ಅಭಿವೃದ್ಧಿ ಹೊಂದಿದ ದೇಶಗಳು ಹವಾಮಾನ ನಿಧಿಗೆ ಮಾಡುವ ‘ಹೂಡಿಕೆಯ ಗುರಿ’ ನೋಡಬಾರದು ಎಂದು ಅಝರ್‌ಬೈಜಾನ್‌ನ ರಾಜಾಧಾನಿ ಬಾಕುವಿನಲ್ಲಿ ನಡೆಯುತ್ತಿರುವ 29ನೇ ಹವಾಮಾನ ಶೃಂಗಸಭೆಯ (COP29) ಲ್ಲಿ ಭಾರತ ಅಭಿಪ್ರಾಯ ವ್ಯಕ್ತಪಡಿಸಿದೆ.
ಗುರುವಾರ (ನ.14) ಶೃಂಗಸಭೆಯಲ್ಲಿ ಮಾತನಾಡಿದ ಭಾರತದ ಪ್ರಮುಖ ಸಮಾಲೋಚಕ ನರೇಶ್ ಪಾಲ್ ಗಂಗ್ವಾರ್ “ಅಭಿವೃದ್ದಿ ಹೊಂದಿದ ದೇಶಗಳು ಅಭಿವೃದ್ದಿ ಹೊಂದುತ್ತಿರುವ ದೇಶಗಳ ಹವಾಮಾನ ಯೋಜನೆಗಳಿಗೆ ನೀಡುವ ಆರ್ಥಿಕ ಸಹಾಯ ಏಕಮುಖ ನಿಬಂಧನೆಯನ್ನು ಹೊಂದಿದೆ. ಅಂದರೆ, ಈ ನೆರವಿಗೆ ಪ್ರತಿಫಲಾಕ್ಷೆ ಇಲ್ಲ. ಆದ್ದರಿಂದ, ಇದನ್ನು ಒಂದು ವ್ಯಾವಹಾರಿಕ ಅಥವಾ ಲಾಭದ ಹೂಡಿಕೆಯಾಗಿ ಪರಿಗಣಿಸಬಾರದು ಎಂದು ಹೇಳಿದ್ದಾರೆ.
ಪ್ಯಾರಿಸ್ ಒಪ್ಪಂದವು, ಹವಾಮಾನ ನಿಧಿಗೆ ಯಾರು ಕೊಡುಗೆ ಕೊಡಬೇಕು. ಅದನ್ನು ಹೇಗೆ ಬಳಸಬೇಕು. ಈ ನಿಧಿಯ ಉದ್ದೇಶವೇನು? ಎಂಬುವುದನ್ನು ಸ್ಪಷ್ಟವಾಗಿ ಹೇಳಿದೆ ಎಂದು ಗಂಗ್ವಾರ್ ವಿವರಿಸಿದ್ದಾರೆ.
ಅಭಿವೃದ್ದಿ ಹೊಂದಿರುವ ರಾಷ್ಟ್ರಗಳು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳಿಗೆ ವಾರ್ಷಿಕ 1.3 ಟ್ರಿಲಿಯನ್ ಡಾಲರ್‌ನಂತೆ 2030ರವರೆಗೆ ಹವಾಮಾನ ಆರ್ಥಿಕ ನೆರವು ಒದಗಿಸಬೇಕು. ಅಭಿವೃದ್ದಿ ಹೊಂದಿದ ರಾಷ್ಟ್ರಗಳ ಈ ರಿಯಾಯಿತಿಯ ಮತ್ತು ಋಣ ಭಾರವಿಲ್ಲದ ನೆರವು, ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳ ಹವಾಮಾನ ಯೋಜನೆಗಳನ್ನು ಜಾರಿಗೊಳಿಸಲು ಸಹಾಯ ಮಾಡುತ್ತದೆ. ಅದಲ್ಲದೆ, ಅಭಿವೃದ್ದಿ ಹೊಂದಿದ ರಾಷ್ಟ್ರಗಳ ನೆರವು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳ ಅಭಿವೃದ್ದಿಗೆ ತಡೆಯಾಗಬಾರದು ಎಂದು ಹೇಳಿದ್ದಾರೆ.
ಹವಾಮಾನ ಬದಲಾವಣೆಯ ವಿರುದ್ಧದ ನಮ್ಮ ಹೋರಾಟದಲ್ಲಿ ನಾವು ನಿರ್ಣಾಯಕ ಘಟ್ಟದಲ್ಲಿದ್ದೇವೆ. ನಾವು ಇಲ್ಲಿ (COP29) ಏನು ನಿರ್ಧರಿಸುತ್ತೇವೆಯೋ ಅದು ನಮಗೆಲ್ಲರಿಗೂ, ವಿಶೇಷವಾಗಿ ಜಾಗತಿಕ ದಕ್ಷಿಣದಲ್ಲಿರುವರಿಗೆ ಪರಿಣಾಮ ಬೀರುತ್ತದೆ. ಈ ಪ್ರದೇಶದಲ್ಲಿ ಮಹತ್ವಾಕಾಂಕ್ಷೆಯ ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸಲು ಕ್ರಮ ತೆಗೆದುಕೊಳ್ಳಲು ಮಾತ್ರವಲ್ಲದೆ, ಅದಕ್ಕೆ ಹೊಂದಿಕೊಳ್ಳಲು ಕೂಡ ಸಾಧ್ಯವಾಗುತ್ತದೆ. ಆದ್ದರಿಂದ COP ಐತಿಹಾಸಿಕವಾಗಿದೆ ಎಂದು ಗಂಗ್ವಾರ್ ಹೇಳಿದ್ದಾರೆ.
ವಿವಿಧ ರಾಷ್ಟ್ರೀಯ ಸನ್ನಿವೇಶಗಳ ಸಂದರ್ಭ, ಸುಸ್ಥಿರ ಅಭಿವೃದ್ಧಿಯ ಗುರಿಗಳು ಮತ್ತು ಬಡತನ ನಿರ್ಮೂಲನೆಯಂತ ಕಾರ್ಯಗಳಲ್ಲಿ ದೇಶಗಳು, ವಿಶೇಷವಾಗಿ ಜಾಗತಿಕ ದಕ್ಷಿಣ ಹಿಂದುಳಿಯಬಾರದು ಎಂದು ಇದೇ ವೇಳೆ ಗಂಗ್ವಾರ್ ಸಲಹೆ ನೀಡಿದ್ದಾರೆ.
ವಿಶ್ವ ಸಂಸ್ಥೆಯ ಈ ಹವಾಮಾನ ಶೃಂಗಸಭೆ (COP) ಪ್ರತಿ ವರ್ಷವೂ ನಡೆಯುತ್ತದೆ. ಪ್ರಪಂಚದ ಬಹುತೇಕ ಎಲ್ಲಾ ದೇಶಗಳ ಸಂಪೂರ್ಣ ಸದಸ್ಯತ್ವದೊಂದಿಗೆ ಹವಾಮಾನ ಬದಲಾವಣೆಯ ಕುರಿತು ನಡೆಯುವ ವಿಶ್ವದ ಏಕೈಕ ಬಹುಪಕ್ಷೀಯ ನಿರ್ಧಾರ ವೇದಿಕೆ ಇದಾಗಿದೆ.
ಈ ಬಾರಿಯ ಶೃಂಗಸಭೆ (COP29) ಅಝರ್ ಬೈಜಾನ್‌ನ ರಾಜಾಧಾನಿ ಬಾಕುವಿನಲ್ಲಿ ನವೆಂಬರ್ 11ರಂದು ಪ್ರಾರಂಭಗೊಂಡಿದ್ದು, 22ರವರೆಗೆ ಮುಂದುವರಿಯಲಿದೆ.
ಇದನ್ನೂ ಓದಿ | COP29 : ಶೃಂಗಸಭೆಯಿಂದ ಹೊರ ನಡೆದ ಅರ್ಜೆಂಟೀನಾ, ಬಾಕು ಪ್ರವಾಸ ರದ್ದುಪಡಿಸಿದ ಫ್ರಾನ್ಸ್ ಸಚಿವೆ


