ಎಎಪಿ ಪಾಲಿಕೆ ಸದಸ್ಯರ ‘ಕುದುರೆ ವ್ಯಾಪಾರ’ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ವಿವಾದಾತ್ಮಕ ವಿಜಯದ ಕಳವಳದ ನಡುವೆ ಇಂದು ಚಂಡೀಗಢ ಮೇಯರ್ ಚುನಾವಣೆಯ ಮತಪತ್ರಗಳನ್ನು ಮತ್ತು ಎಣಿಕೆ ಪ್ರಕ್ರಿಯೆಯ ವೀಡಿಯೊ ರೆಕಾರ್ಡಿಂಗ್ ಅನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಲಿದೆ.
ಬಿಜೆಪಿಯ ಮನೋಜ್ ಸೋಂಕರ್ ಅವರು 16 ಮತಗಳನ್ನು ಪಡೆದು ಆಮ್ ಆದ್ಮಿ ಪಕ್ಷ-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಕುಲದೀಪ್ ಕುಮಾರ್ ಅವರನ್ನು ಸೋಲಿಸಿದ್ದರು. ಮತದಾನ ಸಂದರ್ಭದಲ್ಲಿ, ಚುನಾವಣಾಧಿಕಾರಿ ಅನಿಲ್ ಮಸಿಹ್ ಅವರು ಸಮ್ಮಿಶ್ರ ಪಾಲುದಾರರ ಎಂಟು ಮತಗಳನ್ನು ಅಸಿಂಧು ಎಂದು ಘೋಷಿಸಿದಾಗ ವಿವಾದ ಭುಗಿಲೆದ್ದಿತು, ಮತಪತ್ರಗಳನ್ನು ತಿದ್ದಿದ ಆರೋಪಕ್ಕೆ ಕಿಡಿ ಹೊತ್ತಿಸಿತು. ಬಿಜೆಪಿಯ ಅಲ್ಪಸಂಖ್ಯಾತರ ಸೆಲ್‌ನ ಸದಸ್ಯರಾದ ಮಸಿಹ್ – ಎಎಪಿ ಕೌನ್ಸಿಲರ್‌ಗಳಿಗೆ ಮತಪತ್ರಗಳ ಮೇಲೆ ಗುರುತು ಹಾಕುತ್ತಿರುವುದನ್ನು ತೋರಿಸುವ ವೀಡಿಯೊ ವೈರಲ್ ಆಗಿದೆ. ಫೆಬ್ರವರಿ 5 ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್ ಅವರ ಕ್ರಮಗಳನ್ನು ‘ಪ್ರಜಾಪ್ರಭುತ್ವದ ಅಪಹಾಸ್ಯ’ ಎಂದು ಖಂಡಿಸಿತು.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರು, ಸದಸ್ಯರ ಕುದುರೆ ವ್ಯಾಪಾರದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ; ಮತಪತ್ರಗಳು ಮತ್ತು ಎಣಿಕೆ ಪ್ರಕ್ರಿಯೆಯ ವೀಡಿಯೊ ರೆಕಾರ್ಡಿಂಗ್ ಅನ್ನು ಪರಿಶೀಲಿಸಲು ನಿರ್ಧರಿಸಿದರು. ಹೊಸ ಚುನಾವಣೆಗೆ ತಕ್ಷಣ ಆದೇಶ ನೀಡುವ ಬದಲು, ಈಗಾಗಲೇ ಚಲಾವಣೆಯಾದ ಮತಗಳ ಆಧಾರದ ಮೇಲೆ ಫಲಿತಾಂಶಗಳ ಘೋಷಣೆಯನ್ನು ಪರಿಗಣಿಸುವಂತೆ ನ್ಯಾಯಾಲಯ ಸೂಚಿಸಿದೆ.
ಇಂದು ಸುಪ್ರೀಂ ಕೋರ್ಟಿಗೆ ದಾಖಲೆಗಳನ್ನು ಹಾಜರುಪಡಿಸುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ನ್ಯಾಯಾಲಯ ಸಮನ್ಸ್ ನೀಡಿದೆ.
‘ಗಂಭೀರ ವಿಷಯ’
ಚಂಡೀಗಢ ಆಡಳಿತವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಹೈಕೋರ್ಟ್ ನೇಮಿಸಿದ ನ್ಯಾಯಾಂಗ ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ಹೊಸದಾಗಿ ಚುನಾವಣೆ ನಡೆಸುವ ಆಲೋಚನೆಯನ್ನು ಪ್ರಸ್ತಾಪಿಸಿದರು. ಆದರೆ, ವಾದ ಆಲಿಸಿದ ನಂತರ ಪೀಠವು, ಫಲಿತಾಂಶ ಘೋಷಣೆಗೂ ಮುನ್ನವೇ ಸುಪ್ರೀಂ ಪೀಠದಿಂದಲೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸುವತ್ತ ವಾಲಿತು. ಮತಯಂತ್ರಗಳ ಎಣಿಕೆಯನ್ನು ಮೇಲ್ವಿಚಾರಣೆ ಮಾಡಲು ನ್ಯಾಯಾಂಗ ಅಧಿಕಾರಿಯನ್ನು ನಾಮನಿರ್ದೇಶನಕ್ಕೆ ಸೂಚಿಸಿದೆ.
ಮತಯಂತ್ರಗಳನ್ನು ವಿರೂಪಗೊಳಿಸಿದ ಆರೋಪ ಹೊತ್ತಿದ್ದ ಅನಿಲ್ ಮಸಿಹ್ ಅವರತ್ತ ಗಮನ ಹರಿಸಲಾಯಿತು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಮುಖ್ಯ ನ್ಯಾಯಮೂರ್ತಿಗಳು ಚುನಾವಣಾ ಅಧಿಕಾರಿಯನ್ನು ಪಾಟಿ ಸವಾಲಿಗೆ ಒಳಪಡಿಸಿದರು, ಚುನಾವಣೆ ನಡೆಸಿದ ರೀತಿಗೆ ಅಸಮಾಧಾನ ವ್ಯಕ್ತಪಡಿಸಿದರು. ನ್ಯಾಯಾಲಯವು ಮಸಿಹ್ ಅವರ ಕ್ರಮಗಳಿಗೆ ಸಂಭಾವ್ಯ ಕಾನೂನು ಕ್ರಮದ ಬಗ್ಗೆ ಕಟ್ಟುನಿಟ್ಟಾಗಿ ಎಚ್ಚರಿಸಿದೆ, ಇದು ಪ್ರಜಾಪ್ರಭುತ್ವ ಪ್ರಕ್ರಿಯೆಯ ಗಂಭೀರ ಉಲ್ಲಂಘನೆ ಎಂದು ಕರೆದಿದೆ.
‘ಮಿಸ್ಟರ್ ಮಸಿಹ್, ನಾನು ನಿಮಗೆ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ, ನೀವು ಸತ್ಯವಾದ ಉತ್ತರಗಳನ್ನು ನೀಡದಿದ್ದರೆ, ನಿಮ್ಮ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು; ಇದು ಗಂಭೀರ ವಿಷಯವಾಗಿದೆ. ನಾವು ವೀಡಿಯೊವನ್ನು ನೋಡಿದ್ದೇವೆ. ನೀವು ಕ್ಯಾಮೆರಾವನ್ನು ನೋಡುತ್ತಾ ಏನು ಮಾಡುತ್ತಿದ್ದೀರಿ ಮತ್ತು ಅಡ್ಡ ಮತಗಳನ್ನು ಹಾಕುತ್ತಿದ್ದಿರಿ, ಯಾಕೆ ಮತಗಳನ್ನು ಹಾಕುತ್ತಿದ್ದಿರಿ?’ ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಪ್ರಶ್ನಿಸಿದ್ದಾರೆ.
ಎಎಪಿಯ ಪರಾಜಿತ ಮೇಯರ್ ಅಭ್ಯರ್ಥಿ ಕುಲದೀಪ್ ಕುಮಾರ್ ಅವರು ಹೊಸ ಚುನಾವಣೆಗೆ ಮಧ್ಯಂತರ ಪರಿಹಾರ ನೀಡಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಿರಾಕರಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ನಂತರ ಸುಪ್ರೀಂ ಕೋರ್ಟ್ ಯಾವುದೇ ಮಧ್ಯಂತರ ಆದೇಶವನ್ನು ನೀಡದಿದ್ದಕ್ಕಾಗಿ ಹೈಕೋರ್ಟ್ ಅನ್ನು ಟೀಕಿಸಿತು.
ನೂತನ ಚುನಾವಣಾಧಿಕಾರಿ
ಅಡ್ಡ ಮತದಾನ ನಡೆದಿರುವ ಮತಪತ್ರಗಳನ್ನು ಪ್ರತ್ಯೇಕಿಸಲು ಉದ್ದೇಶಿಸಲಾಗಿತ್ತು ಎಂದು ಮಸಿಹ್ ವಿವರಿಸಿದರು. ‘ನೀವು ಮತಯಂತ್ರಗಳನ್ನು ಏಕೆ ವಿರೂಪಗೊಳಿಸಿದ್ದೀರಿ? ನೀವು ಪೇಪರ್‌ಗಳಿಗೆ ಮಾತ್ರ ಸಹಿ ಮಾಡಬೇಕಾಗಿತ್ತು. ನೀವು ಮತಪತ್ರಗಳ ಮೇಲೆ ಮೇಲೆ ಇತರ ಗುರುತುಗಳನ್ನು ಹಾಕಬಹುದು ಎಂದು ನಿಯಮಗಳಲ್ಲಿ ಎಲ್ಲಿ ಒದಗಿಸಲಾಗಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಪ್ರಶ್ನಿಸಿದರು.
ಸಾಲಿಸಿಟರ್ ಜನರಲ್ ಮೆಹ್ತಾ ಅವರು ಕ್ರಾಸ್‌ಫೈರ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ಪ್ರತಿಪಾದಿಸಿದರು, ‘ಮಿಸ್ಟರ್ ಸಾಲಿಸಿಟರ್, ಅವರನ್ನು (ಮಸಿಹ್) ವಿಚಾರಣೆಗೆ ಒಳಪಡಿಸಬೇಕು. ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ’ ಎಂದರು.
‘ಯಾವುದೇ ರಾಜಕೀಯ ಪಕ್ಷಕ್ಕೆ ಹೊಂದಿಕೆಯಾಗದ ಹೊಸ ಚುನಾವಣಾಧಿಕಾರಿಯನ್ನು ನೇಮಿಸಲು ನಾವು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡುತ್ತೇವೆ’ ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಘೋಷಿಸಿದರು.
ಸಾಲಿಸಿಟರ್ ಜನರಲ್ ಮೆಹ್ತಾ ಅವರು ಹರಿದ ಅಥವಾ ವಿರೂಪಗೊಳಿಸಿದ ಮತಪತ್ರಗಳ ಬಗ್ಗೆ ಗಮನ ಸೆಳೆದರು, ನ್ಯಾಯಾಲಯದ ಮಧ್ಯಪ್ರವೇಶವನ್ನು ಕೋರಿದರು. ಆದರೆ, ಕುಲದೀಪ್ ಕುಮಾರ್ ಪರ ವಕೀಲರು ಇದಕ್ಕೆ ವಾದ ಮಂಡಿಸಿ, ಕೇವಲ ಎಂಟು ಬ್ಯಾಲೆಟ್ ಪೇಪರ್‌ಗಳಿಗೆ ಪರೀಕ್ಷೆಯ ಅಗತ್ಯವಿದೆ ಮತ್ತು ಹರಿದಿಲ್ಲ ಎಂದು ಪ್ರತಿಪಾದಿಸಿದರು. ನಂತರ ಸುಪ್ರೀಂ ಕೋರ್ಟ್ ಇಂದು ಮತಪತ್ರಗಳನ್ನು ಪರೀಕ್ಷಿಸಲು ನಿರ್ಧರಿಸಿತು, ಸಾಕಷ್ಟು ಭದ್ರತೆಯೊಂದಿಗೆ ಅವುಗಳನ್ನು ಪ್ರಸ್ತುತಪಡಿಸುವಂತೆ ನಿರ್ದೇಶನ ನೀಡಿತು.
ಈಗ ನಡೆಯುತ್ತಿರುವ ಕುದುರೆ ವ್ಯಾಪಾರದ ಪ್ರಕ್ರಿಯೆಯು ಗಂಭೀರ ವಿಷಯವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು. ಹೊಸ ಚುನಾವಣೆಗಳನ್ನು ನಡೆಸಬೇಕೆ ಅಥವಾ ಹಿಂದಿನ ಮತಗಳನ್ನು ಮಾನ್ಯ ಮಾಡಬೇಕೆ ಎಂಬುದರ ಕುರಿತು ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ.
ಇದನ್ನೂ ಓದಿ; ಚಂಡೀಗಢ ಮೇಯರ್ ಚುನಾವಣೆ: ಮತಪತ್ರ ತಿರುಚಿದ್ದನ್ನು ಒಪ್ಪಿಕೊಂಡ ಚುನಾವಣಾಧಿಕಾರಿ


