ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಬ್ಬ ಯುವಕನ ಹತ್ಯೆಯಾಗಿದೆ. ಮೇ 1ರಂದು ಗುರುವಾರ ಸಂಜೆ ಮಂಗಳೂರಿನ ಹೊರವಲಯ ಬಜ್ಪೆ ಬಳಿ ರೌಡಿ ಶೀಟರ್ ಸುಹಾಸ್ ಎಂಬಾತನ ಹತ್ಯೆಯಾಗಿತ್ತು. ಅದಾಗಿ ತಿಂಗಳು ಕಳೆಯುವುದೊರಳಗೆ, ಅಂದರೆ ಮೇ 27ರಂದು ಸಂಜೆ ಬಂಟ್ವಾಳದ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ಪಿಕಪ್ ಚಾಲಕ ಅಬ್ದುಲ್ ರಹಿಮಾನ್ ಅವರ ಕೊಲೆ ನಡೆದಿದೆ.
ಸುಹಾಸ್ ಹತ್ಯೆಗೂ ನಾಲ್ಕು ದಿನ ಮುಂಚೆ, ಅಂದರೆ 27 ಏಪ್ರಿಲ್ 2025ರಂದು ಮಂಗಳೂರು ನಗರದ ಹೊರವಲಯ ಕುಡುಪು ಬಳಿಯ ಭಟ್ರ ಕಲ್ಲುರ್ಟಿ ದೇವಸ್ಥಾನ ಸಮೀಪ ಕೇರಳದ ವಯನಾಡ್ ಮೂಲದ ಅಶ್ರಫ್ ಎಂಬ 36 ವರ್ಷದ ಯವಕನ ಗುಂಪು ಹತ್ಯೆ ನಡೆದಿತ್ತು.
ಈ ಎಲ್ಲಾ ಹತ್ಯೆಗಳಿಗೆ ಕೋಮು ವೈಷಮ್ಯವೇ ಕಾರಣ ಎಂಬುವುದು ಜಿಲ್ಲೆಯ ಜನರ ಆರೋಪವಾಗಿದೆ. ಕೆಲ ಪ್ರಕರಣಗಳ ಹಿನ್ನೆಲೆ ಕೂಡ ಕೋಮು ಕಾರಣಕ್ಕೇ ಕೊಲೆಗಳು ನಡೆಯುತ್ತಿವೆ ಎಂಬುವುದನ್ನು ಸಾಬೀತುಪಡಿಸಿವೆ.
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿಗಳ ಬಂಧನ ಬಳಿಕ ಸುದ್ದಿಗೋಷ್ಠಿ ನಡೆಸಿದ್ದ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಅವರು “ಫಾಝಿಲ್ ಹತ್ಯೆಗೆ ಪ್ರತೀಕಾರವಾಗಿ ಸುಹಾಸ್ ಹತ್ಯೆ ನಡೆದಿದೆ”ಎಂದು ಹೇಳಿದ್ದರು.
ಮಂಗಳವಾರ ನಡೆದ ಅಬ್ದುಲ್ ರಹಿಮಾನ್ ಕೊಲೆ ಸುಹಾಸ್ ಹತ್ಯೆಗೆ ಪ್ರತೀಕಾರ ಆಗಿರಬಹುದು ಎಂಬುವುದು ಜನರ ಅನುಮಾನವಾಗಿದೆ. ಇದು ಕೋಮು ವೈಷ್ಯಮ್ಯದ ಕೊಲೆಯೇ ಎಂಬುವುದು ಇನ್ನೂ ಖಚಿತವಾಗಿಲ್ಲ.
ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ತಿಂಗಳೊಳಗೆ ಮೂವರು ಯುವಕರ ಹತ್ಯೆ ನಡೆದು ಹೋಗಿದೆ. ತಂದೆ-ತಾಯಿಗೆ ಮಕ್ಕಳು, ಹೆಂಡತಿಗೆ ಗಂಡ, ಮಕ್ಕಳಿಗೆ ಅಪ್ಪ, ಸಹೋದರರಿಗೆ ಸಹೋದರ ಇಲ್ಲವಾಗಿದ್ದಾರೆ.
ಕೋಮುವಾದಕ್ಕೆ ಕಡಿವಾಣ ಹಾಕದ ಸರ್ಕಾರ, ಜನರಿಂದ ತೀವ್ರ ಆಕ್ರೋಶ
ಅಶ್ರಫ್ ಅವರ ಗುಂಪು ಹತ್ಯೆ, ರೌಡಿ ಶೀಟರ್ ಸುಹಾಸ್ ಅವರನ್ನು ದುಷ್ಕರ್ಮಿಗಳು ಜನನಿಬಿಡ ಪ್ರದೇಶದ ರಸ್ತೆ ಮಧ್ಯೆಯೇ ಯಾವುದೇ ಭಯವಿಲ್ಲದೆ ಬರ್ಬರವಾಗಿ ಹತ್ಯೆಗೈದ ಬಳಿಕ, ಹದಗೆಟ್ಟ ಜಿಲ್ಲೆಯ ಕಾನೂನು ಸುವ್ಯವಸ್ಥೆಯ ಬಗ್ಗೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅತಿಥಿಯಂತೆ ಆಗಾಗ ಜಿಲ್ಲೆಗೆ ಭೇಟಿ ನೀಡುವ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಜನ ಆಗ್ರಹಿಸಿದ್ದಾರೆ.
ಅಶ್ರಫ್ ಮತ್ತು ಸುಹಾಸ್ ಅವರ ಹತ್ಯೆಯ ಕೆಲ ದಿನಗಳ ಬಳಿಕ ಮಂಗಳೂರಿಗೆ ಭೇಟಿ ನೀಡಿದ್ದ ಗೃಹ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಉನ್ನತ ಅಧಿಕಾರಿಗಳ ಸಭೆ ನಡೆಸಿದ್ದರು. ಆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಗೃಹ ಸಚಿವರು, ಜಿಲ್ಲೆಯಲ್ಲಿ ಕೋಮುವಾದಕ್ಕೆ ಕಡಿವಾಣ ಹಾಕುವ ಮಾತುಗಳನ್ನು ಆಡಿದ್ದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ‘ಕೋಮುದ್ವೇಷ ನಿಗ್ರಹ ದಳ (Anti Communal Force)’ ಆರಂಭಿಸುವುದಾಗಿ ಘೋಷಿಸಿದ್ದರು.
ಗೃಹ ಸಚಿವರು ಸುದ್ದಿಗೋಷ್ಠಿ ನಡೆಸಿ ತೆರಳಿದ ಬೆನ್ನಿಗೇ ಜಿಲ್ಲೆಯ ಜನಪ್ರತಿನಿಧಿಯೊಬ್ಬರು ಸೇರಿದಂತೆ ಕೆಲ ಸಂಘಟನೆಗಳ ಮುಖಂಡರು ಬಹಿರಂಗವಾಗಿ ಕೋಮುದ್ವೇಷದ ಭಾಷಣ ಮಾಡಿದ್ದಾರೆ. ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಕೋಮುದ್ವೇಷ ಹರಡುವ ಪ್ರಯತ್ನ ಮಾಡಿದ್ದಾರೆ.
ಈ ಎಲ್ಲದರ ನಡುವೆ ಮಂಗಳವಾರ ಬಂಟ್ವಾಳದ ಅಬ್ದುಲ್ ರಹಿಮಾನ್ ಅವರ ಕೊಲೆ ನಡೆದು ಹೋಗಿದೆ. ಅವರ ಜೊತೆಗಿದ್ದ ಮತ್ತೊಬ್ಬ ಯುವಕನ ಕೊಲೆಯತ್ನ ನಡೆದಿದೆ.
ಈ ಬೆಳವಣಿಗೆಯಿಂದ ಜಿಲ್ಲೆಯ ಜನರು ಬೇಸತ್ತು ಹೋಗಿದ್ದು, ಕೋಮುವಾದಕ್ಕೆ ಕಡಿವಾಣ ಹಾಕಲು ಸಾಧ್ಯವಾಗದ ರಾಜ್ಯ ಸರ್ಕಾರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
“ಖಂಡನೆಯ ತೇಪೆ ಸಾಕು, ಕಠಿಣ ಕ್ರಮ ಬೇಕು” ಜನರ ಆಗ್ರಹ
ಮಂಗಳವಾರ ಅಬ್ದುಲ್ ರಹಿಮಾನ್ ಅವರ ಕೊಲೆ ನಡೆದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಪೊಲೀಸರಿಗೆ ಹೇಳಿದ್ದೇನೆ” ಎಂದಿದ್ದರು.
ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಸಾಮಾಜಿ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿ “ಮಂಗಳೂರಿನ ಕೊಳತ್ತಮಜಲು ಬಳಿ ಅಬ್ದುಲ್ ರಹಿಮಾನ್ ಎಂಬ ವ್ಯಕ್ತಿಯ ಹತ್ಯೆ ಖಂಡನೀಯ. ಘಟನೆಗೆ ನೈಜ ಕಾರಣ ತಿಳಿದಿಲ್ಲ. ಈ ಸಂಬಂಧ ಈಗಾಗಲೇ ಗೃಹ ಸಚಿವರಾದ ಡಾ.ಜಿ ಪರಮೇಶ್ವರ್, ಡಿಜಿಪಿ ಕರ್ನಾಟ ಹಾಗೂ ಕಾನೂನು ಸುವ್ಯವಸ್ಥೆ ಎಡಿಜಿಪಿ ಜೊತೆ ಮಾತಾಡಿದ್ದೇನೆ.”
“ದ.ಕನ್ನಡ ಜಿಲ್ಲೆಯ ಶಾಂತಿ ಹಾಳು ಮಾಡುವ ದುಷ್ಟ ಯತ್ನವೊಂದು ವ್ಯವಸ್ಥಿತವಾಗಿ ನಡೆಯುತ್ತಿದೆ. ಈ ಘಟನೆಯು ಇದರ ಒಂದು ಭಾಗದಂತೆ ಕಾಣಿಸುತ್ತಿದೆ. ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತಕ್ಕೆ ಕಠಿಣ ಸೂಚನೆ ನೀಡಿದ್ದೇನೆ. ಜನರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡುತ್ತೇನೆ.” ಎಂದು ಬರೆದುಕೊಂಡಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಈ ಪೋಸ್ಟ್ ಕೆಳಗಡೆ ಜನರು ಆಕ್ರೋಶದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಜಿಲ್ಲೆಯಲ್ಲಿ ಕೋಮುವಾದಕ್ಕೆ ಕಡಿವಾಣ ಹಾಕಲು ಸಾಧ್ಯವಾಗದ ಉಸ್ತುವಾರು ಸಚಿವರು ಮತ್ತು ಪೊಲೀಸ್ ಅಧಿಕಾರಿಗಳು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ.

ಕರಾವಳಿಯ ಹಲವು ಪಕ್ಷ, ಸಂಘಟನೆಗಳು ಕೂಡ ಸರಣಿ ಕೊಲೆಗಳು ಮತ್ತು ಹದೆಗೆಟ್ಟ ಕಾನೂನು ಸುವ್ಯವಸ್ಥೆಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.
ಬಿಜೆಪಿ, ಸಂಘಪರಿವಾರದ ದ್ವೇಷ ಭಾಷಣ, ಸರ್ಕಾರ ಬೇಜವಾಬ್ದಾರಿ ನಡೆ ಜಿಲ್ಲೆಯ ಇಂದಿನ ಸ್ಥಿತಿಗೆ ಕಾರಣ ಎಂದು ಸಿಪಿಐಎಂ ಜಿಲ್ಲಾ ಘಟಕ ಆರೋಪಿಸಿದೆ.
ಪ್ರಚೋದನಕಾರಿ ಭಾಷಣಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ.
ಜನಪ್ರತಿನಿಧಿಗಳೇ, ಓಲೈಕೆ ರಾಜಕಾರಣ ನಿಲ್ಲಿಸಿ. ಕೊಲೆಗೆ ಪ್ರಚೋದನೆ ನೀಡಿದ ಭಯೋತ್ಪಾದಕರಿಗೆ ಕಠಿಣ ಶಿಕ್ಷೆ ವಿಧಿಸಿ. ರಾಜ್ಯದ ಜನತೆಯನ್ನು ಕಾಪಾಡಿ ಎಂದು ಎಸ್ಎಸ್‌ಎಫ್ ಕರ್ನಾಟಕ ಆಗ್ರಹಿಸಿದೆ.
ಅಬ್ದುಲ್ ರಹಿಮಾನ್ ಅವರ ಕೊಲೆಗೆ ರಾಜ್ಯದ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ. ಕೋಮು ಗಲಭೆ ನಿಯಂತ್ರಿಸಲು ಸಾಧ್ಯವಾಗದಿದ್ದರೆ ಸಿಎಂ, ಡಿಸಿಎಂ, ಗೃಹ ಸಚಿವರು ರಾಜೀನಾಮೆ ನೀಡಲಿ ಎಂದು ಎಸ್‌ಕೆಎಸ್‌ಎಸ್‌ಎಫ್ ಸಂಘಟನೆ ಒತ್ತಾಯಿಸಿದೆ.

ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಎಕ್ಸ್, ಇನ್‌ಸ್ಟಾಗ್ರಾಂ ಮತ್ತು ವಾಟ್ಸಾಪ್ ಮೆಸೆಂಜರ್‌ಗಳಲ್ಲಿ ಜಿಲ್ಲೆಯ ಧಾರ್ಮಿಕ ನಾಯಕರು, ಇತರ ಜನರು ಸರ್ಕಾರ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಒಂದು ಕೊಲೆ ನಡೆದ ಬಳಿಕ ಅದಕ್ಕೆ ಪ್ರತೀಕಾತ ತೀರಿಸುತ್ತೇವೆ ಎಂದು ಕೆಲವರು ಬಹಿರಂಗವಾಗಿ ವೇದಿಕೆ ಕಟ್ಟಿ ಬೆದರಿಕೆ ಹಾಕುವಾಗ ಪೊಲೀಸರು ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ಕರಾವಳಿಯ ಕೋಮುವಾದಕ್ಕೆ ಕಡಿವಾಣ ಹಾಕಲು ಸರ್ಕಾರಕ್ಕೆ ಏಕೆ ಸಾಧ್ಯವಾಗುತ್ತಿಲ್ಲ ಎಂಬುವುದು ಜನರ ಪ್ರಶ್ನೆಯಾಗಿದೆ.
ಅಬ್ದುಲ್ ರಹಿಮಾನ್ ಹತ್ಯೆ:15 ಮಂದಿ ವಿರುದ್ಧ ಪ್ರಕರಣ ದಾಖಲು
ಬಂಟ್ವಾಳದ ಅಬ್ದುಲ್ ರಹಿಮಾನ್ ಅವರ ಕೊಲೆ ಮತ್ತು ಕಲಂದರ್ ಶಾಫಿ ಅವರ ಕೊಲೆಯತ್ನ ಪ್ರಕರಣ ಸಂಬಂಧ ಒಟ್ಟು 15 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪೈಕಿ ದೀಪಕ್ ಮತ್ತು ಸುಮಿತ್ ಎಂಬವರು ಕೊಲೆಯಾದ ಅಬ್ದುಲ್ ರಹಿಮಾನ್ ಮತ್ತು ಕಲಂದರ್ ಶಾಫಿ ಅವರಿಗೆ ಪರಿಚಯಸ್ಥರೇ ಆಗಿದ್ದಾರೆ ಎಂದು ಸುದ್ದಿ ಸಂಸ್ಥೆ ವಾರ್ತಾಭಾರತಿ ಇತ್ತೀಚಿನ ವರದಿಯಲ್ಲಿ ಹೇಳಿದೆ.
ಜಿಲ್ಲಾಧಿಕಾರಿಯನ್ನು ಪಾಕಿಸ್ತಾನಿ ಎಂದಿದ್ದ ಬಿಜೆಪಿ ನಾಯಕ | ಪ್ರಕರಣ ದಾಖಲಾಗುತ್ತಿದ್ದಂತೆ ಕ್ಷಮೆ ಯಾಚನೆ!


