ಛತ್ತೀಸ್ಗಢದ ದುರ್ಗ ಜಿಲ್ಲೆಯಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ ವ್ಯಕ್ತಿಯೊಬ್ಬ ಅತ್ಯಾಚಾರ ಮಾಡಿ, ನಂತರ ಮಗು ಜೀವಂತ ಇರುವಾಗಲೇ ಗೋಣಿಚೀಲದಲ್ಲಿ ಹಾಕಿ ಬಾವಿಯ ಬಳಿ ಎಸೆದಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಉತೈ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಶಾಲೆಯಿಂದ ಮನೆಗೆ ಹಿಂದಿರುಗಿದ ನಂತರ ಸಂತ್ರಸ್ತ ಬಾಲಕಿ ಚಾಕೊಲೇಟ್ ಖರೀದಿಸಲು ಹತ್ತಿರದ ಅಂಗಡಿಗೆ ಹೋಗಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂಗಡಿಯಲ್ಲಿದ್ದ ಆರೋಪಿ ಧನೇಶ್ವರ ಸಾಹು (35) ಮಗುವಿಗೆ ಚಾಕೊಲೇಟ್ ನೀಡುವ ನೆಪದಲ್ಲಿ ತನ್ನ ಮನೆಗೆ ಕರೆದೊಯ್ದಿದ್ದಾನೆ ಎಂದು ಅವರು ಹೇಳಿದ್ದಾರೆ.
“ಹುಡುಗಿ ಬಹಳ ಸಮಯವಾದರೂ ಮನೆಗೆ ಹಿಂತಿರುಗದಿದ್ದಾಗ, ಆಕೆಯ ಕುಟುಂಬ ಸದಸ್ಯರು ಮತ್ತು ಸ್ಥಳೀಯ ಗ್ರಾಮಸ್ಥರು ಹುಡುಕಾಟ ನಡೆಸಿದ್ದಾರೆ. ಎರಡು ಗಂಟೆಗಳ ಕಾಲ ಪ್ರಯತ್ನದ ನಂತರ, ಗ್ರಾಮದ ಇಬ್ಬರು ಯುವಕರು ಬಾವಿಯ ಬಳಿ ಚೀಲದೊಳಗೆ ಚಲನೆಯನ್ನು ಗಮನಿಸಿದ್ದು, ಚೀಲವನ್ನು ತೆರೆದಾಗ, ಅಪ್ರಾಪ್ತ ವಯಸ್ಕ ಬಾಲಕಿ ಒಳಗೆ ದಿಂಬಿನ ಹೊದಿಕೆಯಿಂದ ಬಾಯಿ ಮುಚ್ಚಿರುವುದು ಕಂಡುಬಂದಿದೆ. ಅವಳು ಆಘಾತದ ಸ್ಥಿತಿಯಲ್ಲಿದ್ದಳು” ಎಂದು ಅವರು ಹೇಳಿದ್ದಾರೆ.
ಬಾಲಕಿಯ ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ದೃಢಪಟ್ಟಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪಠಾಣ್ ಪ್ರದೇಶದ ಉಪವಿಭಾಗೀಯ ಪೊಲೀಸ್ ಅಧಿಕಾರಿ (SDOP) ಅನೂಪ್ ಲಕ್ರಾ ತಿಳಿಸಿದ್ದಾರೆ.
ಮಗುವಿನ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಅವರು ಹೇಳಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ತಂಡವು ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ ಎಂದು ಅನೂಪ್ ಲಕ್ರಾ ಮಾಹಿತಿ ನೀಡಿದ್ದಾರೆ.
ಈ ಘಟನೆಯಿಂದ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಆರೋಪಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿ ಕೋಪಗೊಂಡ ಗ್ರಾಮಸ್ಥರು ಸ್ಥಳೀಯ ಪೊಲೀಸ್ ಠಾಣೆಯನ್ನು ಸುತ್ತುವರೆದು ಪ್ರತಿಭಟಿಸಿದ್ದಾರೆ.
ಪೊಲೀಸರು ಅವರನ್ನು ಸಮಾಧಾನಪಡಿಸಿದ ನಂತರ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು ಎಂದು ಅಧಿಕಾರಿ ತಿಳಿಸಿದ್ದು, ಈ ವಿಷಯದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಲಕ್ರಾ ಹೇಳಿದ್ದಾರೆ.


