Homeಕರ್ನಾಟಕಸೌಜನ್ಯ ಪರ ಧ್ವನಿ ಎತ್ತಿದ ಚಾನೆಲ್‌ಗಳು ಬ್ಲಾಕ್‌; 'ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ'ದ ಹರಣ?

ಸೌಜನ್ಯ ಪರ ಧ್ವನಿ ಎತ್ತಿದ ಚಾನೆಲ್‌ಗಳು ಬ್ಲಾಕ್‌; ‘ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ’ದ ಹರಣ?

- Advertisement -
- Advertisement -

2012ರ ಅಕ್ಟೋಬರ್ 9ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದ ಕುಮಾರಿ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣ ಆರೋಪಿಗಳು ಯಾರು ಎಂಬುದು ಹತ್ತು ವರ್ಷದ ಬಳಿಕವೂ ಇನ್ನೂ ಪತ್ತೆಯಾಗಿಲ್ಲ. ಇದೊಂದೆ ಪ್ರಕರಣಲ್ಲಿ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ನ್ಯಾಯಾಂಗದ ಮೇಲೆ ಜನ ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿದೆ. ಊರಿನ ಪ್ರಭಾವಿ ಕುಟುಂಬದ ಸದಸ್ಯರು ಈ ಕೃತ್ಯ ಎಸಗಿದ್ದಾರೆ ಎಂಬ ಆರೋಪಗಳು ಪ್ರಬಲವಾಗಿ ಕೇಳಿಬರುತ್ತಿರುವ ಹೊತ್ತಿನಲ್ಲಿ, ಅದರ ಕುರಿತು ವಸ್ತುನಿಷ್ಠ ವರದಿ ಮಾಡಿದ ಹಲವು ಸ್ವತಂತ್ರ ಮಾಧ್ಯಮಗಳು ಮತ್ತು ಯೂಟ್ಯೂಬರ್‌ಗಳ ಮೇಲೆ ಕೋರ್ಟ್‌ ಮೂಲಕ ನಿರ್ಬಂಧ ಹೇರಲಾಗುತ್ತಿದೆ. ಇದೀಗ ಅದೇ ಪ್ರಭಾವಿ ಕುಟುಂಬದ ಕಾನೂನು ತಂಡವು, ಈದಿನ.ಕಾಮ್, ಕುಡ್ಲ ರಾಂಪ್‌ ಪೇಜ್‌, ಹೋರಾಟಗಾರರಾದ ಮಹೇಶ್‌ ಶೆಟ್ಟಿ ತಿಮರೋಡಿ ಮತ್ತು ಗಿರೀಶ್‌ ಮಟ್ಟಣನವರ್ ಸೇರಿದಂತೆ ಹಲವರ ವಿರುದ್ಧ ‘ಬ್ಲಾಕೆಂಟ್’ ಆದೇಶದ ಮೂಲಕ ವಿಡಿಯೊ ಪ್ರಕಟಿಸದಂತೆ ತಡೆ ತಂದಿದ್ದಾರೆ.

ಈದಿನ.ಕಾಮ್ ಸೇರಿದಂತೆ ಹಲವು ಚಾನೆಲ್‌ಗಳ ತಡೆಗೆ ಕೋರ್ಟ್‌ ಯೂಟ್ಯೂಬ್‌ ಸಂಸ್ಥೆಗೆ ಆದೇಶ ನೀಡಿದ್ದು, ನಿನ್ನೆಯಿಂದ ಚಾನೆಲ್‌ಗಳು ಸಾರ್ವಜನಿಕ ಡೊಮೈನ್‌ನಲ್ಲಿ ಲಭ್ಯವಿರುವುದಿಲ್ಲ. ಈ ಬೆಳವಣಿಗೆಯನ್ನು ಹಲವರು ಖಂಡಿಸಿದ್ದು, ಆರೋಪಿತ ‘ಪ್ರಭಾವಿ ಕುಟುಂಬ’ವು ಕಾನೂನುನಿನ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಕಿಡಿಕಾರಿದ್ದಾರೆ. ಭಾರತೀಯ ಸಂವಿಧಾನದ 19(1)(ಎ) ವಿಧಿಯ ಅಡಿಯಲ್ಲಿ ಬರುವ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಅಸಮಾಧಾನ ಹೊರಹಾಕಿದ್ದಾರೆ.

ತಮ್ಮ ಚಾನೆಲ್‌ ಬ್ಲಾಕ್‌ ಆಗಿರುವ ಬಗ್ಗೆ ‘ನಾನುಗೌರಿ.ಕಾಮ್‌’ ಜೊತೆಗೆ ಮಾತನಾಡಿದ ‘ಈದಿನ.ಕಾಮ್’ ವಿಡಿಯೊ ವಿಭಾಗದ ಮುಖ್ಯಸ್ಥರಾದ ಬಿ.ಸಿ. ಬಸವರಾಜು, “ಕೋರ್ಟ್‌ನಲ್ಲಿ ಈಗಾಗಲೇ ಪ್ರಕರಣಗಳು ಬಾಕಿ ಇರುವಾಗಲೇ, ಹೊಸದೊಂದು ಪ್ರಕರಣದಲ್ಲಿ ನಮಗೆ ಯಾವುದೇ ಸೂಚನೆ ನೀಡದೆ ಚಾನೆಲ್‌ ಬ್ಲಾಕ್‌ ಮಾಡಿಸಿದ್ದಾರೆ” ಎಂದು ಅಸಮಾಧಾನ ತೋಡಿಕೊಂಡರು.

“ಧರ್ಮಸ್ಥಳದ ಸೌಜನ್ಯ ಪ್ರಕರಣದ ವಿಡಿಯೊಗಳಿಗೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯದಲ್ಲಿ ಕೇಸ್‌ ನಡೆಯುತ್ತಿದೆ. ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಸಂಬಂಧಪಟ್ಟವರು ಪ್ರಕರಣ ದಾಖಲಿಸಿದ್ದರು. ಕೋರ್ಟ್‌ ಸೂಚನೆಯಂತೆ ಅವರು ಹೇಳಿದ ವಿಡಿಯೊಗಳನ್ನು ಡಿಲೀಟ್‌ ಮಾಡಿದ್ದೇವೆ. ಆದಾದ ಬಳಿಕವೂ, ನಾವು ಕೋರ್ಟ್‌ ಆದೇಶ ಪಾಲನೆ ಮಾಡಿಲ್ಲ ಎಂದು ಹೇಳಿ ಹೈಕೋರ್ಟಿನಲ್ಲಿ ಕೇಸ್‌ ದಾಖಲಿಸಿದ್ದರು. ಅವರು ಹೇಳಿದ ವಿಡಿಯೊಗಳ ಜೊತೆಗೆ ನಾವೇ ಸ್ವಯಂಪ್ರೇರಿತರಾಗಿ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದ ಕೆಲ ವಿಡಿಯೊಗಳನ್ನು ತೆಗೆದಿದ್ದೇವೆ; ಈ ಪ್ರಕರಣವೂ ಇನ್ನೂ ನ್ಯಾಯಾಲಯದಲ್ಲಿದೆ” ಎಂದರು.

“ಈ ಮಧ್ಯೆ, ಮಾರ್ಚ್‌ನಲ್ಲಿ ಹೊಸದೊಂದು ಕೇಸ್‌ ದಾಖಲಿಸಿ, ನಾವು ಕೋರ್ಟ್‌ ಆದೇಶವನ್ನು ಉಲ್ಲಂಘಿಸುತ್ತಲೇ ಇದ್ದೇವೆ ಎಂದು ಈದಿನ.ಕಾಮ್, ಮಹೇಶ್‌ ಶೆಟ್ಟಿ ತಿಮರೋಡಿ, ಗಿರೀಶ್‌ ಮಟ್ಟಣನವರ್ ಮತ್ತು ಕುಡ್ಲಾ ರಾಂಪ್‌ ಪೇಜ್ ಸೇರಿದಂತೆ ಐದಾರು ಚಾನೆಲ್ ಹಾಗೂ ವ್ಯಕ್ತಿಗಳ ಮೇಲೆ ಕೇಸ್‌ ದಾಖಲಿಸಿದ್ದರು. ಹೊಸ ಪ್ರಕರಣದಲ್ಲಿ ಒಂದು ಭಾರಿ ಮಾತ್ರ ನೋಟಿಸ್‌ ನೀಡಿ, ಕೋರ್ಟ್‌ ಮೂಲಕ ‘ಯೂಟ್ಯೂಬ್‌’ಗೆ ನಿರ್ದೇಶನ ಕೊಡಿಸಿ ನಮ್ಮ ಚಾನೆಲ್ ಬ್ಲಾಕ್ ಮಾಡಿಸಿದ್ದಾರೆ. ಹೈಕೋರ್ಟ್‌ನಲ್ಲಿ ಈಗಾಗಲೇ ಒಂದು ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ, ಮತ್ತೊಂದು ಪ್ರಕರಣ ದಾಖಲಿಸಿ ನಮಗೆ ಯಾವುದೇ ಸೂಚನೆ ನೀಡದೆ ಬ್ಲಾಕ್ ಮಾಡಿಸಿದ್ದಾರೆ” ಎಂದು ಅವರು ವಿವರಿಸಿದರು.

“ಈದಿನ.ಕಾಮ್‌ ಸೇರಿದಂತೆ ಉಳಿದ ಚಾನೆಲ್‌ಗಳು ಸಹ ಸೌಜನ್ಯ ಪ್ರಕರಣದ ವಸ್ತುನಿಷ್ಠ ವರದಿಯನ್ನೇ ನೀಡಿವೆ. ಕೆಲವು ಗ್ರೌಂಡ್‌ ರಿಪೋರ್ಟ್‌ ಸಹ ಮಾಡಲಾಗಿದೆ. ಈ ರೀತಿ ಒಳ್ಳೆ ಕೆಲಸ ಮಾಡುತ್ತಿದ್ದರೂ ನಮ್ಮ ಮೇಲೆ ಕೇಸ್‌ ದಾಖಲಿಸಿದ್ದಾರೆ. ಚಾನೆಲ್ ತಡೆ ಆದೇಶ ತೆರವಿಗೆ ನಾವು ಕೋರ್ಟ್‌ನಲ್ಲೇ ಹೋರಾಡುತ್ತೇವೆ. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಗಣಿಸಿದ್ದು, ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಯೋಚನೆ ಇದೆ. ಸಮಾನಮನಸ್ಕ ಮೀಡಿಯಾಗಳು ಒಟ್ಟಿಗೆ ಸೇರಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ. ಈ ರೀತಿಯ ‘ಬ್ಲಾಂಕೆಟ್’ ಆದೇಶಗಳಿಂದ ಸ್ವತಂತ್ರ ಮೀಡಿಯಾಗಳು ಕೆಲಸ ಮಾಡುವುದೇ ಕಷ್ಟ” ಎಂದರು.

“ತಡೆ ಆದೇಶ ಮುಗಿಯುವವರೆಗೆ ಈದಿನ ಚಾನೆಲ್ ಬದಲಿಗೆ ‘ಈದಿನ ಟಿವಿ’ ಯೂಟ್ಯೂಬ್‌ ಚಾನೆಲ್‌ನಲ್ಲಿ ನಾವು ವಿಡಿಯೋ ಮುಂದುವರಿಸುತ್ತೇವೆ. ನಮ್ಮೆಲ್ಲಾ ಬೆಂಬಲಿಗರು ಮತ್ತು ವೀಕ್ಷಕರು ಕೂಡ ನಮಗೆ ಬೆಂಬಲ ನೀಡಿದ್ದಾರೆ. ಆದರೆ, ಕಾನೂನು ಮತ್ತು ಸಾಮಾಜಿಕವಾಗಿ ಹೋರಾಟ ನಡೆಯಲೇಬಾಕಾಗಿದೆ. ವಸ್ತುನಿಷ್ಠ ವರದಿ ಮಾಡುವ ಮಾಧ್ಯಮಗಳಿಗೆ ಈ ರೀತಿ ಆಗುವುದು ಒಳ್ಳೆಯದಲ್ಲ” ಎಂದು ಅವರು ಹೇಳಿದರು.

Naanugauri – 299

ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆ

ಸೌಜನ್ಯ ಮತ್ತು ಧರ್ಮಸ್ಥಳದಲ್ಲಿ ನಡೆದಿರುವ ನಿಗೂಢ ಕೊಲೆಗಳ ಕುರಿತು ವಿಡಿಯೊಗಳನ್ನು ಮಾಡುತ್ತಿದ್ದ ಕುಡ್ಲ ರಾಂಪ್‌ ಪೇಜ್‌ ಯೂಟ್ಯೂಬ್‌ ಚಾನೆಲ್‌ ಸಹ ಬ್ಲಾಕ್ ಮಾಡಲಾಗಿದ್ದು, “ಇದು ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆ” ಎಂದು ಚಾನೆಲ್‌ ಮುಖ್ಯಸ್ಥರಾದ ಅಜಯ್ ಹೇಳಿದರು.

ನಾನುಗೌರಿ.ಕಾಮ್ ಜೊತೆಗೆ ಮಾತನಾಡಿದ ಅವರು, “ಸಮಾಜದಲ್ಲಿ ಏನೆಲ್ಲಾ ಅನಾಚಾರ ಹಾಗೂ ಅವ್ಯವಹಾರ ನಡೆಯುತ್ತಿದೆಯೋ, ಅದರ ವಿರುದ್ಧ ನಾವು ವಸ್ತುನಿಷ್ಠ ವರದಿ ಮೂಲಕ ಧ್ವನಿ ಎತ್ತಿದ್ದೇವೆ. ಕುಮಾರಿ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಅವರ ಕುಟುಂಬಕ್ಕೆ ನ್ಯಾಯ ಸಿಗಲಿಲ್ಲ, ಆರೋಪಿಯಾಗಿದ್ದ ಸಂತೋಷ್‌ ರಾವ್ ನಿರಪರಾದಿ ಎಂದು ಸಾಭೀತಾಗಿದೆ. ಕೃತ್ಯ ಇವರೇ ನಡೆಸಿರಬಹುದು ಎಂದು ಸೌಜನ್ಯ ಪರ ಹೋರಾಟಗಾರರು ಕೆಲ ಹೆಸರುಗಳನ್ನು ಹೇಳಿದ್ದರು. ಈ ಬಗ್ಗೆ ನಾವು ಹೋರಾಟಗಾರರು ಆರೋಪ ಮಾಡಿದ ವ್ಯಕ್ತಿಗಳನ್ನು ಕೇಳಿದ್ದೇವೆ. ಆದರೆ, ಈವರೆಗೆ ಅವರಿಂದ ಉತ್ತರ ಬಂದಿಲ್ಲ. ನಾವು ಆರೋಪಿ ಯಾರು ಎನ್ನುವ ಬಗ್ಗೆ ಮಾತ್ರ ಪ್ರಶ್ನೆ ಮಾಡಿದ್ದೇವೆ” ಎಂದರು.

“ವೀರೇಂದ್ರ ಹೆಗ್ಗಡೆ ಅವರ ಮಾನಹಾನಿಯಾಗುವಂತೆ ಯಾವುದೇ ವಿಡಿಯೊ ಮಾಡಬಾರದು ಎಂದು ಕೋರ್ಟ್‌ನಿಂದ ಆದೇಶ ಬಂದಿದೆ. ಈಗ ನಮ್ಮ ಚಾನೆಲ್‌ ಬ್ಲಾಕ್‌ ಆಗಿದೆ. ನಾವು ಕೋರ್ಟ್‌ನಲ್ಲಿ ಅಫಿಡವಿಟ್ ಹಾಕಿದರೂ ವಿಚಾರಣೆಗೆ ದಿನಾಂಕ ನಿಗದಿಯಾಗುತ್ತಿಲ್ಲ. ನಮ್ಮ ಪ್ರಕರಣ ನ್ಯಾಯಾಧೀಶರ ಮುಂದೆ ವಿಚಾರಣೆಗೆ ಬರುವುದೇ ಇಲ್ಲ. ನಾವು ಕೊಟ್ಟ ಕಡತ ನಾಪತ್ತೆ ಎಂಬ ಕಾರಣ ಹೇಳುವ ಮೂಲಕ ವಿನಾಕಾರಣ ವಿಚಾರಣೆ ಮುಂದೂಡಲಾಗುತ್ತಿದೆ. ಒಂದಾದರೆ ಪರವಾಗಿಲ್ಲ, ನಾವು ಕೊಟ್ಟಿರುವ ಐದು ಮೆಮೋಗಳು ಕಾಣೆಯಾಗಿವೆ ಎಂದು ಹೇಳುತ್ತಾರೆ. ಇದರ ಹಿಂದೆ ಯಾರಿದ್ದಾರೆ ಎಂಬುದು ನಮಗೆ ಕಾಡುತ್ತಿರುವ ಪ್ರಶ್ನೆ. ಐದು ಮೆಮೋ ಕಾಣೆಯಾಗುವುದು ಎಂದರೆ ಸಾಕಷ್ಟು ಅನುಮಾನ ಮೂಡಿಸಿದೆ” ಎಂದು ಅವರು ನ್ಯಾಯಾಂಗ ವ್ವವಸ್ಥೆ ಕುರಿತು ಬೇಸರ ಹೊರಹಾಕಿದರು.

“ನಮ್ಮ ವಾದ ಮಂಡಿಸಲು ಕೋರ್ಟಿನಲ್ಲಿ ಅವಕಾಶ ಸಿಗುತ್ತಿಲ್ಲ; ಕುಡ್ಲ ರಾಂಪ್‌ ಪೇಜ್‌ ಪ್ಲಸ್‌ ಚಾನೆಲ್‌ ಅನ್ನೂ ಬ್ಲಾಕ್‌ ಮಾಡಿಸಿದ್ದಾರೆ. ಇತ್ತೀಚೆಗೆ ತಾಲೂಕಿನ ಬುರುಡೆ ಪತ್ತೆ ಪ್ರಕರಣದ ಕುರಿತು ಒಂದು ಎಪಿಸೋಡ್ ಮಾಡಿದ್ದೇವೆ. ಅಲ್ಲಿ ಸಿಕ್ಕ ಪಂಚೆ, ಸೀರೆ ಹಾಗೂ ಇತರೆ ವಸ್ತುಗಳನ್ನು ಇಟ್ಟುಕೊಂಡು ವಿಡಿಯೊ ಮಾಡಿದ ಬಳಿಕ ನಮ್ಮ ಮತ್ತೊಂದು ಚಾನೆಲ್‌ ಕೂಡ ಬ್ಲಾಕ್ ಆಗಿದೆ. ಕೋರ್ಟಿನಿಂದ ಯಾವುದೇ ನೋಟಿಸ್ ನೀಡದೆ ಬ್ಲಾಕ್ ಮಾಡಿಸಿದ್ದಾರೆ” ಎಂದು ಆರೋಪಿಸಿದರು.

“ಈ ಬೆಳವಣಿಗೆಗಳನ್ನು ನೋಡುತ್ತಿದ್ದರೆ, ಇದು ಪ್ರಜಾಪ್ರಭುತ್ವ ದೇಶವೋ ಅಥವಾ ಸರ್ವಾಧಿಕಾರಿ ಆಡಳಿತವೋ ಎಂಬ ಅನುಮಾನ ಕಾಡುತ್ತಿದೆ. ನಮ್ಮ ಕಡೆಯ ವಾದ ಕೇಳದೆಯೇ ಚಾನೆಲ್ ಬ್ಲಾಕ್ ಮಾಡಿದ್ದಾರೆ; ಇದು ಯಾವ ಆಡಳಿತ. ರಾಜ್ಯದ ಮುಖ್ಯವಾಹಿನಿ ಮಾಧ್ಯಮಗಳು ಸಹ ಸೌಜನ್ಯ ಮತ್ತು ಬುಡುಡೆ ಪ್ರಕರಣದ ಬಗ್ಗೆ ವರದಿ ಮಾಡುತ್ತಿಲ್ಲ. ಇದಕ್ಕೆಲ್ಲಾ ಕಾರಣ ಏನು? ಅವರನ್ನು ತಡೆಯುತ್ತಿರುವುದು ಯಾರು? ನಮ್ಮ ವ್ಯವಸ್ಥೆ ಯಾವ ಹಂತಕ್ಕೆ ತಲುಪಿದೆ ಎಂಬುದಕ್ಕೆ ಇದೇ ಸಾಕ್ಷಿ. ಸೌಜನ್ಯ ಪರ ವರದಿ ಮಾಡಿದ ಚಾನೆಲ್‌ಗಳನ್ನು ಬ್ಲಾಕ್‌ ಮಾಡಿರುವುದ ಸ್ಪಷ್ಟವಾಗಿ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆ” ಎಂದರು.

ಚಾನೆಲ್‌ ಬ್ಲಾಕ್‌ ಮಾಡಿರುವ ಕುರಿತು ಹಿರಿಯ ವಕೀಲರಾದ ರಾಜಲಕ್ಷ್ಮಿ ಅಂಕಲಗಿ ಮಾತನಾಡಿ, “ಭಾರತೀಯ ಸಂವಿಧಾನದ 19(1)(ಎ) ವಿಧಿಯ ಅಡಿಯಲ್ಲಿ, ಪ್ರತಿಯೊಬ್ಬ ಮನುಷ್ಯರಿಗೂ ಅವರದ್ದೇ ಆದ ರೀತಿಯಲ್ಲಿ ಧ್ವನಿ ಎತ್ತಲು ಕಾನೂನಿನಲ್ಲಿ ಅವಕಾಶವಿದೆ. ಏನೇನೋ ಮಾತನಾಡಬಾರದು ಎಂಬ ಕಾರಣಕ್ಕೆ ಕೆಲವೊಂದು ಮಿತಿಗಳನ್ನು ಹೇರಲಾಗಿದೆ. ಮನುಷ್ಯರ ಮೂಲಭೂತ ಹಕ್ಕುಗಳ ಮೇಲೆ ನಿರ್ಭಂಧ ಹೇರಬಾರದು ಎಂದು ಕಾನೂನು ಹೇಳುತ್ತದೆ. ವಾಕ್‌ ಸ್ವಾತಂತ್ರ್ಯದ ಜೊತೆಗೆ, ಅಭಿವ್ಯಕ್ತಿ ಸ್ವಾತಂತ್ರ್ಯವೂ ಇದೆ. ಕಲೆ, ಬರವಣಿಗೆ ಅಥವಾ ಇನ್ಯಾವುದೇ ರೀತಿಯಲ್ಲಿ ಅಭಿವ್ಯಕ್ತಿಸಬಹುದು. ಇದಕ್ಕೆ ತಡೆಹಾಕುವುದು ಎಂದರೆ ಮನುಷ್ಯರನ್ನು ಪರೋಕ್ಷವಾಗಿ ಹತ್ತಿಕ್ಕುವುದು ಎಂದರ್ಥ, ನಿನಗೆ ಮಾತನಾಡಲು ಯಾವುದೇ ಸ್ವಾತಂತ್ರ್ಯ ಇಲ್ಲ ಎಂದು ಹೇಳುವುದು” ಎಂದು ವಿವರಿಸಿದರು.

“ತನ್ನ ವಿರುದ್ಧ ಧ್ವನಿ ಎತ್ತುವ ಎಲ್ಲರ ವಿರುದ್ಧ ಸರ್ಕಾರ ಇದೇ ತಂತ್ರ ಬಳಸುತ್ತಿದೆ; ಮುಕ್ತವಾಗಿ ಬರೆಯುವ ಹಾಗೂ ಸರ್ಕಾರದ ವಿರುದ್ಧ ಧ್ವನಿ ಎತ್ತುವವರನ್ನ ವಿರುದ್ಧ ಯುಎಪಿಎ (ದೇಶದ್ರೋಹ) ಕೇಸ್ ದಾಖಲಿಸುತ್ತಾರೆ. ಇದಕ್ಕೆ ಉದಾಹರಣೆ ಎಂದರೆ, ಕೇರಳದ ಪತ್ರಕರ್ತ ಸಿಕ್ಕಿಕ್ ಕಪ್ಪನ್. ಅವರದಿ ಮಾಡಲು ತೆರಳಿದ್ದ ಅವರನ್ನು ಯುಎಪಿಎ ಅಡಿಯಲ್ಲಿ ಉತ್ತರ ಪ್ರದೇಶದಲ್ಲಿ ಬಂಧಿಸಿದ್ದರು. ಒಂದು ಅತ್ಯಾಚಾರ-ಕೊಲೆ ಕೊಲೆ ಪ್ರಕರಣವನ್ನು ವರದಿ ಮಾಡುವುದು ದೇಶವಿರೋಧಿ ಹೇಗೆ ಆಗುತ್ತದೆ? ಕೇಂದ್ರ ಸರ್ಕಾರಕ್ಕೆ ಅಪ್ರಿಯ ಎನಿಸುವ ಹಾಗೂ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಕಾನೂನನ್ನು ದುರ್ಭಳಕೆ ಮಾಡಿಕೊಳ್ಳಲಾಗುತ್ತಿದೆ” ಎಂದು ಹೇಳಿದರು.

“ಕರ್ನಾಟಕದಲ್ಲಿ, ಧರ್ಮಸ್ಥಳ ಎಂದರೆ ಧರ್ಮ ಎಂದು ಜನರ ತಲೆಗೆ ತುಂಬಲಾಗಿದೆ. ಧರ್ಮಸ್ಥಳ ಕ್ಷೇತ್ರವನ್ನು ಅದರ ಪ್ರವಿತ್ರತೆ ಮೂಲಕ ನೋಡಬೇಕಾ ಅಥವಾ ಆಡಳಿತ ನಡೆಸುವ ಮನುಷ್ಯ ಏನೇ ತಪ್ಪು ಮಾಡಿದ್ದರೂ ಅವರ ಬಗ್ಗೆ ಮೃದು ಧೋರಣೆ ಇಡಬೇಕಾ? ಈ ಎರಡರ ನಡುವಿನ ಅಂತರವನ್ನು ನಾವು ಜನರಿಗೆ ತಿಳಿಸಬೇಕಿದೆ. ಜನರ ನಂಬಿಕೆಗೆಗಳಿಗೆ ಘಾಸಿ ಮಾಡದೆ ಜನರನ್ನು ಹೊರತರಬೇಕು. ಆದರೆ, ಧರ್ಮಸ್ಥಳ ಕ್ಷೇತ್ರವನ್ನು ಮುನ್ನಡೆಸುತ್ತಿರುವ ವ್ಯಕ್ತಿ ಮೇಲೆ ಈಗಾಗಲೇ ದೈವತ್ವ ಹೇರಲಾಗಿದೆ. ಅವರು ಮಾಡಿದ ತಪ್ಪನ್ನು ಜನರಿಗೆ ತೋರಿಸುವುದು ಧರ್ಮಸ್ಥಳದ ಅವಹೇಳನ ಹೇಗಾಗುತ್ತದೆ? ಜನರಿಗೆ ಇದು ಅರ್ಥವಾಗಬೇಕು” ಎಂದರು.

“ಕೇಂದ್ರ ಸರ್ಕಾರದ ತಪ್ಪು ನಿರ್ಧಾರ ಟೀಕಿಸಿದರೆ ಮೋದಿಯನ್ನು ಬೈದಂತೆ ಆಗುವುದಿಲ್ಲ, ಇದನ್ನು ರಾಷ್ಟ್ರೀಯ ಅಪಮಾನ ಎಂದು ಪರಿಗಣಿಸಿದರೆ ಜನರು ಮುಕ್ತವಾಗಿ ಮಾತನಾಡುವುದಕ್ಕೆ ಸಾಧ್ಯವೇ ಇಲ್ಲ. ಮಂತ್ರಿಗಳು ಮತ್ತು ಅಧಿಕಾರಿ ವರ್ಗ ತೆಗೆದುಕೊಂಡ ನಿರ್ಧಾರ ಎಂಬುದು ಅರ್ಥವಾಗಬೇಕು. ಇದನ್ನು ಜನರಿಗೆ ಬಿಡಿಸಿ ಹೇಳಬೇಕು. ಅದನ್ನು ಮಾಡುತ್ತಿರುವುದು ಕೆಲವೇ ಕೆಲವು ವ್ಯಕ್ತಿಗಳು ಮತ್ತು ಯುಟ್ಯೂಬರ್‌ಗಳು ಮಾತ್ರ. ಆದರೆ, ಅವರೆಲ್ಲಾ ಆಡಳಿತದ ಕೆಂಗಣ್ಣಿಗೆ ಗುರಿಯಾಗುತ್ತಾರೆ. ತಪ್ಪು ಮಾಡಿದವರಿಗೆ ಇವರೆಲ್ಲಾ ಮಗ್ಗುಲು ಮುಳ್ಳಾಗಿದ್ದಾರೆ. ಆದ್ದರಿಂದ, ಇಂಥ ಪ್ರಕರಣಗಳಲ್ಲಿ ನ್ಯಾಯಾಲಯಗಳು ‘ಬ್ಲಾಂಕೆಟ್ ಆದೇಶ’ ನೀಡುವುದನ್ನು ನಿಲ್ಲಿಸಬೇಕು. ವ್ಯಕ್ತಿಯ ಘನತೆಗೆ ಯಾವ ರೀತಿಯ ಅಪಮಾನ ಆಗುತ್ತಿದೆ ಎಂಬುದನ್ನು ಮೊದಲು ಪರಿಶೀಲಿಸಬೇಕು. ಕೋರ್ಟ್ ಮತ್ತು ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಇದನ್ನೆಲ್ಲಾ ಬಿಡಿಸಿ ನೋಡುವುದುನ್ನು ಜನರು ಕಲಿಯಬೇಕು” ಎಂದರು.

ದೇವನಹಳ್ಳಿ| ಹಠಾತ್ ಕಾಣಿಸಿಕೊಂಡ ಭೂಸ್ವಾಧೀನ ‘ಪರ’ ಗುಂಪು; ‘ಸರ್ಕಾರಿ ಪ್ರಾಯೋಜಿತ’ ಎಂದ ರೈತರು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...