ಛತ್ತೀಸ್‌ಗಡದ ಕಾಂಗ್ರೆಸ್ ಸರ್ಕಾರವು ‘ಗೋಧನ್ ನ್ಯಾಯ’ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೊಜನೆಯ ಅಡಿಯಲ್ಲಿ ಸಾವಯವ ಗೊಬ್ಬರ ತಯಾರಿಸಲು ರಾಜ್ಯವು ಜಾನುವಾರು ಮಾಲೀಕರಿಂದ ಗೋವಿನ ತ್ಯಾಜ್ಯವನ್ನು ಖರೀದಿಸುತ್ತಿದೆ.
ಪಕ್ಷದ ಸೈದ್ಧಾಂತಿಕ ಮಾತೃಸಂಘಟನೆ ಆರ್‌ಎಸ್‌ಎಸ್ ಈ ಯೋಜನೆಯನ್ನು ಸ್ವಾಗತಿಸಿದೆ. ಆದರೆ ಕೆಲವು ಬಿಜೆಪಿ ನಾಯಕರು ಅಪಹಾಸ್ಯ ಮಾಡಿದ್ದಾರೆ.
ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ತಮ್ಮ ಅಧಿಕೃತ ನಿವಾಸದಲ್ಲಿ ಜಾನುವಾರು ಮಾಲೀಕರಿಂದ ಗೋವಿನ ಸಗಣಿಯನ್ನು ಸಾಂಕೇತಿಕವಾಗಿ ಸಂಗ್ರಹಿಸುವ ಮೂಲಕ ಯೋಜನೆಯನ್ನು ಉದ್ಘಾಟಿಸಿದ್ದಾರೆ.
ವರ್ಮಿಕಾಂಪೋಸ್ಟ್ ಉತ್ಪಾದಿಸಲು ಡೈರಿ ರೈತರಿಂದ ದನಗಳ ತ್ಯಾಜ್ಯವನ್ನು ಪ್ರತಿ ಕೆ.ಜಿ.ಗೆ ₹ 2 ರಂತೆ ಸಂಗ್ರಹಿಸುವ ಯೋಜನೆ ಇದಾಗಿದೆ. ನಂತರ ಸರ್ಕಾರ ತಯಾರು ಮಾಡುವ ಸಾವಯವ ಗೊಬ್ಬರವನ್ನು ರೈತರಿಗೆ ಕೆಜಿಗೆ ₹ 8 ರಂತೆ ಮಾರಾಟ ಮಾಡಲಾಗುತ್ತದೆ. ರೈತರು ಮತ್ತು ಜಾನುವಾರು ಮಾಲೀಕರ ಮನೆ ಬಾಗಿಲಿಗೆ ಹೋಗಿ ಸೆಗಣಿ ಸಂಗ್ರಹ ಮಾಡಲಾಗುವುದು ಮತ್ತು ಯೋಜನೆಯ ವಿವರಗಳ ಪ್ರಕಾರ ಖರೀದಿಯ 15 ದಿನಗಳಲ್ಲಿ ಪಾವತಿಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
2018ರಲ್ಲಿ ಅಧಿಕಾರ ವಹಿಸಿಕೊಂಡ ಬಾಗೆಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೇಸರಿ ಪಕ್ಷವನ್ನು ಎದುರಿಸಲು ಗೋವನ್ನು ತನ್ನ ರಾಜಕೀಯ ಲಾಭಕ್ಕೆ ಬಳಸಿ ಅದರ ರಕ್ಷಣೆ ಮತ್ತು ಪ್ರಚಾರಕ್ಕಾಗಿ ಯೋಜನೆಗಳನ್ನು ಪ್ರಾರಂಭಿಸಿದೆ. ಇದು ಎಷ್ಟರಮಟ್ಟಿಗೆಂದರೆ ಬಿಜೆಪಿ ಈಗ ರಾಜ್ಯ ಸರ್ಕಾರದ ಹಸು-ಸಗಣಿ ಯೋಜನೆಯನ್ನು ಅಪಹಾಸ್ಯ ಮಾಡಿ ಟೀಕಿಸುತ್ತಿದೆ.
ಮಾಜಿ ಸಚಿವ ಮತ್ತು ಬಿಜೆಪಿಯ ಹಿರಿಯ ಮುಖಂಡ ಅಜಯ್ ಚಂದ್ರಕರ್ ಅವರು ರಾಜ್ಯ ಸರ್ಕಾರವು ಗೋವಿನ ಸಗಣಿಯನ್ನು ರಾಜ್ಯದ ಲಾಂಛನವನ್ನಾಗಿ ಮಾಡಬೇಕು ಎಂದು ವ್ಯಂಗ್ಯವಾಡುವ ಮೂಲಕ ಟೀಕಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ರಾಮನ್ ಸಿಂಗ್ ಈ ಯೋಜನೆಯನ್ನು “ಕಲಗಚ್ಚು” ಎಂದು ಕರೆದಿದ್ದಾರೆ. ರೈತರಿಂದ ಭತ್ತವನ್ನು ಖರೀದಿಸಲು ಸಾಧ್ಯವಾಗದ ಸರ್ಕಾರ ಈಗ ಅವರಿಂದ ಹಸುವಿನ ಸಗಣಿ ಖರೀದಿಸುತ್ತಿದೆ ಎಂದು ಆರೋಪಿಸಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘವು ಈ ಕ್ರಮವನ್ನು ಶ್ಲಾಘಿಸಿದೆ. ದರವನ್ನು ಪ್ರತಿ ಕೆಜಿಗೆ ₹ 1.5 ರಿಂದ ₹ 2 ಕ್ಕೆ ಹೆಚ್ಚಿಸಲು ಸರ್ಕಾರಕ್ಕೆ ಮನವಿ ಮಾಡಿತ್ತು. ಆರ್‌ಎಸ್‌ಎಸ್ ನಿಯೋಗವೊಂದು ಇತ್ತೀಚೆಗೆ ಮುಖ್ಯಮಂತ್ರಿಗೆ ಮೆಚ್ಚುಗೆಯ ಪತ್ರವನ್ನು ಹಸ್ತಾಂತರಿಸಿದ್ದು, ಅದಕ್ಕೆ ಸಂಘಟನೆಯ ಪ್ರಾದೇಶಿಕ ಸಂಚಾಲಕರಾದ ಬಿಸ್ರಾರಾಮ್ ಯಾದವ್ ಅವರು ಸಹಿ ಮಾಡಿದ್ದಾರೆ.
ಸರ್ಕಾರವು ಈ ಹಿಂದೆ ಸೆಗಣಿಗೆ ಕನಿಷ್ಠ ಬೆಂಬಲ ದರವನ್ನು ಪ್ರತಿ ಕೆಜಿಗೆ ₹ 1.5 ಎಂದು ನಿಗದಿಪಡಿಸಲು ನಿರ್ಧರಿಸಿತ್ತು, ಆದರೆ ಆರ್‌ಎಸ್‌ಎಸ್ ಸದಸ್ಯರ ಕೋರಿಕೆಯ ಮೇರೆಗೆ ಬೆಲೆಯನ್ನು 50 ಪೈಸೆ ಹೆಚ್ಚಿಸಲಾಗಿದೆ ಎಂದು ಸರ್ಕಾರದ ಮೂಲವೊಂದು ತಿಳಿಸಿದೆ.
ಒಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರದ ಈ ಯೋಜನೆ ಗೋರಾಜಕೀಯ ಮಾಡುತ್ತಿದ್ದ ಬಿಜೆಪಿ ದೊಡ್ಡ ತಲೆನೋವಾಗಿದೆ. ಅದನ್ನು ಬೆಂಬಲಿಸಲು ಆಗದೇ, ವಿರೋಧಿಸಲು ಆಗದೇ ಒದ್ದಾಡುತ್ತಿದೆ.


