ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ‘ಕೋಲ್ಡ್ರಿಫ್ ಕೆಮ್ಮಿನ ಸಿರಪ್’ ಸೇವಿಸಿ ಕನಿಷ್ಠ ಹನ್ನೊಂದು ಮಕ್ಕಳು ಸಾವನ್ನಪ್ಪಿರುವ ಹಿನ್ನೆಲೆ, ಮೂರು ರಾಜ್ಯಗಳು ಅಂತಹ ಸಿರಪ್ ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸಿವೆ.
ಮೊದಲು ತಮಿಳುನಾಡಿನಲ್ಲಿ ಕೆಮ್ಮಿನ ಸಿರಪ್ ನಿಷೇಧಿಸಲಾಗಿತ್ತು. ನಂತರ ಮಧ್ಯಪ್ರದೇಶ ಮತ್ತು ಕೇರಳ ಕೂಡ ನಿಷೇಧ ಮಾಡಿವೆ.
ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ 1 ರಿಂದ 7 ವರ್ಷದೊಳಗಿನ ಕನಿಷ್ಠ 11 ಮಕ್ಕಳು ಸಾವನ್ನಪ್ಪಿದ್ದಾರೆ. ಕೆಮ್ಮಿನ ಸಿರಪ್‌ನಲ್ಲಿದ್ದ ವಿಷಕಾರಿ ಅಂಶವು ಇದಕ್ಕೆ ಕಾರಣವೆಂದು ಅಧಿಕಾರಿಗಳು ಹೇಳಿದ್ದಾರೆ.
ಸಿರಪ್ ಸೇವಿಸಿದ ಮಕ್ಕಳ ಸಾವು ವರದಿಯಾದ ನಂತರ, ಮಧ್ಯಪ್ರದೇಶ ಸರ್ಕಾರವು ಸಿರಪ್‌ನ ಸುರಕ್ಷತೆಯನ್ನು ಪರಿಶೀಲಿಸುವಂತೆ ತಮಿಳುನಾಡಿನ ಅಧಿಕಾರಿಗಳನ್ನು ಕೇಳಿತ್ತು.
ಅಕ್ಟೋಬರ್ 2ರಂದು, ತಮಿಳುನಾಡು ಔಷಧ ನಿಯಂತ್ರಣ ನಿರ್ದೇಶಕರು ನೀಡಿದ ವರದಿಯು, ರಾಜ್ಯದ ಕಾಂಚೀಪುರಂ ಜಿಲ್ಲೆಯ ಸ್ರೆಸನ್ ಫಾರ್ಮಾಸ್ಯುಟಿಕಲ್ಸ್ ಘಟಕದಲ್ಲಿ ತಯಾರಿಸಲಾದ ಕೋಲ್ಡ್ರಿಫ್ ಕೆಮ್ಮಿನ ಸಿರಪ್‌ನ ಮಾದರಿಗಳು ಪ್ರಮಾಣಿತ ಗುಣಮಟ್ಟ (Not of Standard Quality-NSQ)ಹೊಂದಿಲ್ಲ ಎಂದಿದೆ.
ಸ್ರೆಸನ್ ಫಾರ್ಮಾಸ್ಯುಟಿಕಲ್ಸ್ ಘಟಕದಲ್ಲಿ ತಯಾರಿಸಲಾದ ಕೋಲ್ಡ್ರಿಫ್ ಕೆಮ್ಮಿನ ಸಿರಪ್‌ನಲ್ಲಿ ಶೇಕಡ 48.6ರಷ್ಟು ಡೈಥಿಲೀನ್ ಗ್ಲೈಕೋಲ್ ಇದ್ದು, ಇದು ತೀವ್ರ ಮೂತ್ರಪಿಂಡ ಮತ್ತು ಯಕೃತ್ತಿನ ವೈಫಲ್ಯಕ್ಕೆ ಕಾರಣವಾಗಬಹುದು ಎಂದು ವರದಿ ಹೇಳಿದೆ.
2023ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಪರಿಶೀಲನೆಯಲ್ಲಿ ಭಾರತದಲ್ಲಿ ತಯಾರಿಸಲಾದ ಕೆಮ್ಮಿನ ಸಿರಪ್‌ಗಳಲ್ಲಿ ಡೈಥಿಲೀನ್ ಗ್ಲೈಕೋಲ್ ಇರುವುದು ಪತ್ತೆಯಾಗಿತ್ತು. ಗ್ಯಾಂಬಿಯಾದಲ್ಲಿ 70 ಮಕ್ಕಳ ಸಾವಿಗೆ ಇದುವೇ ಕಾರಣವೆಂದು ಹೇಳಲಾಗಿತ್ತು.
ಕೋಲ್ಡ್ರಿಫ್ ಕೆಮ್ಮಿನ ಸಿರಪ್‌ನಿಂದ ಮಕ್ಕಳ ಸಾವು ಸಂಭವಿಸಿದೆ ಎಂಬ ವರದಿಗಳ ಹಿನ್ನೆಲೆ, ತಮಿಳುನಾಡು ಸರ್ಕಾರ ಅಕ್ಟೋಬರ್ 1ರಿಂದ ಅದರ ಮಾರಾಟವನ್ನು ನಿಷೇಧಿಸಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಶನಿವಾರ (ಅ.4) ಮಧ್ಯಪ್ರದೇಶ ಸರ್ಕಾರ ಕೆಮ್ಮಿನ ಸಿರಪ್ ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸಿದೆ. ರಾಜ್ಯದಿಂದ ಸಿರಪ್‌ನ ಹೆಚ್ಚುವರಿ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಸರ್ಕಾರಿ ಪ್ರಯೋಗಾಲಯಗಳಿಗೆ ಕಳುಹಿಸಲು ಅಧಿಕಾರಿಗಳಿಗೆ ನಿರ್ದೇಶಿಸಿದೆ. ಮಾರುಕಟ್ಟೆಯಲ್ಲಿರುವ ಕೆಮ್ಮಿನ ಸಿರಪ್‌ಗಳನ್ನು ವಶಪಡಿಸಿಕೊಂಡು ಫ್ರೀಝ್ ಮಾಡಬೇಕು ಎಂದು ಸರ್ಕಾರ ಅಧಿಕಾರಿಗಳಿಗೆ ಸೂಚಿಸಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದಲ್ಲಿ ಕೆಮ್ಮಿನ ಸಿರಪ್ ಮಾರಾಟ ಮತ್ತು ವಿತರಣೆಯನ್ನು ಸರ್ಕಾರ ಸ್ಥಗಿತಗೊಳಿಸಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಶನಿವಾರ ತಿಳಿಸಿದ್ದಾರೆ. ವಿಷಕಾರಿ ಅಂಶ ಕಂಡು ಬಂದಿರುವ ಸಿರಪ್ ಕೇರಳದಲ್ಲಿ ವಿತರಿಸಲಾಗುತ್ತಿಲ್ಲವಾದರೂ, ಸರ್ಕಾರ ಈ ವಿಷಯದಲ್ಲಿ ತುಂಬಾ ಎಚ್ಚರಿಕೆಯಿಂದ ಇರಲು ನಿರ್ಧರಿಸಿದೆ ಎಂದು ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಸಿರಪ್ ಪಡೆದ ಮಕ್ಕಳು ಸಾವನ್ನಪ್ಪಿರುವ ಹಿನ್ನೆಲೆ, ಕೇಂದ್ರ ಆರೋಗ್ಯ ಸೇವೆಗಳ ನಿರ್ದೇಶನಾಲಯವು ಶುಕ್ರವಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆಯನ್ನು ನೀಡಿದ್ದು, ಮಕ್ಕಳಿಗೆ ಕೆಮ್ಮಿನ ಸಿರಪ್‌ಗಳನ್ನು ಕೊಡುವ ವಿಚಾರದಲ್ಲಿ ಎಚ್ಚರಿಕೆ ವಹಿಸುವಂತೆ ತಿಳಿಸಿದೆ.
ಸಣ್ಣ ಮಕ್ಕಳಲ್ಲಿ ಕೆಮ್ಮು, ಶೀತ ಸಾಮಾನ್ಯ. ಅದು ಔಷಧ ನೀಡದೆ ಕಡಿಮೆಯಾಗಬಹುದು. ಹಾಗಾಗಿ, ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಮತ್ತು ಶೀತದ ಔಷಧಿಗಳನ್ನು ಶಿಫಾರಸು ಮಾಡಬಾರದು ಎಂದು ಕೇಂದ್ರ ಆರೋಗ್ಯ ಸೇವೆಗಳ ನಿರ್ದೇಶನಾಲಯ ಹೇಳಿದೆ.
‘ಲವ್ ಜಿಹಾದ್, ಮೆಹಂದಿ ಜಿಹಾದ್’ ಕಾರ್ಯಕ್ರಮಗಳ ಪ್ರಸಾರ : ಝೀ ನ್ಯೂಸ್, ಟೈಮ್ಸ್ ನೌ ನವಭಾರತ್‌ಗೆ ಎನ್‌ಬಿಡಿಎಸ್‌ಎ ತರಾಟೆ


