ತನ್ನ ಮಗಳ ಜನ್ಮದಿನ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಸುತ್ತೋಲೆ ಹೊರಡಿಸುವ ಮೂಲಕ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ.
ಯಾವುದೇ ರಾಜಕಾರಣಿ ಆಗಿರಲಿ, ಸರ್ಕಾರಿ ಉನ್ನತ ಅಧಿಕಾರಿಯೇ ಆಗಿರಲಿ ತಮ್ಮ ಖಾಸಗಿ ಕಾರ್ಯಕ್ರಮಗಳಿಗೆ ಖಾಸಗಿಯಾಗಿಯೇ ಆಹ್ವಾನ ನೀಡುತ್ತಾರೆಯೇ ಹೊರತು ಸರ್ಕಾಕದ ಲೆಟರ್ ಹೆಡ್ ಅನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ. ಆದರೆ ಕುವೆಂಪು ವಿವಿ ಕುಲಪತಿ ಈ ಎಡವಟ್ಟು ಮಾಡಿದ್ದಾರೆ.
ಕುವೆಂಪು ವಿಶ್ವವಿದ್ಯಾನಿಲಯದ ಲೋಗೋ ಇರುವ ಸರ್ಕಾರಿ ಲೆಟರ್‌ನಲ್ಲಿ ಸುತ್ತೋಲೆ ಹೊರಡಿಸಿರುವ ಅವರು ಎಲ್ಲಾ ನೌಕರ ಸಿಬ್ಬಂದಿಗಳು ಖುದ್ದಾಗಿ ಹಾಜರಾಗುವಂತೆ ಸೂಚಿಸಿದ್ದಾರೆ.
“ನನ್ನ ಮಗಳ ಜನ್ಮ ದಿನದ ಪ್ರಯುಕ್ತ ದಿನಾಂಕ 28-05-23ರ ಮದ್ಯಾಹ್ನ 12.30ಕ್ಕೆ ವಿಶ್ವನಿದ್ಯಾನಿಲಯದ ಆವರಣದಲ್ಲಿರುವ ಕುಲಪತಿಗಳ ಗೃಹದಲ್ಲಿ ಸಂತೋಷ ಕೂಟವನ್ನು ಏರ್ಪಡಿಸಲಾಗಿದೆ. ವಿಶ್ವವಿದ್ಯಾನಿಲಯದ ಎಲ್ಲಾ ಅಧ್ಯಾಪಕರು, ಅದ್ಯಾಪೇಕತರ ನೌಕರರು, ಅತಿಥಿ ಉಪನ್ಯಾಸಕರು, ಏಜೆನ್ಸಿ ನೌಕರರು ತಪ್ಪದೆ ಹಾಜರಾಗಬೇಕೆಂದು ಕೋರಲಾಗಿದೆ. ಇದನ್ನ ವೈಯಕ್ತಿಕ ಆಹ್ವಾನವೆಂದು ಭಾವಿಸಿ ಎಲ್ಲರೂ ಸಂತೋಷ ಕೂಟದಲ್ಲಿ ಭಾಗವಹಿಸಬೇಕೆಂದು ಕೇಳಿಕೊಳ್ಳುತ್ತೇನೆ” ಎಂದ ಎಲ್ಲಾ ವಿಭಾಗಗಳ ಮುಖ್ಯಸ್ಥರಿಗೂ ಸುತ್ತೋಲೆ ಹೊರಡಿಸಿದ್ದಾರೆ.
ಇದುವರೆಗೂ ಹಲವಾರು ಕುಲಪತಿಗಳನ್ನು ಕುವೆಂಪು ವಿಶ್ವವಿದ್ಯಾಲಯ ಕಂಡಿದೆ. ಹಿಂದಿನ ಯಾವೊಬ್ಬ ಕುಲಪತಿಯೂ ಇಂತಹ ಸುತ್ತೋಲೆ ಹೊರಡಿಸಿರಲಿಲ್ಲ. ಇದೀಗ ಕುಲಪತಿ ವೀರಭದ್ರಪ್ಪ ಅವರು ಸುತ್ತೋಲೆ ಹೊರಡಿಸುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಕುಲಪತಿಗಳ ಸುತ್ತೋಲೆ ಮೇರೆಗೆ ಹಲವರು ನೌಕರರು, ಅಧ್ಯಾಪಕರು ಸಂತೋಷಕೂಟದಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ.

ಇದನ್ನೂ ಓದಿರಿ: ಜಾನಪದ ವಿವಿ ಬೋಧಕ, ಬೋಧಕೇತರ ಸಿಬ್ಬಂದಿ ನೇಮಕದಲ್ಲಿ ಅಕ್ರಮ; ಅರ್ಧರಾತ್ರಿಯಲ್ಲಿ ನಡೆದಿತ್ತು ಸಂದರ್ಶನ?


