Homeಮುಖಪುಟವಿಶ್ವದ ದಿಕ್ಕು ಬದಲಿಸಿದ ಮಹಾನ್ ನಾಯಕರ ಕೆಲವು ಭಾಷಣಗಳ ತುಣುಕುಗಳು

ವಿಶ್ವದ ದಿಕ್ಕು ಬದಲಿಸಿದ ಮಹಾನ್ ನಾಯಕರ ಕೆಲವು ಭಾಷಣಗಳ ತುಣುಕುಗಳು

ನಮ್ಮ ಪ್ರಧಾನಿ ಮೋದಿ ಅವರು ಸಹ ಕೆನಡಿವಾದಿಗಳು ಅಂತ ಕಾಣತದ. ನಾಲ್ಕು ಸಲೆ ಭಾಷಣ ಮಾಡಿದರೂ ಸಹಿತ ನೀವು ಹಿಂಗ ಮಾಡ್ರಿ, ನೀವು ಹಂಗ ಮಾಡಬ್ಯಾಡ್ರಿ ಅಂತ ಹೇಳಿದರು ಹೊರತು, ನಾವು ಏನು ಮಾಡಬೇಕು, ಏನು ಮಾಡಲಿಕ್ಕೆ ಹತ್ತೇವಿ ಅನ್ನೋದನ್ನ ಹೇಳಲಿಲ್ಲ.

- Advertisement -
- Advertisement -

“ಜನರಿಂದ, ಜನರಿಗಾಗಿ ನಡೆಯುವ ಜನರ ಸರಕಾರವನ್ನು ಈ ವಿಶ್ವದಿಂದ ಅಳಿಸಲು ಯಾರಿಗೂ ಸಾಧ್ಯವಿಲ್ಲ,ʼʼ ಈ ಮಾತು ಯಾರಿಗೆ ನನಪಿಲ್ಲ? ಪ್ರಾಥಮಿಕ ಸಾಲಿಯೊಳಗಿನ ಪ್ರಜಾಪ್ರಭುತ್ವದ ಪಾಠ ಕಲಿಯುವಾಗ ನಮಗೆಲ್ಲಾರಿಗೂ ಕೇಳಿಸಿದ ಮೊದಲನೇ ವ್ಯಾಖ್ಯಾನ ಇದು.

ಇದು ಅಮೇರಿಕಾ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರು ಗೆಟಿಸಬರ್ಗ್ ಎಂಬ ನಗರದಾಗ 1863ರೊಳಗ ಹುತಾತ್ಮ ಸೈನಿಕರ ಸ್ಮಾರಕ ಉದ್ಘಾಟಿಸುವಾಗ ಮಾಡಿದ ಭಾಷಣದ ಕೊನೆಯ ಸಾಲು.

ಕೇವಲ 275 ಶಬ್ದಗಳ, 3-4 ನಿಮಿಷದ ಈ ಭಾಷಣ ವಿಶ್ವದ ಇತಿಹಾಸದಲ್ಲಿ ದಾಖಲಾಗೇದ. ಅದು ಗುಲಾಮಗಿರಿಯನ್ನು ನಿರ್ಮೂಲನೆ ಮಾಡೋ ಲಿಂಕನ್ ಅವರ ನಿಲುವನ್ನು ಗಟ್ಟಿಯಾಗಿಸಿತು ಮತ್ತು ಪ್ರಜಾಪ್ರಭುತ್ವದ ಬಗ್ಗೆ ಕಲಿಯುವ ಜಗತ್ತಿನ ನೂರಾರು ದೇಶಗಳ ಕೋಟ್ಯಾಂತರ ವಿದ್ಯಾರ್ಥಿಗಳಿಗೆ ಪಾಠವಾಯಿತು.

ಮಹಾಮಹಿಮ ಪಂತ ಪ್ರಧಾನರು ಇಲ್ಲಿವರೆಗೆ ಕೊರೊನಾದ ಬಗ್ಗೆ ನಾಲ್ಕು ಭಾಷಣ ಮಾಡ್ಯಾರ. ಅದರಾಗ ಮೂರು ಠೀವಿದಾಗ ಬಂದಾವು, ಒಂದು ರೇಡಿಯೋದಾಗ ಬಂದೇತಿ. ಅವು ಭಾರತದ ದಿಕ್ಕು ಬದಲಿಸಿದ ಭಾಷಣಗಳು ಅಂತ ಹೇಳಿ ಅವರ ಬೆಂಬಲಿಗರ ಅಂಬೋಣ.

ಹಂಗಾರ ಈ ಸಲಾ ವಿಶ್ವದ ದಿಕ್ಕು ಬದಲಿಸಿದ ಮಹಾನ್ ನಾಯಕರ ಕೆಲವು ಭಾಷಣಗಳನ್ನು ಪುನರ್ ಮನನ ಮಾಡೋಣ.

“ಅಮೇರಿಕಾದ ನನ್ನ ಸಹೋದರ -ಸಹೋದರಿಯರೇ” ಅಂತ ಶುರುವಾಗೋ ಭಾಷಣ ಮಾಡಿದ್ದು ಯಾರು ಅಂತ ಕೇಳಿದರ ಎಲ್ಲಾರು ಕೈ ಎತ್ತುತಾರ. ಸ್ವಾಮಿ ವಿವೇಕಾನಂದ ಅವರು ಷಿಕಾಗೋದಾಗ ಮಾಡಿದ ಐದು ದಿನಗಳ ಭಾಷಣ ಸರಣಿಯೊಳಗ ಇದು ಎಲ್ಲಾರಿಗಿಂತ ಜನಪ್ರಿಯ ಭಾಷಣ. ಇದು ವಿಶ್ವಕ್ಕ ಭಾರತೀಯ ಸಂಸ್ಕೃತಿಯನ್ನ, ಹಿಂದೂ ಧರ್ಮವನ್ನು ಪರಿಚಯಿಸಿತು. ಭಾರತದ ಗೌರವವನ್ನು ಅಂತರಾಷ್ಟ್ರೀಯ ಮಟ್ಟದಾಗ ಎತ್ತಿ ಹಿಡೀತುʼʼ ಅನ್ನೋದು ಸರ್ವಾಭಿಪ್ರಾಯ. ಜೀವನ ಪೂರ್ತಿ ಜನಪರ ಕೆಲಸ ಮಾಡಿದ ಸ್ವಾಮಿ ವಿವೇಕಾನಂದರನ್ನು ಈ ಭಾಷಣ ಒಂದರಿಂದನ ಬಲ್ಲವರು ಭಾಳ ಇದ್ದಾರ.

ಜವಾಹರಲಾಲ ನೆಹರೂ ಅವರು ಸ್ವಾತಂತ್ರದ ರಾತ್ರಿ ಮಾಡಿದ ʻʻನಿಯತಿಯೊಂದಿಗೆ ನಮ್ಮ ಮಿಲನದ ಒಪ್ಪಂದʼʼದ ಭಾಷಣ ಜನಪ್ರಿಯವಾಗಿದೆ. ಅದಕ್ಕಿಂತ ಮುಖ್ಯವಾದ ಅವರ ಭಾಷಣವೊಂದಿದೆ. ಉತ್ತರ ಪ್ರದೇಶ ಹಳ್ಳಿಯ ಮಾರ್ಗವಾಗಿ ಮಧ್ಯರಾತ್ರಿ ಪ್ರಯಾಣ ಬೆಳೆಸಿದ್ದ ನೆಹರೂ ಅವರನ್ನು ಅಲ್ಲಿಯ ಜನ ʻಪ್ರಧಾನ ಮಂತ್ರಿಯನ್ನು ನೋಡುವುದಕ್ಕಾಗಿʼ ಅವರ ಕಾರನ್ನು ನಿಲ್ಲಿಸುತ್ತಾರ. ಆಗ ಹೊರ ಬಂದ ನೆಹರೂ ಅವರಿಗೆ ಒಂದು ಪ್ರಶ್ನೆ ಕೇಳುತ್ತಾರೆ. ʻʻನೀವೆಲ್ಲಾ ʻಜೈ ಹಿಂದʼ ಅಂತ ಘೋಷಣೆ ಕೂಗುತ್ತಾ ಇದ್ದೀರಲ್ಲಾ, ಹಾಗಂದರೇನು?ʼʼ ಅವರು ಇದು ʻʻಈ ದೇಶಕ್ಕ, ನಿಮಗೆ, ನಿಮ್ಮ ಸರಕಾರಕ್ಕೆ ಜೈಕಾರ ಅಂತ ಹೇಳಿದಾಗ, ʻʻಅಲ್ಲ, ಇದು ನಿಮಗೆ ನೀವೆ ಜೈಕಾರ ಹಾಕಿಕೊಂಡಂತೆ. ಇದನ್ನು ನೀವು ಚನ್ನಾಗಿ ಅರಿತುಕೊಳ್ಳಿʼʼ ಅಂತ ಹೇಳತಾರ.

ಅಮೇರಿಕಾದ ಸ್ವಾತಂತ್ರ‍್ಯ ಹೋರಾಟಗಾರರು ಹಾಗೂ ಸಂಸ್ಥಾಪಕ ನಾಯಕರಲ್ಲಿ ಒಬ್ಬನಾದ ಪ್ಯಾಟ್ರಿಕ್ ಹೆನ್ರಿ ಅವರು ಭಾಷಣದಲ್ಲಿ ಹೇಳಿದ ʻʻನನಗೆ ಸ್ವಾತಂತ್ರ‍್ಯ ಕೊಡಿ ಅಥವಾ ಮರಣವನ್ನು ನೀಡಿʼʼ ಅನ್ನುವ ಮಾತು ಇಂಗ್ಲಂಡಿನ ವಸಾಹತುಶಾಹಿ ನೀತಿಯ ವಿರುದ್ಧ ಹೋರಾಟದಲ್ಲಿ ಮೈಲಿಗಲ್ಲಾಗಿ ಪರಿಗಣಿಸಿತು. ಇದೇ ಧಾಟಿಯ ಮಾಡು ಇಲ್ಲವೇ ಮಡಿ ಅನ್ನುವ ಮಹಾತ್ಮಾ ಗಾಂಧಿಯವರ ಭಾರತ ಬಿಟ್ಟು ತೊಲಗಿ ಭಾಷಣ ಬ್ರಿಟಿಷರ ವಿರುದ್ಧ ʻಯುದ್ಧಘೋಷʼವಾಗಿ ಪರಿಗಣಿಸಿತು.

ಬಾಲಗಂಗಾಧರ ತಿಲಕರ ʻʻಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆʼʼ ಎನ್ನುವ ಮಾತು ಅವರನ್ನು ಅಮರರಾಗಿಸಿತು.

ದುಂಡು ಮೇಜಿನ ಪರಿಷತ್ತಿನ ಸಭೆಯೊಳಗ ಡಾ. ಅಂಬೇಡ್ಕರ್ ‘ಸಾಮಾಜಿಕ -ಆರ್ಥಿಕ ಸ್ವಾತಂತ್ರ‍್ಯವಿಲ್ಲದ ರಾಜಕೀಯ ಸ್ವಾತಂತ್ರ‍್ಯ ಅರ್ಥಹೀನ’ ಅಂತ ಹೇಳಿದ್ದು, ಪಂಜಾಬಿನ ಜಾತ ಪಾತ ತೋಡಕ ಮಂಡಲದಲ್ಲಿ ಮಾಡಿದ ಜಾತಿ ವಿನಾಶ ಭಾಷಣಗಳು ಐತಿಹಾಸಿಕ. ಅವರ ವಿರೋಧಿಗಳು ಸಹ ಉಲ್ಲೇಖಿಸುವ ʻʻಸಕಲ ಸವಲತ್ತುಗಳನ್ನು ಪಡೆದು ಬೆಳೆದ ನನ್ನವರೇ ನನಗೆ ವಿಶ್ವಾಸದ್ರೋಹ ಮಾಡಿದರು. ಅವರು ತಮ್ಮ ದೌರ್ಭಾಗ್ಯಪೂರ್ಣ ಅಣ್ಣ-ತಮ್ಮಂದಿರ ಕಾಳಜಿ ಮಾಡುತ್ತಾರೆ ಎಂದುಕೊಂಡಿದ್ದೆ. ಆದರೆ ಅವರು ಹಾಗೆ ಮಾಡಲಿಲ್ಲ. ಅವರು ತಮ್ಮ ಗಳಿಕೆಯ ಶೇಕಡಾ ಐದರಷ್ಟಾನದರೂ ಸಮಾಜದ ಕಲ್ಯಾಣಕ್ಕೆ ಬಳಸಬೇಕುʼʼ ಅನ್ನುವ 1956ರ ಹಿಂದಿ ಭಾಷಣ ಸಹ ಗಮನಾರ್ಹ.

ಅಮೇರಿಕಾದ ವರ್ಣಬೇಧ ನೀತಿಯ ವಿರುದ್ಧ ಹೋರಾಡಿದ ಮಾರ್ಟಿನ್ ಲೂಥರ್ ಕಿಂಗ್ ಅವರ ʻನನಗೊಂದು ಕನಸಿದೆʼ ಭಾಷಣ ಜಗತ್ತಿನಾದ್ಯಂತ ಎಲ್ಲಿ ಶೋಷಣೆ ಕಂಡುಬಂದರೂ ಅದನ್ನು ವಿರೋಧಿಸುವವರಿಗೆ ಮಂತ್ರ ವಾಯಿತು.

ʻʻಸಮಾನತೆ ಹಾಗೂ ಸ್ವಾತಂತ್ರ‍್ಯ ನಮ್ಮ ಜೀವ ಉಳಿಸುವ ಮೌಲ್ಯಗಳು. ಇವುಗಳನ್ನು ಪಡೆಯಲು ನಾನು ನನ್ನ ಜೀವನದಾದ್ಯಂತ ಹೋರಾಡುತ್ತೇನೆ. ಅಗತ್ಯ ಬಿದ್ದರೆ ನನ್ನ ಪ್ರಾಣ ಕೊಡಲೂ ಸಹ ತಯಾರುʼʼ ಎಂದು ರಿವೋನಿಯಾದ ನ್ಯಾಯಾಲಯದಲ್ಲಿ ದಕ್ಷಿಣ ಆಫ್ರಿಕಾದ ನಾಯಕ ನೆಲ್ಸನ್ ಮಂಡೇಲಾ ಮಾಡಿದ ಭಾಷಣ ಇಡೀ ಆಫ್ರಿಕಾ ಖಂಡದಲ್ಲಿ ಮಾರ್ದನಿ ಗೈದಿತು.

ಅಮೇರಿಕಾದ ಕರಿಯರ ನಾಯಕ ಫ್ರೆಡರಿಕ್ ಡಗ್ಲಸ್ ಅವರು ʻʻನೀವು ನಮಗೆ ತೋರಿಸುತ್ತಿರುವ ಕರುಣೆ ಸುಳ್ಳು ಮತ್ತು ತೋರಿಕೆಯಿಂದ ಕೂಡಿದ್ದು. ಅದು ನಿನ್ನೆಯೂ ಸುಳ್ಳಾಗಿತ್ತು. ಇಂದೂ ಸುಳ್ಳಾಗಿದೆ, ನಾಳೆಯೂ ಸುಳ್ಳಾಗಿಯೇ ಇರಲಿದೆʼʼ ಅಂತ ರಸ್ತೆ ಬದಿಯಲ್ಲಿ ಮಾಡಿದ ಭಾಷಣ ಅನೇಕ ಬಿಳಿಯರ ಹೃದಯ ಪರಿವರ್ತನೆಗೆ ಕಾರಣವಾಯಿತು.

ಜರ್ಮನಿಯ ವಿರುದ್ಧ ಹೋರಾಡಲು ಕೇವಲ ಒಂದು ವಾರ ಸಮಯ ಇದ್ದಾಗ ಬ್ರಿಟಿಷ್ ಪ್ರಧಾನಿ ವಿನಸ್ಟನ್ ಚರ್ಚಿಲ್ ಅವರು ಮಾಡಿದ ‘ನಾವು ಸತ್ತರೂ ಗೆದ್ದು ಸಾಯುತ್ತೇವೆ, ಇದ್ದರೂ ಗೆಲ್ಲುತ್ತೇವೆ. ಸಮುದ್ರ ದಂಡೆಯಲ್ಲೂ ಹೋರಾಡುತ್ತೇವೆ, ರಸ್ತೆಯಲ್ಲಿಯೂ ಹೋರಾಡುತ್ತೇವೆ, ಆಕಾಶದಲ್ಲಿ, ಸಮುದ್ರದಲ್ಲಿಯೂ ಹೋರಾಡುತ್ತೇವೆ. ನಮಗೆ ಇರುವ ಗುರು ಗೆಲುವು ಒಂದೇ’ ಅಂತ ಮಾಡಿದ ರೇಡಿಯೋ ಭಾಷಣ, ಅಲ್ಲಿನ ಯುವಕರನ್ನು ರೊಚ್ಚಿಗೆಬ್ಬಿಸಿತು. ಅವರು ದೊಡ್ಡ ಸಂಖ್ಯೆಯಲ್ಲಿ ಸೈನ್ಯ ಸೇರಿದರು, ಜರ್ಮನಿಯನ್ನು ಸೋಲಿಸಿದರು.

ಅಮೇರಿಕಾದ ಮಾಜಿ ಅಧ್ಯಕ್ಷ ಜಾನ್ ಕೆನಡಿ ಅವರು ಯಾವ ಮುಹೂರ್ತದಲ್ಲಿ ನಿಮ್ಮ ದೇಶ ನಿಮಗೇನು ಮಾಡಿದೆ ಅಂತ ಕೇಳಬೇಡಿ. ನೀವು ನಿಮ್ಮ ದೇಶಕ್ಕೆ ಏನು ಮಾಡಿದ್ದೀರಿ ಅಂತ ಕೇಳಿ ಅಂತ ಹೇಳಿದರೋ ಗೊತ್ತಿಲ್ಲ. ಇವತ್ತಿನ ಅನೇಕ ನಾಯಕರು ಅದೇ ಧಾಟಿಯಲ್ಲಿ ಮಾತನಾಡಲಿಕ್ಕೆ ಹತ್ಯಾರ. ನಮ್ಮ ಪ್ರಧಾನಿ ಮೋದಿ ಅವರು ಸಹ ಕೆನಡಿವಾದಿಗಳು ಅಂತ ಕಾಣತದ. ನಾಲ್ಕು ಸಲೆ ಭಾಷಣ ಮಾಡಿದರೂ ಸಹಿತ ನೀವು ಹಿಂಗ ಮಾಡ್ರಿ, ನೀವು ಹಂಗ ಮಾಡಬ್ಯಾಡ್ರಿ ಅಂತ ಹೇಳಿದರು ಹೊರತು, ನಾವು ಏನು ಮಾಡಬೇಕು, ಏನು ಮಾಡಲಿಕ್ಕೆ ಹತ್ತೇವಿ ಅನ್ನೋದನ್ನ ಹೇಳಲಿಲ್ಲ.

ಅಮೇರಿಕಾ ಸ್ವಾತಂತ್ರ‍್ಯದ 300 ವರ್ಷದ ನಂತರ ಗೆದ್ದ ಕರಿಯ ಬರಾಕ್ ಒಬಾಮಾ ಅವರು ಮಾಡಿದ ಯಸ್ ವಿ ಕ್ಯಾನ್ ಭಾಷಣವನ್ನು ನೀವು ಮತ್ತ ಮತ್ತ ನೋಡಿದರ ಒಂದು ಮಜಾ ವಿಷಯ ತಿಳೀತದ. ಅವರು ನ್ಯೂಹೆಂಪಶಾಯರ್‌ನ ನೋಷುವಾದಲ್ಲಿ ಅವರ ಬೆಂಬಲಿಗರ ಮಧ್ಯ ಭಾಷಣ ಮಾಡತಾರ. ಬೆಂಬಲಿಗರ ʻʻಓಬಾಮಾ, ಓಬಾಮಾʼʼ ಅನ್ನುವ ಘೋಷಣೆಗಳ ನಡುವೆ ಆರಂಭವಾದ ಭಾಷಣ ಯಸ್ ವಿ ಕ್ಯಾನ್ ಅಂತ ಮುಕ್ತಾಯ ಆಗತದ.

ನಮ್ಮಲ್ಲೂ ಹಾಗಾಗಬಹುದೇ, ಮನೋಲ್ಲಾಸಿನಿ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...