ಜನವರಿ 8, 2025ರಂದು ಮುಖ್ಯವಾಹಿನಿಗೆ ಬಂದಿರುವ ಆರು ಮಂದಿ ನಕ್ಸಲರನ್ನು ಚಿಕ್ಕಮಗಳೂರು ಪೊಲೀಸರು ಗುರುವಾರ (ಜ.16) ತಮ್ಮ ವಶಕ್ಕೆ ಪಡೆದುಕೊಂಡು, ವಿಚಾರಣೆಗಾಗಿ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ.
ನಕ್ಸಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಮುಖ್ಯವಾಹಿನಿಗೆ ಬಂದ ಬಳಿಕ ಅವರನ್ನು ಪೊಲೀಸರು ಬೆಂಗಳೂರಿನ ಎನ್‌ಐಎ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ 6 ಮಂದಿಗೂ ಜನವರಿ 30ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈ ಹಿನ್ನೆಲೆ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದರು.
ಈ ನಡುವೆ ನಕ್ಸಲರನ್ನು ವಿಚಾರಣೆಗೆ ಒಳಪಡಿಸಲು ತಮ್ಮ ವಶಕ್ಕೆ ನೀಡುವಂತೆ ಚಿಕ್ಕಮಗಳೂರು ಪೊಲೀಸರು ಎನ್‌ಐಎ ನ್ಯಾಯಾಲಯವನ್ನು ಕೋರಿದ್ದರು. ಪೊಲೀಸರ ಮನವಿ ಪುರಸ್ಕರಿಸಿದ ನ್ಯಾಯಾಲಯ, ಆರು ಮಂದಿಯನ್ನು 6 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.
ಗುರುವಾರ ರಾತ್ರಿಯೇ ಆರು ಮಂದಿಯನ್ನು ಪೊಲೀಸರು ಚಿಕ್ಕಮಗಳೂರಿಗೆ ಕರೆದೊಯ್ದಿದ್ದಾರೆ. ಕೊಪ್ಪ ಡಿವೈಎಸ್‌ಪಿ ಬಾಲಾಜಿ ಸಿಂಗ್ ಮತ್ತು ಇನ್‌ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ವರದಿಯಾಗಿದೆ.
ಮುಖ್ಯವಾಹಿನಿಗೆ ಬಂದಿರುವ ಲತಾ ಮುಂಡಗಾರು, ವನಜಾಕ್ಷಿ ಬಾಳೆಹೊಳೆ, ಸುಂದರಿ ಕುತ್ಲೂರು, ಮಾರೆಪ್ಪ ಅರೋಲಿ, ಕೆ. ವಸಂತ (ತಮಿಳುನಾಡು) ಮತ್ತು ಟಿ.ಎನ್ ಜಿಷಾ (ಕೇರಳ) ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಲತಾ ಮುಂಡಗಾರು ವಿರುದ್ದ ಕರ್ನಾಟಕದಲ್ಲಿ 65 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 43 ಪ್ರಕರಣಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿವೆ. ವನಜಾಕ್ಷಿ ವಿರುದ್ದ ಒಟ್ಟು 25 ಪ್ರಕರಣಗಳಿದ್ದು, ಈ ಪೈಕಿ 19 ಚಿಕ್ಕಮಗಳೂರು ಜಿಲ್ಲೆಯಲ್ಲಿ ದಾಖಲಾಗಿವೆ. ಸುಂದರಿ ವಿರುದ್ದ 23 ಪ್ರಕರಣಗಳಿದ್ದು, 3 ಚಿಕ್ಕಮಗಳೂರಿನಲ್ಲಿದೆ. ಮಾರೆಪ್ಪ ಅರೋಪಿ ವಿರುದ್ದ ರಾಜ್ಯದಲ್ಲಿ 13 ಪ್ರಕರಣಗಳಿವೆ. ಈ ಪೈಕಿ ಚಿಕ್ಕಮಗಳೂರಿನಲ್ಲಿ 3 ದಾಖಲಾಗಿವೆ. ಕೇರಳದ ಜಿಷಾ ಮತ್ತು ತಮಿಳುನಾಡಿನ ವಸಂತ ವಿರುದ್ದ ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ 1 ಪ್ರಕರಣಗಳು ದಾಖಲಾಗಿವೆ. ನಕ್ಸಲರ ವಿರುದ್ದ ಬಹುತೇಕ ಪ್ರಕರಣಗಳು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಮತ್ತು ಶೃಂಗೇರಿ ಠಾಣೆಗಳಲ್ಲಿ ದಾಖಲಾಗಿವೆ.
‘ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ’ : ರಾಜ್ಯ ಕಾಂಗ್ರೆಸ್ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ತಾಕೀತು


