ಕೊರೊನಾ ಸಾಂಕ್ರಮಿಕದಿಂದಾಗಿ ವಿಶ್ವದೆಲ್ಲೆಡೆ ಆರ್ಥಿಕ ಕುಸಿತ ಉಂಟಾಗಿದ್ದು, ವಿಶ್ವದ ದೊಡ್ಡಣ್ಣ ಎನಿಸಿಕೊಂಡಿದ್ದ ಅಮೆರಿಕ ಕೂಡಾ ಕೊರೊನಾ ಹೊಡೆತದಿಂದ ಹೊರತಾಗಿರಲಿಲ್ಲ. ಕೊರೊನಾ ಸಾಂಕ್ರಮಿಕದಿಂದಾಗಿ ಉಂಟಾದ ಆರ್ಥಿಕ ಏರುಪೇರಿನ ಕಾರಣಕ್ಕೆ, ಚೀನಾ ದೇಶವು ನಿರೀಕ್ಷೆಗಿಂತ ಐದು ವರ್ಷ ಮೊದಲೇ ವಿಶ್ವದ ಅತಿ ದೊಡ್ಡ ಆರ್ಥಿಕತೆಯ ದೇಶವಾಗಲಿದೆ ಎಂದು ಸೆಂಟರ್ ಫಾರ್ ಇಕನಾಮಿಕ್ಸ್ ಆಂಡ್ ಬ್ಯುಸಿನೆಸ್ ರಿಸರ್ಚ್ ಶನಿವಾರ ಪ್ರಕಟವಾದ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.
ಇದನ್ನೂ ಓದಿ:ಚೀನಾ ಮತ್ತು ನಮ್ಮ ನಡುವೆ ನಡೆಯುತ್ತಿರುವ ಚರ್ಚೆ ಗೌಪ್ಯವಾದದ್ದು: ಭಾರತದ ವಿದೇಶಾಂಗ ಸಚಿವ!
ಈ ಹಿಂದೆಯೆ ಚೀನಾವು ವಿಶ್ವದ ಅತೀ ದೊಡ್ಡ ಆರ್ಥಿಕತೆಯಾಗಲಿದೆ ಎಂದು ಹೇಳಲಾಗಿತ್ತಾದರೂ, ಕೊರೊನಾ ಸಮಯದಲ್ಲಿ ತನ್ನ ಆರ್ಥಿಕತೆಯನ್ನು ಸರಿಯಾಗಿ ನಿರ್ವಹಿಸಿದ ಕಾರಣಕ್ಕೆ ಹಾಗೂ ದೇಶದ ಆರ್ಥಿಕತೆಯ ದೀರ್ಘಕಾಲಿಕ ಬೆಳವಣಿಗೆಯಿಂದ 2028 ರಲ್ಲಿ ಅಮೇರಿಕಾವನ್ನು ಹಿಂದಿಕ್ಕಿ ಚೀನಾ ವಿಶ್ವದ ಅತೀ ದೊಡ್ಡ ಆರ್ಥಿಕತೆಯಿರುವ ದೇಶವಾಗಲಿದೆ ಎಂದು ವರದಿ ಹೇಳಿದೆ.
ಚೀನಾ 2021-25 ರ ಆರ್ಥಿಕ ವರ್ಷಕ್ಕೆ ಸರಾಸರಿ 5.7 % ಆರ್ಥಿಕ ಬೆಳವಣಿಗೆಯನ್ನು ಹೊಂದಲಿದ್ದು, 2026-30 ರ ಅವಧಿಯಲ್ಲಿ 4.5% ಕ್ಕೆ ಆರ್ಥಿಕತೆ ಇಳಿಕೆಯಾಗಲಿದೆ ಎಂದು ವರದಿ ಹೇಳಿದೆ.
ಅಮೆರಿಕ ಆರ್ಥಿಕತೆ 2021 ರಲ್ಲಿ ಬೆಳವಣಿಗೆಯಾಗುವ ಸಾಧ್ಯತೆಯಿದೆ ಎಂದು ವರದಿ ಹೇಳಿದ್ದು, ಆದರೆ ಈ ಬೆಳವಣಿಗೆಯು 2022 ಮತ್ತು 2024 ರ ನಡುವೆ 1.9% ಇಳಿಕೆಯಾಗಲಿದೆ ಮತ್ತು ನಂತರದ ವರ್ಷಗಳಲ್ಲಿ 1.6% ಕ್ಕೆ ಇಳಿಯುತ್ತದೆ ಎಂದು ವರದಿಯು ಸೂಚಿಸಿದೆ.


