ನವೆಂಬರ್‌ನಲ್ಲಿ ದಕ್ಷಿಣ ನಗರವಾದ ಝುಹೈನಲ್ಲಿ ನಡೆದ ಉದ್ದೇಶಪೂರ್ವಕ ಕಾರು ಅಪಘಾತದಲ್ಲಿ 35 ಜನರನ್ನು ಕೊಂದ ವ್ಯಕ್ತಿಯನ್ನು ಚೀನಾವು ಸೋಮವಾರ ಗಲ್ಲಿಗೇರಿಸಿದೆ.
ನವೆಂಬರ್ 11ರಂದು 62 ಹರೆಯದ ಫ್ಯಾನ್ ವೀಕಿ ಎಂಬಾತ ಕ್ರೀಡಾ ಸಂಕೀರ್ಣದ ಹೊರಗೆ ವ್ಯಾಯಾಮ ಮಾಡುತ್ತಿದ್ದ ಜನರ ಗುಂಪಿನ ಕಡೆ ಉದ್ದೇಶಪೂರ್ವಕವಾಗಿ ಸಣ್ಣ ಎಸ್‌ಯುವಿಯನ್ನು ಚಲಾಯಿಸಿದನು. ಇದು 2014ರ ನಂತರ ಚೀನಾದಲ್ಲಿ ನಡೆದ ಅತ್ಯಂತ ಕೆಟ್ಟ ಅಪರಾಧ ಪ್ರಕರಣವಾಗಿತ್ತು.
ಕಳೆದ ತಿಂಗಳು ಅವನಿಗೆ ಮರಣದಂಡನೆ ವಿಧಿಸಲಾಯಿತು, ನ್ಯಾಯಾಲಯವು ಅವನ ಯೋಚನೆಯು ಅತ್ಯಂತ ಕೆಟ್ಟದ್ದಾಗಿತ್ತು ಮತ್ತು ಅಪರಾಧದ ಸ್ವರೂಪವು ಅತ್ಯಂತ ಭೀಕರವಾಗಿತ್ತು ಎಂದು ಹೇಳಿದೆ.
ಸೋಮವಾರ ಝುಹೈ ನ್ಯಾಯಾಲಯವು ಸುಪ್ರೀಂ ಪೀಪಲ್ಸ್ ಕೋರ್ಟ್ ಹೊರಡಿಸಿದ ಮರಣದಂಡನೆ ಆದೇಶದ ಪ್ರಕಾರ ಫ್ಯಾನ್ ವೀಕಿಯುನನ್ನು ಗಲ್ಲಿಗೇರಿಸಿದೆ ಎಂದು ರಾಜ್ಯ ಪ್ರಸಾರಕ ಸಿಸಿಟಿವಿ ತಿಳಿಸಿದೆ.
ಪುರಸಭೆಯ ಸಾರ್ವಜನಿಕ ಅಭಿಯೋಜಕರು ಕಾನೂನಿಗೆ ಅನುಸಾರವಾಗಿ (ಮರಣದಂಡನೆ) ಮೇಲ್ವಿಚಾರಣೆ ಮಾಡಲು ಸಿಬ್ಬಂದಿಯನ್ನು ಕಳುಹಿಸಿದ್ದಾರೆ ಎಂದು ಸಿಸಿಟಿವಿ ವರದಿ ಮಾಡಿದೆ.
ಫ್ಯಾನ್ ನ ದಾಳಿಯು ಚೀನಾದಲ್ಲಿ ವ್ಯಾಪಕ ಸಾರ್ವಜನಿಕ ಆಘಾತ ಮತ್ತು ಸಮಾಜದ ಸ್ಥಿತಿಯ ಬಗ್ಗೆ ಆತ್ಮಾವಲೋಕನಕ್ಕೆ ಕಾರಣವಾಗಿತ್ತು. ಸ್ವತಃ ಚಾಕುವಿನಿಂದ ಕೊಯ್ದುಕೊಂಡು ಕೋಮಾ ಸ್ಥಿತಿಯಲ್ಲಿದ್ದ ಆತನನ್ನು ಸ್ಥಳದಲ್ಲೇ ಬಂಧಿಸಲಾಯಿತು ಎಂದು ಪೊಲೀಸರು ಆ ಸಮಯದಲ್ಲಿ ತಿಳಿಸಿದ್ದರು.
ಕಳೆದ ತಿಂಗಳು ನಡೆದ ವಿಚಾರಣೆಯಲ್ಲಿ ಫ್ಯಾನ್ ಕೆಲವು ಬಲಿಪಶುಗಳ ಕುಟುಂಬಗಳು, ಅಧಿಕಾರಿಗಳು ಮತ್ತು ಸಾರ್ವಜನಿಕರ ಮುಂದೆ ತಪ್ಪೊಪ್ಪಿಕೊಂಡನು ಎಂದು ರಾಜ್ಯ ಮಾಧ್ಯಮಗಳು ತಿಳಿಸಿವೆ.
ವಿಚ್ಛೇದನದ ನಂತರ ಆಸ್ತಿ ವಿಭಜನೆಯ ಬಗ್ಗೆ ವೈಯಕ್ತಿಕ ಹತಾಶೆ ಮತ್ತು ಅತೃಪ್ತಿಯ ಕೋಪವನ್ನು ಹೊರಹಾಕಲು ನಿರ್ಧರಿಸಿ ಈ ಕೃತ್ಯವೆಸಗಿದ್ದಾನೆ ಎಂದು ನ್ಯಾಯಾಲಯವು ಕಂಡುಕೊಂಡಿತ್ತು. ಅವನು ಆಯ್ಕೆಮಾಡಿಕೊಂಡಿದ್ದ ಅಪರಾಧ ಕೃತ್ಯವು ವಿಶೇಷವಾಗಿ ಕ್ರೂರವಾಗಿತ್ತು ಮತ್ತು ಇದರ ಪರಿಣಾಮಗಳು ವಿಶೇಷವಾಗಿ ತೀವ್ರವಾಗಿದ್ದವು, ಸಮಾಜಕ್ಕೆ ಗಮನಾರ್ಹ ಹಾನಿಯನ್ನುಂಟುಮಾಡಿತ್ತು ಎಂದು ಅದು ತೀರ್ಪು ನೀಡಿದೆ.
ಚೀನಾದಲ್ಲಿ ಸಾಮಾನ್ಯವಾಗಿ ಅನೇಕ ಪಾಶ್ಚಿಮಾತ್ಯ ದೇಶಗಳಿಗಿಂತ ಹಿಂಸಾತ್ಮಕ ಅಪರಾಧಗಳು ಅಪರೂಪ, ಆದರೆ ಕಳೆದ ವರ್ಷ ದೇಶವು ಈ ಸಾಮೂಹಿಕ ಸಾವುನೋವುಗಳ ಸರಣಿಯನ್ನು ಕಂಡಿತು. ಈ ಕಾರು ದಾಳಿಯು ಆಡಳಿತ ಕಮ್ಯುನಿಸ್ಟ್ ಪಕ್ಷದ ಕಟ್ಟುನಿಟ್ಟಾದ ಸಾರ್ವಜನಿಕ ಭದ್ರತೆ ಮತ್ತು ಅಪರಾಧ ತಡೆಗಟ್ಟುವಿಕೆಯ ಖ್ಯಾತಿಯನ್ನು ಪ್ರಶ್ನಿಸಿತ್ತು.
ಇನ್ನೊಂದು ಪ್ರಕರಣದಲ್ಲಿ ನವೆಂಬರ್‌ನಲ್ಲಿ ನಡೆದ ಸಾಮೂಹಿಕ ಇರಿತದಲ್ಲಿ ಎಂಟು ಜನರನ್ನು ಕೊಂದು 17 ಜನರನ್ನು ಗಾಯಗೊಳಿಸಿದ ವ್ಯಕ್ತಿಗೆ ಪೂರ್ವ ಜಿಯಾಂಗ್ಸು ಪ್ರಾಂತ್ಯದ ಪ್ರತ್ಯೇಕ ನ್ಯಾಯಾಲಯವು ಮರಣದಂಡನೆ ವಿಧಿಸಿತ್ತು ಎಂದು ಸಿಸಿಟಿವಿ ಸೋಮವಾರ ವರದಿ ಮಾಡಿದೆ.
ವುಕ್ಸಿ ನಗರದ ವೃತ್ತಿಪರ ಶಾಲೆಯ ಮೇಲೆ ದಾಳಿ ಮಾಡಿದ 21 ವರ್ಷದ ಮಾಜಿ ವಿದ್ಯಾರ್ಥಿ ಕ್ಸು ಜಿಯಾಜಿನ್‌ನನ್ನು “ಕಾನೂನಿನ ಪ್ರಕಾರ” ಗಲ್ಲಿಗೇರಿಸಲಾಗಿದೆ ಎಂದು ಸಿಸಿಟಿವಿ ವರದಿ ಮಾಡಿದೆ.
ಈತನಿಗೂ ಡಿಸೆಂಬರ್‌ನಲ್ಲಿ ಮರಣದಂಡನೆ ವಿಧಿಸಲಾಗಿತ್ತು, ಆತನ ಅಪರಾಧವು “ಅಸಾಧಾರಣ ಗಂಭೀರವಾಗಿದೆ” ಎಂದು ನ್ಯಾಯಾಲಯ ತೀರ್ಮಾನಿಸಿದೆ ಎಂದು ಸಿಸಿಟಿವಿ ತಿಳಿಸಿದೆ.


