’ಭಾವುಕತೆ’, ’ಸಮೂಹ ಸನ್ನಿ’ ಹಾಗೂ ’ಮಾರುಕಟ್ಟೆ’ಗೆ ಅವಿನಾಭಾವ ಸಂಬಂಧವಿದೆ. ಆದರೆ ಭಾವುಕತೆ ಜೊತೆಗೆ
ವೈಚಾರಿಕತೆ ಬೆರೆತಾಗ ಕಲಾಕೃತಿಯೊಂದಕ್ಕೆ ದೊರಕುವ ಆಯಾಮ, ಹೊಳಹುಗಳೇ ಬೇರೆಯಾಗಿರುತ್ತದೆ. ಆದರೆ ಭಾವುಕತೆಯೇ ಪ್ರಧಾನವಾದ ಸರಕಾಗುವುದು, ’ಮಾರುಕಟ್ಟೆ’ಗೂ ಇಷ್ಟ, ’ಎಲೀಟ್ ವರ್ಗ’ಕ್ಕೂ ಇಷ್ಟ. ’ಚಾರ್ಲಿ 777’ ಸಿನಿಮಾ ಕುರಿತು ಉಂಟಾಗಿರುವ ಸಮೂಹ ಸನ್ನಿ ಹಾಗೂ ಅದಕ್ಕೆ ಬರುತ್ತಿರುವ ಪ್ರತಿಕ್ರಿಯೆಯನ್ನು ನೋಡಿದರೆ ಹೀಗನಿಸದೆ ಇರದು.
ಮಂಗಳೂರಿನಲ್ಲಿ ಪೊಲೀಸರು ನಾಯಿಯೊಂದಕ್ಕೆ ’ಚಾರ್ಲಿ’ ಎಂದು ಹೆಸರಿಟ್ಟರಂತೆ; ರಾಜ್ಯದ ಮುಖ್ಯಮಂತ್ರಿಯವರೇ ಭಾವುಕರಾಗಿ ಕಣ್ಣೀರು ಸುರಿಸಿದರಂತೆ; ಕೆಜಿಎಫ್-2 ಸಿನಿಮಾದ ಗುಂಗಿನಿಂದ ಹೊರಗೆ ತಂದಿದೆಯಂತೆ; ಈ ರೀತಿಯ ’ಅದ್ಭುತ’ ಪ್ರತಿಕ್ರಿಯೆಗಳು ಇತ್ತೀಚೆಗೆ ಬಿಡುಗಡೆಯಾದ ’ಚಾರ್ಲಿ’ ಸಿನಿಮಾಗೆ ಬರುತ್ತಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಜಗತ್ತಿನ ಹಲವು ಭಾಷೆಗಳಲ್ಲಿ ’ನಾಯಿ’ ಪ್ರಧಾನ ಸಿನಿಮಾಗಳು ಸಾಕಷ್ಟು ಬಂದಿವೆ. ಆದರೆ ನಾಯಿಯ ಜೊತೆಜೊತೆಯಲ್ಲೇ ಇಡೀ ಸಿನಿಮಾ ಸಾಗುವುದು ’ಚಾರ್ಲಿ’ ಮಾತ್ರವೇನೋ ಎನ್ನುವಷ್ಟರ ಮಟ್ಟಿಗೆ ಕಥೆಯನ್ನು ಹೆಣೆಯಲಾಗಿದೆ. ನಾಯಿ ಮತ್ತು ನಾಯಕ ನಟನ ಸಹಪಯಣವೇ ಈ ’ಚಾರ್ಲಿ’.
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥನಾಗಿರುವ ಧರ್ಮ (ರಕ್ಷಿತ್ ಶೆಟ್ಟಿ) ತಾನಾಯಿತು, ತನ್ನ ಕೆಲಸವಾಯಿತು ಎಂದು ಅಡ್ಡಾದಿಡ್ಡಿಯಾಗಿ ಬದುಕುತ್ತಿದ್ದಾನೆ. ಇಂಥವನ ಬದುಕಿನಲ್ಲಿ ಅಪರಿಚಿತ ’ನಾಯಿ’ಯೊಂದು ಕಾಲಿಡುತ್ತದೆ. ಅಲ್ಲಿಂದ ಆತನ ಜೀವನದಲ್ಲಿ ಹಲವು ತಿರುವುಗಳು ಕಾಣಿಸಿಕೊಳ್ಳುತ್ತವೆ. ನಾಯಿಯ ದಿಸೆಯಿಂದಾಗಿ ಧರ್ಮನ ವರ್ತನೆಗಳಲ್ಲಿ ಬದಲಾವಣೆಗಳು ಕಾಣುತ್ತವೆ. ಕುಚೇಷ್ಟೆಯ ನಾಯಿ, ಕಿರಿಕಿರಿ ಅನಿಸದಿದ್ದರೂ, ಆ ನಾಯಿಯೊಳಗಿನ ಅಂತಃಕರಣ ಕಂಡ ಧರ್ಮ ಮನಸೋಲುತ್ತಾನೆ.
’ಚಾರ್ಲಿ’ಗೆ ಕ್ಯಾನ್ಸರ್ ಆಗುತ್ತದೆ. ಆಕೆಯ ಬಯಕೆ ಏನೆಂದು ಊಹಿಸಿದ ನಾಯಕ ನಟ, ಆರ್ಥಿಕ ಸಂಕಷ್ಟದಲ್ಲಿಯೂ ಕಡಿಮೆ ಖರ್ಚಿನಲ್ಲಿಯೇ ಪ್ರಯಾಣ ಬೆಳೆಸುತ್ತಾನೆ. ಉದುರುವ ಹಿಮದ ಜೊತೆ ಕುಣಿದಾಡಿದರೆ ಚಾರ್ಲಿಯ ಕೊನೆಯ ಆಸೆ ಪೂರೈಸುತ್ತದೆ ಎಂದು ನಾಯಕ ಭಾವಿಸುತ್ತಾನೆ. ಸಾಗುವ ದಾರಿಯುದ್ದಕ್ಕೂ ಹೊಸ ಮುಖಗಳ ಪರಿಚಯ. ಅನಿರೀಕ್ಷಿತವಾಗಿ ಎದುರಾಗುವ ’ಡಾಗ್ ಷೋ’. ಅಲ್ಲಿ ಚಾರ್ಲಿಯ ವರ್ತನೆಗೆ ಸಿಗುವ ಭರಪೂರ ಪ್ರಶಂಸೆ, ಪ್ರೇಕ್ಷಕರ ಕಣ್ಣೀರು.
ಇದನ್ನೂ ಓದಿರಿ: Film Review| ಜನ ಗಣ ಮನ: ಸಮೂಹ ಸನ್ನಿಗೊಂದು ಮದ್ದು
ನಾಯಿಗಳ ಕ್ರಾಸ್ ಬ್ರೀಡಿಂಗ್ ದಂಧೆಯ ಕಥೆಯೂ ಬಂದು ಹೋಗುತ್ತದೆ. ಈ ದಂಧೆಯಿಂದಾಗಿ ನಾಯಿಗಳ ಮೇಲೆ ಆಗುತ್ತಿರುವ ಸಮಸ್ಯೆಗಳತ್ತಲೂ ಈ ಸಿನಿಮಾ ಒಂದಿಷ್ಟು ಬೆಳಕು ಚೆಲ್ಲುತ್ತದೆ (ಈ ಎಳೆಯನ್ನಿಟ್ಟುಕೊಂಡೇ ಗಂಭೀರವಾದ ಸಿನಿಮಾವೊಂದನ್ನು ಮಾಡಬಹುದೇನೋ).
ಸರಳರೇಖೆಯಲ್ಲಿ ಸಾಗುತ್ತಿರುವ ಚಾರ್ಲಿ ಸಿನಿಮಾದ ಅಂತ್ಯ ಹೇಗಿರುತ್ತದೆ ಎಂಬುದು ಪ್ರೇಕ್ಷಕನಿಗೆ ಮೊದಲೇ ತಿಳಿಯುತ್ತದೆ. ಹೀಗಾಗಿ ತುಂಬಾನೇ ಎಳೆದಾಡದೆ ಬೇಗನೆ ಸಿನಿಮಾ ಮುಗಿಸಿದ್ದರೆ ಚೆಂದವಿತ್ತು ಅನಿಸಲೂಬಹುದು. ಆದರೆ ಶ್ವಾನ ಪ್ರಿಯರಿಗೆ ’ಚಾರ್ಲಿ’ ಜೊತೆ ಮತ್ತಷ್ಟು ಕಾಲ ಕಳೆಯುವ ಆಸೆ ಇದ್ದರೂ ಆಶ್ಚರ್ಯಪಡಬೇಕಿಲ್ಲ.
ಕಚಗುಳಿ ಇಡುವ ಕೆಲವು ದೃಶ್ಯಗಳು ಇವೆ. ಪೆಟ್ ಡಾಕ್ಟರ್ (ರಾಜ್ ಬಿ.ಶೆಟ್ಟಿ) ಪ್ರಥಮಾರ್ಧದಲ್ಲಿ ನಗಿಸುತ್ತಾರೆ. ದ್ವಿತೀಯಾರ್ಧ ಜರ್ನಿಯಲ್ಲಿ ಕಳೆದುಹೋಗುತ್ತದೆ. ಈ ಮಧ್ಯೆ ಕ್ರಾಸ್‌ಬ್ರೀಡಿಂಗ್ ದಂಧೆಯ ಅನುಮಾನದಲ್ಲಿ ಧರ್ಮ ಮತ್ತು ಚಾರ್ಲಿಯನ್ನು ಹಿಂಬಾಲಿಸುವ ಪ್ರಾಣಿ ರಕ್ಷಣಾ ಅಧಿಕಾರಿ (ಸಂಗೀತ ಶೃಂಗೇರಿ) ಚಿತ್ರಣ ಅಸ್ವಾಭಾವಿಕ ಅನಿಸುತ್ತದೆ. ಆಕೆಯ ದಿಸೆಯಿಂದಾಗಿ ನಾಯಿ ಮತ್ತು ನಾಯಕ ನಟನ ಕುರಿತು ಪ್ರಖ್ಯಾತ ಮ್ಯಾಗಜಿನ್ ಒಂದರಲ್ಲಿ ಲೇಖನವೂ ಬಂದುಬಿಡುತ್ತದೆ! ಗರ್ಭಧರಿಸಿರುವ ನಾಯಿಯೊಂದು ಪರ್ವತವನ್ನು ಏರುವುದು, ಕ್ಯಾನ್ಸರ್ ಪೀಡಿತ ನಾಯಿಯೊಂದು ಬಹು ಎತ್ತರಕ್ಕೆ ಜಿಗಿಯುವುದು- ಇಂಥವುಗಳೆಲ್ಲ ಭಾವುಕತೆಯೊಳಗೆ ಚರ್ಚೆಗೊಳಪಡದ ಹಾಸ್ಯಾಸ್ಪದ ಸಂಗತಿಗಳಾಗಿ ಕಾಣುತ್ತವೆ.
ಕಡಿಮೆ ಬಜೆಟ್‌ನಲ್ಲಿ ಮಾಡಬಹುದಾಗಿದ್ದ ಸಿನಿಮಾವಾದರೂ ನಿರ್ದೇಶಕ ಕಿರಣ್ ರಾಜ್ ದೃಶ್ಯಗಳ ರಿಚ್‌ನೆಸ್ ಹೆಚ್ಚಿಸಿ, ಕಮರ್ಷಿಯಲ್ ಆಯಾಮಗಳಿಗೆ ಒತ್ತು ನೀಡಿದ್ದಾರೆ. ಕರ್ನಾಟಕದಿಂದ ಕಾಶ್ಮೀರದವರೆಗೆ ಕಥೆಯನ್ನು
ತೆಗೆದುಕೊಂಡು ಹೋಗಿದ್ದಾರೆ. ’ಅವನೇ ಶ್ರೀಮನ್ನಾರಾಯಣ’ ಸಿನಿಮಾದಲ್ಲಿ ಬೋರ್ ಎನಿಸಿದ್ದ ರಕ್ಷಿತ್ ಶೆಟ್ಟಿ ಇಲ್ಲಿ ಡಿಫರೆಂಟ್ ಆಗಿ ಕಾಣುತ್ತಾರೆ.
ಬಹುಮತದ ಭಾವುಕತೆಗೆ ಮಾರುಹೋದಂತೆ ಕಲಾತ್ಮಕತೆ, ಸಹಜತೆಗಳು ಕಾಣೆಯಾಗಬಹುದು. ಎಲೀಟ್ ವರ್ಗ ಕೇಂದ್ರಿತ ನಾಯಿ ಕಥೆಯಲ್ಲಿ ಬೇರೆ ಆಯಾಮಗಳನ್ನು ಹುಡುಕುವುದು ಎಷ್ಟು ಸರಿಯೋ ಎಷ್ಟು ತಪ್ಪೋ ತಿಳಿಯದು. ಆದರೆ ’ನಾಯಿ’ಯನ್ನು ನಾವು ಬಂಡವಾಳವನ್ನಾಗಿಯಷ್ಟೇ ನೋಡಬೇಕಿಲ್ಲ. ’ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ’ಗುತ್ತಿ ನಾಯಿ’, ’ಕರ್ವಾಲೋ’ ಕಾದಂಬರಿ ’ಕಿವಿ’ ಕನ್ನಡ ಸಾಹಿತ್ಯ ಕ್ಷೇತ್ರ ಕಂಡ ಅದ್ಭುತ ಪಾತ್ರಗಳು. ’ನಾಯಿ’ಯನ್ನು ಅತ್ಯಂತ ಸಹಜವಾಗಿ ಚಿತ್ರಿಸಿದ ಕಾದಂಬರಿಗಳಿವು.
’ಚಾರ್ಲಿ’ ಸಿನಿಮಾ ನೋಡುತ್ತಾ ತಮಿಳಿನ ಮಾರಿ ಸೆಲ್ವರಾಜ್ ನಿರ್ದೇಶನದ ’ಪರಿಯೇರುಮ್ ಪೆರುಮಾಳ್’ ನೆನಪಾಯಿತು. ಇಲ್ಲಿ ಬರುವ ’ಕರುಪ್ಪಿ’ (ಕಪ್ಪು ನಾಯಿ) ಪಾತ್ರ ದೃಶ್ಯ ಸಾಹಿತ್ಯದ ಕಲಾತ್ಮಕತೆಯನ್ನು ಹೆಚ್ಚಿಸಿಬಿಡುತ್ತದೆ. ರೈಲಿಗೆ ಸಿಲುಕಿಸಿ ಕೊಲ್ಲಲ್ಪಡುವ ’ಕರುಪ್ಪಿ’, ದಲಿತರ ಮೇಲಿನ, ಮುಗ್ದ ಜನರ ಮೇಲಿನ ದೌರ್ಜನ್ಯದ ರೂಪಕವಾಗಿ ಕಾಡುತ್ತದೆ. “ಕರುಪ್ಪಿ… ನೀನಲ್ಲದೆ ನಾ ಹೇಗಿರಲಿ?” ಎಂಬ ಹಾಡು ಸಾಕಷ್ಟು ಹಾಂಟ್ ಮಾಡುತ್ತದೆ. ಸಿನಿಮಾವೊಂದರಲ್ಲಿ ಚಿತ್ರಿತವಾಗುವ ನಾಯಿ ಕೇವಲ ಭಾವುಕತೆಗೆ ಸೀಮಿತವಾಗಿ ನಿಲ್ಲಬೇಕಿಲ್ಲ, ಅದರಾಚೆಗೆ ಜಿಗಿದು ರೂಪಕವಾಗಬಲ್ಲದು ಎಂದು ತೋರಿಸಿಕೊಟ್ಟವರು ಮಾರಿ ಸೆಲ್ವರಾಜ್.

ಈ ಎರಡು ದೃಶ್ಯಗಳನ್ನು ಅಕ್ಕಪಕ್ಕದಲ್ಲಿಟ್ಟು ಕಲ್ಪಿಸಿಕೊಳ್ಳೋಣ. ಮೊದಲನೇ ದೃಶ್ಯ: ಒಂದು ನಾಯಿಯನ್ನು ಅತೀವವಾಗಿ ಪ್ರೀತಿಸುವ ವ್ಯಕ್ತಿಯ ಚಿತ್ರಣ. ಎರಡನೆಯ ದೃಶ್ಯ: ಅದೇ ವ್ಯಕ್ತಿ ತನ್ನಂತೆಯೇ ಇರುವ ಒಬ್ಬ ದಲಿತನನ್ನು ಅತ್ಯಂತ ಕೀಳಾಗಿ ನೋಡುವುದು, ಆತನಿಗೆ ಅನ್ಯಾಯವೆಸಗುವುದು. ಈ ಎರಡನ್ನು ಬೆಸೆಯುವುದು ಕಲಾಕೃತಿಯಾಗಿಯೂ, ರೂಪಕವಾಗಿಯೂ ನಿಲ್ಲುತ್ತದೆ. “ನಮ್ಮ ಹೇಲ್ ತಿನ್ನೋ ನಾಯ್ನ ಕೋಣೆ ಒಳಕ್ಕೆ ಬಿಡ್ಕೋತಾರೆ, ನಾವ್ ಮಾತ್ರ ಬೇಡ, ಹೊಲೇರ್ರು ಮಾದಿಗ್ರು ಅಂತಾರೆ” ಅಂತ ಸಿದ್ದಲಿಂಗಯ್ಯನವರು ಬರೆದದ್ದು ಸಮಾಜದ ಹಿಪೊಕ್ರಸಿಯನ್ನು ಎತ್ತಿಹಿಡಿಯಿತು. ಸಾಹಿತ್ಯ, ಸಿನಿಮಾ ಮೊದಲಾದವು ಕಲಾಕೃತಿಯಾಗಿ ಉಳಿಯಬೇಕಾದರೆ ಭಾವುಕತೆಯಾಚೆಗೆ ಏನನ್ನೋ ಹೇಳಬೇಕು. ಆದರೆ ಗಟ್ಟಿ ರೂಪಕಗಳಿಗಿಂತ ಎಮೋಷನ್ಸ್‌ಗೆ, ನೈಜ ಮಾನವೀಯತೆಯ ಕಥಾಹಂದರಕ್ಕಿಂತ ಹುಸಿ ಭಾವುಕತೆಯ ವೈಭವೀಕರಣಕ್ಕೆ ಚಾರ್ಲಿ ತರಹದ ಸಿನಿಮಾಗಳು ಮಾರುಹೋಗುತ್ತವೆ. ಇಂತಹುದರ ಜೊತೆಗೆ ಮಾತ್ರ ಪ್ರೇಕ್ಷಕರನ್ನೂ ಹಿಡಿದಿಟ್ಟುಕೊಳ್ಳುವ ಮಾರುಕಟ್ಟೆಯೂ ಇಲ್ಲಿ ದೊಡ್ಡದಾಗಿ ಬೆಳೆದಿದೆ.
ಇದನ್ನೂ ಓದಿ: ಪೊಲೀಸ್ ವ್ಯವಸ್ಥೆಯ ಹುಳುಕು ಬಿಚ್ಚಿಡುತ್ತಿವೆ ತಮಿಳು, ಮಲಯಾಳಂ ಸಿನಿಮಾಗಳು
’ಚಾರ್ಲಿ’ಯಂತಹ ಸಿನಿಮಾದಲ್ಲಿ ’ಕರುಪ್ಪಿ’ಯನ್ನು ಹುಡುಕುವುದು ತಪ್ಪಾದೀತು. ಆದರೆ ಮಧ್ಯಮವರ್ಗ ಕೇಂದ್ರಿತ ’ನಾಯಿ’ಯನ್ನು ನೋಡಿ ನಾವು ಭಾವುಕರಾಗುವಾಗ, ’ವೈಚಾರಿಕತೆ’, ’ರೂಪಕತೆ’, ’ದೃಶ್ಯ ಸಾಹಿತ್ಯ’ದ ಕಲಾತ್ಮಕತೆಯನ್ನು ಹೆಚ್ಚಿಸಿದ ’ಕರುಪ್ಪಿ’ಯನ್ನು ಪ್ರೇಕ್ಷಕರು ಮರೆಯಬಾರದೆನ್ನುವುದಷ್ಟೇ ಇಲ್ಲಿನ ಆಶಯ. ಸಾಹಿತ್ಯ ಕೃತಿಯಾಗಲೀ, ಸಿನಿಮಾವಾಗಲೀ ’ವಾಚ್ಯ’ಕ್ಕೆ ಆದ್ಯತೆ ಕೊಟ್ಟುಬಿಟ್ಟರೆ ಪ್ರೇಕ್ಷಕ ಅಥವಾ ಓದುಗನ ಅನುಭೂತಿ ಸಂಕುಚಿತವಾಗಿಬಿಡುತ್ತದೆ. ಚಾರ್ಲಿ ಹಲವರನ್ನು ಮನಸೂರೆಗೊಂಡಿದ್ದರೂ, ಸರಳರೇಖೆಯಾಚೆಗೆ ಕಲಾತ್ಮಕತೆ ಮತ್ತು ಗಟ್ಟಿ ಕಥಾಹಂದರದ ದೃಶ್ಯರೂಪಕಗಳನ್ನು ಬಯಸುವವರಿಗೆ ಇದು ಪೇಲವ ಸಿನಿಮಾ.
ಅಂದಹಾಗೆ ಈ ಸಿನಿಮಾ ನೋಡಿ ಸಿಎಂ ಬೊಮ್ಮಾಯಿ ಕಣ್ಣೀರು ಸುರಿಸಿದರಂತೆ. ಈ ಸುದ್ದಿ ಓದಿ ಮಲಯಾಳಂನಲ್ಲಿ ಇತ್ತೀಚೆಗೆ ಬಿಡುಗಡೆಯಾದ ’ಜನ ಗಣ ಮನ’ ಸಿನಿಮಾದ ಒಂದು ಸಂಭಾಷಣೆ ನೆನಪಾಗುತ್ತಿದೆ. “ಒಂದು ನಾಯಿ ಸತ್ತರೆ ಕೇಳುವ ಜನಗಳಿರುವ ಈ ದೇಶದಲ್ಲಿ ಒಬ್ಬ ಮನುಷ್ಯ ಸತ್ತರೆ ಕೇಳಲು ಒಂದು ನಾಯಿಯೂ ಬರುವುದಿಲ್ಲ…”- ಬೊಮ್ಮಾಯಿಯವರು ’ಜನ ಗಣ ಮನ’ ನೋಡಿ ಕಣ್ಣೀರು ಸುರಿಸುತ್ತಾರೋ ನೋಡೋಣ!



ವಿಮರ್ಶೆಗೆ ಅಭಿನಂದನೆಗಳು. ಮಾನ್ಯರೇ, ಇಲ್ಲಿ ಒಂದು ಕತೆ ಮತ್ತು ನಿರೂಪಣೆ ಕಲಾಕೃತಿಯ ಮಟ್ಟಕ್ಕೆ ಏರಲಿಲ್ಲ ಇತ್ಯಾದಿ ಅಂಶಗಳು ಈ ಸಂದರ್ಭಕ್ಕೆ ಈ ಕೃತಿಗೆ ಬಾಧಕ ಎನ್ನಿಸಿಲ್ಲ ಎಂಬುದನ್ನ ಅಷ್ಟೇ ಗಮನಿಸಬೇಕು. ಭಾವುಕತೆಯನ್ನು ಪ್ರೇಕ್ಷಕ ಪ್ರಭು ಇಷ್ಟಪಟ್ಟು ನೋಡಿ ಮೆಚ್ಚುವಷ್ಟು ವೈಚಾರಿಕವಾಗಿ ಸಂಕೇತ/ ರೂಪಕಗಳನ್ನು ಗಮನಿಸಿ ಅರ್ಥಮಾಡಿಕೊಂಡು ಮೆಚ್ಚುವದಿಲ್ಲ, ಹಾಗೆ ಗಮನಿಸದೇ ಹೋಗುವುದು ಅಸಾರ್ಥಕ ಎಂದೂ ಏನೂ ಇಲ್ಲ. ಸಿನಿಮಾ ಎಂದರೆ ಸ್ವಲ್ಪ ಮೆಲೋಡ್ರಾಮಾ ಇತ್ಯಾದಿ ಇರಬೇಕು.. ವಾಸ್ತವದ ನೆಲೆಗಟ್ಟಿನಲ್ಲಿಯೇ ಚಿತ್ರ ಮಾಡಬೇಕೆನ್ನುವುದಾದರೆ ಅದು ಸಾಕ್ಷ್ಯ ಚಿತ್ರ ವಾದೀತು. ತಾವು ಉದಾಹರಿಸಿದ ತಮಿಳು ಚಿತ್ರದ ದಲಿತ ದಮನ ಇತ್ಯಾದೀ ಸಂಗತಿಗಳು ಬೌದ್ಧಿಕ ರಿಗೆ ಆಪ್ತವೇ ಹೊರತು ಸಾಮಾನ್ಯರಿಗೆ ಆಸಕ್ತಿ ಇರದಂತಹವು, ಆ ವರ್ಗಸಂಘರ್ಷ ಜಾತಿ ವೈಷಮ್ಯ ಕತೆಗಳು ಕ.ಬು ಸೇರಿ ದಶಕಗಳೇ ಆದವು. ಹಾಗಾಗಿ ಜನ ಭಾವುಕತೆ ಯನ್ನಾದರೂ ಹಾಸಿ ಹೊದ್ದಾರು, ವೈಚಾರಿಕತೆ ಯನ್ನಲ್ಲ.
ಸಿನಿಮಾವನ್ನು ಸಿನಿಮಾದ ರೀತಿ ನೋಡಿ
ತರವಲ್ಲದ ಲಾಜಿಕ್ ಹುಡುಕುವುದು ಬೇಡ