Homeಅಂಕಣಗಳುಬಹುಜನ ಭಾರತ: ಆದಿವಾಸಿಗಳ ನರಮೇಧ; ನ್ಯಾಯವಿನ್ನೂ ಬಿಸಿಲುಗುದುರೆ!

ಬಹುಜನ ಭಾರತ: ಆದಿವಾಸಿಗಳ ನರಮೇಧ; ನ್ಯಾಯವಿನ್ನೂ ಬಿಸಿಲುಗುದುರೆ!

- Advertisement -
- Advertisement -

ಈದೇಶದಲ್ಲಿ ದಲಿತರು ಆದಿವಾಸಿಗಳು ಅಲ್ಪಸಂಖ್ಯಾತರು ಮಲತಾಯಿ ಮಕ್ಕಳು. ಛತ್ತೀಸಗಢದ ಬಿಜಾಪುರ ಜಿಲ್ಲೆಯ ಸರ್ಕೇಗುಡದಲ್ಲಿ 2012ರಲ್ಲಿ ಹುಸಿ ಎನ್ಕೌಂಟರೊಂದು ನಡೆಯಿತು. ಆರು ಮಂದಿ ಅಪ್ರಾಪ್ತ ವಯಸ್ಕರೂ ಸೇರಿದಂತೆ 17 ಮಂದಿ ಆದಿವಾಸಿಗಳನ್ನು ಈ ಎನ್ಕೌಂಟರಿನಲ್ಲಿ ಕೊಲ್ಲಲಾಗಿತ್ತು. ಈ ಹತ್ಯಾಕಾಂಡದಲ್ಲಿ ಹತರಾದವರಿಗೆ ಮಾವೋವಾದಿಗಳ ಹಣೆಪಟ್ಟಿ ಹಚ್ಚಿತ್ತು ಅಂದಿನ ರಮಣಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ. ಭಾರೀ ಪ್ರತಿಭಟನೆ ವಿವಾದದ ನಂತರ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲಾಗಿತ್ತು.

ಮಧ್ಯಪ್ರದೇಶ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ವಿ.ಕೆ. ಅಗರವಾಲ ಆಯೋಗ ಸಲ್ಲಿಸಿದ ವರದಿಯನ್ನು 2019ರ ಡಿಸೆಂಬರಿನಲ್ಲಿ ಛತ್ತೀಸಗಢ ವಿಧಾನಸಭೆಯಲ್ಲಿ ಮಂಡಿಸಲಾಯಿತು.

ಭದ್ರತಾ ಪಡೆಗಳಿಂದ ಹತರಾದ 17 ಮಂದಿಯ ಪೈಕಿ ಯಾರೂ ಮಾವೋವಾದಿಗಳಾಗಿರಲಿಲ್ಲ ಎಂದು ಈ ವರದಿಯಲ್ಲಿ ಹೇಳಲಾಗಿತ್ತು. ಗ್ರಾಮಸ್ಥರನ್ನು ಬಹಳ ಸಮೀಪದಿಂದ ಗುಂಡು ಹಾರಿಸಿ ಕೊಲ್ಲಲಾಗಿದೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮತ್ತು ಸ್ಥಳೀಯ ಪೊಲೀಸರಿದ್ದ ಭದ್ರತಾ ಪಡೆಯು ಗಾಬರಿಯಲ್ಲಿ ಗುಂಡು ಹಾರಿಸಿರಬೇಕು. ಎನ್ಕೌಂಟರ್ ಜರುಗಿದ್ದು ರಾತ್ರಿಯ ಹೊತ್ತು. ಆದರೆ ಈ 17 ಮಂದಿಯ ಪೈಕಿ ಒಬ್ಬ ಯುವಕನನ್ನು ಬೆಳಿಗ್ಗೆ ಹಿಡಿದು ಗುಂಡು ಹಾರಿಸಿ ಕೊಲ್ಲಲಾಗಿದೆ ಎಂದೂ ಆಯೋಗ ಹೇಳಿತ್ತು.

ಭದ್ರತಾ ಪಡೆಯ ಕೆಲವರಿಗೆ ಆಗಿರುವ ಗಾಯಗಳಿಗೆ ತಮ್ಮದೇ ಸಂಗಾತಿಗಳ ಮತ್ತೊಂದು ತಂಡ ಕತ್ತಲಲ್ಲಿ ಗೊತ್ತಿಲ್ಲದೆ ಹಾರಿಸಿರುವ ಗುಂಡುಗಳೇ ಕಾರಣ. ಆದರೆ ಅಷ್ಟು ಮಂದಿ ಗ್ರಾಮಸ್ಥರ ಹಬ್ಬದ ಆಚರಣೆಯ ಯೋಜನೆಯನ್ನು ಚರ್ಚಿಸಲು ಸೇರಿದ್ದರು ಎಂಬ ಕಾರಣವನ್ನು ನಂಬಲಾಗದು ಎಂದೂ ವರದಿಯಲ್ಲಿ ಸಂದೇಹ ಪ್ರಕಟಿಸಲಾಗಿತ್ತು.

ಬಸಗುಡಾದಿಂದ ಹೊರಟ ಎರಡು ಭದ್ರತಾ ಪಡೆಯ ತಂಡಗಳು ಮೂರು ಕಿ.ಮೀ. ದೂರದ ಸರ್ಕೇಗುಡದಲ್ಲಿ ’ಮಾವೋವಾದಿಗಳ ಸಭೆ’ ನಡೆಯುತ್ತಿದ್ದುದನ್ನು ಕಂಡವು. ಸಭೆಯಲ್ಲಿ ಭಾಗವಹಿಸಿದ್ದ ಗ್ರಾಮಸ್ಥರ ಭದ್ರತಾ ಪಡೆಯ ತಂಡಗಳ ಮೇಲೆ ಗುಂಡು ಹಾರಿಸಿದರು. ಭದ್ರತಾ ಪಡೆಗಳು ವಾಪಸು ಗುಂಡು ಹಾರಿಸಿದರು ಎಂಬುದು ಭದ್ರತಾ ಪಡೆಗಳ ಹೇಳಿಕೆಯಾಗಿತ್ತು.

ಆದರೆ ಗ್ರಾಮಸ್ಥರ ಪ್ರಕಾರ ತಾವು ಬೀಜ ಪಂಡುಮ್ ಹಬ್ಬದ ಸಿದ್ಧತೆಗಾಗಿ ಸಭೆ ಸೇರಿದ್ದು. ಭದ್ರತಾ ಪಡೆಗಳು ಅವರನ್ನು ಸುತ್ತುವರೆದು ಗುಂಡು ಹಾರಿಸಿದವು. ಪಡೆಗಳಿಂದ ಹತ್ಯೆಗೀಡಾದ ಮತ್ತು ಗಾಯಗೊಂಡ ಗ್ರಾಮಸ್ಥರ ನಕ್ಸಲೀಯರು ಎನ್ನಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ. ’ದೂರದಲ್ಲಿ ಅನುಮಾನಾಸ್ಪದ ಸದ್ದು ಕೇಳಿಬರುತ್ತಿದೆ ಎಂಬುದಾಗಿ ತಮ್ಮ ’ಮಾರ್ಗದರ್ಶಿ’ಯ ಮಾತಿನಿಂದ ಪ್ರಭಾವಿತರಾದಂತಿರುವ ಪೊಲೀಸರು ಗಾಬರಿಯಾಗಿ ನಕ್ಸಲೀಯರಿದ್ದಾರೆಂದು ಭಾವಿಸಿ ಗುಂಡು ಹಾರಿಸಿ ಗ್ರಾಮಸ್ಥರ ಸಾವು ನೋವುಗಳಿಗೆ ಕಾರಣರಾಗಿದ್ದಾರೆ. ಗ್ರಾಮಸ್ಥರ ಗುಂಡು ಹಾರಿಸಿಲ್ಲವೆಂಬ ಅಂಶವು ಹಿರಿಯ ಪೊಲೀಸ್ ಅಧಿಕಾರಿಗಳಾದ ಎಸ್.ಇಳಂಗೋ ಮತ್ತು ಮನೀಶ್ ಬರ್ಮೋಲ ಅವರ ಹೇಳಿಕೆಗಳಿಂದ ಸ್ಪಷ್ಟವಾಗಿದೆ. ಸಾಕ್ಷ್ಯಾಧಾರಗಳ ಪ್ರಕಾರ 17 ರಲ್ಲಿ ಹತ್ತು ಮಂದಿ ಬೆನ್ನಿಗೆ ಗುಂಡು ಬಿದ್ದು ಸತ್ತಿದ್ದಾರೆ. ಅರ್ಥಾತ್ ಪರಾರಿಯಾಗುತ್ತಿದ್ದಾಗ ಕೊಲ್ಲಲಾಗಿದೆ. ಕೆಲವರು ತಲೆಗೆ ಗುಂಡು ಬಿದ್ದು ಸತ್ತಿದ್ದಾರೆ. ಈ ಅಂಶಗಳನ್ನು ಗಮನಿಸಿದರೆ ಗುಂಡು ಹಾರಿಸಿದ್ದು ಬಲು ಸಮೀಪದಿಂದಲೇ ವಿನಾ ಪೊಲೀಸರು ಹೇಳುವಂತೆ ದೂರದಿಂದ ಅಲ್ಲ. ಗಾಯಗೊಂಡವರ ಮೈ ಮೇಲಿನ ಗಾಯಗಳು ಕೂಡ ಬಂದೂಕದ ಹಿಡಿಯಿಂದ ಮತ್ತು ಹರಿತ ಅಂಚಿನ ಮತ್ತು ಮೊಂಡು ವಸ್ತುವಿನಿಂದ ಆದಂತಹವು. ಈ ಗಾಯಗಳು ಆದದ್ದು ಹೇಗೆ ಎಂಬುದಕ್ಕೆ ಭದ್ರತಾ ಪಡೆಗಳಿಂದ ಉತ್ತರ ಬರಲಿಲ್ಲ’ ಎಂದು ನ್ಯಾಯಾಂಗ ವರದಿ ಹೇಳಿತ್ತು.

ಹತ್ಯೆಗೀಡಾದವರ ಪೈಕಿ ಕಾಕಾ ಸರಸ್ವತಿ ಮತ್ತು ಕಾಕಾ ನಾಗೇಶ್ 12 ವರ್ಷ ವಯಸ್ಸಿನವರು. ಇರ್ಪಾ ಸುರೇಶ್ ವಯಸ್ಸು ಹದಿನೈದು. ಹಾಪ್ಕಾ ಮಿಟ್ಟೂಗೆ 17 ವರ್ಷ. ಹದಿನೇಳು ವರ್ಷದ ಕುಂಜಮ್ ಮಲ್ಲಾ, ಹದಿನಾರು ವಯಸ್ಸಿನ ಕೊರ್ಸಾ ಬಿಚೆಮ್ ಅವರಂತಹ ಸಣ್ಣ ವಯಸ್ಸಿನವರೂ ಇದ್ದರು. ಇವರನ್ನು ’ಹಾರ್ಡ್ ಕೋರ್’ ನಕ್ಸಲೀಯರು ಎಂದು ಬಣ್ಣಿಸಲಾಗಿತ್ತು. ಅಂದಿನ ಕೇಂದ್ರ ಗೃಹಮಂತ್ರಿ ಪಿ.ಚಿದಂಬರಂ ಅವರಂತೂ ಮೂವರು ಬಹುಮುಖ್ಯ ನಕ್ಸಲೀಯ ನಾಯಕರನ್ನು ಕೊಲ್ಲಲಾಯಿತು ಎಂದು ಎದೆ ಉಬ್ಬಿಸಿದ್ದರು. ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಮತ್ತು ಕೇಂದ್ರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಈ ಎನ್ಕೌಂಟರನ್ನು ಬಹುದೊಡ್ಡ ಮಾವೋವಾದಿ ಎನ್ಕೌಂಟರ್ ಎಂದು ಬಣ್ಣಿಸಿದ್ದವು. ವರದಿ ಬಂದ ನಂತರ ಚಿದಂಬರಂ ಅವರು ಕ್ಷಮಾಪಣೆ ಕೇಳಬೇಕಾಯಿತು.

ಬಂಡುಕೋರರನ್ನು ಹತ್ತಿಕ್ಕುವ ಯಶಸ್ವೀ ಕಾರ್ಯಾಚರಣೆ ಎಂದು ಈ ನರಮೇಧವನ್ನು ಸರ್ಕಾರ ಬಣ್ಣಿಸಿತ್ತು. ಮುಖ್ಯವಾಹಿನಿಯ ಸಮೂಹ ಮಾಧ್ಯಮಗಳು ಈ ಸುಳ್ಳನ್ನು ಧ್ವನಿವರ್ಧಕ ಹಿಡಿದು ಕೂಗಿ ಹೇಳಿದ್ದವು. ಆದರೆ ಹತ್ಯೆಗೀಡಾದವರು ಅಮಾಯಕ ಗ್ರಾಮಸ್ಥರಷ್ಟೇ ಎಂಬ ಅಂಶವಷ್ಟೇ ಅಲ್ಲ, ಈ ಎನ್ಕೌಂಟರ್ ನಡೆದ ಸ್ಥಳದ ಸುತ್ತಮುತ್ತ ಎಲ್ಲಿಯೂ ಮಾವೋವಾದಿಗಳು ಇದ್ದ ಕುರಿತು ಯಾವ ಸಾಕ್ಷ್ಯವೂ ಸಿಕ್ಕಿಲ್ಲ. ಎನ್ಕೌಂಟರ್ ನಡೆದ ನಂತರ ಈ ನಿರಪರಾಧಿ ಗ್ರಾಮಸ್ಥರ ನರಮೇಧವನ್ನು ಸಮರ್ಥಿಸಲು ಸುಳ್ಳಿನ ಜಾಲವನ್ನೇ ಹೆಣೆಯಲಾಯಿತು ಎಂದು ವರದಿ ಹೇಳಿತ್ತು.

ಎಡಪಂಥೀಯ ಉಗ್ರವಾದದ ನೆಲೆಯೆಂದು ಹೆಸರಾಗಿದ್ದ ಬಿಜಾಪುರದ ಸರ್ಕೇಗುಡ ಅದೇ ಕಾರಣಕ್ಕಾಗಿ ಕೆಂಡದ ಹೊಂಡದ ಮೇಲೆ ಜೀವಿಸಿದ ಗ್ರಾಮ. ಆದಿವಾಸಿಗಳಿಂದಲೇ ಆದಿವಾಸಿಗಳನ್ನು ಬೇಟೆಯಾಡಲು ಛತ್ತೀಸಗಢ ಸರ್ಕಾರ ಕಟ್ಟಿದ ಖಾಸಗಿ ಆದಿವಾಸಿ ಸೇನೆ ಸಲ್ವಾ ಜುದುಮ್ ಈ ಗ್ರಾಮವನ್ನು 2005ರಲ್ಲಿ ಸುಟ್ಟು ಹಾಕಿತ್ತು. 2009ರಲ್ಲಿ ಗ್ರಾಮಸ್ಥರ ಈ ಹಳ್ಳಿಗೆ ವಾಪಸು ಬರಲು ಆರಂಭಿಸಿದ್ದರು. ಬೂದಿಯಾಗಿದ್ದ ತಮ್ಮ ಬದುಕುಗಳನ್ನು ಪುನಃ ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದರು. ನರಮೇಧ ನಡೆದ ರಾತ್ರಿ ನಡೆದ ಗ್ರಾಮಸ್ಥರ ಸಭೆಯಲ್ಲಿ ಬೀಜ ಪಂಡುಮ್ ಉತ್ಸವ ಆಚರಣೆಯ ಜೊತೆಗೆ ಜಾನುವಾರು ಇಲ್ಲದ ಕುಟುಂಬಗಳು ಮತ್ತು ಏಕಮಹಿಳೆಯ ಕುಟುಂಬಗಳಿಗೆ ನೆರವಾಗುವ ಬಗೆ ಎಂತು ಎಂದು ಚರ್ಚಿಸಲಾಗುತ್ತಿತ್ತು. ಆದಿವಾಸಿ ರೂಢಿ ರಿವಾಜುಗಳ ಪ್ರಕಾರ ಉತ್ಸವದ ಸಿದ್ಧತೆಗಳು ರಾತ್ರಿ ನಡೆಯುತ್ತವೆ. ಮರುದಿನ ಮುಂಜಾನೆ ಉತ್ಸವ ಆರಂಭವಾಗುತ್ತದೆ.

ನ್ಯಾಯಾಂಗ ವರದಿ ಬಂದನಂತರ ಈ ನರಮೇಧಕ್ಕೆ ಕಾರಣರಾದವರ ವಿರುದ್ಧ ಅತ್ಯಂತ ಬಿಗಿ ಕ್ರಮವನ್ನು ಜರುಗಿಸಲಾಗುವುದು ಎಂದು ಛತ್ತೀಸಗಢದ ಹಾಲಿ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಸಾರಿದ್ದುಂಟು. ಆದರೆ ಎರಡು ವರ್ಷ ಉರುಳಿದರೂ ಹಂತಕರ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿಲ್ಲ. ಸರ್ಕೇಗುಡದಲ್ಲಿ ಒಂಬತ್ತು ವರ್ಷಗಳ ಹಿಂದೆ ಜರುಗಿದ ಸರ್ಕಾರಿ ನರಮೇಧದಲ್ಲಿ ಹತರಾದ 17 ಮಂದಿಗೆ ಶ್ರದ್ಧಾಂಜಲಿ ಮೇಳವನ್ನು ಮೊನ್ನೆ ನಡೆಸಲಾಯಿತು. ಸಾವಿರಾರು ಆದಿವಾಸಿಗಳು ಸೇರಿದ್ದರು. ಭಾರೀ ಸಂಖ್ಯೆಯ ಅರೆಸೇನಾ ಪಡೆಗಳು ಈ ಮೇಳವನ್ನು ಸುತ್ತುವರೆದು ನಿಗಾ ಇಟ್ಟಿದ್ದವು.

ಬಿಗಿ ಕ್ರಮ ಕೈಗೊಳ್ಳುವ ಬಾಘೇಲ್ ಸರ್ಕಾರ ತುಟಿ ಹೊಲಿದುಕೊಂಡಿದೆ. ಈ ದೇಶದಲ್ಲಿ ದಲಿತರು ಆದಿವಾಸಿಗಳು ಅಲ್ಪಸಂಖ್ಯಾತರು ಮಲತಾಯಿ ಮಕ್ಕಳು.


ಇದನ್ನೂ ಓದಿ: ಬಹುಜನ ಭಾರತ: ಪಾರುಲ್ ಖಕ್ಕಡ್ ಎಂಬ ಗೃಹಿಣಿ ಬರೆದ ರಾಜಕೀಯ ಕವಿತೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...