ರಾಜ್ಯದ ಗಡಿಯ ಬಳಿ ಚೀನಾ ನಿರ್ಮಿಸುತ್ತಿರುವ ಬೃಹತ್ ಅಣೆಕಟ್ಟು ಭಾರತಕ್ಕೆ ನೀರಿನ ಬಾಂಬ್ ಆಗಿದ್ದು, ನಮ್ಮ ಅಸ್ತಿತ್ವಕ್ಕೆ ಅಪಾಯವನ್ನುಂಟುಮಾಡಬಹುದು ಎಂದು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಮಂಗಳವಾರ ಹೇಳಿದ್ದಾರೆ.
ಖಾಸಗಿ ಸುದ್ದಿವಾಹಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಬ್ರಹ್ಮಪುತ್ರ ನದಿಯ ಟಿಬೆಟಿಯನ್ ಹೆಸರಾದ ಯಾರ್ಲುಂಗ್ ತ್ಸಾಂಗ್ಪೊ ನದಿಯ ಮೇಲೆ ನಿರ್ಮಿಸಲಾಗಿರುವ ವಿಶ್ವದ ಅತಿದೊಡ್ಡ ಅಣೆಕಟ್ಟು ಯೋಜನೆಯು ಗಂಭೀರ ಕಳವಳಕಾರಿ ವಿಷಯವಾಗಿದೆ. ಏಕೆಂದರೆ, ಚೀನಾ ಅಂತರರಾಷ್ಟ್ರೀಯ ಜಲ ಒಪ್ಪಂದಕ್ಕೆ ಸಹಿ ಹಾಕಿಲ್ಲ, ಅದು ಅಂತರರಾಷ್ಟ್ರೀಯ ಮಾನದಂಡಗಳನ್ನು ಪಾಲಿಸುವಂತೆ ಒತ್ತಾಯಿಸಬಹುದಿತ್ತು ಎಂದು ಹೇಳಿದ್ದಾರೆ.
“ನಾವು ಚೀನಾವನ್ನು ನಂಬಲು ಸಾಧ್ಯವಿಲ್ಲ. ಅವರು ಏನು ಮಾಡುತ್ತಾರೆಂದು ಯಾರಿಗೂ ತಿಳಿದಿಲ್ಲ” ಎಂದು ಖಂಡು ಸಂದರ್ಶನದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
“ಚೀನಾದಿಂದ ಬರುವ ಮಿಲಿಟರಿ ಬೆದರಿಕೆಯನ್ನು ಬದಿಗಿಟ್ಟರೆ, ಇದು ಬೇರೇಯದಕ್ಕಿಂತಲೂ ದೊಡ್ಡ ಸಮಸ್ಯೆ ಎಂದು ನನಗೆ ತೋರುತ್ತದೆ. ಇದು ನಮ್ಮ ಬುಡಕಟ್ಟು ಜನಾಂಗ ಮತ್ತು ನಮ್ಮ ಜೀವನೋಪಾಯಕ್ಕೆ ಅಸ್ತಿತ್ವದ ಬೆದರಿಕೆಯನ್ನುಂಟುಮಾಡಲಿದೆ; ಇದು ತುಂಬಾ ಗಂಭೀರವಾಗಿದೆ. ಏಕೆಂದರೆ, ಚೀನಾ ಇದನ್ನು ಒಂದು ರೀತಿಯ ‘ವಾಟರ್ ಬಾಂಬ್’ ಆಗಿಯೂ ಬಳಸಬಹುದು” ಎಂದು ಅವರು ಹೇಳಿದರು.
ಚೀನಾ ಅಂತರರಾಷ್ಟ್ರೀಯ ನೀರು ಹಂಚಿಕೆ ಒಪ್ಪಂದಗಳಿಗೆ ಸಹಿ ಹಾಕಿದ್ದರೆ, ಈ ಯೋಜನೆಯು ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಬಾಂಗ್ಲಾದೇಶದ ಬೇಸಿಗೆಯ ಪ್ರವಾಹವನ್ನು ತಡೆಯುವುದರಿಂದ ತಪ್ಪಿಸಬಹುದು ಎಂದು ಮುಖ್ಯಮಂತ್ರಿ ಹೇಳಿದರು.
“ಆದರೆ, ಚೀನಾ ಸಹಿ ಹಾಕಿಲ್ಲ, ಅದೇ ನಮಗೆ ಸಮಸ್ಯೆ… ಅಣೆಕಟ್ಟು ನಿರ್ಮಿಸಿ ಅವರು ಇದ್ದಕ್ಕಿದ್ದಂತೆ ನೀರನ್ನು ಬಿಡುಗಡೆ ಮಾಡಿದರೆ, ನಮ್ಮ ಇಡೀ ಸಿಯಾಂಗ್ ಬೆಲ್ಟ್ ನಾಶವಾಗುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಆದಿ ಬುಡಕಟ್ಟು ಮತ್ತು ಅಂತಹುದೇ ಗುಂಪುಗಳು ಸಮಸ್ಯೆಗೆ ಸಿಲುಕುತ್ತವೆ. ಅವರ ಎ;f; ಆಸ್ತಿ, ಭೂಮಿ ಮತ್ತು ವಿಶೇಷವಾಗಿ ಮಾನವ ಜೀವನವು ವಿನಾಶಕಾರಿ ಪರಿಣಾಮಗಳನ್ನು ಅನುಭವಿಸುತ್ತದೆ” ಎಂದು ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ.
ಭಾರತ ಸರ್ಕಾರದೊಂದಿಗೆ ಚರ್ಚೆಯ ನಂತರ, ರಾಜ್ಯ ಸರ್ಕಾರವು ಸಿಯಾಂಗ್ ಅಪ್ಪರ್ ಬಹುಪಯೋಗಿ ಯೋಜನೆ ಎಂಬ ಯೋಜನೆಯನ್ನು ಹೊಂದಿದೆ ಎಂದು ಅರುಣಾಚಲ ಮುಖ್ಯಮಂತ್ರಿ ತಿಳಿಸಿದರು. ಇದು ರಕ್ಷಣಾ ಕಾರ್ಯವಿಧಾನವಾಗಿ ಕಾರ್ಯನಿರ್ವಹಿಸುತ್ತದೆ, ನೀರಿನ ಸುರಕ್ಷತೆಯನ್ನು ಖಚಿತಪಡಿಸುತ್ತದೆ ಎಂದರು.
“ಚೀನಾ ತನ್ನ ಕಡೆಯಿಂದ ಕೆಲಸ ಆರಂಭಿಸಲಿದೆ, ಅಥವಾ ಈಗಾಗಲೇ ಆರಂಭಿಸಿದೆ ಎಂದು ನಾನು ನಂಬುತ್ತೇನೆ. ಆದರೆ, ಅವರು ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ. ದೀರ್ಘಾವಧಿಯಲ್ಲಿ, ಅಣೆಕಟ್ಟು ಪೂರ್ಣಗೊಂಡರೆ, ನಮ್ಮ ಸಿಯಾಂಗ್ ಮತ್ತು ಬ್ರಹ್ಮಪುತ್ರ ನದಿಗಳು ಗಣನೀಯವಾಗಿ ಒಣಗಬಹುದು” ಎಂದು ಅವರು ಹೇಳಿದರು.
ಭಾರತ ಸರ್ಕಾರವು ತನ್ನ ಯೋಜನೆಯನ್ನು ಯೋಜಿಸಿದಂತೆ ಪೂರ್ಣಗೊಳಿಸಲು ಸಾಧ್ಯವಾದರೆ, ಅದು ತನ್ನದೇ ಆದ ಅಣೆಕಟ್ಟಿನ ನೀರಿನ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಚೀನಾ ಭವಿಷ್ಯದಲ್ಲಿ ನೀರು ಬಿಡುಗಡೆ ಮಾಡಿದರೆ, ಖಂಡಿತವಾಗಿಯೂ ಪ್ರವಾಹ ಉಂಟಾಗುತ್ತದೆ. ಆದರೆ ಅದನ್ನು ನಿಯಂತ್ರಿಸಬಹುದು ಎಂದು ಖಂಡು ಹೇಳಿದರು.
ಮಾರ್ಚ್‌ನಲ್ಲಿ, ಕೇಂದ್ರವು ಬ್ರಹ್ಮಪುತ್ರ ನದಿಗೆ ಸಂಬಂಧಿಸಿದ ಎಲ್ಲ ಬೆಳವಣಿಗೆಗಳನ್ನು ‘ಎಚ್ಚರಿಕೆಯಿಂದ’ ಮೇಲ್ವಿಚಾರಣೆ ಮಾಡುತ್ತಿದೆ, ಇದರಲ್ಲಿ ಚೀನಾದ ಜಲವಿದ್ಯುತ್ ಯೋಜನೆ ನಿರ್ಮಿಸುವ ಯೋಜನೆಗಳು ಸೇರಿವೆ. ದೇಶದ ಹಿತಾಸಕ್ತಿಗಳನ್ನು ಕಾಪಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದೆ.
2021 ರಲ್ಲಿ ಚೀನಾದ ಪ್ರಧಾನಿ ಲಿ ಕೆಕಿಯಾಂಗ್ ಅವರು ಗಡಿ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಯಾರ್ಲುಂಗ್ ತ್ಸಾಂಗ್ಪೊ ಅಣೆಕಟ್ಟು ಯೋಜನೆಯನ್ನು ಘೋಷಿಸಲಾಯಿತು.
2024 ರಲ್ಲಿ ಚೀನಾ ಐದು ವರ್ಷಗಳ, $137 ಶತಕೋಟಿ ಯೋಜನೆಗೆ ಅನುಮೋದನೆ ನೀಡಿದೆ ಎಂದು ವರದಿಯಾಗಿದೆ, ಇದು 60,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ನಿರೀಕ್ಷೆಯಿದೆ, ಇದು ವಿಶ್ವದ ಅತಿದೊಡ್ಡ ಜಲವಿದ್ಯುತ್ ಅಣೆಕಟ್ಟಾಗಿದೆ.
ಈ ಯೋಜನೆಯು ಪರಿಸರ ಸೂಕ್ಷ್ಮ ಹಿಮಾಲಯ ಪ್ರದೇಶದಲ್ಲಿದೆ, ಇದು ಆಗಾಗ್ಗೆ ಭೂಕಂಪಗಳು ಸಂಭವಿಸುವ ಟೆಕ್ಟೋನಿಕ್ ಪ್ಲೇಟ್ ಗಡಿಯಲ್ಲಿ ನೆಲೆಗೊಂಡಿದೆ ಎಂಬುದು ಆತಂಕಕಾರಿ ವಿಷಯವಾಗಿದೆ.