ಲಾಕ್ ಡೌನ್ ವಿಸ್ತರಣೆಯ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದು, ಲಾಕ್ ಡೌನ್ ವಿಸ್ತರಣೆ ಮಾಡುವಂತೆ ಹೆಚ್ಚಿನ ನಾಯಕರು ಒತ್ತಾಯಿಸಿದ್ದಾರೆ.
ಕರ್ನಾಟಕದಲ್ಲಿಯೂ ಸಹ ಮುಂದಿನ 15 ದಿನಗಳು ಲಾಕ್‌ಡೌನ್ ಮುಂದುವರೆಯಲಿದ್ದು, ಸರ್ಕಾರಿ ಕಛೇರಿಗಳು ಭಾಗಶಃ ಕೆಲಸ ಮಾಡಲಿವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ತಿಳಿಸಿದ್ದಾರೆ.
ದೇಶದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಏರುತ್ತಿರುವುದರಿಂದ ಏಪ್ರಿಲ್ 14 ರ ನಂತರವೂ ರಾಷ್ಟ್ರವ್ಯಾಪಿ ಲಾಕ್‌ಡೌನ್ ವಿಸ್ತರಿಸುವ ಸಾಧ್ಯತೆಯಿದ್ದು ಇದರ ಕುರಿತು ಒಂದೆರೆಡದು ದಿನಗಳಲ್ಲಿ ಕೇಂದ್ರ ಸರ್ಕಾರವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 1,035 ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತಯಾಗಿದ್ದು ಹಾಗೂ 40 ಸಾವುಗಳು ಸಂಭವಿಸಿವೆ. ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಸೋಂಕಿತ ಜನರ ಸಂಖ್ಯೆ ಇಂದಿಗೆ 7,447 ಕ್ಕೆ ಏರಿದೆ.
ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕರೋನವೈರಸ್ ಬಿಕ್ಕಟ್ಟನ್ನು ನಿಭಾಯಿಸಲು ರಾಷ್ಟ್ರವ್ಯಾಪಿ ಕೊರೊನಾ ಲಾಕ್‌ಡೌನ್ ಅನ್ನು ಕನಿಷ್ಠ ಇನ್ನೂ ಹದಿನೈದು ದಿನಗಳವರೆಗೆ ವಿಸ್ತರಿಸುವಂತೆ ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಿದರು.
“ಯಾವಾಗ ಬೇಕಾದರೂ ಯಾವುದೇ ಮುಖ್ಯಮಂತ್ರಿಗಳು ನನ್ನೊಂದಿಗೆ ಮಾತನಾಡಬಹುದು ಹಾಗೂ ಸಲಹೆಗಳನ್ನು ನೀಡಬಹುದು, ನಾನು 24×7 ಲಭ್ಯವಿದ್ದೇನೆ. ನಾವು ಹೆಗಲಿಗೆ ಹೆಗಲು ಕೊಟ್ಟು ಒಟ್ಟಾಗಿ ನಿಲ್ಲಬೇಕು” ಎಂದು ಪ್ರಧಾನಿ ಹೇಳಿದ್ದಾರೆ.
ಮಹಾರಾಷ್ಟ್ರವು ಮುಖ್ಯವಾಗಿ ಮುಂಬೈಯಲ್ಲಿ 92 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. ರಾಜ್ಯ ಆರೋಗ್ಯ ಇಲಾಖೆಯ ಪ್ರಕಾರ ಮಹರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1660 ಕ್ಕೆ ಏರಿದೆ. ಆರೋಗ್ಯ ಸಚಿವಾಲಯದ ಪ್ರಕಾರ, ಮಹಾರಾಷ್ಟ್ರದಲ್ಲಿ ಒಟ್ಟು 1,872 ಕೊರೊನಾ ವೈರಸ್ ಪ್ರಕರಣಗಳಿವೆ, ಅದರಲ್ಲಿ 1,574 ಸಕ್ರಿಯ ಪ್ರಕರಣಗಳಾಗಿದ್ದು, 188 ಜನರು ಚೇತರಿಸಿಕೊಂಡಿದ್ದಾರೆ ಹಾಗೂ 110 ರೋಗಿಗಳು ಸಾವನ್ನಪ್ಪಿದ್ದಾರೆ.
ಕೇರಳದಲ್ಲಿ ಮೂರನೇ ಕೊರೊನಾ ವೈರಸ್ ಸಾವು ಇಂದು ವರದಿಯಾದೆ. ಮಹಾರಾಷ್ಟ್ರದ ನಂತರ, ಮಧ್ಯಪ್ರದೇಶವು 33 ಸಾವುನೋವುಗಳೊಂದಿಗೆ ಅತ್ಯಂತ ಕೆಟ್ಟ ಕೊರೊನಾ ವೈರಸ್ ಸಾವಿನ ಪ್ರಮಾಣವನ್ನು ದಾಖಲಿಸಿದೆ. ಪಶ್ಚಿಮ ಬಂಗಾಳ ಸರ್ಕಾರವು ಕೋಲ್ಕತ್ತಾದ ಕೆಲವು ಭಾಗಗಳನ್ನು ಒಳಗೊಂಡಂತೆ 10 ಕೊರೊನಾ ಹಾಟ್‌ಸ್ಪಾಟ್‌ಗಳಲ್ಲಿ ಸಂಪೂರ್ಣ ಲಾಕ್‌ಡೌನ್ ವಿಧಿಸಲು ನಿರ್ಧರಿಸಿದೆ.


