Homeಕರ್ನಾಟಕನಮ್ಮ ಸಚಿವರಿವರು; ಸಜ್ಜನ ರಾಜಕಾರಣಿಯಾಗಿ ಮೇಲೆದ್ದು ಬಂದ ಡಾ. ಜಿ. ಪರಮೇಶ್ವರ್

ನಮ್ಮ ಸಚಿವರಿವರು; ಸಜ್ಜನ ರಾಜಕಾರಣಿಯಾಗಿ ಮೇಲೆದ್ದು ಬಂದ ಡಾ. ಜಿ. ಪರಮೇಶ್ವರ್

- Advertisement -
- Advertisement -

ತುಮಕೂರು ಜಿಲ್ಲೆ ತಮ್ಮ ಕಾರ್ಯಕ್ಷೇತ್ರವಾದರೂ, ರಾಜ್ಯದ ರಾಜಕಾರಣದಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡರಾಗಿ ಬೆಳೆದು ಗುರುತಿಸಿಕೊಂಡವರು ಡಾ. ಜಿ ಪರಮೇಶ್ವರ್. ದೀರ್ಘಕಾಲದವರೆಗೆ ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡು, ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿದವರು. ಶಾಸಕ, ಸಚಿವ, ಉಪ ಮುಖ್ಯಮಂತ್ರಿ ಸ್ಥಾನಗಳನ್ನು ಅಲಂಕರಿಸಿ ನಂತರ ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.

ಡಾ. ಜಿ. ಪರಮೇಶ್ವರ್ ಮೂಲತಃ ತುಮಕೂರು ಜಿಲ್ಲೆಯ ಗೊಲ್ಲಹಳ್ಳಿಯ ಗ್ರಾಮದವರು. ತಂದೆ ಹೆಚ್.ಎಂ. ಗಂಗಾಧರಯ್ಯನವರು ವಿವಿಧ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣ ಭೀಷ್ಮ ಎಂದೇ ಹೆಸರಾಗಿದ್ದರು. ದಲಿತ ಕುಟುಂಬದಲ್ಲಿ ಹುಟ್ಟಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಸಿದ್ಧಾರ್ಥ ಹೆಸರಿನ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಕಟ್ಟಿಬೆಳೆಸಿದರು. ಹೆಚ್.ಎಂ. ಗಂಗಾಧರಯ್ಯನವರ ನಂತರ ಅವರ ಹಿರಿಯ ಪುತ್ರ ಡಾ. ಜಿ ಶಿವಪ್ರಸಾದ್ ಹಾಗೂ ಪರಮೇಶ್ವರ್‌ರವರು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯನ್ನು ಹೊತ್ತುಕೊಂಡರು. ಅಣ್ಣ ನಿಧನರಾದ ನಂತರ ಈಗ ಸಂಪೂರ್ಣವಾಗಿ ಪರಮೇಶ್ವರ್‌ರವರೇ ಸಂಸ್ಥೆಗಳ ಹೊಣೆಗಾರಿಕೆ ಹೊತ್ತಿದ್ದಾರೆ.

ಡಾ. ಜಿ. ಪರಮೇಶ್ವರ್ ತುಮಕೂರು ರಾಜಕಾರಣದ ಹಳೆಯ ಹೆಸರು ಎನ್ನಬಹುದು. ಅವರದ್ದು ಒಂದು ರೀತಿಯ ಶಿಸ್ತುಬದ್ಧ ರಾಜಕೀಯ ಜೀವನ ಎನ್ನಬಹುದು.

1987ರಲ್ಲಿ ಸಿದ್ಧಾರ್ಥ ಸಂಸ್ಥೆಯ ಕಾರ್ಯಕ್ರಮವೊಂದಕ್ಕೆ ಬಂದಿದ್ದ ರಾಜೀವ್ ಗಾಂಧಿಯವರಿಂದ ಪ್ರಭಾವಿತರಾಗಿ ರಾಜಕೀಯದಲ್ಲಿ ಸಕ್ರಿಯರಾದ ಪರಮೇಶ್ವರ್ ಮುಂದೆ ದೊಡ್ಡದೊಡ್ಡ ಜವಾಬ್ದಾರಿಯುತ ಹುದ್ದೆಗಳನ್ನೇ ಕಾಂಗ್ರೆಸ್ ಪಕ್ಷದಲ್ಲಿ ನಿಭಾಯಿಸಿದ್ದಾರೆ.

ರಾಜ್ಯದ ಪ್ರಮುಖ ದಲಿತ ರಾಜಕಾರಣಿಗಳಲ್ಲಿ ಒಬ್ಬರಾದ ಡಾ.ಜಿ. ಪರಮೇಶ್ವರ್‌ರವರಿಗೆ ರಾಜಕೀಯ ಜೀವನವನ್ನು ನೀಡಿದ ಕ್ಷೇತ್ರ ಮಧುಗಿರಿ. ಡಿ.ಎಂ. ನಂಜುಂಡಪ್ಪನವರ ವರದಿಯ ಪ್ರಕಾರ ಅತಿ ಹಿಂದುಳಿದ ತಾಲ್ಲೂಕಾದ ಮಧುಗಿರಿ ಮೀಸಲು ಕ್ಷೇತ್ರ, ಹಿಂದುಳಿದ ಮತ್ತು ದಲಿತ ಸಮುದಾಯಗಳು ಅತಿಹೆಚ್ಚು ಮತದಾರರನ್ನು ಹೊಂದಿದೆ. ಪರಮೇಶ್ವರ್‌ರವರು ಇಲ್ಲಿಂದ ಮೂರು ಬಾರಿ ಗೆದ್ದು ಶಾಸಕರಾಗಿದ್ದಾರೆ. 1988ರಲ್ಲಿ ಮೊದಲಬಾರಿಗೆ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾದ ಇವರು 1999, 2004ರಲ್ಲಿಯೂ ಸಹ ಶಾಸಕರಾಗಿ ಮರು ಆಯ್ಕೆಯಾಗಿದ್ದಾರೆ. ಮೂರು ಬಾರಿ ಶಾಸಕರಾಗಿ, ಸಚಿವರನ್ನಾಗಿಸಿದ ಕ್ಷೇತ್ರಕ್ಕೆ ವಿಶೇಷವಾಗಿ ಏನೂ ಮಾಡಿಲ್ಲವೆಂಬುದು ಸ್ಥಳೀಯರ ಸಿಟ್ಟು ಸಹ ಇದೆ. ಅದೇ ರೀತಿ ಇಂದಿಗೂ ಇವರ ಅಭಿಮಾನಿಗಳು ಕ್ಷೇತ್ರದಲ್ಲಿ ಇರುವುದು ವಿಶೇಷ.

ಇದನ್ನೂ ಓದಿ: ಕರ್ನಾಟಕದ ಪೂರ್ಣಾವಧಿ ಸಿಎಂ ಆದವರು ಮೂರು ಜನ ಮಾತ್ರ: ಹೆಚ್ಚು ದಿನ ಅಧಿಕಾರ ನಡೆಸಿದವರು…

1993ರಲ್ಲಿ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಶಿಕ್ಷಣ ಸಚಿವರಾಗಿದ್ದ ಪರಮೇಶ್ವರ್, 1999ರಲ್ಲಿ ಎಸ್.ಎಂ ಕೃಷ್ಣರವರು ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಉನ್ನತ ಶಿಕ್ಷಣ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವರಾಗಿ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಸಿಕ್ಕ ಖಾತೆಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಿದ ಕಾರಣ ಪರಮೇಶ್ವರ್ ಅವರ ಪ್ರಭಾವ ಕಾಂಗ್ರೆಸ್ ಪಕ್ಷದಲ್ಲಿ ಹಾಗೂ ತುಮಕೂರು ಜಿಲ್ಲೆಯಲ್ಲಿ ಹೆಚ್ಚಾಯಿತು.

ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಪೆದ್ದನಹಳ್ಳಿಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಸಂತ್ವಾನ ಹೇಳಿದ್ದಾರೆ.

ಕ್ಷೇತ್ರ ವಿಂಗಡಣೆಯ ಕಾರಣದಿಂದ ಮಧುಗಿರಿ ಮೀಸಲು ಕ್ಷೇತ್ರದಿಂದ ಸಾಮಾನ್ಯ ಕ್ಷೇತ್ರವಾಗಿ ಬದಲಾಗುತ್ತದೆ. ಆಗ ಪರಮೇಶ್ವರ್‌ರವರು ಕ್ಷೇತ್ರ ಬದಲಾವಣೆ ಮಾಡಿ ಪಕ್ಕದ ಕೊರಟಗೆರೆಯ ಕಡೆ ಮುಖ ಮಾಡುತ್ತಾರೆ. 2008ರಲ್ಲಿ ಕೊರಟಗೆರೆ ಕ್ಷೇತ್ರಕ್ಕೆ ಬಂದ ಪರಮೇಶ್ವರ್ ಅಲ್ಲಿ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. 2013ರಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದೂ ಸೋಲನುಭವಿಸಬೇಕಾಗಿ ಬಂದಿತ್ತು. ಕಾಂಗ್ರೆಸ್ ಪಕ್ಷ ಬಹುಮತ ಸಾಧಿಸಿದರೂ, ಸೋತಿದ್ದರಿಂದ ಮುಖ್ಯಮಂತ್ರಿ ಸ್ಥಾನವೂ ತಪ್ಪಿತು ಎಂಬ ಚರ್ಚೆಗಳಿವೆ. ವಿಧಾನಪರಿಷತ್ ಸದಸ್ಯರಾಗಿ 2013ರ ಸಿದ್ದರಾಮಯ್ಯನವರ ಸಂಪುಟದಲ್ಲಿ ಗೃಹ ಮತ್ತು ಕ್ರೀಡೆ, ಬೆಂಗಳೂರು ನಗರಾಭಿವೃದ್ದಿ ಖಾತೆಗಳನ್ನು ನಿಭಾಯಿಸುತ್ತಾರೆ.

ಎಷ್ಟೋ ಬಾರಿ ಸ್ವಪಕ್ಷದವರಿಂದಲೇ ಮತ್ತು ಬೇರೆ ಪಕ್ಷದವರಿಂದಲೂ ತೀವ್ರ ಟೀಕೆಗಳಿಗೆ ಗುರಿಯಾದಾಗಲೂ ವಾಪಸ್ಸು ಟೀಕಿಸದೆ ಶಾಂತಚಿತ್ತದಿಂದಲೂ ಇರುವ ಪರಮೇಶ್ವರ್ ಮಿತಿಮೀರಿದಾಗ ಮಾತ್ರ ಖಡಕ್ ಆಗಿ ತಿರುಗೇಟು ನೀಡಿದ್ದಾರೆ. ಏನೇ ಆಗಲಿ ಜನರಿಗೆ ತಳ ಸಮುದಾಯಗಳ ಸಿಟ್ಟು ದುರಹಂಕಾರವೆಂಬಂತೆ ಕಾಣುವುದು, ಮೇಲ್ಜಾತಿಗಳೆನಿಸಿಕೊಂಡ ಸಮುದಾಯಗಳ ಸಿಟ್ಟು ಸಾಮಾನ್ಯ ನಡವಳಿಕೆ ಎಂಬಂತೆ ಕಾಣುವುದು ನಮ್ಮ ಸಮಾಜದ ದುರಂತ ವಾಸ್ತವ. ಇಂತಹ ಮನೋಧರ್ಮಕ್ಕೆ ಪರಮೇಶ್ವರ್ ಅವರೂ ಹಲವು ಬಾರಿ ತುತ್ತಾಗಿದ್ದಾರೆ. ತುಮಕೂರು ಜಿಲ್ಲೆಯ ಮಟ್ಟಿಗೆ ಎಲ್ಲಾ ಸಮುದಾಯಗಳೂ ಪರಮೇಶ್ವರ್ ಅವರ ಮೇಲೆ ಅಭಿಮಾನ ಇರಿಸಿಕೊಂಡಿರುವುದು ನಿಜ. ಇವರ ದಕ್ಷತೆಯ ಕಾರಣದಿಂದಾಗಿ ತುಮಕೂರು ವಿಶ್ವವಿದ್ಯಾಲಯ ಪ್ರಾರಂಭವಾಗಿ ಸಾವಿರಾರು ಜನರಿಗೆ ನೆರವಾಗಿದೆ.

ಸುದೀರ್ಘವಾದ ರಾಜಕೀಯ ಜೀವನದಲ್ಲಿ ಯಾವುದೇ ಗುರುತರವಾದ ಹಗರಣ ಅಥವಾ ಭ್ರಷ್ಟಾಚಾರದ ಆರೋಪ ತಮ್ಮ ಮೇಲೆ ಇಲ್ಲದಂತೆ ರಾಜಕೀಯ ಜೀವನವನ್ನು ಪರಮೇಶ್ವರ್ ರೂಪಿಸಿಕೊಂಡಿದ್ದಾರೆ. ಶಿಕ್ಷಣ ಸಂಸ್ಥೆಗಳ ಹೊಣೆಯ ಜೊತೆಜೊತೆಗೆ ರಾಜಕಾರಣವನ್ನು ಸಮಚಿತ್ತದಿಂದ ಮಾಡಿಕೊಂಡು ಬಂದವರು.

ವೈಟ್‌ಕಾಲರ್ ರಾಜಕಾರಣಿ, ಶ್ರೀಮಂತ ರಾಜಕಾರಣಿ, ಜನರ ಸಂಪರ್ಕಕ್ಕೆ ಬಾರದ ರಾಜಕಾರಣಿ ಎಂಬ ಟೀಕೆಗಳು ಡಾ.ಜಿ. ಪರಮೇಶ್ವರ್‌ರವರ ಮೇಲೆ ಇರುವುದೂ ನಿಜ. ಸ್ವತಃ ದಲಿತರಾಗಿದ್ದರೂ ದಲಿತ ಯುವಕರನ್ನು ಬೆಳೆಸುವಲ್ಲಿ, ದಲಿತರ ಆಶೋತ್ತರಗಳಿಗೆ ಸ್ಪಂದಿಸುವಲ್ಲಿ, ದಲಿತರ ಪರವಾಗಿ ಗಟ್ಟಿ ದನಿಯಲ್ಲಿ ಮಾತಾಡುವಲ್ಲಿ ಬಹಳ ಹಿಂದೆ ಬಿದ್ದಿದ್ದಾರೆ ಎಂಬ ಆರೋಪಗಳು ಸಹ ಇವೆ. ಕ್ಷೇತ್ರದ ವಿಷಯಕ್ಕೆ ಬಂದರೆ ಮೇಲ್ಜಾತಿ ಸಮುದಾಯದ ಮೂರು ನಾಲ್ಕು ಜನರ ತಂಡ ಇಡೀ ಕ್ಷೇತ್ರದ ಕೆಲಸಗಳನ್ನು ನಿಭಾಯಿಸುವುದು ಬಿಟ್ಟರೆ ಗೆದ್ದಮೇಲೆ ನಾಪತ್ತೆಯಾಗುತ್ತಾರೆ ಎಂಬ ಆರೋಪಗಳೂ ಇವೆ. ಆದರೆ ಕಳೆದೆರಡು ವರ್ಷಗಳಲ್ಲಿ ಅತಿ ಹೆಚ್ಚು ಜನಸಂಪರ್ಕದಲ್ಲಿದ್ದು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ತೊಡಗಿಸಿಕೊಂಡಿದ್ದರು; ಹಾಗಾಗಿಯೇ ಈ ಬಾರಿ ಗೆಲ್ಲಲು ಸಾಧ್ಯವಾಯಿತು. ಈ ಬಾರಿ ಪರಮೇಶ್ವರ್‌ರನ್ನು ಸೋಲಿಸಲು ಬಿಜೆಪಿ ಸಾಕಷ್ಟು ಪ್ರಯತ್ನವನ್ನು ಮಾಡಿತಾದರೂ ಅದರಲ್ಲಿ ಯಶಸ್ಸು ಕಾಣಲಿಲ್ಲ. ಉಳಿದಂತೆ ಜಿಲ್ಲೆಯಲ್ಲಿ ಸಜ್ಜನ ಸಂಭಾವಿತ ರಾಜಕಾರಣಿ ಎಂಬ ಹೆಗ್ಗಳಿಕೆಯೊಂದಿಗೆ ಈ ಬಾರಿಯೂ ಸಚಿವರಾಗಿ ಮುಂದುವರಿಯುತ್ತಿದ್ದಾರೆ. ಸಚಿವರಾದ್ದರಿಂದ ಜಿಲ್ಲೆ ಮತ್ತು ಕ್ಷೇತ್ರದಲ್ಲಿ ಭಾರಿ ನಿರೀಕ್ಷೆಯೂ ಸಹ ಮೂಡಿದೆ.

ಇದನ್ನೂ ಓದಿ: ಬಿಕ್ಕಟ್ಟಿನಲ್ಲೂ ಸೆಕ್ಯುಲರ್ ಮೌಲ್ಯಗಳನ್ನು ಬಿಡದ ಎತ್ತರದ ನಾಯಕ ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...