“ಏನ್ಸಾರ್.. ಶಾಲೆಗೆ ಬರ್ತೀರಿ, ಹೋಗ್ತೀರಿ, ಅದು ಯಾರಿಗೋ ವಾಟ್ಸಪ್ ಇದ್ದವರಿಗೆ ಅದೇನೋ ಆನ್ಲೈನ್ ಪಾಠ ಕಳಿಸ್ತಾರಂತೆ. ದುಡ್ಡಿದ್ದೋರ ಮಕ್ಕಳು ಹೆಂಗೋ ಓತ್ತಾರೆ. ನನ್ ಮಕ್ಕಳಿಗೆ ಹೆಂಗೆ ಸರಾ…? ನನಗೆ ವಾಟ್ಸಾಪ್ ಪಾಟ್ಸಾಪು…. ಆನ್ಲೈನ್ ಗೀನ್ಲೈನ್ ಎಲ್ಲಾ ಗೊತ್ತಿಲ್ಲ ಸರಾ… ನನ್ನ ಮಕ್ಕಳು ನೀವು ಕಲಿಸಿದ್ದೆಲ್ಲ ಮರುತು ಹಾಳಾಗಿ ಹೋಗ್ಯಾವೆ. ಲಾಕ್ ಡೌನ್ ಅದೂ ಇದೂ ಅಂತ ನಮ್ಮ ಬದುಕು ಹಾಳಾತು. ಈ ಕಡೆ ಮಕ್ಕಳು ಶಾಲೆ ಗೀಲೆ ಇಲ್ಲದೆ ಬದುಕು ಹಾಳಾಗುತ್ತಿದೆ. ಪ್ಯಾಟೆ, ಪಟ್ನ, ರಾಜಕೀಯ ಎಲ್ಲಾ ನಡಿತಾ ಇದೆ. ಶಾಲೆ ಯಾಕಿಲ್ಲ ಸರಾ…? ಒಂದು ಕ್ಲಾಸ್ ಆದರೂ ದೂರ ದೂರ ಕೂರಿಸಿಕೊಂಡು ಮಕ್ಕಳೇ ಪಾಠ ಮಾಡಿದರೆ ಏನಾಗುತ್ತೆ ಸಾರ್…. ಏನಾದರೂ ಮಾಡಿ ಸಾರ್…” ಇದು ಹಲವು ಮಕ್ಕಳ ಪಾಲಕರ ಮಾತು.
ಎರಡನೇ ವರ್ಷಕ್ಕೂ ಕಾಲಿಟ್ಟ ಕೊರೋನಾ ವಿಪತ್ತಿನಿಂದ ಬೇರೆಬೇರೆ ವಲಯಗಳಿಗೆ ಆದ ನಷ್ಟ ಅಂದಾಜು ಮಾಡಲಾಗುತ್ತಿದೆ. ಪೂರಕ ಪರಿಹಾರ ಪ್ಯಾಕೇಜುಗಳನ್ನು ಘೋಷಿಸಲಾಗುತ್ತಿದೆ. ಆದರೆ ಬೃಹತ್ ಗ್ರಾಮೀಣ ಸಮುದಾಯದ ಮಕ್ಕಳ ಶಿಕ್ಷಣ ಹಕ್ಕು ರಕ್ಷಿಸುವಲ್ಲಿ ಯಾವುದೇ ರೀತಿಯಾದ ತೀವ್ರತರವಾದ ಯೋಜನೆಗಳತ್ತ ಇನ್ನೂ ಗಮನಹರಿಸಿಲ್ಲ. ಭಾರತದ ಭವಿಷ್ಯವಿರುವುದು ಬೃಹತ್ ಗ್ರಾಮೀಣ ಸಮುದಾಯದ ಮಕ್ಕಳಲ್ಲಿ. ದೀರ್ಘಕಾಲ ಅವರು ಶಿಕ್ಷಣದಿಂದ ವಂಚಿತರಾದರೆ ಬಹು ಆಯಾಮದಲ್ಲಿ ನಷ್ಟವಾಗುವುದು ಖಚಿತ. ಈಗಾಗಲೇ ನಿರಂತರ ಎರಡನೇ ವರ್ಷದತ್ತ ಮನೆಯಲ್ಲಿಯೇ ಮಕ್ಕಳು ಉಳಿದಿರುವುದರಿಂದ ಶೈಕ್ಷಣಿಕ ಚಟುವಟಿಕೆಗಳಿಂದ ದೂರ ಉಳಿದಿದ್ದು, ಈವರೆಗೆ ಕಲಿತದ್ದನ್ನೆಲ್ಲಾ ಮರೆತಿದ್ದೂ ಅಲ್ಲದೆ, ಹಲವು ದುಶ್ಚಟಗಳಿಗೆ ಬಲಿಯಾಗುತ್ತಿರುವ ಆರೋಪಗಳು ಕೇಳಿಬರುತ್ತಿವೆ. ಕುಟುಂಬದ ಸದಸ್ಯರೊಡನೆ ವ್ಯತಿರಿಕ್ತವಾಗಿ ವರ್ತಿಸುತ್ತಿರುವುದನ್ನು ಸಹ ನೀವು ಸಹ ಗಮನಿಸಿರುತ್ತೀರಿ. ಇಂತಹ ಸಂದಿಗ್ಧ ಸಮಯದಲ್ಲಿ ಮಕ್ಕಳ ಸಮಸ್ಯೆಗಳಿಗೆ ಪರಿಹಾರ ರೂಪಿಸುವುದು ಸರ್ಕಾರದ ಮತ್ತು ಪಾಲಕರ ಆದ್ಯ ಕರ್ತವ್ಯವಾಗಬೇಕಿತ್ತು.
ಸರ್ಕಾರಗಳು ಗ್ರಾಮೀಣ ಸಮುದಾಯದ ಮಕ್ಕಳ ಆರೋಗ್ಯಕ್ಕೆ ಮತ್ತು ಶೈಕ್ಷಣಿಕ ಚಟುವಟಿಕೆಗಳ ಹಕ್ಕು ರಕ್ಷಿಸಲು ಪರಿಣಾಮಕಾರಿ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಬೇಕಿದೆ. ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ ಸಹ ಆಗಿದೆ. ಮನೆಮನೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ತೊಡಗುವಂತೆ ಮಾಡಲು ಹಲವು ಯೋಜನೆಗಳನ್ನು ಹಾಕಿಕೊಳ್ಳಬಹುದಿತ್ತು. ಆದರೆ ಈವರೆಗೂ ಸೂಕ್ತ ನಿರ್ಧಾರ ಕೈಗೊಂಡಿಲ್ಲ.
ಬೆಂಗಳೂರಿನಂತಹ ಮಹಾ ನಗರದಲ್ಲಿ ಶೈಕ್ಷಣಿಕ ಚಟುವಟಿಕೆಗೆ ಇರುವ ಅಡೆತಡೆಗಳು ನಮ್ಮ ಹಳ್ಳಿಯ ಹತ್ತಿಪ್ಪತ್ತು ಮಕ್ಕಳಿರುವ ಶಾಲೆಗಳಲ್ಲಿ ಇಲ್ಲ. ಹಾಗಾಗಿ ಹಳ್ಳಿಗಳಲ್ಲಿ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಕೆಲವು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ತೊಂದರೆಯಿಲ್ಲದೆ ನಡೆಸಬಹುದು. ರಾಜ್ಯದಲ್ಲಿ ಇರುವ 45 ಸಾವಿರಕ್ಕೂ ಅಧಿಕ ಶಾಲೆಗಳಲ್ಲಿ ಅರ್ಧದಷ್ಟು ಶಾಲೆಗಳು ಸಣ್ಣ ಸಣ್ಣ ಹಳ್ಳಿಗಳಲ್ಲಿದ್ದು ಸರಾಸರಿ 50 ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳಾಗಿವೆ. ಇಂತಹ ಶಾಲೆಗಳಲ್ಲಿ ದಿನಕ್ಕೆ 10-15 ಮಕ್ಕಳಂತೆ ತರಗತಿಗಳನ್ನು ನಡೆಸಲು ಸಾಕಷ್ಟು ಅವಕಾಶಗಳು ಇವೆ. ಈ ಬಗ್ಗೆ ಸಾಧ್ಯತೆ – ಸವಾಲುಗಳ ಪರಿಶೀಲನೆ ಅಗತ್ಯವಿದೆ. ಆನ್ಲೈನ್ ವ್ಯವಸ್ಥೆ ಇಲ್ಲದ ಮಕ್ಕಳಿಗೆ ಇದು ಸಂಜೀವಿನಿ ಆಗಲಿದೆ. ಇದಕ್ಕಾಗಿ ಆಯಾ ಊರಿನ ಸ್ಥಳೀಯ-ಶಿಕ್ಷಿತ ಯುವಕರನ್ನು ಸಹ ಸ್ವಯಂಸೇವಕರಾಗಿ ನೇಮಿಸಿಕೊಂಡು ಬಳಸಿಕೊಳ್ಳಬಹುದು. ಇದಕ್ಕೆ ಮಕ್ಕಳ ಹಕ್ಕುಗಳನ್ನು ರಕ್ಷಿಸಲೇಬೇಕು ಎಂಬ ಬದ್ದತೆ, ದೂರದೃಷ್ಟಿಯ ಯೋಜನೆ ಅಗತ್ಯವಷ್ಟೇ ಇದೆ.
ನಗರ ಪ್ರದೇಶದ ಬಹುತೇಕ ಮಕ್ಕಳು ಆನ್ ಲೈನ್ ನಿಂದ ಶಿಕ್ಷಣ ಅಷ್ಟಿಷ್ಟು ಪಡೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಆನ್ಲೈನ್ ವ್ಯವಸ್ಥೆಯೇ ಇಲ್ಲದ, ಡಿಜಿಟಲ್ ಶಿಕ್ಷಣವನ್ನು ತಿಳಿಯದ ಪಾಲಕರ ಮಕ್ಕಳ ನಡುವೆ ಗುಣಮಟ್ಟದ ಕಲಿಯುವಿಕೆಯ, ಶೈಕ್ಷಣಿಕ ಚಟುವಟಿಕೆಯ ಅಂತರ ಹೆಚ್ಚಾಗುತ್ತಿದೆ. ಇದರಿಂದ ಶಿಕ್ಷಣ ವಂಚಿತರು ಮತ್ತು ಶಿಕ್ಷಣ ಪಡೆದವರ ನಡುವಿನ ಅಂತರ ಮತ್ತಷ್ಟು ವಿಸ್ತರಿಸಿಕೊಳ್ಳುವ ಅಪಾಯವೂ ಇದೆ. ಎಲ್ಲ ಉದ್ಯೋಗಗಳಿಗೂ ಇಂದಿನ ಸ್ಪರ್ಧಾ ಶಿಕ್ಷಣ ವ್ಯವಸ್ಥೆಯಲ್ಲಿ ಗ್ರಾಮೀಣ ಭಾಗದ ಮಕ್ಕಳು ಮತ್ತಷ್ಟು ಹಿಂದಕ್ಕೆ ತಳ್ಳಲ್ಪಡುವ ಅಪಾಯಗಳಿವೆ. ಈಗಾಗಲೇ ಎಲ್ಲ ಕ್ಷೇತ್ರಕ್ಕೂ ವ್ಯಾಪಿಸಿರುವ ಡಿಜಿಟಲ್ ಯುಗದಲ್ಲಿ ಡಿಜಿಟಲ್ ಸಾಕ್ಷರರು, ಡಿಜಿಟಲ್ ಸೌಲಭ್ಯ ವಂಚಿತರ ನಡುವೆ ಅಂತರ ಮುಂದುವರಿಯುತ್ತಲೇ ಇದೆ. ಹೀಗೆ ಮುಂದುವರೆದರೆ ಈ ಹಿಂದಿನ ಶತಮಾನಗಳಲ್ಲಿ ಇದ್ದ ಬೇರೆ ಬೇರೆ ರೂಪದ ಅಸಮಾನತೆಗಳಂತೆ ನವರೂಪದ ಬೃಹತ್ ಅಸಮಾನತೆಗಳ ಅಂತರವೂ ಹೆಚ್ಚಾಗುತ್ತದೆ.
ಒಂದು ದೇಶ ಸುಭಿಕ್ಷವಾಗಿ ಪ್ರಗತಿಯತ್ತ ಮುಂದುವರೆಯಲು ಆಯಾ ದೇಶದ ಎಲ್ಲ ಹಂತದ ಪ್ರಜೆಗಳ ಸರ್ವೋದಯ ಅತಿ ಮುಖ್ಯವಾಗುತ್ತದೆ. ಹಾಗಾಗಿ ಬೃಹತ್ ಭಾರತದ ಭವಿಷ್ಯದ ಪ್ರಜೆಗಳಾದ ಗ್ರಾಮೀಣ ಸಮುದಾಯದ ಮಕ್ಕಳು ಈ ಕೊರೋನಾ ಕಾಲಘಟ್ಟದಲ್ಲಿ ನಿರಂತರ ಶಿಕ್ಷಣ ಪಡೆಯಲು ವಿಶೇಷ ಯೋಜನೆಗಳನ್ನು ರೂಪಿಸಬೇಕಾಗಿದೆ. ಈ ಕುರಿತಾಗಿ ಸರ್ಕಾರಗಳು ಹೆಚ್ಚಾಗಿ ಗಮನ ಹರಿಸದಿದ್ದರಿಂದ ಹಳ್ಳಿಹಳ್ಳಿಯಲ್ಲಿ ಪಾಲಕರು ಸಾಕಷ್ಟು ಆಕ್ರೋಶಿತರಾಗಿದ್ದಾರೆ. “ಏನಾದರೂ ಮಾಡಿ ಶಾಲೆ ಓಪನ್ ಮಾಡಿ ಸರ್, ನನ್ಮಕ್ಳು ಎಲ್ಲ ಮರೆತು ಹಾಳಾಗಿ ಹೋಗಿವೆ.” ಅನ್ನುವ ಪಾಲಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.
ಬೃಹತ್ ಗ್ರಾಮೀಣ ಸಮುದಾಯದ ಮಕ್ಕಳಿಗೆ ಶಿಕ್ಷಣ ಹಕ್ಕು ರಕ್ಷಿಸುವುದು ಹೇಗೆ ಎನ್ನುವ ಬಗ್ಗೆ ಕನಿಷ್ಠ ಪಕ್ಷ ಆಯಾ ಗ್ರಾಮದ ಶಿಕ್ಷಕರನ್ನು ಮತ್ತು ಸ್ಥಳೀಯ ಸ್ವಯಂ ಸೇವಕರನ್ನು ನೇಮಿಸಿಕೊಂಡು ಪೂರಕ ಬೋಧನಾ ಕ್ರಮ ಅನುಸರಿಸಬಹುದಾಗಿತ್ತು. ಆಯಾ ವಠಾರದಲ್ಲಿನ ಯುವ ಶಿಕ್ಷಿತರನ್ನು ಆಯಾ ಕೇರಿಯ ಮಕ್ಕಳಿಗೆ ಕಲಿಸಲು ಅನುಕೂಲವಾಗುವಂತೆ ಯೋಜನೆ ರೂಪಿಸಬಹುದಾಗಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ಮನೆಮನೆಗೆ ಬಿಸಿಊಟದ ಪಡಿತರ ಹಂಚಿದ ಇಲಾಖೆ ಜ್ಞಾನವನ್ನು ಸಹ ಹಂಚಲು ಕ್ರಮಕೈಗೊಳ್ಳಬೇಕು ಎನ್ನುವುದು ಪಾಲಕರ ಬಯಕೆಯಾಗಿದೆ.
ಸದ್ಯ ಈಗ ಸಂಭವಿಸಿರುವ ಕೋರೋನ ವಿಪತ್ತಿನಿಂದ ಪಾರಾಗಲು ಉದ್ಯಮ ವಲಯ ಬೇರೆ ಬೇರೆ ಮಾರ್ಗಗಳನ್ನು ಕಂಡುಕೊಂಡು ಚೇತರಿಸಿಕೊಳ್ಳುತ್ತಿದೆ. ಮೆಡಿಕಲ್ ಉದ್ಯಮ ವಲಯ ಬೃಹತ್ ಲಾಭದಿಂದ ಕೇಕೆ ಹಾಕುತ್ತಿದೆ. ಆದರೂ ಪೆಟ್ರೋಲ್ ಬೆಲೆ ನಿರಂತರವಾಗಿ ಏರಿಕೆ ಆಗಿರುವುದರಿಂದ
ಎಲ್ಲ ವಸ್ತುಗಳ ಬೆಲೆಗಳು ಗಗನಕ್ಕೆ ಏರಿದ್ದು ಸಾಮಾನ್ಯರ ಜನಜೀವನ ದುಸ್ತರವಾಗಿದೆ. ಇಂತಹ ಕಷ್ಟಕಾಲದಲ್ಲಿ ಜನಸಾಮಾನ್ಯರು ಸ್ಮಾರ್ಟ್‌ಫೋನ್‌ಗಳಿಗೆ, ಇಂಟರ್‌ನೆಟ್‌ಗೆ ಮತ್ತಷ್ಟು ದುಡ್ಡು ಹಾಕುವ ಪರಿಸ್ತಿತಿಯಲ್ಲಿಲ್ಲ. ಇದೆಲ್ಲದಕ್ಕೂ ಮಿಗಿಲಾಗಿ ಬೃಹತ್ ಗ್ರಾಮೀಣ ಸಮುದಾಯದ ಮಕ್ಕಳು ಎರಡು ವರ್ಷಗಳಿಂದ ಶಿಕ್ಷಣದಿಂದ ತುಂಬಲಾಗದ ನಷ್ಟವಾಗಿದೆ. ಭವಿಷ್ಯದ ಭಾರತದ ಮಕ್ಕಳ ಉತ್ತಮ ಭವಿಷ್ಯ ರೂಪಿಸಲು ಮಕ್ಕಳ ಶೈಕ್ಷಣಿಕ ಹಕ್ಕನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಲಕ್ಷ ಲಕ್ಷ ಕೋಟಿಗಳ ಬಜೆಟ್ ಮಂಡಿಸುವ ಇಂದಿನ ಕಾಲದಲ್ಲಿ ಮಕ್ಕಳ ಶಿಕ್ಷಣ ಹಕ್ಕು ರಕ್ಷಿಸಲು ಹೆಚ್ಚುವರಿ ಹಣ ಮಕ್ಕಳ ಮನೆಮನೆ ತಲುಪುವಂತೆ ವಿನಿಯೋಗಿಸಬೇಕು. ಪ್ರಜೆಗಳು ಕೇಳದ ಯಾವುದೋ ಯೋಜನೆಗಳನ್ನು, ಪ್ರತಿಮೆಗಳನ್ನು ಕಟ್ಟಲು ಕೋಟಿಕೋಟಿ ವ್ಯಯಿಸುವ ಮೊದಲು ಪ್ರಜೆಗಳ ತುರ್ತು ಅವಶ್ಯಕತೆಗಳನ್ನು, ಮಕ್ಕಳ ಆರೋಗ್ಯ, ಶೈಕ್ಷಣಿಕ ಹಕ್ಕನ್ನು ಕಾಪಾಡಲು ಆಳುವ ಸರ್ಕಾರಗಳು ಜವಾಬ್ದಾರಿ ವಹಿಸಬೇಕು ಎನ್ನುವುದು ಹಳ್ಳಿಯ ಬೀದಿ ಬೀದಿಯಲ್ಲಿ ಕೇಳಿಬರುವ ಮಾತಾಗಿದೆ.
– ರವಿರಾಜ್ ಸಾಗರ್, ಮಂಡಗಳಲೆ.

(ಸಾಗರ ತಾಲ್ಲೂಕಿನ ಮಂಡಗಳಲೆ ಗ್ರಾಮದ ರವಿರಾಜ್ ಸದ್ಯ ಮಾನ್ವಿ ತಾಲ್ಲೂಕಿನಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳ ರಂಗಭೂಮಿ ಇವರ ಆಸಕ್ತಿಯ ಕ್ಷೇತ್ರ)
ಇದನ್ನೂ ಓದಿ: ಆನ್‌ಲೈನ್ ಕ್ಲಾಸ್‌ಗಳ ಭಾರ ಕಡಿಮೆ ಮಾಡುವಂತೆ ಪ್ರಧಾನಿಗೆ ಪುಟ್ಟ ಹುಡುಗಿಯ ಮನವಿ



SsLc