಲ್ಲಿ ‘ಪೆರಿಯಾರ್’ ಪಾಠವನ್ನು ಈ ಹಿಂದೆ ಸೇರಿಸಲಾಗಿತ್ತು.
ಹತ್ತನೇ ತರಗತಿಯಲ್ಲಿ ನಾರಾಯಣಗುರುಗಳ ಪಾಠಕ್ಕೆ ಕೋಕ್
ನೂತನ ಪಠ್ಯಪುಸ್ತಕಗಳ ಪರಿಶೀಲನಾ ಸಮಿತಿಯು ಹತ್ತನೇ ತರಗತಿ ಸಮಾಜ ವಿಜ್ಞಾನ ಭಾಗ -1ರಲ್ಲಿ ಐದನೆಯ ಪಾಠವಾಗಿ ‘ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣ ಚಳುವಳಿಗಳು’ ಭಾಗವನ್ನು ಇರಿಸಿದೆ. ಏಳನೇ ತರಗತಿಯಲ್ಲಿದ್ದ ಪಠ್ಯವನ್ನು ಹತ್ತನೇ ತರಗತಿಯಲ್ಲಿ ವಿಸ್ತರಿಸಲಾಗಿದೆ ಎನ್ನುವ ಚಕ್ರತೀರ್ಥ ಅವರು, ಏಳನೇ ತರಗತಿಯಲ್ಲಿ ನೀಡಲಾಗಿದ್ದ ಅನೇಕ ಸಮಾಜ ಸುಧಾರಕರ ವಿವರಗಳನ್ನು ಉಳಿಸಿಕೊಂಡು ನಾರಾಯಣಗುರುಗಳ ಪಾಠವನ್ನು ತೆಗೆದುಹಾಕಿದೆ.
ಬ್ರಹ್ಮ ಸಮಾಜ, ಆರ್ಯ ಸಮಾಜ, ಪ್ರಾರ್ಥನಾ ಸಮಾಜ, ಸತ್ಯಶೋಧಕ ಸಮಾಜ, ಆಲಿಘರ್ ಚಳವಳಿ, ರಾಮಕೃಷ್ಣ ಮಿಷನ್, ಥಿಯಾಸಾಫಿಕಲ್ ಸೊಸೈಟಿ (ಬ್ರಹ್ಮವಿದ್ಯಾ ಸಮಾಜ)- ಇಷ್ಟನ್ನು ಪರಿಚಯ ಮಾಡಿಕೊಡಲಾಗಿದೆ. ನಾರಾಯಣಗುರುಗಳ ವಿವರ ಇಲ್ಲವಾಗಿದೆ. (ಪಿಡಿಎಫ್ ಪ್ರತಿ ನೋಡಿರಿ)
ಇದನ್ನೂ ಓದಿರಿ: Live Updates| ಪಠ್ಯಪುಸ್ತಕ ತಿರುಚೀಕರಣ ವಿವಾದ: ಬಸವಣ್ಣನವರ ಪಾಠ ವೈದೀಕರಣ; ಲಿಂಗಾಯತ ಮಠಾಧೀಶರ ಒಕ್ಕೂಟ ಆಕ್ರೋಶ
ಹಳೆಯ ಪಠ್ಯದಲ್ಲಿತ್ತೇ ನಾರಾಯಣಗುರುಗಳ ಪಾಠ?
ಬರಗೂರರ ಸರ್ವಾಧ್ಯಕ್ಷತೆಯಲ್ಲಿ ರೂಪಿಸಲಾದ ಪಠ್ಯದಲ್ಲಿ ನಾರಾಯಣಗುರುಗಳ ಪಾಠವನ್ನು ವಿಸ್ತರಿಸುವುದನ್ನು ಕಾಣಬಹುದಿತ್ತು. ಹತ್ತನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿನ ಭಾಗ -1ರಲ್ಲಿ ‘ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು’ ಇದ್ದು, ಬ್ರಹ್ಮಸಮಾಜ, ಆರ್ಯಸಮಾಜ, ಪ್ರಾರ್ಥನಾ ಸಮಾಜ, ಸತ್ಯಶೋಧಕ ಸಮಾಜ, ಆಲಿಘರ್ ಸುಧಾರಣಾ ಚಳವಳಿ, ರಾಮಕೃಷ್ಣ ಮಿಷನ್, ಥಿಯೋಸಾಫಿಕಲ್ ಸೊಸೈಟಿ, ಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಯೋಗಂ ಜೊತೆಗೆ ಪೆರಿಯಾರ್ ಕುರಿತು ವಿವರಿಸಲಾಗಿತ್ತು. ಈಗ ಹೊಸ ಪಠ್ಯದಲ್ಲಿ ನಾರಾಯಣಗುರುಗಳೂ ಇಲ್ಲ, ಪೆರಿಯಾರ್ ಕೂಡ ಇಲ್ಲ.
ಪಠ್ಯ ಪುಸ್ತಕ ವಿವಾದದ ಆರಂಭದಲ್ಲಿ ‘ನಾನುಗೌರಿ.ಕಾಂ’ ಜೊತೆ ಮಾತನಾಡಿದ್ದ ರೋಹಿತ್ ಚಕ್ರತೀರ್ಥ, “ಅರ್ಧ ಪಠ್ಯಪುಸ್ತಕವನ್ನು ತಿಳಿದುಕೊಂಡಿರುವವರು ಈ ಆರೋಪ ಮಾಡುತ್ತಿದ್ದಾರೆ. ಸುರಳಿಯಾಕಾರದ ಕಲಿಕೆ ಪ್ರಕಾರ ವಿಷಯವೊಂದರ ಕುರಿತು ಒಂದು ತರಗತಿಯಲ್ಲಿ ಕಲಿತರೆ, ಮುಂದುವರಿದಿದ್ದನ್ನು ಮುಂದಿನ ತರಗತಿಯಲ್ಲಿ ಕಲಿಯುತ್ತಾರೆ. ಏಳನೇ ತರಗತಿಯಲ್ಲಿ ಎಲ್ಲ ಸುಧಾರಕರ ಕುರಿತು ತಿಳಿಸಲಾಗಿದೆ. ಅಲ್ಲಿ ನಾರಾಯಣಗುರುಗಳು ಹಾಗೂ ಪೆರಿಯಾರ್ ಅವರ ವಿಷಯ ಬಂದಿದೆ. ಹತ್ತನೇ ತರಗತಿಯಲ್ಲಿ ಇದರ ವಿಸ್ತೃತ ರೂಪವಾಗಿ ಸಾಮಾಜಿಕ ಧಾರ್ಮಿಕ ಸಂಸ್ಥೆಗಳ ಪಾಠವನ್ನು ನೀಡಲಾಗಿದೆ” ಎಂದಿದ್ದರು. (ಸಂದರ್ಶನ ‘ಇಲ್ಲಿ’ ಓದಬಹುದು.)



Hi