Homeಮುಖಪುಟಚಂಡೀಗಢ ಮೇಯರ್ ಚುನಾವಣೆ: ಮತಪತ್ರ ತಿರುಚಿದ್ದನ್ನು ಒಪ್ಪಿಕೊಂಡ ಚುನಾವಣಾಧಿಕಾರಿ

ಚಂಡೀಗಢ ಮೇಯರ್ ಚುನಾವಣೆ: ಮತಪತ್ರ ತಿರುಚಿದ್ದನ್ನು ಒಪ್ಪಿಕೊಂಡ ಚುನಾವಣಾಧಿಕಾರಿ

- Advertisement -
- Advertisement -

ವಿವಾದಾತ್ಮಕ ಚಂಡೀಗಢ ಮೇಯರ್ ಚುನಾವಣೆ ಕುರಿತಂತೆ ಇಂದು ಸುಪ್ರೀಂ ಕೋರ್ಟ್‌ಗೆ ಹಾಜರಾದ ಚುನಾವಣಾಧಿಕಾರಿ ಅನಿಲ್ ಮಾಸಿಹ್, ತಾನು ಮತಪತ್ರಗಳನ್ನು ತಿರುಚಿರುವುದನ್ನು ಒಪ್ಪಿಕೊಂಡಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ಸೂಚಿಸಿದೆ.

ಮರು ಚುನಾವಣೆ ನಡೆಸುವ ಬದಲು ರಿಟರ್ನಿಂಗ್ ಅಧಿಕಾರಿ ಮಾಡಿದ ಗುರುತುಗಳನ್ನು ಗಣನೆಗೆ ತೆಗದುಕೊಳ್ಳದೆ ಮತಪತ್ರಗಳನ್ನು ಮರು ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಕುದುರೆ ವ್ಯಾಪಾರದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ನ್ಯಾಯಾಲಯ, ನಾಳೆ ಎಲ್ಲಾ ಮತಪತ್ರಗಳನ್ನು ಹಾಜರುಪಡಿಸುವಂತೆ ಆದೇಶಿಸಿದೆ. ಲಭ್ಯ ಮತಪತ್ರಗಳನ್ನು ಕೂಲಂಕುಷ ಪರಿಶೀಲನೆ ನಡೆಸಬೇಕೆಂದು ಸೂಚಿಸಿದೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಚುನಾವಣಾ ಅಧಿಕಾರಿಯೊಬ್ಬರನ್ನು ದೇಶದ ಮುಖ್ಯ ನ್ಯಾಯಾಧೀಶರು ಅಡ್ಡ ಪ್ರಶ್ನೆಗೆ ಒಳಪಡಿಸಿರುವುದು ಎಂದು ಮಾಸಿಹ್ ಅವರಿಂದ ಉತ್ತರವನ್ನು ಕೇಳಿದ ನಂತರ ನ್ಯಾಯಾಲಯವು ವಿಷಾದ ವ್ಯಕ್ತಪಡಿಸಿದೆ.

ಜನವರಿ 30ರಂದು ನಡೆದ ಚಂಡೀಗಢ ಮುನ್ಸಿಪಲ್ ಕಾರ್ಪೋರೇಷನ್‌ನ ಮೇಯರ್ ಚುನಾವಣೆಯ ಮತ ಎಣಿಕೆಯಲ್ಲಿ ಎಂಟು ಮತಗಳು ಅಸಿಂಧು ಎಂದು ಚುನಾವಣಾಧಿಕಾರಿ ಅನಿಲ್ ಮಾಸಿಹ್ ಘೋಷಿಸಿದ್ದರು. ಈ ಮೂಲಕ ಎಎಪಿಯ ಮೇಯರ್ ಅಭ್ಯರ್ಥಿಯನ್ನು ಬಿಜೆಪಿಯ ಮನೋಜ್ ಸೋಂಕರ್ ನಾಲ್ಕು ಮತಗಳ ಅಂತರದಿಂದ ಸೋಲಿಸಿದ್ದರು. ಬಿಜೆಪಿಯ ಅಲ್ಪಸಂಖ್ಯಾತ ಘಟಕದ ಸದಸ್ಯರಾದ ಮಾಸಿಹ್ ಅವರು ಉದ್ದೇಶಪೂರ್ವಕವಾಗಿ ಮತಗಳನ್ನು ಅಮಾನ್ಯಗೊಳಿಸಿದ್ದಾರೆ ಎಂದು ಎಎಪಿ ಆರೋಪಿಸಿತ್ತು.

ಎಎಪಿಯ ಆರೋಪಕ್ಕೆ ಪುಷ್ಠಿ ನೀಡುವಂತೆ ಮಾಸಿಹ್ ಅವರು ಎಎಪಿಯ ಕೆಲ ಕೌನ್ಸಿಲರ್‌ಗಳ ಮತ ಪತ್ರಗಳಿಗೆ ಮಾರ್ಕ್‌ ಮಾಡಿರುವುದು ಕ್ಯಾಮಾರದಲ್ಲಿ ರೆಕಾರ್ಡ್‌ ಆಗಿತ್ತು. ಈ ಸಂಬಂಧ ಎಎಪಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಫೆಬ್ರವರಿ 5 ರಂದು ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಮಾಸಿಹ್ ಅವರ ಕೃತ್ಯ “ಪ್ರಜಾಪ್ರಭುತ್ವದ ಅಪಹಾಸ್ಯ” ಎಂದಿತ್ತು.

ಇಂದು (ಫೆ.19) ವಿಚಾರಣೆ ಮುಂದುವರೆಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠ, ನಿನ್ನೆ(ಫೆ.18) ಸಂಜೆ ಬಿಜೆಪಿಯ ಮನೋಜ್ ಸೋಂಕರ್ ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ಗಮನಿಸಿತು ಮತ್ತು ಮಾಸಿಹ್ ಅವರು ಮುಂದೆ ಬಂದು ಕೆಲವು ಪ್ರಶ್ನೆಗಳಿಗೆ ಉತ್ತರಿಸುವಂತೆ ಸೂಚಿಸಿತು.

ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು “ಮಿಸ್ಟರ್ ಮಾಸಿಹ್, ನಾನು ನಿಮಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಿದ್ದೇನೆ. ನೀವು ಸತ್ಯವಾದ ಉತ್ತರಗಳನ್ನು ನೀಡದಿದ್ದರೆ ನಿಮ್ಮ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಇದು ಗಂಭೀರ ವಿಚಾರ. ನೀವು ಕ್ಯಾಮರಾ ನೋಡುತ್ತಾ ಬ್ಯಾಲೆಟ್‌ ಪೇಪರ್‌ಗಳ ಮೇಲೆ ಮಾರ್ಕ್‌ ಮಾಡಿರುವ ವಿಡಿಯೋವನ್ನು ನಾವು ನೋಡಿದ್ದೇವೆ. ನೀವು ಮಾರ್ಕ್‌ ಯಾಕೆ ಮಾಡಿದ್ದು? ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರಿಸಿದ ಮಾಸಿಹ್, ಎಂಟು ಬ್ಯಾಲೆಟ್ ಪೇಪರ್‌ಗಳಲ್ಲಿ ಕ್ರಾಸ್ (X)ಮಾಡಿರುವುದು ನಿಜ. ಅವುಗಳನ್ನು ವಿರೂಪಗೊಂಡಿದ್ದರಿಂದ ಪ್ರತ್ಯೇಕಿಸಲು ಹಾಗೆ ಮಾಡಿದೆ ಎಂದಿದ್ದಾರೆ.

ಮರು ಪ್ರಶ್ನೆ ಹಾಕಿದ ನ್ಯಾಯಮೂರ್ತಿಗಳು, “ನೀವು ಬ್ಯಾಲೆಟ್ ಪೇಪರ್‌ಗಳನ್ನು ವಿರೂಪಗೊಳಿಸಿದ್ದು ಯಾಕೆ? ನೀವು ಬ್ಯಾಲೆಟ್ ಪೇಪರ್‌ಗಳ ಮೇಲೆ ಸಹಿ ಮಾತ್ರ ಮಾಡಬಹುದು. ಅವುಗಳ ಮೇಲೆ ಮಾರ್ಕ್‌ ಮಾಡಬಹುದು ಎಂದು ನಿಯಮಗಳಲ್ಲಿ ಎಲ್ಲಿದೆ? ಎಂದು ಕೇಳಿದ್ದಾರೆ.

ಬಳಿಕ, ಚಂಡೀಗಢ ಆಡಳಿತವನ್ನು ಪ್ರತಿನಿಧಿಸುತ್ತಿದ್ದ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಕಡೆಗೆ ತಿರುಗಿದ ನ್ಯಾಯಮೂರ್ತಿಗಳು “ಮಿಸ್ಟರ್ ಸಾಲಿಸಿಟರ್, ಮಾಸಿಹ್ ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಹಾಗಾಗಿ, ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಆದೇಶಿಸಿದ್ದಾರೆ.

ಇದನ್ನೂ ಓದಿ :  ‘RAW’ ಕುರಿತ ದಿ ಪ್ರಿಂಟ್ ವರದಿಗೆ ನಿರ್ಬಂಧ ಕೋರಿದ್ದ ಪಿಐಎಲ್‌ ವಜಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಜಸ್ಥಾನ: ಬಿಜೆಪಿ ಸರ್ಕಾರದ ಯೋಜನೆಯಲ್ಲಿ 1,140 ಕೋಟಿ ರೂ.ನಷ್ಟ: ತಮ್ಮದೇ ಸರಕಾರದ ವಿರುದ್ಧ ಆರೋಪಿಸಿದ...

0
ರಾಜಸ್ಥಾನದ ಬಿಜೆಪಿ ಸರಕಾರ ಅಧಿಕಾರಕ್ಕೇರಿದ ಆರು ತಿಂಗಳಲ್ಲೇ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಮುಖ್ಯಮಂತ್ರಿಯ ಅಧೀನದ ಇಲಾಖೆಯಲ್ಲಿನ ವಸತಿ ಯೋಜನೆಯಲ್ಲಿನ ಲೋಪದೋಷವನ್ನು ಕ್ಯಾಬಿನೆಟ್ ಸಚಿವರೋರ್ವರು ಬಹಿರಂಗಪಡಿಸಿದ್ದು, ಇದರಿಂದ ಸರಕಾರದ ಬೊಕ್ಕಸಕ್ಕೆ 1,146 ಕೋಟಿ ರೂ. ನಷ್ಟವಾಗಿದೆ...