Homeಕರ್ನಾಟಕಜಾನಪದ ವಿವಿ ಬೋಧಕ, ಬೋಧಕೇತರ ಸಿಬ್ಬಂದಿ ನೇಮಕದಲ್ಲಿ ಅಕ್ರಮ; ಅರ್ಧರಾತ್ರಿಯಲ್ಲಿ ನಡೆದಿತ್ತು ಸಂದರ್ಶನ?

ಜಾನಪದ ವಿವಿ ಬೋಧಕ, ಬೋಧಕೇತರ ಸಿಬ್ಬಂದಿ ನೇಮಕದಲ್ಲಿ ಅಕ್ರಮ; ಅರ್ಧರಾತ್ರಿಯಲ್ಲಿ ನಡೆದಿತ್ತು ಸಂದರ್ಶನ?

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಅಕ್ರಮವಾಗಿ ನೇಮಕಾತಿ ನಡೆದಿರುವ ಗುರುತರ ಆರೋಪ ಕೇಳಿಬಂದಿದೆ

- Advertisement -
- Advertisement -

ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯವು ನಿಯಮಾವಳಿ ಮೀರಿ ಬೋಧಕ, ಬೋಧಕೇತರ ಸಿಬ್ಬಂದಿ ನೇಮಕ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ತರಾತುರಿಯಲ್ಲಿ ನೇಮಕಾತಿ ನಡೆದಿದ್ದು ಅಕ್ರಮದ ಕಮಟು ವಾಸನೆ ಬೀರಿದೆ.

ಈ ಕುರಿತು ನೊಂದ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದರೆ, ಮಾಜಿ ಎಂಎಲ್‌ಸಿ, ಕಾಂಗ್ರೆಸ್ ವಕ್ತಾರ ರಮೇಶ್‌ ಬಾಬು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.

ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಸರ್ವಾಂಗೀಣ ಹಿತರಕ್ಷಣಾ ಟ್ರಸ್ಟ್‌ ಅಧ್ಯಕ್ಷರಾದ ಬಸವರಾಜ ಶಿ.ಗೊಬ್ಬಿ ಅವರು ವಿವಿಯ ಕುಲಸಚಿವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಮೇಶ್‌ ಬಾಬು ಅವರು ತಮ್ಮ ಪತ್ರದಲ್ಲಿ, “ಇತರೆ ವಿಶ್ವವಿದ್ಯಾಲಯಗಳ ರೀತಿಯಲ್ಲಿ ಜಾನಪದ ವಿಶ್ವವಿದ್ಯಾಲಯವು ತನ್ನ ಮೂಲ ಸೆಲೆಯನ್ನು ಕಳೆದುಕೊಂಡು ವ್ಯಾಪಾರಿ ವಿಶ್ವವಿದ್ಯಾಲಯವಾಗಿ ಪರಿವರ್ತನೆಯಾದರೆ ಈ ವಿಶ್ವವಿದ್ಯಾಲಯದ ಸ್ಥಾಪನೆಯ ಮೂಲ ಉದ್ದೇಶವೇ ವಿಫಲವಾಗುತ್ತದೆ. ಕರ್ನಾಟಕದಲ್ಲಿ ಮೇ 10ರಂದು ವಿಧಾನಸಭೆ ಚುನಾವಣೆ ನಡೆದಿದ್ದು, ಈ ದಿನ ಪೂರ್ಣ ಪ್ರಮಾಣದ ಮಂತ್ರಿ ಮಂಡಲ ರಚನೆಯಾಗಿದೆ. ಕರ್ನಾಟಕದಲ್ಲಿ, ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಸಚಿವರಿಗೆ ಖಾತೆ ಹಂಚಿಕೆ ಆಗುವ ಮೊದಲೇ ದುರುದ್ದೇಶಪೂರಿತವಾಗಿ ಜಾನಪದ ವಿಶ್ವವಿದ್ಯಾಲಯದಲ್ಲಿ ರಾತೋರಾತ್ರಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ನಿಯಮಾವಳನ್ನು ಮೀರಿ ಕ್ರಮವಾಗಿ ನೇಮಕ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.

“ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಿದ್ದ ಸಂದರ್ಭದಲ್ಲಿ ಸಹಾಯಕ ಪ್ರಾಧ್ಯಾಪಕರು, ಬೋಧಕ ಸಿಬ್ಬಂದಿ, ಬೋಧಕೇತರ ಸಿಬ್ಬಂದಿಗೆ ಆತುರ ಆತುರವಾಗಿ ಅರ್ಹತಾ ಪರೀಕ್ಷೆಗಳನ್ನು ನಡೆಸಲಾಗಿದೆ. ತದನಂತರ ರಾಜ್ಯದಲ್ಲಿ ಜವಾಬ್ದಾರಿಯುತ ಚುನಾಯಿತ ಸರ್ಕಾರ ಇಲ್ಲದ ಸಂದರ್ಭದಲ್ಲಿ ಸ್ವಜನ ಪಕ್ಷಪಾತದ ಕಾರಣಕ್ಕಾಗಿ ಮತ್ತು ನೇಮಕಾತಿಗಳಲ್ಲಿ ಹಣದ ವ್ಯವಹಾರವನ್ನು ನಡೆಸುವ ಕಾರಣಕ್ಕಾಗಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆದು ನೇಮಕಾತಿಗೆ ಚಾಲನೆ ನೀಡಲಾಗಿದೆ. ಅರ್ಧ ರಾತ್ರಿಯಲ್ಲಿ ಆಭ್ಯರ್ಥಿಗಳ ಸಂದರ್ಶನ ನಡೆಸಿ ಕಾನೂನುಬಾಹಿರವಾಗಿ ಗೊತ್ತುವಳಿಗಳನ್ನು ಮಾಡುವುದರ ಮೂಲಕ ಅನೇಕ ಅನುಮಾನಗಳಿಗೆ ಅವಕಾಶ ನೀಡಲಾಗಿದೆ” ಎಂದಿದ್ದಾರೆ.

“ಕಲ್ಯಾಣ ಕರ್ನಾಟಕದ 371ಜೆ ಅಡಿಯಲ್ಲೂ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ತೆಗೆದು ನೇಮಕಾತಿಯ ಪ್ರಕ್ರಿಯೆಗಳನ್ನು ನಡೆಸಲಾಗಿರುತ್ತದೆ. ಒಟ್ಟಾರೆ ಜಾನಪದ ವಿಶ್ವವಿದ್ಯಾಲಯದ ಅರ್ಧರಾತ್ರಿಯ ನೇಮಕಾತಿ ಪ್ರಕರಣಗಳು ಹಲವಾರು ಪ್ರಶ್ನೆಗಳಿಗೆ ಅವಕಾಶ ನೀಡಿರುವುದರ ಜೊತೆಗೆ ಅಕ್ರಮದ ವಾಸನೆಯನ್ನು ತೆರೆದಿಟ್ಟಿದೆ. ರಾಜ್ಯದ ಜನಪದ ಕಲೆಯ ಪ್ರತಿಬಿಂಬವಾದ ಜಾನಪದ ವಿಶ್ವವಿದ್ಯಾಲಯದಲ್ಲಿ ಇಂತಹ ಆಶ್ರಮಗಳಿಗೆ ಅವಕಾಶವನ್ನು ನೀಡುವುದರ ಮೂಲಕ ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವ ಮತ್ತು ಇತರೆ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಸೂಕ್ತವಾದ ತನಿಖೆಯ ಹೊರತು ಅಕ್ರಮವನ್ನು ಬಯಲಿಗೆಳೆಯಲು ಸಾಧ್ಯವಿಲ್ಲ” ಎಂದು ವಿವರಿಸಿದ್ದಾರೆ.

“ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ 2018 ರಲ್ಲಿ ಸದರಿ ವಿಶ್ವವಿದ್ಯಾಲಯದಿಂದ ನೇಮಕಾತಿಗಾಗಿ ಅರ್ಜಿಗಳನ್ನು ಕರೆಯಲಾಗಿತ್ತು. ಕಳೆದ ಐದು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆಯನ್ನು ಚಾಲನೆಯಲ್ಲಿ ಇಟ್ಟಿದ್ದ ಜಾನಪದ ವಿಶ್ವವಿದ್ಯಾಲಯವು, ಚುನಾವಣೆ ನಂತರ ಆತುರ ಆತುರವಾಗಿ ಅಭ್ಯರ್ಥಿಗಳನ್ನು ರಾತ್ರೋರಾತ್ರಿ ಸಂದರ್ಶನಕ್ಕೆ ಕರೆದು, ನೇಮಕಾತಿ ಪ್ರಕ್ರಿಯೆಗೆ ಚಾಲನೆ ಕೊಟ್ಟು ಅಕ್ರಮ ಅವಕಾಶ ನೀಡಿದೆ. ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಈ ಅಕ್ರಮ ತಡೆಯುವ ಪ್ರಯತ್ನವನ್ನು ಮಾಡಿಲ್ಲ. ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವ ಮತ್ತು ಇತರೆ ಅಧಿಕಾರಿಗಳು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಮತ್ತು ರಾಜ್ಯ ಸರ್ಕಾರವನ್ನು ಕತ್ತಲಲ್ಲಿ ಇಟ್ಟು ಅಕ್ರಮಕ್ಕೆ ಮುಂದಾಗಿರುತ್ತಾರೆ. ಸದರಿ ವಿಶ್ವವಿದ್ಯಾಲಯವು ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ್‌ ಬೊಮ್ಮಾಯಿರವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತಿದ್ದು, ವಿಶ್ವವಿದ್ಯಾಲಯದ ನಡೆ ರಾಜಕೀಯ ಹಸ್ತಕ್ಷೇಪದ ಕರಿ ನೆರಳಿನಿಂದಲೂ ಕೂಡಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

“ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿ ಕೂಡಲೇ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆಗೆ ತಡೆ ನೀಡಬೇಕು. ಈ ವಿಶ್ವವಿದ್ಯಾಲಯದ ಕಾನೂನು ಬಾಹಿರ ನಡೆಯನ್ನು ವಿಶೇಷ ತನಿಖಾ ಸಂಸ್ಥೆಯ ಮೂಲಕ ತನಿಖೆಗೆ ಒಳಪಡಿಸಬೇಕು” ಎಂದು ಕೋರಿದ್ದಾರೆ.

ಬಸವರಾಜ ಶಿ.ಗೊಬ್ಬಿ ಅವರು ಕುಲಸಚಿವರಿಗೆ ಬರೆದಿರುವ ಪತ್ರದಲ್ಲಿ, “ತರಾತುರಿಯಲ್ಲಿ ನಡೆಯುತ್ತಿರುವ ಕಾಯಂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿಯ ಸಂದರ್ಶನದಲ್ಲಿ ಸಂದರ್ಶನಕ್ಕೆ ಕೇವಲ ಹತ್ತು ತಾಸುಗಳ ಮುಂಚೆ ಅಭ್ಯರ್ಥಿಗಳನ್ನು ಕರೆದಿರುವುದರಿಂದ ಕೆಲವು ಅಭ್ಯರ್ಥಿಗಳ ಸಂದರ್ಶನದಿಂದ ವಂಚಿತರಾಗುತ್ತಿದ್ದಾರೆ. ಸಂದರ್ಶನಕ್ಕೆ ಹಾಜರಾಗಿರುವ ಕೆಲವು ಅಭ್ಯರ್ಥಿಗಳ ಮೇಲೆ ಎಫ್.ಐ.ಆರ್, ಕೊರ್ಟ್‌‌ನಲ್ಲಿ ಕೇಸು, ಸುಳ್ಳು ಜಾತಿ ಪ್ರಮಾಣ ಪತ್ರ, ಕೃತಿ ಚೌರ್ಯ, ಪಿ.ಎಚ್.ಡಿ.ಗಳ ಬಗ್ಗೆ ಕೇಸ್‌ಗಳು, ಮಾಧ್ಯಮಗಳಲ್ಲಿ ಇವರ ಕುರಿತು ಅಕ್ರಮಗಳ ಕುರಿತು ಪ್ರಕಟಣೆ, ಪಿ.ಎಚ್.ಡಿ. ಪುಸ್ತಕದಲ್ಲಿಯೇ ಭಾಗ ಮಾಡಿ 3 ಪುಸ್ತಕ ಮಾಡಿದ ಆರೋಪಗಳಿವೆ. ಎಂ.ಬಿ.ಎ. ಅಭ್ಯರ್ಥಿಯೋರ್ವರ ಪದವಿ, ಸ್ನಾತಕೋತ್ತರ ಪದವಿ ಒಂದಕ್ಕೊಂದು ಸಂಬಂಧವೇ ಇರುವುದಿಲ್ಲ. ಪುಸ್ತಕ ಹಾಗೂ ಇವರ ಲೇಖನಗಳು ಸಂಪೂರ್ಣ ಕಟ್‌ ಆ್ಯಂಡ್ ಪೇಸ್ಟ್‌‌ ಆಗಿದ್ದು ಇದನ್ನು ಪರಿಶೀಲಿಸದೇ ಸಂದರ್ಶನ ನಡೆಸಬಾರದು. ಲೈಂಗಿಕ ಹಗರಣ ಹಾಗೂ ಅಧಿಕಾರಯೋರ್ವ ಅದೇ ಅಧಿಕಾರದ ಸ್ಥಾನದಲ್ಲಿದ್ದುಕೊಂಡು ಅದೇ ಹುದ್ದೆಗೆ ಸಂದರ್ಶನಕ್ಕೆ ಹಾಜರಾಗುತ್ತಿದ್ದಾರೆ. ಹೀಗೆ ಅನೇಕ ಹಗರಣಗಳು ನೀವು ಆಯ್ಕೆ ಮಾಡುತ್ತಿರುವ ಅಭ್ಯರ್ಥಿಗಳಲ್ಲಿದ್ದು ಇವರ ಸಂಪೂರ್ಣ ದಾಖಲೆಗಳನ್ನು ಕುಲಂಕಷವಾಗಿ ಪರಿಶೀಲಿಸಬೇಕು. ನೇಮಕಾತಿಯ ವೇಗ ನೋಡಿದರೆ ಇಲ್ಲಿ ಅಕ್ರಮಗಳು ನಡೆದಿರುವ ಅನುಮಾನವಿದೆ, ಕೂಡಲೆ ಈಗ ನಡೆಯುತ್ತಿರುವ ಸಂದರ್ಶನವನ್ನು ಮುಂದೂಡಿ ಅಭ್ಯರ್ಥಿಗಳ ಎಲ್ಲ ದಾಖಲೆಗಳನ್ನು ನುರಿತವರಿಂದ ಪರಿಶೀಲಿಸಿ ಮತ್ತೊಂದು ದಿನ ಸಂದರ್ಶನವನ್ನು ನಡೆಸಬೇಕು” ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿರಿ: ವಂದೇ ಮಾತರಂ, ರಾಷ್ಟ್ರಗೀತೆ ಸಂಬಂಧ ಘರ್ಷಣೆ; ಮೀರತ್‌ನ ಇಬ್ಬರು ಬಿಜೆಪಿ ಕೌನ್ಸಿಲರ್‌ ಅರೆಸ್ಟ್

ನೊಂದ ಆಕಾಂಕ್ಷಿಯೊಬ್ಬರು ಅಳಲು ತೋಡಿಕೊಂಡಿದ್ದು, “ಜಾನಪದ ವಿಶ್ವವಿದ್ಯಾಲಯ 2017- 18ನೇ ಸಾಲಿನಲ್ಲಿ ಬೋಧಕ, ಬೋಧಕೇತರ ಹುದ್ದೆಗಳಿಗೆ ಅರ್ಜಿಯನ್ನು ಕರೆದಿತ್ತು. ನಾನು ಜಾನಪದ ಸಾಹಿತ್ಯ, ಜನಪದ ಕಲೆ ವಿಷಯಗಳ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದೆ. ಸಹಾಯಕ ಸಂಶೋಧನಾ ಅಧಿಕಾರಿ ಬೋಧಕೇತರ ಹುದ್ದೆಗೂ ಅರ್ಜಿ ಹಾಕಿದ್ದೆ. ನಾನು ಜಾನಪದದಲ್ಲಿ ಎಂ.ಎ, ಪಿಎಚ್‌ಡಿ, ಸ್ಲೆಟ್‌ ಮಾಡಿಕೊಂಡಿರುವೆ. ಕನ್ನಡ ಎಂ.ಎ, ನೆಟ್‌, ಸ್ಲೆಟ್‌ ಆಗಿದೆ. 30ಕ್ಕಿಂತಲೂ ಹೆಚ್ಚು ಐಎಸ್‌ಬಿಎನ್‌ ಲೇಖನಗಳು ಇವೆ. ಪುಸ್ತಕ ಇದೆ. ಆದರೂ ಸಹಾಯಕ ಪ್ರಾಧ್ಯಾಪಕ ಅರ್ಹತೆಯ ಪಟ್ಟಿಯಲ್ಲಿ ನನ್ನ ಹೆಸರನ್ನು ಕೈ ಬಿಡಲಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಈ ಕುರಿತು ಅಲ್ಲಿನ ಕುಲಸಚಿವರಾಗಿರುವ ಸಿಟಿ ಗುರುಪ್ರಸಾದ್ ಅವರಿಗೆ ವಾಟ್ಸಾಪ್ ಮೆಸೇಜ್‌ನಲ್ಲಿ ನ್ಯಾಯ ಕೇಳಿದಕ್ಕೆ ತೇಲಿಕೆ ಉತ್ತರ ನೀಡಿದ್ದಾರೆ. ನಿಮ್ಮದು ಎಪಿಐ ಸ್ಕೋರ್‌ ಕಡಿಮೆ ಇದೆ ಎಂದು ಹೇಳುತ್ತಿದ್ದಾರೆ. ನಾನು ಸಂದರ್ಶನಕ್ಕೆ ಅರ್ಹನಿದ್ದೇನೆ. ನನ್ನದು ಎಪಿಐ ಕಡಿಮೆ ಇದ್ದರೆ ನನ್ನನ್ನು ಅರ್ಹತೆಯ ಪಟ್ಟಿಯಲ್ಲಿ ಹೇಗೆ ಸೇರಿಸಿದಿರಿ ಎಂದು ಕೇಳಿದ್ದಕ್ಕೆ, ಹಾಗೂ ಇತರರ ಎಪಿಐ ಸ್ಕೋರ್‌ಗಳನ್ನು ಅಂತರ್ಜಾಲದಲ್ಲಿ ಬಹಿರಂಗಪಡಿಸಿ ಎಂದಿದ್ದಕ್ಕೆ ಅವರು ಪ್ರತಿಕ್ರಿಯಿಸಿಲ್ಲ. ನನ್ನ ಪ್ರಶ್ನೆಗೆ ಉತ್ತರಿಸಲು ಅವರ ಹತ್ತಿರ ಉತ್ತರ ಇಲ್ಲ” ಎಂದಿದ್ದಾರೆ.

“ನನ್ನ ತರಹ ಅನೇಕ ವಿದ್ಯಾರ್ಥಿಗಳಿಗೆ ಜಾನಪದ ವಿವಿಯಿಂದ ಮೋಸವಾಗಿದೆ. ಪ್ರಾಧ್ಯಾಪಕ ಹುದ್ದೆಯ ಪರೀಕ್ಷೆ ಮುಗಿದ ಮೇಲೆ ಎರಡು ದಿನಕ್ಕೆ ವಿದ್ಯಾರ್ಥಿಗಳಿಗೆ ಕರೆಯ ಪತ್ರ ಹೋಗಿದೆ. ಮತ ಎಣಿಕೆಯ ದಿನ ಪರೀಕ್ಷೆ ಮಾಡಿದ್ದಾರೆ. ಬಸ್‌ಗಳ ಕೊರತೆಯಿಂದ ಅನೇಕ ಜನ ಪರೀಕ್ಷೆ ಬರೆಯಲು ಹೋಗಲು ಆಗಿಲ್ಲ. ಪರೀಕ್ಷೆಯ ದಿನವೇ ಕೆಲವರಿಗೆ ಪತ್ರ ಹೋಗಿದೆ. 300, 400 ಮೈಲಿಗಳಿಂದ ಅವರು ಅವತ್ತೇ ಹೋಗಿ ಹೇಗೆ ಪರಿಕ್ಷೆ ಬರೆಯಲು ಸಾಧ್ಯ? ಪರೀಕ್ಷೆಯ ಮೂರು ದಿನದ ಹಿಂದೆ ವೆಬ್‌ಸೈಟ್‌ನಲ್ಲಿ ಸಿಲಬಸ್‌ ಪ್ರಕಟಿಸಲಾಗಿದೆ. ಜಾನಪದ ವಿಶ್ವವಿದ್ಯಾಲಯ ನಡೆಸಿದ ಯಾವುದೇ ಪರೀಕ್ಷೆಯ ಯಾವುದೇ ದಿನಾಂಕವನ್ನು ವಿವಿಯ ಜಾಲತಾಣದಲ್ಲಿ ಪ್ರಕಟಿಸಿಲ್ಲ. ಜಾನಪದ ವಿವಿಯ ಈ ನಡೆ ಸಂಪೂರ್ಣ ಅವೈಜ್ಞಾನಿಕವಾಗಿದೆ” ಎಂದು ವಿಷಾದಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ಶಾಸಕ ಹೆಚ್‌.ಡಿ ರೇವಣ್ಣ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡಿರುವ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ...