ಚಿಕ್ಕಮಗಳೂರಿನ ವಕೀಲರು ಮತ್ತು ಜನಪರ ಹೋರಾಟಗಾರರಾಗಿದ್ದ ಹೂವಪ್ಪನವರು (50) ಇಂದು ನಿಧನರಾಗಿದ್ದಾರೆ. ಇಂದು ಮಂಗಳೂರಿಗೆ ಆಸ್ಪತ್ರೆಗೆ ಕೊಂಡ್ಯೊಯ್ಯುವ ವೇಳೆ ಕೊನೆಯುಸಿರೆಳೆದಿದ್ದಾರೆ.
ಹೂವಪ್ಪನವರು ಕೆಲ ದಿನಗಳ ಹಿಂದ ಕೋವಿಡ್ ಸೋಂಕಿಗೆ ತುತ್ತಾಗಿ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಯ ನಂತರ ಕೋವಿಡ್ ನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಆದರೆ ಕೋವಿಡ್ ನಂತರದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಹಾಗಾಗಿ ಇಂದು ಅವರನ್ನು ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯುವಾಗ ದಾರಿಯಲ್ಲಿ ನಿಧನರಾಗಿದ್ದಾರೆ.
ಕೂದುವಳ್ಳಿ ಗ್ರಾಮದವರಾದ ಹೂವಪ್ಪನವರು ದಲಿತ ಸಂಘರ್ಷ ಸಮಿತಿ, ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಜಾತಿ ವಿನಾಶ ವೇದಿಕೆ, ಕುದುರೆಮುಖ ಗಣಿಗಾರಿಕ ವಿರೋಧಿ ಹೋರಾಟ ಸೇರಿದಂತೆ ಹಲವಾರು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಹಲವಾರು ಭೂ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಹೂವಪ್ಪನವರು ಬಡಜನರ ಪರ ದನಿಯೆತ್ತುತ್ತಿದ್ದರು. ಅವರು ಪತ್ನಿ ಹಾಗೂ ಓರ್ವ ಪುತ್ರಿ ಸೇರಿದಂತೆ ಅಪಾರ ಸ್ನೇಹಿತರ ಬಳಗವನ್ನು ಅಗಲಿದ್ದಾರೆ. ಹೂವಪ್ಪ ಅವರ ನಿಧನಕ್ಕೆ ವಕೀಲರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಶ್ರದ್ಧಾಂಜಲಿ ಸಲ್ಲಿಸಿವೆ.
ಇದನ್ನೂ ಓದಿ: ದಲಿತರ ಮೇಲಿನ ದೌರ್ಜನ್ಯ, ಮಹಿಳೆಯರ ಮೇಲಿನ ಅತ್ಯಾಚಾರಗಳನ್ನು ತಡೆಗಟ್ಟಿ: ರಾಜ್ಯಾದ್ಯಂತ ಹಕ್ಕೊತ್ತಾಯ ಸಲ್ಲಿಕೆ


