Homeಅಂಕಣಗಳುಬೆಳದ ಮಕ್ಕಳ ಅಂತರಂಗದಲ್ಲಿ ಆಪ್ತ ಪಯಣ

ಬೆಳದ ಮಕ್ಕಳ ಅಂತರಂಗದಲ್ಲಿ ಆಪ್ತ ಪಯಣ

- Advertisement -
- Advertisement -

ಡಾ. ವಿನಯ್ ಒಕ್ಕುಂದ |

ಉತ್ಸಾಹದ ಚಿಲುಮೆಗಳಾಗಿ ಪುಟಿವ ಜೀವಂತಿಕೆಯಿಂದ ತನ್ನ ಸುತ್ತಲ ಲೋಕಕ್ಕೆ ಬೆಳಕು ಬೀರಬೇಕಾದ ಯೌವನದ ಮಕ್ಕಳು, ಹೀಗೆ ತಲೆತಗ್ಗಿಸಿ ಗಂಟಲ ಸೆರೆ ಬಿಗಿದು ತುಳುಕುವ ಕಂಬನಿಯನ್ನು ನುಂಗುತ್ತ ಅಸಹಾಯಕರಾಗಿ ಅದುರು ತುಟಿಯಲ್ಲಿ ಥರಗುಡುವುದೆಂದರೆ ನನ್ನಮಟ್ಟಿಗದು ಮನುಷ್ಯ ಲೋಕದ ಅತ್ಯಂತ ಅಸಹನೀಯತೆಯ ದೃಶ್ಯ. ಅದಕ್ಕೆ ಏನೋ, ಮನೆಯಲ್ಲಿ ನನ್ನ ಮಕ್ಕಳು ಬೆಳೆದಂತೆಲ್ಲ ಅವರ ನೋವುಗಳಿಗೆ ನಾನು ಮರುಗಿದ್ದೇ ಕಡಿಮೆ. ಜ್ವರದಿಂದ ಮೈ ಸುಡುತ್ತಿದ್ದರೂ, ‘ಅದೇನಾಗುತ್ತೆ ಬಿಡು, ಈ ವಯಸ್ನಲ್ಲಿ. ಒಂದು ಟ್ಯಾಬ್ಲೆಟ್ ತಗೊ. ಬಿಸಿ ಅನ್ನ ಉಂಡು ಮಲಗು’ ಎಂದು ಹಗುರವಾಗಿ ಮಾತಾಡಿ, ‘ಈ ಅಮ್ಮನಿಗೆ ಒಂಚೂರು ಪ್ರೀತಿಯಿಲ್ಲ’ ಎಂದು ಶರಾ ಬರೆಯಿಸಿಕೊಂಡೂ ಆಗಿದೆ. ಅಸಲಿಗೆ, ದೊಡ್ಡ ಮಕ್ಕಳ ದಯನೀಯತೆಯನ್ನು ಸಹನೆಯಿಂದ ನೋಡಬಲ್ಲ ಶಕ್ತಿಯೇ ನನಗಿಲ್ಲವೆನೋ. ಆದರೆ, ದಿನಂಪ್ರತಿ ನೂರಾರು ಬೆಳೆದ ಮಕ್ಕಳೊಂದಿಗಳಾದ ನಾನು, ಅವರ ನಗುಮುಖವನ್ನು ಕರ್ತೃತ್ವಶಕ್ತಿಯನ್ನು ಪ್ರೀತಿಸುವಂತೆಯೇ ಅವರ ಅಸಹಾಯಕತೆಯನ್ನು, ಯಾತನೆಯನ್ನು, ತಪ್ಪುಗಳನ್ನು ಉಢಾಳತನವನ್ನು ಮಮತೆಯಿಂದ ಶೋಧಿಸಿಕೊಳ್ಳುವ ಜರೂರತ್ತನ್ನು ಕಲಿಯುತ್ತಿದ್ದೇನೆ. ಹೊರಗಣ್ಣಿಗೆ ಒರಟೊರಟು ಕಲ್ಲುಗಳಂತೆ ಕಾಣುವ ಈ ಮಕ್ಕಳೊಳಗೆ ಜೀವ ತುಡಿತದ ಸೆಲೆಯೇ ಹರಿಯುತ್ತಿರುತ್ತದೆ. ಆ ಸೆಲೆಯ ಸೆಳೆತ ನಮ್ಮನ್ನೂ ಬದಲಿಸುತ್ತದೆ.
ದೈನಂದಿನ ಪಾಠ, ಟೆಸ್ಟು, ಅಟೆಂಡೆನ್ಸು ಎಂಬ ಯಾಂತ್ರಿಕತೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಏರ್ಪಡುವುದು ಎದುರು-ಬದುರಿನ ಸಂಬಂಧ. ಹೆಚ್ಚೆಂದರೆ ನಮ್ಮ ನಡುವಿನ ಅಂತರವನ್ನು ಪ್ರಯತ್ನಪೂರ್ವಕ ಕಡಿಮೆ ಮಾಡಿಕೊಳ್ಳಬಹುದು. ಆದರದನ್ನು ನಿವಾಳಿಸಿ ಹಾಕಲಿಕ್ಕಾಗದು. ಈ ದೈನಂದಿನ ಆಚೆಗಿನ ಸಂಬಂಧಗಳಲ್ಲಿ ನಡೆವ ಬೆರಕೆಯಲ್ಲಿ ನಮ್ಮೊಟ್ಟಿಗಿರುವ ಮಕ್ಕಳು ಒಂದೊಂದು ‘ವಿಶ್ವವಿದ್ಯಾಲಯ’ ಗಳಂತೆ ತೆರೆದುಕೊಳ್ಳುತ್ತಾರೆ. ಇಡೀ ಸಮಾಜದ ನಡೆಯ ನಾಡಿಮಿಡಿತವನ್ನೇ ಮುಟ್ಟಿಸುತ್ತಾರೆ.
ನಾನು ಕೆಲಸ ಮಾಡುತ್ತಿರುವ ಊರಿನಲ್ಲಿಯ ಇನ್ನೊಂದು ಕಾಲೇಜಿನ ಹುಡುಗಿಯೊಬ್ಬಳು ಅದೆಂಥದೋ ಸಣ್ಣ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಸುದ್ದಿಯ ಜೊತೆಗೆ, ಅವಳ ಮುದ್ದಾದ ಫೋಟೋ ವಾಟ್ಸಪ್‍ಗಳಲ್ಲಿ ಹರಿದಾಡಿದಾಗ, ಸ್ಟಾಫ್ ರೂಮ್‍ನಲ್ಲಿ ದಣಿದು ಕೂತ ಮಧ್ಯಾಹ್ನದ ಬಳಗದಲ್ಲಿ ಒಂಥರಾ ಇರುಸುಮುರುಸು ಕಾಡತೊಡಗಿತ್ತು. ಪುಣ್ಯಕ್ಕೆ, ಯಾರ ತುಟಿಯಂಚಿನಲ್ಲೂ ಹೆಣ್ಣುಹುಡುಗಿಯ ಆತ್ಮಹತ್ಯೆಗುಂಟ ಹಬ್ಬಿಕೊಳ್ಳುವ ಹೊಲಸು ಕಲ್ಪನೆಯ ನುಡಿಯೊಡೆಯಲಿಲ್ಲ. ಅಂಥದ್ದೊಂದು ಬೇಜವಾಬ್ದಾರಿ ನೋಟವೂ, ಗೊಣಗಾಟವೂ ಕಾಣಲಿಲ್ಲ. ನಮ್ಮೆಲ್ಲರ ಆಸಕ್ತಿಗಳು, ಬದುಕಿನ ತಾತ್ವಿಕತೆಗಳು ಬೇರೆ ಬೇರೆಯಾಗಿದ್ದಿರಬಹುದಾದರೂ, ವಿದ್ಯಾರ್ಥಿಗಳ ಕುರಿತ ಮಮತೆಯಲ್ಲಿ ಒಂದುತನವಿತ್ತು. ‘ಏನಾದರೂ ಮಾಡಬೇಕು’, ‘ಯಾಕೋ ಮಕ್ಕಳ ಇತ್ತೀಚಿನ ನಡೆ ತುಂಬ ದಿಕ್ಕೆಡುತ್ತಿದೆ’ ಅಟೋ ಡ್ರೈವರ್ ಹೇಳಿದ್ದ “ಬೇರೆ ಊರಿನ ಹುಡುಗರೊಟ್ಟಿಗೆ ಹುಡುಗೀರು ತಿರಗ್ತಿದಾರೆ. ಅವರು ಬಹುಶಃ ಕಾಲೇಜಿಗೆ ಹೋಗ್ತಿವಿ ಅಂತ ಮನೇಲಿ ಹೇಳಿ ಬಂದಿರ್ತಾರೆ. ನೋಡಿ ಇಲ್ಲಿ, ನಿಮ್ಮ ಕಾಲೇಜಿನ ಯುನಿಫಾರಂನ ಹುಡುಗೀರಲ್ವಾ?” ಎಂದು ತೋರಿದ ಫೋಟೋ ವಿಷಯ ಬಂತು. ಕಾಲೇಜಿಗೆ ತಿರುಗುವ ಸರ್ಕಲ್‍ನಲ್ಲಿರುವ ಹಾಳು ಕಟ್ಟಡದಲ್ಲಿ ಕೂತು ಹುಡುಗರು ಸಿಗರೇಟು ಎಳೀತಾರೆ- ಎಂಬುದು; ಗಾಂಜಾ ಮಾರುವವರು ಕಾಲೇಜು ಕ್ಯಾಂಪಸ್ಸಿನಾಚೆಯ ರೇಲ್ವೆ ಹಳಿಗಳ ಬಳಿ ತಿರುಗಾಡುತ್ತಾರಂತೆ. ನಮ್ಮ ಮಕ್ಕಳಿಗೆಲ್ಲ ಮಾರಲು ಶುರು ಮಾಡಿದರೆ ಮಾಡೋದೇನ್ರೀ? ಪೊಲೀಸರಿಗೆ ಸೂಚನೆ ಕೊಡೋದಾ ಹ್ಯಾಗೆ?; “ಮೇಡಂ ನೀವು ಲೇಡಿಸ್ ವಿಂಗ್‍ನ ಮೀಟಿಂಗ್ ಕರೆಯಿರಪ್ಪಾ. ಸ್ವಲ್ಪ ಹುಡಿಗಿಯರ್ನ ಬಿಗಿಯಿಡ್ರಿ. ಅಂದ್ರ ಏನಾರೂ ಆದೀತು’….. ಹೀಗೆ ಮನಸ್ಸಿಗೆ ಉರಿ ಹತ್ತಿದಂತೆ “ಮಕ್ಕಳು ಮಕ್ಕಳೇ ಅಲ್ವೇನ್ರಿ? ನಮ್ಮ ಮಕ್ಕಳಾದ್ರೇನು, ಇನ್ನೊಬ್ರ ಮಕ್ಕಳಾದ್ರೇನು” ಎಂಬ ತಾತ್ವಿಕ ತಿಳಿವು ಎಳೆಗಾಳಿಯಂತೆ ಸುಳಿಯುತ್ತಿತ್ತು. ಕಡೆಗೆ ನಿರ್ಣಯಕ್ಕೆ ತಲುಪಿದ್ದು – ಮೆಂಟರ್ ವಾರ್ಡ್ ಸಿಸ್ಟಂ ಕಟ್ಟುನಿಟ್ಟಾಗಿ ಜಾರಿಗೆ ತರೋದು. ಕಾಲೇಜಿನ 8 ಉಪನ್ಯಾಸಕರಿಗೆ 400 ವಿದ್ಯಾರ್ಥಿಗಳ ಪಾಲಕತ್ವದ ಹೊಣೆಯನ್ನು ಹಂಚಿಕೆ ಮಾಡಿ ವಹಿಸೋದು. ತುಂಬ ಸಿನ್ಸಿಯರಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೊಂದಿಗೂ ಆಪ್ತವಾಗಿ ಕೌನ್ಸಿಲಿಂಗ್ ನಡೆಸೋದು. ಹೀಗೆ… ತುಂಬ ಪ್ರಾಮಾಣಿಕವಾಗಿಯೇ ಪ್ರಯತ್ನ ನಡೆಯಿತು. ತಯಾರಿಯಾಯಿತು. ಕೇಂದ್ರ ಸರ್ಕಾರ ಯು.ಜಿ.ಸಿ.ಯನ್ನು ಇಲ್ಲವಾಗಿಸಿ, ಅದರ ಜಾಗೆಯಲ್ಲಿ ‘ಉನ್ನತ ಶಿಕ್ಷಣ ಮತ್ತು ಸಂಶೋಧನೆಯ ರಾಷ್ಟ್ರೀಯ ಆಯೋಗ’ವನ್ನು ಸ್ಥಾಪಿಸಲು ಯೋಜಿಸಿದೆ. ಆದರೆ ಯು.ಜಿ.ಸಿ. ಕಾಲೇಜುಗಳಿಗೆ ನಿರ್ದೇಶಿಸಿದ ಸೂತ್ರಗಳಲ್ಲಿ ಮೆಂಟರ್ ವಾರ್ಡ್ ಎಂಬ ಸುಂದರ ಪರಿಕಲ್ಪನೆಯೊಂದಿದೆ.
ನಮ್ಮ ದೇಶದಲ್ಲಿ ಉನ್ನತ ಶಿಕ್ಷಣವು ವೃತ್ತಿಪರ ಕೋರ್ಸುಗಳು ಮತ್ತು ಸಾಂಪ್ರದಾಯಿಕ ಕೋರ್ಸುಗಳೆಂದು ಹೋಳಾಗಿ, ವೃತ್ತಿಪರ ಕೋರ್ಸುಗಳು ಶ್ರೀಮಂತರಿಗೂ ಸಾಂಪ್ರದಾಯಿಕ ಕೋರ್ಸುಗಳು ಬಡ-ಮಧ್ಯಮ ವರ್ಗದವರಿಗೂ ಎಂದು ಹಂಚಿಕೆಯಾಗಿ ಹೋಗಿದೆ. ಎಲ್ಲ ಮಿತಿಗಳಲ್ಲೂ ಸಮಾಜದ ಬಡ ದಲಿತ, ಹಿಂದುಳಿದ, ಆದಿವಾಸಿ ಸಮುದಾಯಗಳ ಮಕ್ಕಳು ಮತ್ತು ಹೆಣ್ಣುಮಕ್ಕಳು ಪದವಿ ವ್ಯಾಸಂಗಕ್ಕೆ ತೊಡಗುವುದು ಸಾಧ್ಯವಾಗಿದೆ. ಆದರೆ, ಬಂಡವಾಳಶಾಹಿ ಆದ್ಯತೆಗಳಿಗೆ ತಗ್ಗಿದ ಸರ್ಕಾರ ಜಗತ್ತಿನ ಬಂಡವಾಳವಾದಿಗಳಿಗೆ ವಿಶ್ವವಿದ್ಯಾಲಯಗಳನ್ನು ಅಡವಿಡಲು ತೊಡಗಿದೆ. ಬಂಡವಾಳವಾದಿಗಳಿಗೆ ಅಗತ್ಯವಾದ ವಾಣಿಜ್ಯ ಮೌಲ್ಯಗಳ ಬೆಲೆಯಲ್ಲಿಯೇ ಶಿಕ್ಷಣವನ್ನು ನಿಗದಿಗೊಳಿಸಿಕೊಡುವ ಪ್ರಯತ್ನಗಳು ನಡೆದಿವೆ. ಸಾಂಪ್ರದಾಯಿಕ ಕೋರ್ಸುಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ತೆರೆಯದೆ, ವಾಣಿಜ್ಯೀಕರಣದ ಸಮಾಜದಲ್ಲಿ ‘ಉನ್ನತ ಶಿಕ್ಷಣದ ಫಲಿತಗಳು ಕಳಪೆ’ ಎಂಬ ಭ್ರಮೆಯನ್ನು ನಂಬಿಸಲಾಗಿದೆ. ಉನ್ನತ ಶಿಕ್ಷಣದ ಸುಧಾರಣೆಯ ಯೋಜನೆಗಳನ್ನು ಮರಮರಳಿ ಬಂಡವಾಳಶಾಹಿಗಳ ಸುಪರ್ದಿಗೆ ಒಪ್ಪಿಸಲಾಗಿದೆ. 2000 ದಲ್ಲಿಯ ಅಂಬಾನಿ-ಬಿರ್ಲಾ ಸಮಿತಿಯ ವರದಿ, 2006ರ ಸ್ಯಾಮ್ ಪಿತ್ರೋಡಾ ನೇತೃತ್ವದ ರಾಷ್ಟ್ರೀಯ ಜ್ಞಾನ ಆಯೋಗದ ವರದಿ, 2008ರ ಪ್ರೊ. ಯಶ್‍ಪಾಲ್‍ರ ಉನ್ನತ ಶಿಕ್ಷಣದ ಪುನರ್‍ನವೀಕರಣ ವರದಿ ಮೊದಲಾದವುಗಳನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು. ಶಿಕ್ಷಣದ ವಲಯಗಳಲ್ಲಿ ಖಾಸಗಿ ಬಂಡವಾಳ ಹೂಡಿಕೆಯನ್ನು ಉತ್ತೇಜಿಸುವ ಬೆಳವಣಿಗೆಗಳ ಮಧ್ಯದಲ್ಲಿಯೂ ಸರ್ಕಾರ, ಹೆಣ್ಣುಮಕ್ಕಳ ಬಡವರ, ದಲಿತರ, ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಕಡಿಮೆ ಫೀಸು, ಸ್ಕಾಲರ್‍ಶಿಪ್‍ಗಳ ಕೊಡುಗೆ ನೀಡುತ್ತ ಸಾಮಾಜಿಕ ನ್ಯಾಯವನ್ನು ಜೀವಂತವಾಗಿಡಲು ಯತ್ನಿಸುತ್ತಿದೆ. ಹಾಗಾಗಿ ಸರ್ಕಾರಿ ಕಾಲೇಜುಗಳ ಸಾಂಪ್ರದಾಯಿಕ ಕೋರ್ಸುಗಳ ವಿದ್ಯಾರ್ಥಿಗಳೆಂದರೆ, ಕೆಳಸಮುದಾಯದ ಪ್ರತಿನಿಧಿಗಳೇ ಆಗಿರುತ್ತಾರೆ. ಅವರು ಸಾಮಾಜಿಕವಾಗಿ ಸಂಘರ್ಷದ ಪದರುಗಳಲ್ಲಿ ನಲುಗುತ್ತಿರುತ್ತಾರೆ. ಇತ್ತೀಚೆಗೆ ನಮ್ಮ ದೇಶದಲ್ಲಿ ಪ್ರತಿ 1 ಗಂಟೆಗೆ 1 ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವರದಿಯಾಗಿದೆ. ಈ ವರದಿಯನ್ನು ಅಮತ್ರ್ಯಸೇನ್ ಅಧ್ಯಯನ ಕ್ರಮವಾದ ಒಳವಿಭಜನೆಗೆ ಅಳವಡಿಸಿದರೆ, ಬಹು ದೊಡ್ಡ ಪ್ರಮಾಣ ಈ ತಳವರ್ಗಕ್ಕೆ ಮತ್ತು ಹೆಣ್ಣುಮಕ್ಖಳಿಗೆ ಮೀಸಲಾಗಿರುತ್ತದೆಂಬುದು ನಿಸ್ಸಂಶಯ.
ಇಂತಹ ಹಲವು ಕಾರಣಗಳು, ವಿದ್ಯಾರ್ಥಿಗಳೊಂದಿಗಿನ ಆಪ್ತ ಸಂವಾದಕ್ಕೆ ನಮ್ಮನ್ನು ಸಜ್ಜುಗೊಳಿಸಿತ್ತು. ಯುನಿಫಾರಂನಲ್ಲಿ ನೀಟಾಗಿ ಬರುವ ಮಕ್ಕಳಲ್ಲಿ 40% ರಷ್ಟು ಪಾಲಕರು ಕೂಲಿ ಕಾರ್ಮಿಕರು, ಸ್ವಂತ ಸೂರಿಲ್ಲದವರು 50% ರಷ್ಟು ತಂದೆ ಇಲ್ಲದ, ಇದ್ದರೂ ಈ ಕುಟುಂಬದಿಂದ ದೂರಾದ ತಾಯಿಯೆಂಬ ಏಕಪಾಲಕಳ ಹೆಗಲು ನಂಬಿ ಬೆಳೆದವರು 25% ರಷ್ಟು, ಇಷ್ಟು ಆರ್ಥಿಕ-ಸಾಮಾಜಿಕ ಸಮಸ್ಯೆ ಹೊತ್ತು, ತಾನು ಕಲಿತು ಉದ್ಯೋಗ ಹಿಡಿದು ಈ ಕಷ್ಟದಿಂದ ಪಾರಾಗಬೇಕು ಎಂದು ತಿಳಿದೂ; ಟಿ.ವಿ., ಮೊಬೈಲ್, ವಾಟ್ಸಪ್, ಆಲಸ್ಯ ಎಂಬ ರೋಗಗಳಿಗೆ ಬಲಿಯಾಗಿ ದಿನ ತಳ್ಳುತ್ತಿರುವವರು 70% ಕ್ಕೂ ಹೆಚ್ಚು. ಒಬ್ಬೊಬ್ಬ ವಿದ್ಯಾರ್ಥಿಯನ್ನು ಹತ್ತಿರಕ್ಕೆ ಕೂಡಿಸಿಕೊಂಡು ತುಂಬ ಆಪ್ತವಾಗಿ ‘ಹೇಳು, ನೀನು ಇದುವರೆಗೂ ಮಾಡಿದ, ಮಾಡ್ತಿರುವ ತಪ್ಪೇನು?’ ಎಂದು ಕೇಳಿದಾಗ, ಆ ಎಳೆಯರು ತಮ್ಮಿಂದ ಹೊರಬಂದು ತಮ್ಮನ್ನು ಪರೀಕ್ಷಿಸಿಕೊಂಡು ಉತ್ತರಿಸುವ ಕ್ಷಣವಿದೆಯಲ್ಲ ಅದು ಜೀವಮಾನದಲ್ಲಿಯೇ ತುಂಬ ಪವಿತ್ರ ಘಳಿಗೆ ಅನ್ನಿಸಿಬಿಟ್ಟಿತ್ತು. ಅವರು ಹೇಳುತ್ತಿದ್ದರು. ನಾನು ದಾಖಲಿಸಿಕೊಳ್ಳುತ್ತಿದ್ದೆ. ‘ಹೇಳು, ಈ ತಪ್ಪು ತಿದ್ದಿಕೊಳ್ಳಲು ಎಷ್ಟು ಟೈಮ್ ತಗೊಳ್ಳುವಾ?’ ಕೆಲವರು ಒಂದು ವಾರ, ಹದಿನೈದು ದಿನ ಹೀಗೆ ಗಡುವು ಕೊಟ್ಟರು. ಒಂದು ಹನಿ ಮಮತೆಗೆ ಕರಗಿ ಬೇರೆಯೇ ಆಗಿಬಿಡುವ ಮಕ್ಕಳನ್ನು ನೋಡಿದಾಗೆಲ್ಲ ನನ್ನ ವೃತ್ತಿಯ ಘನತೆಗೆ ನಾನೇ ವಂದಿಸುವಂತಾಗುತ್ತಿತ್ತು. ಕೈಗೆ, ಕುತ್ತಿಗೆಗೆ ತರಹೇವಾರಿ ದಾರ, ತಾಯತಗಳ 6 ಫೂಟು ಎತ್ತರದ ಹುಡುಗ, ಯುನಿಫಾರಂ ಮೇಲೆ ಚಳಿ ಕಮ್ಮಿಯಿದ್ದಾಗಲೂ ಸ್ವೆಟರು, ಮೊಣಕಾಲಿನವರೆಗೆ ಮಡಚಿದ ಪ್ಯಾಂಟು, ಮೊಣಕೈವರೆಗೆ ಮಡಚಿದ ಶರ್ಟು, ತಲೆಗೆ ತರಹೇವಾರಿ ಬಣ್ಣಗಳ ಉಸಾಬರಿಯ ಕಷ್ಟಕ್ಕೆ ಕಾರಣ ಅವರೊಳಗಿನ ಪುಕ್ಕಲುತನ, ತಾವು ಬುದ್ಧಿವಂತರಲ್ಲದ, ಯಾವ ವಿಶೇಷ ಸಾಧನೆಯೂ ಸಾಧ್ಯವಾಗದ ವಿದ್ಯಾರ್ಥಿಗಳಾದ್ದರಿಂದ ಎಲ್ಲಿ ತಮ್ಮನ್ನು ಎಲ್ಲರೂ ನಿರ್ಲಕ್ಷಿಸಿಬಿಡುತ್ತಾರೋ ಎಂಬ ದಿಗಿಲಿನ ಪರಿಣಾಮಗಳವು. ಎಸ್.ಎಸ್.ಎಲ್.ಸಿ. ಯಲ್ಲಿ 89% ಅಂಕ ತೆಗೆದ ವಿದ್ಯಾರ್ಥಿನಿ ಪಿ.ಯು.ಸಿ.ಗೆ 60% ಮಾಡಿದ್ದರ ಕಾರಣಗಳಲ್ಲೊಂದು, ‘ನಿನ್ನ ಕನ್ನಡಿ ಮುಂದೆ ನಿಲ್ಲುವ ಟೈಮ್‍ನ ಹೆಚ್ಚಳವಾಗಿರಬಹುದೇ’ ಎಂದಾಗ ಅವಳೂ ಪಕಪಕ ನಕ್ಕಳಾದರೂ ಹೌದೆಂದು ಸಮ್ಮತಿಸಿಯೂ ಬಿಟ್ಟಳು. ತಮ್ಮೊಳಗಿನ ಗಂಡು-ಹೆಣ್ಣು ಎಂಬ ಹಂಗಿಗೆ ಈಡಾಗಿ, ತಮ್ಮ ಬಾಲ್ಯದ ಕ್ರೀಡೆಯ, ಹಾಡಿನ, ಕಲಾಭಿವ್ಯಕ್ತಿಯ ಶ್ರಮಗಳನ್ನು ಕೈಬಿಟ್ಟಿದ್ದಾರೆ. ಯಾವ ಲೆಕ್ಕಕ್ಕೂ ಮಿಗುವ ಪ್ರತಿಭೆಯ ಕಾಣೆಯಿದು. ಕಡೆಗೂ, ಮನಸ್ಸು ಮಾಡಿದರೆ ನಮ್ಮ ಬಾಳಿನ ದಿಶೆಯನ್ನು ನಾವೇ ಬದಲಿಸಬಲ್ಲೆವು ಎಂಬ ತಿಳಿವು ತರುವ ಪ್ರಯತ್ನ ಮಾಡಿಯಾಯಿತು. ಈ ಪ್ರಯತ್ನ ಯಾರೋ ಬಡ ಕೂಲಿ ಅವ್ವ-ಅಪ್ಪಂದಿರ ಹಣೆಯ ಗೆರೆ ಅಳಿಸಿ, ಸಣ್ಣ ನಗು ಅರಳಿಸಲಿ ಎನಿಸಿತು. ಗಿಡಕ್ಕೆ ನೀರುಣಿಸುತ್ತ, ಮಾಲಿಯ ದೇಹ-ಮನಸ್ಸುಗಳು ಮುದಗೊಳ್ಳುವಂತೆ – ನಮ್ಮಗಳ ಮನಸ್ಸಿಗೂ ಎಂಥದೋ ಮುದ, ಶುದ್ಧ ಗಾಳಿಯ ಸ್ಪರ್ಶದ ಗೆಲುವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಪರಾಧದ ಸ್ವರೂಪ ಏನೇ ಇರಲಿ, ತ್ವರಿತ ವಿಚಾರಣೆಯ ಹಕ್ಕು ಅನ್ವಯಿಸುತ್ತದೆ: ಸುಪ್ರೀಂ ಕೋರ್ಟ್

ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ತ್ವರಿತ ವಿಚಾರಣೆಯ ಹಕ್ಕು ಅಪರಾಧದ ಗಂಭೀರತೆ ಅಥವಾ ಸ್ವರೂಪವನ್ನು ಲೆಕ್ಕಿಸದೆ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಪುನರುಚ್ಚರಿಸಿದೆ. 2002 ರ ಹಣ ವರ್ಗಾವಣೆ ತಡೆ ಕಾಯ್ದೆಯ...

ಬಾಂಗ್ಲಾದೇಶ: ಗುಂಪು ದಾಳಿಯಿಂದ ತಪ್ಪಿಸಿಕೊಳ್ಳಲು ಕಾಲುವೆಗೆ ಹಾರಿದ ಹಿಂದೂ ವ್ಯಕ್ತಿ ಸಾವು

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ಸುದ್ದಿಗಳು ನಿರಂತರವಾಗಿ ವರದಿಯಾಗುತ್ತಿರುವ ನಡುವೆಯೇ, ನೌಗಾಂವ್ ಜಿಲ್ಲೆಯ ಮೊಹದೇವ್‌ಪುರ ಉಪಜಿಲ್ಲಾದಲ್ಲಿ ದರೋಡೆ ಆರೋಪ ಹೊರಿಸಿದ ಗುಂಪಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ 25 ವರ್ಷದ ಹಿಂದೂ ವ್ಯಕ್ತಿ ಕಾಲುವೆಗೆ ಹಾರಿ...

ಹೋರಾಟಗಾರ್ತಿ ಕಾಮ್ರೇಡ್ ಪದ್ಮಕ್ಕ ಶ್ರದ್ಧಾಂಜಲಿ ಸಭೆ

ಬೆಂಗಳೂರಿನ ಆಶೀರ್ವಾದ್ ಸೆಂಟರ್ ನಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಪದ್ಮಾರವರ ಕುಟುಂಬ, ಸಹ ಹೋರಾಟಗಾರು, ಚಿಂತಕರು, ಸಾಹಿತಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಪದ್ಮಾರವರ ಜೊತೆಗಿನ ಒಡನಾಟವನ್ನು ನೆನೆಯಲಾಯಿತು. ಡಿಸೆಂಬರ್ 25 ರಂದು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ...

‘ನಾಯಿಗಳ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲ’: ರಸ್ತೆಗಳು, ನಾಯಿಗಳಿಂದ ಮುಕ್ತವಾಗಿರಬೇಕು: ಸುಪ್ರೀಂ ಕೋರ್ಟ್

ನವದೆಹಲಿ: ನಾಯಿ ಕಚ್ಚುವ ಮನಸ್ಥಿತಿಯಲ್ಲಿರುವಾಗ ಅದರ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲವಾದ್ದರಿಂದ, ರಸ್ತೆಗಳು ಅಥವಾ ಬೀದಿಗಳು ನಾಯಿಗಳಿಂದ ಮುಕ್ತವಾಗುವಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.  ಬೀದಿ ನಾಯಿಗಳಿಗೆ ಸಂಬಂಧಿಸಿದ ಸ್ವಯಂಪ್ರೇರಿತ ಪ್ರಕರಣವನ್ನು...

‘ಮಜಾ ನಾ ಕರಾಯಾ ತೋ..ಪೈಸೆ ವಾಪಸ್’: ಭಾರತಕ್ಕೆ ನೇರ ಬೆದರಿಕೆ ಹಾಕಿದ ಪಾಕಿಸ್ತಾನ ಸೇನಾಧಿಕಾರಿ ಅಹ್ಮದ್ ಷರೀಫ್ ಚೌಧರಿ

ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ನ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ, ಕಾಬೂಲ್ ಜೊತೆಗಿನ ಇಸ್ಲಾಮಾಬಾದ್‌ನ ನಡೆಯುತ್ತಿರುವ ಸಂಘರ್ಷದೊಂದಿಗೆ ಭಾರತವನ್ನು ಜೋಡಿಸುವ ಮೂಲಕ ಮತ್ತೊಮ್ಮೆ ವಿವಾದವನ್ನು ಹುಟ್ಟುಹಾಕಿದ್ದಾರೆ.  ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ...

‘ಸೋಮನಾಥನನ್ನು ಹೆಚ್ಚು ದ್ವೇಷಿಸುತ್ತಿದ್ದ ನೆಹರು, ಮೊಘಲ್ ಆಕ್ರಮಣಕಾರರನ್ನು ವೈಭವೀಕರಿಸುತ್ತಿದ್ದರು’: ಬಿಜೆಪಿ ಆರೋಪ

ನವದೆಹಲಿ: ಸೋಮನಾಥ ದೇವಾಲಯವನ್ನು ಹಿಂದೆ ಘಜ್ನಿ ಮಹಮ್ಮದ್ ಮತ್ತು ಅಲಾವುದ್ದೀನ್ ಖಿಲ್ಜಿ ಲೂಟಿ ಮಾಡಿದ್ದರು ಆದರೆ ಸ್ವತಂತ್ರ ಭಾರತದಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಭಗವಾನ್ ಸೋಮನಾಥನನ್ನು ಹೆಚ್ಚು ದ್ವೇಷಿಸುತ್ತಿದ್ದರು ಎಂದು...

ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿರುವುದಾಗಿ ಆರೋಪ: ಆಕೆ ತನ್ನನ್ನು ತಾನು ವಿವಸ್ತ್ರಗೊಳಿಸಿಕೊಂಡಿದ್ದಾಳೆ ಎಂದ ಪೊಲೀಸ್ ಕಮಿಷನರ್

ಹುಬ್ಬಳ್ಳಿ: ಪೊಲೀಸ್ ವ್ಯಾನ್ ಒಳಗೆ ಪೂರ್ಣ ಬಟ್ಟೆಯಿಲ್ಲದೆ ಮಹಿಳೆಯೊಬ್ಬರ ವಿಡಿಯೋ ವೈರಲ್ ಆದ ನಂತರ, ಬಿಜೆಪಿ ನಾಯಕರು ಪೊಲೀಸರು ಅವಳನ್ನು ಬಂಧಿಸುವಾಗ ಆಕೆಯ ಬಟ್ಟೆಗಳನ್ನು ಬಿಚ್ಚಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಜನವರಿ 5...

ಬಿಜೆಪಿಯೊಂದಿಗೆ ಕೈಜೋಡಿಸಿದ ಗೌಡರೊಂದಿಗಿನ ಸಂಬಂಧ ಕಡಿದುಕೊಳ್ಳಲು ನಿರ್ಧರಿಸಿದ ಕೇರಳ ಜೆಡಿಎಸ್; ಹೊಸ ಪಕ್ಷದೊಂದಿಗೆ ವಿಲೀನ

ಜನತಾ ದಳ (ಜಾತ್ಯತೀತ) ದ ಕೇರಳ ಘಟಕವು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನೇತೃತ್ವದ ರಾಷ್ಟ್ರೀಯ ನಾಯಕತ್ವದೊಂದಿಗೆ ಸಂಬಂಧವನ್ನು ಕಡಿದುಕೊಂಡು ಹೊಸ ರಾಜಕೀಯ ಪಕ್ಷದೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದೆ. ಈ ನಿರ್ಧಾರದ ಕುರಿತು ಶೀಘ್ರದಲ್ಲೇ ಅಧಿಕೃತ...

‘ಚೀನಾ, ರಷ್ಯಾ, ಕ್ಯೂಬಾ, ಇರಾನ್‌ಗಳನ್ನು ಹೊರಗಿಡಿ’: ವೆನೆಜುವೆಲಾಗೆ ಟ್ರಂಪ್ ತಂಡದ ಹೊಸ ತೈಲ ಎಚ್ಚರಿಕೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವೆನೆಜುವೆಲಾದ ಮಧ್ಯಂತರ ಅಧ್ಯಕ್ಷ ಡೆಲ್ಸಿ ರೊಡ್ರಿಗಸ್ ನೇತೃತ್ವದ ಹೊಸ ಆಡಳಿತಕ್ಕೆ ಚೀನಾ, ರಷ್ಯಾ, ಇರಾನ್ ಮತ್ತು ಕ್ಯೂಬಾ ಜೊತೆಗಿನ ಆರ್ಥಿಕ ಸಂಬಂಧಗಳನ್ನು "ಕಿತ್ತುಹಾಕಬೇಕು" ಮತ್ತು "ಕಡಿತಗೊಳಿಸಬೇಕು" ಎಂದು...

ದೆಹಲಿ ಫೈಜ್-ಎ-ಇಲಾಹಿ ಮಸೀದಿ ಬಳಿ ತೆರವು ಕಾರ್ಯಾಚರಣೆಗೆ ಸ್ಥಳೀಯರಿಂದ ವಿರೋಧ, ಉದ್ವಿಗ್ನತೆ; ಅಶ್ರುವಾಯು ಪ್ರಯೋಗ, 10 ಜನರ ಬಂಧನ

ದೆಹಲಿಯ ತುರ್ಕಮನ್ ಗೇಟ್-ರಾಮ್ಲೀಲಾ ಮೈದಾನ ಪ್ರದೇಶದಲ್ಲಿರುವ ಶತಮಾನಗಳಷ್ಟು ಹಳೆಯದಾದ ಫೈಜ್-ಎ-ಇಲಾಹಿ ಮಸೀದಿಯ ಬಳಿ ಬುಧವಾರ ಮುಂಜಾನೆ ನಡೆದ ತೆರವು ಕಾರ್ಯಾಚರಣೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ಆ ನಂತರ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ, ಇದು...