Homeಕರ್ನಾಟಕಕರಾವಳಿಯ ಕೋಮು ಸಂಘಟನೆಗಳ ನಿಜಬಣ್ಣ! ಅವುಗಳ ಕಾರ್ಯವಿಧಾನ...

ಕರಾವಳಿಯ ಕೋಮು ಸಂಘಟನೆಗಳ ನಿಜಬಣ್ಣ! ಅವುಗಳ ಕಾರ್ಯವಿಧಾನ…

ದಕ್ಷಿಣ ಕನ್ನಡದ ಕೋಮು ಸಮಸ್ಯೆಗೆ ಧರ್ಮ ಒಂದು ನೆಪವಾಗಿದ್ದು, ಅದರ ಮೂಲ ಮೇಲು ಜಾತಿ ಮತ್ತು ವರ್ಗಗಳ ರಾಜಕೀಯ ಮತ್ತು ಆರ್ಥಿಕ ಮಾಫಿಯಾದಲ್ಲಿದೆ

- Advertisement -
- Advertisement -

1977ರ ಕೋಮುಗಲಭೆಗಳ ನಂತರ ಕೆಲವರ್ಷ ದಕ್ಷಿಣ ಕನ್ನಡದಲ್ಲಿ ಗಂಭೀರ ಕೋಮುಗಲಭೆಗಳು ನಡೆದಿರಲಿಲ್ಲ. ನಂತರದ ಬೆಳವಣಿಗೆಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಮೊದಲು ಕೋಮುವಾದದ ಬೆಳವಣಿಗೆ ಕಾರಣವಾದ ಮುಖ್ಯವಾಗಿ ಎರಡು ಬಣ್ಣಗಳ ಸಂಘಟನೆಗಳನ್ನು ಗುರುತಿಸಬೇಕು. ಸಂಘಪರಿವಾರ ಎಂದು ಕರೆಯಲಾಗುವ ಆರೆಸ್ಸೆಸ್‌ನ ಅಂಗಸಂಸ್ಥೆಗಳಾದ ಹಿಂದೂ ಜಾಗರಣ ವೇದಿಕೆ, ಬಜರಂಗದಳ ಸಂಘಟನೆಗಳು, ಅವುಗಳಿಗೆ ಪ್ರತಿಸ್ಪರ್ಧಿಯಾಗಿ ಹುಟ್ಟಿಕೊಂಡಿದ್ದ ಹಿಂದೂ ಯುವಸೇನೆ ಮತ್ತು ಶ್ರೀರಾಮ ಸೇನೆ ಇತ್ಯಾದಿಗಳನ್ನು ಸ್ವಲ್ಪ ಸೂಕ್ಷ್ಮವಾಗಿ ಗುರುತಿಸಬೇಕು. ಆರೆಸ್ಸೆಸ್ ರಾಜಕೀಯ ಪಕ್ಷವೊಂದನ್ನು ನಿಯಂತ್ರಿಸುವ ಬ್ರಾಹ್ಮಣ ನಾಯಕತ್ವದ ಸಂಘಟನೆಯಾಗಿದೆ. ಸ್ವಲ್ಪ ಕೆಳಜಾತಿಗಳ ನಾಯಕತ್ವ ಇರುವ, ತಕ್ಕಮಟ್ಟಿಗೆ ಕಲಿತ ಯುವಕರಿರುವ ಅಧೀನ ಸಂಘಟನೆ ಹಿಂದೂ ಜಾಗರಣ ವೇದಿಕೆಯಾಗಿದೆ. ಇದರ ಸದಸ್ಯರು ನೇರವಾಗಿ ಗಲಭೆಗಳಲ್ಲಿ ಭಾಗವಹಿಸದೆ ಸಂಘಟನೆ, ಪ್ರಚಾರ, ಪ್ರಚೋದನೆ, ಅಪಪ್ರಚಾರ, ಕಾರ್ಯತಂತ್ರಗಳ ಅನುಷ್ಟಾನ, ಆಯೋಜನೆ ಇತ್ಯಾದಿಗಳಲ್ಲಿ ಹೆಚ್ಚಾಗಿ ತೊಡಗಿರುತ್ತಾರೆ. ಬಿಜೆಪಿಯ ಭಾವೀ ನಾಯಕರು ಮೂಡಿಬರುವುದು ಇಲ್ಲಿಂದಲೇ. ಬಜರಂಗದಳವು ಹೆಚ್ಚು ವಿದ್ಯಾಭ್ಯಾಸವಿಲ್ಲದ, ಧರ್ಮದ ಬಗ್ಗೆ ಹೆಚ್ಚು ತಿಳಿದಿರದ ಕೆಳಜಾತಿಗಳಿಗೆ ಸೇರಿದ ಅಂಧ ಸೈನಿಕರನ್ನು ಹೊಂದಿದೆ. ಇವರೇ ಹೆಚ್ಚಾಗಿ ಕೋಮುಶಾಂತಿ ಕದಡುವ ಕಾಲಾಳುಗಳಾಗಿ ನೇರವಾಗಿ ಭಾಗವಹಿಸುತ್ತಾರೆ. ಕ್ರಿಮಿನಲ್ ಹಿನ್ನೆಲೆ ಇರುವವರೂ, ಇಲ್ಲದಿರುವವರೂ ಇಲ್ಲಿದ್ದು, ಕೆಲವರು ಧರ್ಮಕ್ಕೆ ಸಂಬಂಧವೇ ಇಲ್ಲದ ಗುರುತರ ಅಪರಾಧಗಳಿಗಾಗಿ ಜೈಲು ಪಾಲಾಗಿದ್ದಾರೆ. ಎಲ್ಲಾ ಸಂಘಟನೆಗಳಲ್ಲಿ ಪ್ರಚೋದನಕಾರಿ ಮತ್ತು ಉದ್ರೇಕಕಾರಿ ಭಾಷಣ ಮಾಡುವವರು ಹುಟ್ಟಿಕೊಂಡಿದ್ದಾರೆ. ಇವರಲ್ಲಿ ಬಿಜೆಪಿಯ ಪ್ರಮುಖ ನಾಯಕರು ಮತ್ತು ಜನಪ್ರತಿನಿಧಿಗಳೂ ಸೇರಿದ್ದಾರೆ.

ಹಿಂದೂ ಯುವಸೇನೆಯು 1990 ದಶಕದಲ್ಲಿ ಆರೆಸ್ಸೆಸ್‌ನ ಬ್ರಾಹ್ಮಣ ಪ್ರಾಬಲ್ಯಕ್ಕೆ ಪ್ರತಿಯಾಗಿ ಶೂದ್ರರು ಹುಟ್ಟು ಹಾಕಿದ ಸಂಘಟನೆ. ಇದು ಗಣೇಶೋತ್ಸವ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾ, ಸಾಕಷ್ಟು ಪ್ರಬಲವಾಗಿ ಬೆಳೆಯುತ್ತಿತ್ತು. ಇದರಲ್ಲಿ ಹಿಂದೂ ಗೂಂಡಾ ಎಲಿಮೆಂಟುಗಳು ದೊಡ್ಡ ಪ್ರಮಾಣದಲ್ಲಿ ಇದ್ದವು. ಉತ್ತಮ ಸಂಘಟಕರಾಗಿದ್ದ ಇದರ ಸ್ಥಾಪಕ ಗುಣಕರ ಶೆಟ್ಟಿ ಗಣಪತಿ ಹೈಸ್ಕೂಲಿನ ಬಳಿ ಹಿಂದೂಗಳಿಂದಲೇ ಕೊಲೆಯಾದ ಬಳಿಕ ಅದರ ಪ್ರಭಾವ ಸಂಪೂರ್ಣ ಕುಸಿದು, ಸದಸ್ಯರು ಬೇರೆಬೇರೆ ಸಂಘಟನೆಗಳಲ್ಲಿ ಹರಿದು ಹಂಚಿಹೋದರು.

ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಕೋಮುವಾದದ ಸಾಮಾಜಿಕ ಹಿನ್ನೆಲೆ; ಮೊದಲ ಕೋಮುಗಲಭೆ!

ಶ್ರೀರಾಮ ಸೇನೆಯು ಹಿಂದೂ ಹೆಸರಿನಲ್ಲಿ ಯಾವುದೇ ತಾತ್ವಿಕ ನೆಲೆಗಟ್ಟು ಇಲ್ಲದ, ಸದ್ಯಕ್ಕೆ ಸಂಘಪರಿವಾರವನ್ನೇ ಟೀಕಿಸುತ್ತಿರುವ, ಮುಖ್ಯವಾಗಿ ಗೂಂಡಾ ಎಲಿಮೆಂಟುಗಳಿಂದಲೇ ತುಂಬಿದ ಸಂಘಟನೆಯಾಗಿದೆ. ವಸೂಲಿ, ಬಡ್ಡಿ ವ್ಯವಹಾರ, ಗೋರಕ್ಷಣೆಯ ನೆಪದಲ್ಲಿ ದಾಳಿ, ನೈತಿಕ ಪೊಲೀಸ್‌ಗಿರಿ ಇತ್ಯಾದಿ ನೆಪದಲ್ಲಿ ಹಲ್ಲೆ ಮತ್ತು ದಾಳಿ, ಕೋಮುಪ್ರಚೋದಕ ಭಾಷಣ, ಅನ್ಯ ಕೋಮಿನವರ ಮೇಲೆ ಅಕಾರಣ ಹಲ್ಲೆ ಇತ್ಯಾದಿಗಳನ್ನು ನಡೆಸಿದ ಆರೋಪ ಈ ಸಂಘಟನೆಯ ಮೇಲಿದೆ.

ಮುಸ್ಲಿಮರು ಹಿಂದೆ ಇಂತಹಾ ಬಲವಾದ ಯೋಜಿತ ಸಂಘಟನೆಗಳನ್ನು ಹೊಂದಿರಲಿಲ್ಲ. ಅವರ ಕೃತ್ಯಗಳು ರಕ್ಷಣಾತ್ಮಕ ಮತ್ತು ಪ್ರತಿಕ್ರಿಯಾತ್ಮಕವಾಗಿದ್ದವು. ತಮ್ಮ ಬಾಹುಳ್ಯವಿರುವ ಕೆಲವು ಪ್ರದೇಶಗಳಲ್ಲಿ ಮಾತ್ರ ಅವರು ಆಕ್ರಮಣಕಾರಿಯಾಗಿದ್ದರು. ಕೋಮುಗಲಭೆಗಳ ಸಂದರ್ಭಗಳಲ್ಲಿ ಮಸೀದಿಗಳಲ್ಲಿ ಒಟ್ಟು ಸೇರುತ್ತಿದ್ದರು. ನಂತರ ಬೇರೆ ಬೇರೆ ಮಸೀದಿಗಳಿಗೆ ಸಂದೇಶ ಹೋಗಿ ಸುತ್ತಮುತ್ತ ಉದ್ರಿಕ್ತ ಪರಿಸ್ಥಿತಿ ಉಂಟಾಗುತ್ತಿತ್ತು. ಆದರೆ, ಧಾರ್ಮಿಕ ನಾಯಕರು ಅಂದರೆ ಉಲೆಮಾಗಳು ಪರಿಸ್ಥಿತಿಯನ್ನು ನಿಭಾಯಿಸಬಹುದಾಗಿತ್ತು. ಕಾಂಗ್ರೆಸ್ ಅವರನ್ನು ಪರೋಕ್ಷವಾಗಿ ಬೆಂಬಲಿಸುತ್ತಿತ್ತು. 1992ರಲ್ಲಿ ಬಾಬ್ರಿ ಮಸೀದಿ ಧ್ವಂಸದ ಬಳಿಕ ಪರಿಸ್ಥಿತಿ ನಿಧಾನವಾಗಿ ಮತ್ತು ಸಂಪೂರ್ಣವಾಗಿ ಬದಲಾಯಿತು. ಹಲವಾರು ಉಗ್ರ ನಿಲುವಿನ, ಆಕ್ರಮಣಕಾರಿ ಸಂಘಟನೆಗಳು ಹುಟ್ಟಿಕೊಂಡವು. ಅವು ಧಾರ್ಮಿಕ ನಾಯಕರ ನಿಯಂತ್ರಣಕ್ಕೂ ಸಿಗದಾದವು.

ಎರಡು ಕೋಮುಗಳ ನಡುವಿನ ಕಂದರ ವಿಸ್ತಾರವಾಗುತ್ತಾ ಹೋಯಿತು. ಗ್ರಾಮ ಮಟ್ಟದಲ್ಲಿ ನಡೆಯುತ್ತಿದ್ದ ಭೂತ-ದೈವಾರಾದನೆ, ಜಾತ್ರೆಗಳಿಗೆ ಹೋಗುವುದನ್ನು ಮುಸ್ಲಿಮರು ನಿಲ್ಲಿಸಿದರು. ಹೋದವರನ್ನು ಹಿಂದೂ ಸಂಘಟನೆಗಳವರು ಹೊಡೆದೋಡಿಸಲು ಆರಂಭಿಸಿದರು. ದರ್ಗಾಗಳಿಗೆ ಹೋಗುತ್ತಿದ್ದ ಹಿಂದೂಗಳ ಸಂಖ್ಯೆ ಕಡಿಮೆಯಾಯಿತು. ಮುಸ್ಲಿಮರಲ್ಲಿಯೂ ಸಂಘಟನೆ, ಪ್ರತಿರೋಧ ಆಂದೋಲನ ಬಲವಾಗುತ್ತಾ ಹೋಯಿತು. 1993-2006ರ ತನಕ ಈ ಪ್ರಕ್ರಿಯೆ ನಡೆಯಿತು. ಕರ್ನಾಟಕ ಫಾರಂ ಫಾರ್ ಡಿಗ್ನಿಟಿ (ಕೆಡಿಎಫ್) ಹುಟ್ಟಿಕೊಂಡು, ಮುಸ್ಲಿಮರಿಗಾದ ಅನ್ಯಾಯಗಳ ವಿರುದ್ಧ ಪ್ರತಿಭಟನೆ ಆರಂಭಿಸಿತು. ಇಂತಹಾ ಚಟುವಟಿಕೆಗಳೇ ಮುಂದೆ ಹೆಚ್ಚು ಆಕ್ರಮಣಕಾರಿಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್.ಐ) ಸ್ಥಾಪನೆಗೆ ಕಾರಣವಾಯಿತು. ಅದು ಹಿಂದೂ ಸಂಘಟನೆಗಳ ಪ್ರತಿರೂಪವಾಗಿ, ಅವು ಹಿಂದೂ ಹುಡುಗಿಯರ ವಿರುದ್ಧ ಪೊಲೀಸ್‌ಗಿರಿ ನಡೆಸುವಂತೆ, ತಾನು ಮುಸ್ಲಿಂ ಮಹಿಳೆಯರ ಮೇಲೆ ಪೋಲೀಸ್‌ಗಿರಿಗೆ ಇಳಿಯಿತು. ಚೊತೆ ಸಂಘಪರಿವಾರದಂತೆ ಹಿಂಸಾಚಾರ, ಪ್ರತೀಕಾರ ಕೃತ್ಯಗಳಿಗೂ ಮುಂದಾಯಿತು. ಮುಂದೆ ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ರೂಪದಲ್ಲಿ ರಾಜಕೀಯ ಪಕ್ಷವಾಗಿ ಚುನಾವಣಾ ರಾಜಕಾರಣಕ್ಕೆ ಇಳಿದ ಬಳಿಕ ಅದಕ್ಕೆ ಹೆಚ್ಚಿನ ಬಲವೂ ಬಂತು. ರಾಜಕೀಯ ಚೌಕಾಸಿಯ ಶಕ್ತಿಯೂ ಬಂತು. ಸಮಸ್ಯೆ ಇನ್ನಷ್ಟು ಪ್ರಚೋದಕವೂ, ಜಟಿಲವೂ ಆಯಿತು. ಈ ಸಂಘಟನೆಗಳಲ್ಲೂ ತಾತ್ವಿಕ ಹಿನ್ನೆಲೆ ಇರುವವರು ಬಹಳಷ್ಟು ಇದ್ದರೂ, ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಇರುವಂತೆ ಗೂಂಡಾ ಮತ್ತು ಕ್ರಿಮಿನಲ್ ಎಲಿಮೆಂಟುಗಳು ಕೂಡಾ ಸಾಕಷ್ಟಿವೆ. ಪ್ರಚೋದನಕಾರಿ ಭಾಷಣ ಮಾಡುವ ರಾಜಕೀಯ, ಧಾರ್ಮಿಕ ನಾಯಕರು ಇಲ್ಲಿಯೂ ಇಲ್ಲಿದ್ದಾರೆ.

ರಾಜ್ಯದ ಮೊದಲ ಲಿಂಚಿಂಗ್!

ಈ ರೀತಿಯ ಬೆಳವಣಿಗೆಗೆ ಕಾರಣವಾದ ಘಟನೆಗಳಲ್ಲಿ ಒಂದನ್ನು ಇಲ್ಲಿ ಗುರುತಿಸಲಾಗಿದೆ. ಇದು ಮುಂದೆ ಪೊಳಲಿ, ಮಾಡೂರು ಮುಂತಾದ ಪ್ರದೇಶಗಳು ಹಲವು ಕೊಲೆಗಳಿಗೆ ಸಾಕ್ಷಿಯಾಗಿ, ಕೋಮುಸೂಕ್ಷ್ಮ ಪ್ರದೇಶಗಳೆಂದು ಗುರುತಿಸಿಕೊಳ್ಳುವುದಕ್ಕೆ ಕಾರಣವಾಯಿತು. 2006ರ ಅಕ್ಟೋಬರ್ 7ರಂದು ಬಜರಂಗ ದಳದ ಕಾರ್ಯಕರ್ತರ ಗುಂಪೊಂದು ಪೊಳಲಿಯಲ್ಲಿ ಅಂಬ್ಯುಲೆನ್ಸ್ ಒಂದನ್ನು ತಡೆದು ನಿಲ್ಲಿಸಿತು. ಪುತ್ತೂರು ಬೊಳಿಯಾರಿನ ಮೊಹಮ್ಮದ್ ಅಶ್ರಫ್ ಎಂಬವರು ದುಬೈಗೆ ವಿಮಾನ ಹಿಡಿಯಲು ಇತರ ಏಳು ಮಂದಿ ಗೆಳೆಯರ ಜೊತೆ ಅವರಲ್ಲೊಬ್ಬರ ಅಂಬ್ಯುಲೆನ್ಸ್ ಕಾರಿನಲ್ಲಿ ಬಜ್ಪೆಗೆ ತೆರಳುತ್ತಿದ್ದರು. ಜಿಲ್ಲೆಯಲ್ಲಿ ಆ ಹೊತ್ತಿಗೆ ಕೋಮು ಉದ್ವಿಗ್ನತೆ ಇತ್ತು. ಅವರನ್ನು ನಿಲ್ಲಿಸಿ ಕೆಳಗಿಳಿಸಿದ ಈ ಕಾರ್ಯಕರ್ತರು, ಜೈ ಶ್ರೀ ರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿದರು. ಅವರು ಒಪ್ಪದೇ ಇದ್ದಾಗ, ಯದ್ವಾತದ್ವಾ ತಲವಾರು ಬೀಸಿದರು. ಅವರಲ್ಲಿ ಇಬ್ರಾಹಿಂ ಎಂಬವರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರೆ, ಉಳಿದ ಏಳು ಮಂದಿಯೂ ಆಸ್ಪತ್ರೆ ಸೇರಿದರು. ಅಂಬ್ಯುಲೆನ್ಸಿಗೆ ಬೆಂಕಿ ಹಚ್ಚಲಾಯಿತು. ಕೋಮುಗಲಭೆಗಳಲ್ಲಿ ನಡೆದ ಕೊಲೆ, ಪ್ರತೀಕಾರದ ಯೋಜಿತ ಕೊಲೆಗಳನ್ನು ಹೊರತುಪಡಿಸಿದರೆ, ಪರಿಚಯವೂ ಇಲ್ಲದವರ ಮೇಲೆ, ಕೇವಲ ಕೋಮುಕಾರಣಕ್ಕಾಗಿ ನಡೆಸಲಾದ ರಾಜ್ಯಯ ಮೊದಲ ಸಾಮೂಹಿಕ ಲಿಂಚಿಂಗ್ ಪ್ರಕರಣವೇ ಈ ಅಮಾನುಷ ಘಟನೆ. ಇದು ಮುಸ್ಲಿಂ ಉಗ್ರವಾದಿ, ಪ್ರತೀಕಾರವಾದಿ ಸಂಘಟನೆಗಳನ್ನು ಇನ್ನಷ್ಟು ಬಲಗೊಳಿಸಿತು.

ರಾಜ್ಯದ ಮೊದಲ ಲಿಂಚಿಂಗ್ ಬಲಿಪಶು ಇಬ್ರಾಹಿಂ.

 

1990ರ ದಶಕದಲ್ಲಿ ಈಗ ಭಯೋತ್ಪಾದನೆ ಆರೋಪದಲ್ಲಿ ಜೈಲಿನಲ್ಲಿರುವ ಕೇರಳ ಪಿಡಿಎಫ್ ಪಕ್ಷದ ನಾಯಕನಾಗಿದ್ದ ಅಬ್ದುಲ್ ನಾಸೆರ್ ಮದನಿಯ ಮಂಗಳೂರು ಸಭೆಯು ಶೋಆಫ್‌ನಲ್ಲಿ ಸಾಮಾನ್ಯ ಹಿಂದೂಗಳಲ್ಲಿಯೂ ನಡುಕ ಹುಟ್ಟಿಸುವಂತಿತ್ತು. ಆರೆಸ್ಸೆಸ್ ಖಾಕಿ-ಬಿಳಿ ಮಾದರಿಯಲ್ಲಿ ಕಪ್ಪು ಮಿಲಿಟರಿ ರೀತಿಯ ಸಮವಸ್ತ್ರ ಧರಿಸಿದ ಕಾರ್ಯಕರ್ತರ ದಂಡೇ ಮೆರವಣಿಗೆ ಮತ್ತು ಸಭೆಯಲ್ಲಿತ್ತು. ಇದಕ್ಕೆ ಬ್ಲ್ಯಾಕ್ ಕ್ಯಾಟ್ ಎಂಬ ಫ್ಯಾನ್ಸಿ ಹೆಸರು ಬೇರೆ. ಇದು ಕೂಡಾ ಆಗಿನ ಸಂದರ್ಭದಲ್ಲಿ ಕೋಮುವಾದಿಗಳಲ್ಲದ ಸಾಮಾನ್ಯ ಹಿಂದೂ ಮತ್ತು ಮುಸ್ಲಿಮರಿಬ್ಬರೂ ಪರಸ್ಪರ ಹೆಚ್ಚು ಅಪನಂಬಿಕೆ ತೋರಿ, ಕೋಮುವಾದಿಗಳ ಕಡೆಗೆ ವಾಲುವಂತೆ ಮಾಡಿತು. ಭಟ್ಕಳ ಮುಂತಾಗಿ ಬೇರೆ ಕಡೆಗಳಲ್ಲಿ ನಡೆಯುವ ಗಲಭೆಗಳು ಕೂಡಾ ಇಲ್ಲಿ ಕಂಪನಗಳನ್ನು ಉಂಟುಮಾಡುತ್ತಿದ್ದವು.

ಸಂಘಟನೆಗಳ ಸ್ವರೂಪ

ಜಿಲ್ಲೆಯಲ್ಲಿ ನಡೆದಿರುವ ಕೋಮುಗಲಭೆ ಮತ್ತು ಹಿಂಸಾಚಾರಗಳನ್ನು ಸ್ಥೂಲವಾಗಿ ಗಮನಿಸುವ ಮೊದಲು, ಎರಡೂ ಕೋಮುಗಳ ಸಂಘಟನೆಗಳಲ್ಲಿ ಇರುವ ಸಮಾನತೆಗಳನ್ನು ಮತ್ತು ಅವುಗಳ ರಚನೆಗಳನ್ನು ಗುರುತಿಸುವ ಅಗತ್ಯವಿದೆ. ಮುಂದೆ ಬರೆದಿರುವುದು ಎಲ್ಲಾ ಬಣ್ಣಗಳ ಸಂಘಟನೆಗಳು ಮತ್ತು ಪಕ್ಷಗಳಿಗೆ ಅನ್ವಯಿಸುತ್ತದೆ.

ಮುಖ್ಯವಾಗಿ ಎರಡೂ ರೀತಿಯ ಸಂಘಟನೆಗಳಲ್ಲಿ ಸೂತ್ರಧಾರಿಗಳಾಗಿರುವವರು ಅತ್ಯಂತ ಪ್ರಭಾವಿಗಳಾಗಿರುವ ಮೇಲ್ಜಾತಿ ಮತ್ತು ಮೇಲ್ವರ್ಗಗಳ ಮುಂದಾಳುಗಳು, ಧಾರ್ಮಿಕ ಅಥವಾ ರಾಜಕೀಯ ನಾಯಕರಾಗಿರುತ್ತಾರೆ. ಅವರು ಎಲ್ಲಿಯೂ ನೇರವಾಗಿ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸದೇ ಎಲ್ಲವನ್ನೂ ನಿಯಂತ್ರಿಸುತ್ತಾರೆ. ಇವರನ್ನು ಮುಟ್ಟಲು ಯಾವುದೇ ಸರಕಾರ ಹಿಂಜರಿಯುವ ಪರಿಣಾಮವಾಗಿ, ಪೊಲೀಸರೂ ಅಸಹಾಯಕರಾಗಿರಬೇಕಾಗುತ್ತದೆ. ಜಿಲ್ಲೆಯಲ್ಲಿ ಇದನ್ನು ಮೀರಿದ ಅನೇಕ ಅಧಿಕಾರಿಗಳು ವರ್ಗಾವಣೆಗೆ ಒಳಗಾದ ಹಲವು ನಿದರ್ಶನಗಳಿವೆ. ಇವರು ಗಲಭೆಗಳಲ್ಲಿ, ಕ್ರಿಮಿನಲ್ ಕೃತ್ಯಗಳಲ್ಲಿ ಬಂಧಿತರಾದವರನ್ನು ಬಿಡಿಸುವುದು, ನೆರವು ನೀಡುವುದು ಇತ್ಯಾದಿಗಳ ಮೂಲಕ ಅವರನ್ನು ಜೀವನಪರ್ಯಂತ ಗುಲಾಮರನ್ನಾಗಿ ಮಾಡುತ್ತಾರೆ.

ಎರಡನೇ ರೀತಿಯವರೆಂದರೆ, ಎರಡನೇ ಹಂತದ ನಾಯಕರಾಗಿರುವವರು. ಇಂತವರಲ್ಲಿ ಕೆಲವರು ತಾತ್ವಿಕ ನಿಷ್ಟೆ ಹೊಂದಿದ್ದರೂ, ಹೆಚ್ಚಿನವರು ಕೆಳಹಂತದ ರಾಜಕೀಯ ನಡೆಸುವ ಮರಿ ಪುಡಾರಿಗಳು, ಮರಳು, ಬಡ್ಡಿ ವ್ಯವಹಾರ, ಗೂಂಡಾಗಿರಿ, ವಸೂಲಿ, ಕ್ಲಬ್, ಜೂಜು, ವಾಹನ, ಭೂವ್ಯವಹಾರ, ಮ್ಯಾನ್ ಪವರ್ ಇತ್ಯಾದಿಯಾಗಿ ಅಕ್ರಮ ಚಟುವಟಿಕೆಗಳನ್ನೂ, ಅಂಗಡಿ, ಶೋರೂಂ, ಗುತ್ತಿಗೆ, ಮದ್ಯ ಮಾರಾಟ ಇತ್ಯಾದಿಯಾಗಿ ಅರೆಕಾನೂನು ಬಾಹಿರ, ಅಂದರೆ ಉದ್ದಿಮೆ ಕಾನೂನುಬದ್ಧವಾಗಿದ್ದರೂ ಅಕ್ರಮ ಚಟುವಟಿಕೆ ನಡೆಸುವ ವ್ಯವಹಾರಗಳಲ್ಲಿ ತೊಡಗಿಕೊಂಡವರಾಗಿದ್ದಾರೆ. ಇವರು ಧಾರ್ಮಿಕ, ಕ್ರೀಡಾ ಸೋಗಿನ ಕಾರ್ಯಕ್ರಮಗಳನ್ನು ನಡೆಸುತ್ತಾ, ನೆರವು ನೀಡುತ್ತಾ, ಬಾವುಟ, ಬಂಟಿಂಗ್, ಬ್ಯಾನರ್, ಕಟೌಟ್ ಇತ್ಯಾದಿಗಳಲ್ಲಿ ಸ್ಪರ್ಧೆ ನಡೆಸುತ್ತಾ, ಕ್ಷುಲ್ಲಕ ಕಾರಣಗಳಿಗಾಗಿ ತಂಟೆ ತಕರಾರು, ಉದ್ವಿಗ್ನತೆ ಎಬ್ಬಿಸುತ್ತಾ , ಸಭೆ, ಪ್ರತಿಭಟನೆಗಳನ್ನು ಆಯೋಜಿಸುತ್ತಾ ಇರುತ್ತಾರೆ. ಇಂತವರಿಗೆ ಗೂಂಡಾ ಎಲಿಮೆಂಟುಗಳನ್ನು ಪೋಷಿಸುವುದು, ತಮ್ಮ ಚಟುವಟಿಕೆಗಳಿಗೆ ರಾಜಕೀಯ ಆಶೀರ್ವಾದ ಪಡೆಯುವುದು ಅನಿವಾರ್ಯವಾಗಿರುತ್ತದೆ. ಇವರು ಕೂಡಾ ಕಾನೂನಿನ ಕೈಗೆ ಸಿಗುವುದಿಲ್ಲ.

ಮೂರನೇ ವರ್ಗವೆಂದರೆ, ಇಂತಹಾ ಗಲಭೆ ಗಲಾಟೆಗಳಲ್ಲಿ ಭಾಗವಹಿಸಿ ಜೀವ ತೆಗೆಯುವ, ಜೀವ ಕಳೆದುಕೊಳ್ಳುವ, ಹಲ್ಲೆ ಮಾಡುವ, ಹಲ್ಲೆಗೆ ಒಳಗಾಗುವ, ಜೈಲುಪಾಲಾಗುವ, ಜೀವನ ಹಾಳುಮಾಡಿಕೊಳ್ಳುವ, ಹೆತ್ತವರು ಮತ್ತು ಕುಟುಂಬವನ್ನು ಸಂಕಟಕ್ಕೆ ತಳ್ಳುವ ಯುವಕರು. ಇವರಲ್ಲಿ ಕೆಲವರು ಪ್ರಾಮಾಣಿಕವಾಗಿಯೇ ಕೋಮು ಪಿತ್ತವನ್ನು ನೆತ್ತಿಗೇರಿಸಿಕೊಂಡವರು. ವಾಸ್ತವಿಕತೆಯನ್ನು ಗ್ರಹಿಸುವ ಬುದ್ಧಿಮತ್ತೆ ಇಲ್ಲದ ಪೂರ್ವಗ್ರಹ ಪೀಡಿತರು. ಇಂತವರಲ್ಲಿ ಕುಡುಕರು, ಗಾಂಜಾ ವ್ಯಸನಿಗಳು, ನಿರುದ್ಯೋಗಿಗಳು, ಸೋಮಾರಿಗಳು, ಶೋಕಿಲಾಲರು, ಗೂಂಡಾಗಳು, ಸೈಕೊಗಳು, ಕಳ್ಳ ದರೋಡೆಕೋರರು, ರೇಪಿಸ್ಟರೇ ಮೊದಲಾಗಿ ಪಕ್ಕಾ ಕ್ರಿಮಿನಲ್‌ಗಳು ಇರುತ್ತಾರೆ. ಮತ್ತೆ ಕೆಲವರು ಪಕ್ಕಾ ಅವಕಾಶವಾದಿಗಳು. ಮೊದಲಿಗೆ ಇವರಿಗೆ ನೆರವಾಗುವ ಸಂಘಟನೆಗಳು, ಪಕ್ಷಗಳು ಮುಳುಗುತ್ತಿರುವಾಗ ಕೈ ಬಿಡುತ್ತವೆ. ಸತ್ತಾಗ ಪ್ರತಿಭಟನೆಯ ನಾಟಕವಾಡುತ್ತಾ, ಪ್ರತೀಕಾರಕ್ಕಾಗಿ ಪ್ರಚೋದಿಸುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತವೆ. ಇದು ಎಲ್ಲಾ ಬಣ್ಣಗಳ ಮಟ್ಟಿಗೂ ನಿಜ. ಹೆಚ್ಚಿನ ಸಲ ಎರಡೂ ಕೋಮುಗಳಿಗೆ ಸೇರಿದ ಇಂತವರ ನಡುವಿನ ವೈಯಕ್ತಿಕ ವ್ಯವಹಾರ ವೈಷಮ್ಯ ಮತ್ತು ಸ್ಪರ್ಧೆಗೆ ಸಂಬಂಧಿಸಿಯೇ ಕೋಮು ಉದ್ವಿಗ್ನತೆ ಉಂಟಾಗುತ್ತದೆ.

ಅಕ್ರಮ ಮರಳು: ಸಾವಿರಾರು ಕೋಮುಪೋಷಕ ದಂಧೆಗಳಲ್ಲಿ ಒಂದು!

ನಾಲ್ಕನೇ ವರ್ಗವೇ ಇಂತಹಾ ಕೋಮುವಾದಿ ಚಟುವಟಿಕೆಗಳು, ಹಿಂಸಾಚಾರ, ಬಂದ್ ಪ್ರತಿಭಟನೆಗಳಿಂದ ಕೆಲಸವಿಲ್ಲದೇ ತೊಂದರೆ ಅನುಭವಿಸುವ, ಕೆಲವೊಮ್ಮೆ ಹಲ್ಲೆಗೂ ಒಳಗಾಗುವ ಕಾರ್ಮಿಕರಾದಿಯಾಗಿ ಜನಸಾಮಾನ್ಯರು. ಇವರು ಯಾವ ಚಟುವಟಕೆಗಳಲ್ಲಿ ಭಾಗವಹಿಸದಿದ್ದರೂ, ತೊಂದರೆ ಅನುಭವಿಸಿದರೂ ಮಾನಸಿಕವಾಗಿ ಒಂದಲ್ಲ ಒಂದು ಗುಂಪು ಅಥವಾ ಪಕ್ಷವನ್ನು ಮುಗ್ಧವಾಗಿ ಬೆಂಬಲಿಸುವವರು ಅಥವಾ ಸಮರ್ಥಿಸುವವರು.

ಇಲ್ಲೊಂದು ವಿಚಿತ್ರ ವಿದ್ಯಮಾನವನ್ನು ಗಮನಿಸಬೇಕು. ಅದೆಂದರೆ, ಸಾರ್ವಜನಿಕವಾಗಿ ಕಚ್ಚಾಡುವಂತೆ ಕಾಣಿಸಿಕೊಳ್ಳುವ ಒಂದನೇ ಮತ್ತು ಎರಡನೇ ಹಂತದ ನಾಯಕರು ಪರಸ್ಪರ ಸಂಪರ್ಕ, ವ್ಯವಹಾರದಲ್ಲಿದ್ದು, ಜನಸಾಮಾನ್ಯರನ್ನು ಮಾತ್ರ ಕಚ್ಚಾಡಿಸುವುದು. ಇದಕ್ಕೆ ಎರಡು ಉದಾಹರಣೆಗಳನ್ನು ಕೊಡಬಹುದು.

ರಾಜಕೀಯವಾಗಿ, ಎಸ್‌ಡಿಪಿಐ ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ತೀವ್ರ ವಿರುದ್ಧವಾಗಿರುವಂತೆ ತೋರಿಸಿಕೊಳ್ಳುತ್ತದೆ. ಕಾಂಗ್ರೆಸ್ ಅಷ್ಟು ಪ್ರಬಲ ವಿರೋಧ ಮಾಡುತ್ತಿಲ್ಲ; ಮೃದು ಹಿಂದೂತ್ವ ತಳೆಯುತ್ತಿದೆ ಎಂದು ಆರೋಪಿಸುತ್ತದೆ. ಆದರೆ ಚುನಾವಣೆಯ ವೇಳೆ ಸ್ಪರ್ಧಿಸಿ, ಮುಸ್ಲಿಂ ಮತಗಳನ್ನು ಒಡೆದು, ತಾನೂ ಗೆಲ್ಲದೆ, ತನ್ನ ಪರಮ ವೈರಿಯಾದ ಬಿಜೆಪಿ ಗೆಲ್ಲಲು ಸುಲಭ ಮಾಡಿಕೊಡುತ್ತಿದೆ ಎಂಬ ಆರೋಪ ಅದರ ಮೇಲಿದೆ. ಇತ್ತೀಚೆಗೆ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಮುಸ್ಲಿಂ ಮೇಲ್ವರ್ಗದ ಮುಂದಾಳುಗಳು ಸನ್ಮಾನಿಸಿ, ಸಾಮಾನ್ಯ ಮುಸ್ಲಿಮರಿಂದ ಟೀಕೆಗೆ ಒಳಗಾದುದನ್ನು ಗಮನಿಸಬಹುದು.

ವ್ಯವಹಾರದ ಉದಾಹರಣೆ ಕೊಡಬೇಕೆಂದರೆ, ಶ್ರೀಮಂತ ಮುಸ್ಲಿಮರ ಒಡೆತನದ ಮಂಗಳೂರಿನ ಹೆಚ್ಚಿನ ಮಾಲ್, ಬಜಾರ್, ಆರ್ಕೇಡ್, ಶೋರೂಂಗಳ ಸೆಕ್ಯುರಿಟಿ ಗುತ್ತಿಗೆಯನ್ನು ಹಿಂದೂ ಸಂಘಟನೆಗಳು ನಡೆಸುವ ಸೆಕ್ಯೂರಿಟಿ ಏಜೆನ್ಸಿಗಳಿಗೆ ನೀಡಲಾಗಿದೆ. ಗಲಾಟೆ ಮಾಡುವವರೇ ಕಾವಲುಗಾರರಾದರೆ, ಗಲಾಟೆಯೇ ಇರುವುದಿಲ್ಲ ಎಂಬ ತರ್ಕ ಇದರಲ್ಲಿ ಇರಬಹುದು. ಆದರೆ, ಈ ಕೋಮು ಸಂಘಟನೆಗಳಿಗೆ ತಮ್ಮ ಗೂಂಡಾ ಪಡೆಗಳಿಗೆ ಸುಲಭದ ಉದ್ಯೋಗ ಒದಗಿಸಿ, ಸಾಕಲು ಇದರಿಂದ ಅನುಕೂಲವಾಗುತ್ತದೆ. ಜನಸಾಮಾನ್ಯರಿಗೆ ಇದರ ಪರಿವೆಯೇ ಇರುವುದಿಲ್ಲ!

ಇದನ್ನೂ ಓದಿ: ಕರಾವಳಿಯಲ್ಲಿ ಕೋಮು ಸಾಮರಸ್ಯದ ಇತಿಹಾಸ : ಈಗಲೂ ಕಾಲ ಮಿಂಚಿಲ್ಲ…

ಒಟ್ಟಿನಲ್ಲಿ ದಕ್ಷಿಣ ಕನ್ನಡದ ಕೋಮು ಸಮಸ್ಯೆಗೆ ಧರ್ಮ ಒಂದು ನೆಪವಾಗಿದ್ದು, ಅದರ ಮೂಲ ಮೇಲು ಜಾತಿ ಮತ್ತು ವರ್ಗಗಳ ರಾಜಕೀಯ ಮತ್ತು ಆರ್ಥಿಕ ಮಾಫಿಯಾದಲ್ಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಇದರಲ್ಲಿ ತಿರುಳು ಇಲ್ಲ
    ಎಸ್ ಡಿ ಪಿ ಐ ಪಿ ಎಪ್ ಐ
    ಗೂ ಬಿ ಜೆ ಪಿ ಆರ್ ಎಸ್ ಎಸ್ ಅಗಜಾಂತರತರ ವತ್ಯಾಸ ಇದೆ ಒಂದು ಕೊಮುವಾದಿ ಬಿ ಜೆಪಿ ಆರ್ ಎಸ್ ಎಸ್ ಸಂಘಟನೆಯನ್ನು ಎಸ್ ಡಿ ಪಿ ಐಗೆ ಹೋಲಿಸುವುದು ಸರಿಯಲ್ಲ
    ದೇಶದಲ್ಲಿ ಅಲವು ಕೊಮು ಗಲಭೆಗಳ ರುವಾರಿಗಳು ,ಅಲವು ಹತ್ಯಾಕಾಂಡ ದ ರೂವಾರಿಗಳುಮಾಲೆಗಾಂವ್ ,ಸಂಮಜೋತ ಎಕ್ಸ್ಪ್ರೆಸ್, ಮಕ್ಕ ಮಸ್ಜಿದ್ ಅಲವು ಬಾಂಬ್ ಸ್ಪೋಟಗಳ ಉಗ್ರವಾದಿಗಳ ತಾನ ವಾಗಿದೆ ಆರ್ ಎಸ್ ಎಸ್
    ಗೌರಿ,ಲಂಕೇಶ್,ದಾಬೋಳ್ಕರ್,ಕಲ್ಬುರ್ಗಿ, ರಂತಹ ಅಲವು ಜನರನ್ನು ಕೊಂದಂತಹ ಆರ್ ಎಸ್ ಎಸ್ ನ ಚಿಂತನೆಗೂ

    ಪಿ ಎಪ್ ಐನ ಸಮಾಜದ ಉನ್ನತಿನ ಗುರಿಗೂ ತುಂಬಾ ವತ್ಯಾಸ ಇದೆ ..ಎಂದು ಪಿ ಎಪ್ ಐ ಎಂಬ ಸಂಘಟನೆ ಮಂಗಳೂರಿನಮಣ್ಣಿಗೆ ಕಾಲು ಇಟ್ಟಿದೆಯೂ …
    ಅಂದಿನಿಂದ ಚೆಡ್ಡಿಗಳ ಎಲ್ಲಾ ಕುತಂತ್ರಗಳು ಮಂಗಳೂರಿನ ಮಣ್ಣಿನಲ್ಲಿ ನಡೆಸಲು ಆಗಿಲ್ಲ
    ಅದಕ್ಕೆ ಸೊಪ್ಪೆ ಆಕಿಲ್ಲ ಮಂಗಳೂರಿನ ಮುಸ್ಲಿಂ ರು ಯಾಕೆಂದರೆ ಆರ್ ಎಸ್ ಎಸ್ ತಂತ್ರವನ್ನು ಅದು ಎಲ್ಲಾ ಮುಸ್ಲಿಂ ರ ನಡುವೆ,ಜಾಗ್ರತಿಯನ್ನು ಉಂಟುಮಾಡಿದೆ ಅಮಾನುಷವಾಗಿ ಮುಸ್ಲಿಂ ರನ್ನು ಉದ್ರೇಕ ಗೊಳಿಸಿ ಮುಸ್ಲಿಂ ಯುವಕರನ್ನು ಜೈಲು ಪಾಲುಮಾಡುವ ಚೆಡ್ಡಿ ಕುತಂತ್ರಗಳನ್ನು ಅರಿತು ಯಾವುದೆ ಉದ್ರೇಕ್ಕೆ ಕೆ ಒಳಗಾಗದೆ ಅದು ತಾಳ್ಮೆಯಿಂದ ಸ್ವಿಕರಿಸಿದವರು ಆಗಿದ್ದಾರೆ ಮಂಗಳುಅರಿನ ಮುಸ್ಲಿಂ ಸಮೂದಾಯ
    ನಿಮ್ಮಬರಹದಲ್ಲಿ ಉರುಳು ಇಲ್ಲ
    ಎಂದು ಕೂಡ ಎಸ್ ಡಿ ಪಿ ಐ ಪಿಎಪ್ ಐ
    ಹಿಂದು ಮುಸ್ಲಿಂ ರ ಮದ್ಯೆ ಕೆಡಕನ್ನು ಬಯಸಲ್ಲ
    ಅದು ಹಿಂದು ಮುಸ್ಲಿಮ್ ರ ಮದ್ಯೆ ಬಾಂದವ್ಯ,ಸಹೋದರತೆ,ಭಂದವನ್ನು ಬೇಳಸಲು ಪ್ರೇರಣೆ ನಿಡುತ್ತೆ

    ಆಗೆ ನೊಡಿದರೆ ಎಲ್ಲ ರಾಜಕಿಯ ಪಕ್ಷದಲ್ಲು
    ಸಂಘಟನೆ ಗಳು
    ಬಿಜೇಪಿ ಯಲ್ಲಿ ಆರ್ ಎಸ್ ಎಸ್ ಇದೆ
    ಸಿ ಪಿ ಎಂ ನಲ್ಲಿ ಡಿ ವೈಎಪ್ ಐ
    ಕಾಂಗ್ರೆಸ್ ನಲ್ಲಿ ಯೂತ್ ಕಾಂಗ್ರೆಸ್ ಸೇವಾದಳ ಇದೆ ಜನತಾದಳದಲ್ಲು ಇದೆ
    ಎಸ್ ಡಿ ಪಿ ಯಲ್ಲು ಇದೆ
    ಇಲ್ಲಿ ಡಿವೈ ಎಪ್ ಐ ಆರ್ ಎಸ್ ಎಸ್ ಗಿಂತ ಕ್ರೂರಿ‌ ಸಂಘಟನೆ ಬೇರೆ ಕಾಣಲು ಸಾದ್ಯ ಇಲ್ಲ
    ಎಂದು ಕೂಡ ಕೊಮುವಾದ ಸಾಮರಸ್ಯ ವನ್ನುಕೆಡಿಸುವವರನ್ನು ಎಸ್ ಡಿ ಪಿ ಐ ವಿರೋದಿಸುತ್ತದೆ ಅದು ಸತ್ಯ ಕೆಲವರಿಗೆ ಕಹಿಯಾಗಿದ್ದರು ಸರಿ ದೇಶದಲ್ಲಿ ಸಹೋದರತೆ ಸಂಬಂದ ಗಟ್ಟಿ ಮಾಡು ಒಂದೆ ಉದ್ದೇಶ ಎಸ್ ಡಿ ಪಿಐ ಎಂಬ ಹಸೀವು ಮುಕ್ತ ಭಯ ಮುಕ್ತ ಕನಸು ಕಾಣುವ ಉದ್ದೇಶ……..

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...