ಬಹುಕೋಟಿ ಕೌಶಲಾಭಿವೃದ್ಧಿ ನಿಗಮ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರಿಗೆ ಹೈಕೋರ್ಟ್ ನಾಲ್ಕು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಆರೋಗ್ಯದ ಹಿನ್ನೆಲೆಯಲ್ಲಿ ನಾಯ್ಡು ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅಕ್ಟೋಬರ್ 18ರಂದು ನಾಯ್ಡು ಅವರ ಕುಟುಂಬ ಸದಸ್ಯರು ಮತ್ತು ಟಿಡಿಪಿ ಮುಖಂಡರು ರಾಜಮಹೇಂದ್ರವರಂನ ಕೇಂದ್ರ ಕಾರಾಗೃಹದಲ್ಲಿ ಅವರನ್ನು ಭೇಟಿಯಾಗಿ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ಮಾಜಿ ಮುಖ್ಯಮಂತ್ರಿ ಅವರ ಪತ್ನಿ ಭುವನೇಶ್ವರಿ, ಪುತ್ರ ಲೋಕೇಶ್ ಮತ್ತು ಸೊಸೆ ಬ್ರಹ್ಮಣಿ ಅವರು ಟಿಡಿಪಿ ಮುಖ್ಯಸ್ಥರನ್ನು ಜೈಲಿನಲ್ಲಿ ಭೇಟಿಯಾದರು. ಅವರೊಂದಿಗೆ ಪಕ್ಷದ ಮುಖಂಡರಾದ ಚಿನರಾಜಪ್ಪ, ರಾಮಮೋಹನ್ ನಾಯ್ಡು, ಬುಚ್ಚಯ್ಯ ಚೌಧರಿ, ಕಲಾ ವೆಂಕಟರಾವ್ ಮತ್ತಿತರರು ಇದ್ದರು.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಟಿಡಿಪಿ ನಾಯಕರು, ”ನಾಯ್ಡು ಅವರ ಆರೋಗ್ಯದ ಬಗ್ಗೆ ನಮಗೆ ಚಿಂತೆಯುಂಟಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.
”ಔಷಧಿಗಳಿಂದ ಅವರ ಆರೋಗ್ಯ ಸರಿಹೋಗುತ್ತಿಲ್ಲ ಎಂದು ತೋರುತ್ತಿದೆ. ವೈದ್ಯಕೀಯ ಪರೀಕ್ಷೆ ಹಾಗೂ ವೈದ್ಯರ ಸೂಚನೆಗಳನ್ನು ಜೈಲು ಅಧಿಕಾರಿಗಳಿಂದ ಲಿಖಿತವಾಗಿ ಕೇಳಿದ್ದೇವೆ. ಈ ಬಗ್ಗೆ ಭುವನೇಶ್ವರಿ ಕೂಡ ಪತ್ರ ಬರೆದಿದ್ದಾರೆ. ಪ್ರತಿಯನ್ನು ನೀಡಿದರೆ ನಾವು ಅವರ (ನಾಯ್ಡು) ಆರೋಗ್ಯದ ಬಗ್ಗೆ ತಿಳಿಸುಕೊಳ್ಳಬಹುದು” ಎಂದು ಅವರು ಹೇಳಿದರು.
”ಹೈದರಾಬಾದ್ ಮತ್ತು ವಿಜಯವಾಡದಲ್ಲಿ ನಾಯ್ಡು ಅವರಿಗೆ ಚಿಕಿತ್ಸೆ ನೀಡಲು ವೈದ್ಯರ ತಂಡವೇ ಇದೆ. ವರದಿಗಳನ್ನು ಅವರಿಗೆ ಕಳುಹಿಸಿದರೆ, ಅವರು ಉತ್ತಮ ವೈದ್ಯಕೀಯ ಸಲಹೆಯನ್ನು ನೀಡಲು ಸಾಧ್ಯವಾಗುತ್ತದೆ” ಎಂದು ಅವರು ಹೇಳಿದರು.
ಕೌಶಲ್ಯ ಅಭಿವೃದ್ಧಿ ನಿಗಮದಿಂದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ನಾಯ್ಡು ಅವರನ್ನು ಸೆಪ್ಟೆಂಬರ್ 9ರಂದು ಬಂಧಿಸಲಾಯಿತು, ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ 300 ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ.
ಇದನ್ನೂ ಓದಿ: ತೆಲಂಗಾಣ ಚುನಾವಣೆ: BRS ಅಭ್ಯರ್ಥಿ, ಸಂಸದ ಪ್ರಭಾಕರ್ ರೆಡ್ಡಿಗೆ BJP ಕಾರ್ಯಕರ್ತನಿಂದ ಚಾಕು ಇರಿತ


