Homeಮುಖಪುಟಕರಾವಳಿಯಲ್ಲಿ ಕೋಮು ಸಾಮರಸ್ಯದ ಇತಿಹಾಸ : ಈಗಲೂ ಕಾಲ ಮಿಂಚಿಲ್ಲ...

ಕರಾವಳಿಯಲ್ಲಿ ಕೋಮು ಸಾಮರಸ್ಯದ ಇತಿಹಾಸ : ಈಗಲೂ ಕಾಲ ಮಿಂಚಿಲ್ಲ…

ಕರಾವಳಿಗೆ ಕೋಮು ಸೌಹಾರ್ದದ ದೊಡ್ಡ ಇತಿಹಾಸವೇ ಇದೆ. ಹಲವು ಶತಮಾನಗಳಿಂದ ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನರು ಜೊತೆ ಜೊತೆಯಾಗಿ ಒಬ್ಬರಿಗೊಬ್ಬರು ಹೊಂದಿಕೊಂಡು ಬದುಕುತ್ತಿದ್ದಾರೆ. ಈಗಲೂ ಕಾಲ ಮಿಂಚಿಲ್ಲ

- Advertisement -
- Advertisement -

ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರ್ನಾಟಕ ರಾಜ್ಯದ ಕರಾವಳಿ ಭಾಗದಲ್ಲಿ ಕೋಮುವಾದದ ವಿಷ ನೆತ್ತಿಗೇರಿದೆ. ಮತಗಳ ಲಾಭಕ್ಕಾಗಿ ಧರ್ಮಗಳನ್ನು ವಿಭಜಿಸಿ ಪರಸ್ಪರ ಹೊಡೆದಾಡಿಸುವ ಪ್ರಯತ್ನಗಳು ನಿರಂತರ ನಡೆಯುತ್ತಿವೆ. ಕೋಮು ಆಧಾರದಲ್ಲಿ ಅವರು- ನಾವು ಎನ್ನುವ ಸ್ಥಿತಿಗೆ ಸಮಾಜ ಬಂದು ಮುಟ್ಟಿದೆ. ಆದರೆ, ಎರಡು ಮೂರು ದಶಕಗಳ ಹಿಂದೆ ಈ ಪರಿಸ್ಥಿತಿ ಇರಲಿಲ್ಲ. ಕರಾವಳಿಗೆ ಕೋಮು ಸೌಹಾರ್ದದ ದೊಡ್ಡ ಇತಿಹಾಸವೇ ಇದೆ. ಹಲವು ಶತಮಾನಗಳಿಂದ ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನರು ಜೊತೆ ಜೊತೆಯಾಗಿ ಒಬ್ಬರಿಗೊಬ್ಬರು ಹೊಂದಿಕೊಂಡು ಬದುಕುತ್ತಿದ್ದಾರೆ. ಈಗಲೂ ಕಾಲ ಮಿಂಚಿಲ್ಲ.

ಇತಿಹಾಸಕಾರರು ಅಂಜುಮನ್ ಶಾಸನಗಳೆಂದು ಕರೆಯುವ ದಾಖಲೆಗಳು ಕರಾವಳಿಯಲ್ಲಿದ್ದ ಕೋಮು ಸಾಮರಸ್ಯವನ್ನು ಎತ್ತಿತೋರಿಸುತ್ತವೆ. 1418ರ ಕೊಡಿಯಾಲ್ ಬೈಲ್ ಶಾಸನದ ಪ್ರಕಾರ ಇಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾನಿಕನಾಗಿದ್ದ ತಿಮ್ಮಣ್ಣ ಒಡೆಯ ನಾಲ್ಕು ಮಸೀದಿಗಳನ್ನು ಧ್ವಂಸ ಮಾಡಿದ್ದ. ಅಂಜುಮನ್ ದೂರು ನೀಡಿದಾಗ, ವಿಜಯನಗರ ದೊರೆ ಅವರಿಗೆ ದತ್ತಿ ನೀಡಿದ್ದಲ್ಲದೇ, ಯಾವುದೇ ಹಿಂದೂ ಆ ಜಾಗದಲ್ಲಿ ತೊಂದರೆ ಉಂಟು ಮಾಡಿದರೆ, ತನಗೆ ಮತ್ತು ದೇವರಿಗೆ ಉತ್ತರದಾಯಿ ಎಂದು ತಾಕೀತು ಮಾಡಿದ್ದ.

1551ರ ಶಾಸನವೊಂದರ ಪ್ರಕಾರ, ಇಕ್ಬಾಲ್ ಖಾನ್ ಎಂಬಾತ ಬಾರಕೂರಿನಲ್ಲಿ ವಿಜಯನಗರ ಅರಸರ ಸ್ಥಾನಿಕ ಅಧಿಕಾರಿಯಾಗಿದ್ದಾಗ ಕೋಟೇಶ್ವರಲ್ಲಿ ದೇವಾಲಯವೊಂದನ್ನು ಕೆಲವರು ನಾಶಮಾಡಿ ಹಲವರನ್ನು ಕೊಂದಿದ್ದರು. ಆಗ ಇಕ್ಬಾಲ್ ಖಾನ್ ತಕ್ಷಣವೇ ದೇವಾಲಯವನ್ನು ಮರುನಿರ್ಮಿಸಿಕೊಟ್ಟಿದ್ದ.

1615ರ ಶಾಸನವೊಂದರ ಪ್ರಕಾರ ಹಿಂದೂ ರಾಜನೊಬ್ಬ (ಹೆಸರು ಸರಿಯಾಗಿ ಉಲ್ಲೇಖಿಸಿಲ್ಲ) ಪಶ್ಚಿಮಘಟ್ಟದ ಅಪರಿಚಿತ ಸ್ಥಳದಲ್ಲಿ ಮಸೀದಿ ಕಟ್ಟಿಸಿದ ಉಲ್ಲೇಖ ಇದೆ.

ನಂತರ ಕೆಳದಿಯ ಅರಸ ವೆಂಕಟಪ್ಪ ನಾಯಕ 1627ರಲ್ಲಿ ಭುವನಗಿರಿ ಎಂಬಲ್ಲಿ ದರ್ಗಾ ಕಟ್ಟಿಸಿದ ಉಲ್ಲೇಖ ಶಾಸನವೊಂದರಲ್ಲಿದೆ. ವೆಂಕಟಪ್ಪ ನಾಯಕನ ನೆರವಿನಿಂದ ಮುಲ್ಲಾ ಹಾಜಿ ಎಂಬಾತ 1628ರಲ್ಲಿ ಹುಲಿಕಲ್ ಘಾಟಿಯಲ್ಲಿ ದರ್ಗಾ ಒಂದನ್ನು ಕಟ್ಟಿಸಿದ್ದ. ವೆಂಕಟಪ್ಪ ನಾಯಕನ ಮಗ ತಾವರೆಕೆರೆ ಮಸೀದಿಗೆ ಎಡಹಳ್ಳಿ ಎಂಬ ಗ್ರಾಮವನ್ನು ಉಂಬಳಿಯಾಗಿ ನೀಡಿದ ಉಲ್ಲೇಖ ಇದೆ. ಕೆಳದಿಯ ರಾಣಿ ಚೆನ್ನಮ್ಮ ಮಂಗಳೂರು ಸಮೀಪದ ಗಂಜಿಮಠ ಮತ್ತು ಕಿನ್ನಿಕಂಬಳ ಗ್ರಾಮಗಳಲ್ಲಿ  ಮುಸ್ಲಿಂ ಸಂತರಿಗೆ ನೆಲದಾನ ಮಾಡಿದ ಉಲ್ಲೇಖವಿದೆ.

ಅಜಿಲ ಅರಸರು ಬಂಟ್ವಾಳ ತಾಲೂಕಿನ ಅಜಿಲಮೊಗರು ದರ್ಗಾಕ್ಕೆ ನೆಲದಾನ ಮಾಡಿದ ಉಲ್ಲೇಖವಿದೆ. ನೇತ್ರಾವತಿ ನದಿಯ ದಡದಲ್ಲಿರುವ ಈ ದರ್ಗಾಕ್ಕೆ ಉರೂಸಿನ ಸಂದರ್ಭದಲ್ಲಿ ನದಿಯಾಚೆ ಇರುವ ಕಡೇಶ್ವಾಲ್ಯ ದೇವಾಲಯದಿಂದ ಅಕ್ಕಿ ಮೆರವಣಿಗೆಯಲ್ಲಿ ಬರುತ್ತದೆ. ಅಲ್ಲಿನ ಜಾತ್ರೆಯ ಸಂದರ್ಭ ದರ್ಗಾದಿಂದ ಎಣ್ಣೆ ಮೆರವಣಿಗೆಯಲ್ಲಿ ಹೋಗುತ್ತದೆ. ಇದರ ಹಿಂದೆ ಸಾಂಕೇತಿಕತೆ ಇದೆ. ಹಿಂದೂಗಳು ಹೆಚ್ಚಾಗಿ ರೈತರು. ಹಾಗಾಗಿ ಅಕ್ಕಿ ನೀಡುತ್ತಾರೆ. ಮುಸ್ಲಿಮರು ಹೆಚ್ಚಾಗಿ ವ್ಯಾಪಾರಿಗಳು ಅದಕ್ಕಾಗಿ ಎಣ್ಣೆ ನೀಡುತ್ತಾರೆ. ಒಬ್ಬರ ಮೇಲೆ ಇನ್ನೊಬ್ಬರು ಅವಲಂಬಿಸಿದ್ದಾರೆ. ಈ ಸಹಕಾರವನ್ನೇ ಈ ಸಂಪ್ರದಾಯ ಬಿಂಬಿಸುತ್ತದೆ. ಇಂತಹ ಪರಂಪರೆ ಇರುವ ತುಳುನಾಡಿನಲ್ಲಿ  ಇಂದು ಕೋಮುದ್ವೇಷ ಹೆಚ್ಚಾಗಿದೆ.

ಕರಾವಳಿಗೆ 1342ರಷ್ಟು ಹಿಂದೆಯೇ ಭೇಟಿ ನೀಡಿದ್ದ ಪ್ರವಾಸಿ ಇಬ್ನ್ ಬತೂತ ಮಂಗಳೂರನ್ನು ಮಂಜರುನ್ ಎಂದು ಕರೆದಿದ್ದಾನೆ. ಇಲ್ಲಿ ಹಿಂದೂ- ಮುಸ್ಲಿಮರು ಅಣ್ಣತಮ್ಮಂದಿರಂತೆ ಬದುಕುತ್ತಿದ್ದಾರೆ ಎಂದು ಆತ ತನ್ನ ಪ್ರವಾಸ ಕಥನದಲ್ಲಿ ದಾಖಲಿಸಿದ್ದಾನೆ. ಇಲ್ಲಿ 4000 ಮುಸ್ಲಿಮರು ವ್ಯಾಪಾರ ಮಾಡುತ್ತಿದ್ದು, ಕೆಲವರು ಉನ್ನತ ಮಟ್ಟದ ಅಧಿಕಾರಿಗಳಾಗಿಯೂ ಇದ್ದರು ಎಂದು ಆತ ಬರೆದಿದ್ದಾನೆ.

ವಿಜಯನಗರಕ್ಕೆ ಪರ್ಷಿಯಾದ ರಾಯಭಾರಿಯಾಗಿ 1448ರಲ್ಲಿ ಬಂದಿದ್ದ ಅಬ್ದುಲ್ ರಜಾಕ್ ಮಂಗಳೂರಿಗೆ ಬಂದು ಬಂಟ್ವಾಳ ತಾಲೂಕಿನ ಪೊಳಲಿ ರಾಜರಾಜೇಶ್ವರಿ ದೇವಾಲಯದ ದರ್ಶನ ಮಾಡಿದ ದಾಖಲೆಯಿದೆ.

ಇಲ್ಲಿ ಮುಸ್ಲಿಮರಿಗೆ ಉನ್ನತ ಸ್ಥಾನಮಾನ ಇರುವುದಾಗಿ 16ನೇ ಶತಮಾನದಲ್ಲಿ ಬಂದಿದ್ದ ಪೋರ್ಚುಗೀಸ್ ಯಾತ್ರಿ ದುಆರ್ತೆ ಬರ್ಬೋಸ ಬರೆದಿದ್ದಾನೆ.

ಮೂಸ ಬ್ಯಾಯಿ (ಬ್ಯಾರಿ) ಎಂಬಾತ ಕೆಳದಿ ರಾಜ್ಯದ ಸೇನಾಪತಿಗಳಲ್ಲಿ ಒಬ್ಬನಾಗಿದ್ದ ಎಂದು 1523ರಲ್ಲಿ ಇಲ್ಲಿಗೆ ಬಂದಿದ್ದ ಪೀಟರ್ ಡೇಲ್ವಿಲ್ಲೆ ಬರೆದಿದ್ದಾನೆ. ಉಳ್ಳಾಲ ರಾಣಿ ಅಬ್ಬಕ್ಕ, ಚೌಟ ಮತ್ತು ಬಂಗ ಅರಸರ ಸೇನೆಗಳಲ್ಲಿ ದೊಡ್ಡ ಸಂಖ್ಯೆಯ ಮುಸ್ಲಿಮರು ಇರುವುದನ್ನು ಕೂಡ ಆತ ಉಲ್ಲೇಖಿಸಿದ್ದಾನೆ.

ಹೈದರಾಲಿ ಮತ್ತು ಟಿಪ್ಪು ಸುಲ್ತಾನರು ಕರಾವಳಿಯ ಹಲವಾರು ದೇಗುಲಗಳಿಗೆ ತಸ್ದೀಕ್ ಅಥವಾ ಉಂಬಳಿ ನೀಡಿದ್ದಾರೆ. ಟಿಪ್ಪು ಮಂಗಳೂರಿನ ಹೃದಯ ಭಾಗದಲ್ಲಿರುವ ಪ್ರಸಿದ್ಧ ಶರವು ಮಹಾಗಣಪತಿ ದೇವಾಲಯಕ್ಕೆ ಇಡೀ ಮೂಡುಶೆಡ್ಡೆ ಗ್ರಾಮವನ್ನು ಉಂಬಳಿ ನೀಡಿದ್ದ. ದಿನದ ಖರ್ಚಿಗೆ ಒಂದು ವರಹ (ನಾಲ್ಕು ರೂಪಾಯಿ- ಆ ಕಾಲಕ್ಕೆ ಇದು ದೊಡ್ಡ ಮೊತ್ತ) ತಸ್ದೀಕ್ ನೀಡಲಾಗುತ್ತಿತ್ತು. ಅದಲ್ಲದೇ ವರ್ಷಕ್ಕೆ ಏಳ್ನೂರ ತೊಂಭತ್ತಮೂರು ರೂಪಾಯಿ ಅರ್ವತ್ತೊಂಭತ್ತು ಪೈಸೆ ತಸ್ದೀಕ್ ನೀಡಲಾಗುತ್ತಿತ್ತು.

ಇದಕ್ಕಿಂತ ಕುತೂಹಲಕಾರಿ ವಿಷಯ ಎಂದರೆ, ಈಗಿನ ಧರ್ಮಸ್ಥಳದ ಮೂಲ ಹೆಸರು ಕುಡುಮ. ಅಲ್ಲಿನ ಆಡಳಿತಗಾರ ಮಂಜಯ್ಯ ಹೆಗ್ಗಡೆಯನ್ನು ಕೆಲವರು ಕೊಲೆ ಮಾಡಿದಾಗ, ತಕ್ಷಣ ಮಧ್ಯ ಪ್ರವೇಶಿಸಿದ ಟಿಪ್ಪು, ಆತನ ಮಗ ಕುಮಾರ ಹೆಗ್ಗಡೆಗೆ ಅಧಿಕಾರ ವರ್ಗಾಯಿಸಿದ್ದ! ಬಪ್ಪನಾಡಿನ ದೇವಾಲಯವನ್ನು ಕಟ್ಟಿಸಿದಾತ ಬಪ್ಪಬ್ಯಾರಿ ಎಂಬ  ಮುಸ್ಲಿಂ ವ್ಯಾಪಾರಿ ಎಂಬುದು ಎಲ್ಲರಿಗೂ ಗೊತ್ತು.

ತುಳುನಾಡಿನ ಭೂತಾರಾಧನೆಯಲ್ಲೂ ಮುಸ್ಲಿಮರಿಗೆ ಪ್ರಮುಖ ಪಾತ್ರವಿದೆ. ಇಲ್ಲಿ ವೀರರು ಮತ್ತು ನಿಗೂಢವಾಗಿ ಕಾಣೆಯಾದವರು, ದುರಂತ ಮರಣವನ್ನಪ್ಪಿದವರು ಭೂತಗಳಾದದ್ದು ಎಲ್ಲರಿಗೂ ಗೊತ್ತಿದೆ. ಆದುದರಿಂದಲೇ ಈ ನೆಲದಲ್ಲಿ ಮುಸ್ಲಿಂ ಭೂತಗಳು, ಚೀನೀ ಭೂತಗಳೂ ಇವೆ. ಬಿಲ್ಲವ ವೀರರಾದ ಕೋಟಿ- ಚೆನ್ನಯರ ಕೆಲವು ಗರಡಿಗಳಲ್ಲಿ ಮುಸ್ಲಿಂ ಮಕ್ಕಳು ಎಂಬ ಮರದ ಪ್ರತಿಮೆಗಳು ಇವೆ. ತುಳುವರು, ಅದರಲ್ಲೂ ಮೊಗವೀರರು ಮುಖ್ಯವಾಗಿ ಆರಾಧಿಸುವ ಬೊಬ್ಬರ್ಯ ಮೂಲದಲ್ಲಿ ಬಬ್ಬು ಬ್ಯಾರಿ ಅಥವಾ ಬಾವ ಬ್ಯಾರಿ! ಬೆಲಿಯ ಅಂದರೆ ದೊಡ್ಡ ಫಾತಿಮ ಮತ್ತು ಮುರವೆ ಬ್ಯಾರಿ ದಂಪತಿಗಳ ಮಗ.

ಅದಲ್ಲದೇ ಆಲಿ ಭೂತವೂ ಇದೆ. ಆತ ಮಂತ್ರವಾದಿಯಾಗಿದ್ದವನು. ಅತ್ತಾವರ ದೈವಂಗಳ್, ಜುಮಾದಿ, ಸಿರಿ ಮುಂತಾದ ಪಾಡ್ದನಗಳಲ್ಲಿ ಮುಸ್ಲಿಂ ಪಾತ್ರಗಳು ಬರುತ್ತವೆ.

ಭೂತಾರಾಧನೆಯಲ್ಲಿ ಮುಸ್ಲಿಮರಿಗೆ ಗೌರವದ ಮತ್ತು ಮಹತ್ವದ ಸ್ಥಾನವಿತ್ತು. ಉದ್ಯಾವರ ಮಾಡ, ಬಸರೂರು, ಬಾರಕೂರು ಮುಂತಾದ ಕಡೆಗಳಲ್ಲಿ ದೈವಾರಾಧನೆ ಆರಂಭವಾಗಬೇಕಾದರೆ, ಮುಸ್ಲಿಮರ ಹಾಜರಾತಿ ಇರಲೇಬೇಕಾಗಿತ್ತು. ಉದಾಹರಣೆಗೆ ಉದ್ಯಾವರ ಮಾಡದಲ್ಲಿ ಮುಸ್ಲಿಂ ವ್ಯಾಪಾರಿಯೊಬ್ಬರು ವೀಳ್ಯ ಕೊಡಬೇಕು. ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಅರಸು ಮುಂಡತ್ತಾಯ ಮಾಡ ಸಹಿತ ಹಲವು ಕಡೆ ತಲೆತಲಾಂತರಗಳಿಂದ ಅಲಂಕಾರ ಮತ್ತು ಸುಡುಮದ್ದಿನ ಕೆಲಸ ಅವರಿಗೇ! (ಉಡುಪಿ ಪರ್ಯಾಯದಲ್ಲೂ ಹೀಗಿತ್ತು).

ಕುಂದಾಪುರ ಕರಾವಳಿಯಲ್ಲಿ ಮೀನುಗಾರರು ಮೀನಿನ ಬರದ ಸಮಯದಲ್ಲಿ ನಡೆಸುವ ಸೀರಣಿ ಪೂಜೆ ಅಂದರೆ, ಪುಟ್ಟ ದೋಣಿಯಲ್ಲಿ ಪಂಚಕಜ್ಜಾಯವನ್ನು ತೇಲಿ ಬಿಡುವ ವಿಧಿಗಳನ್ನು ಮುಸ್ಲಿಂ ಮೌಲವಿಗಳು ನಡೆಸುತ್ತಿದ್ದರು.
ಅಜಿಲಮೊಗರು, ಮಂಗಳೂರಿನ ಸೈದಾನಿ ಬೀಬಿ ದರ್ಗಾ, ಕಾಜೂರು ಮುಂತಾದ ದರ್ಗಾಗಳಿಗೆ ಸಾವಿರಾರು ಮುಸ್ಲಿಮೇತರರು ಹರಕೆ ಹೊರುತ್ತಾರೆ. ಕೆಲವರ್ಷಗಳ ಹಿಂದಿನ ತನಕ ಕಂದಾವರ ಬೈಲು ದರ್ಗಾದ ಆಡಳಿತ ಹಿಂದೂ ಕುಟುಂಬವೊಂದು ನೋಡಿಕೊಳ್ಳುತ್ತಿತ್ತು.

ಕಾರ್ಕಳದ ಅತ್ತೂರು ಚರ್ಚಿಗೆ ಸಾವಿರಾರು ಅನ್ಯ ಧರ್ಮೀಯರು ಹರಕೆ ಹೊರುತ್ತಾರೆ, ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಗೋವಾದಿಂದ ವಲಸೆ ಬಂದ ಕ್ರೈಸ್ತರಿಗೆ ಪದವುಗಳೆಂದು ಕರೆಯುವ ಬೋಳುಗುಡ್ಡಗಳಲ್ಲಿ ನೆಲೆಸುವಂತೆ ಆಶ್ರಯ ನೀಡಿದವರು ಕೆಳದಿ ನಾಯಕರು. ಈಗ ಬಹುತೇಕ ಎಲ್ಲಾ ಪದವು ಹೆಸರಿರುವ ಪ್ರದೇಶಗಳಲ್ಲಿ ಕ್ರೈಸ್ತರೇ ಹೆಚ್ಚಾಗಿರುವುದನ್ನು ಕಾಣಬಹುದು. ಅವರೀಗ ಈ ಪದವುಗಳನ್ನು ನಂದನವನಗಳನ್ನಾಗಿ ಮಾಡಿದ್ದಾರೆ. ಇಲ್ಲಿನ ಹೆಚ್ಚಿನ ಹಿಂದಿನವರು ಕ್ರೈಸ್ತ ಶಾಲೆಗಳಲ್ಲಿ ಕಲಿತವರು, ಕ್ರೈಸ್ತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರೇ ಆಗಿದ್ದಾರೆ. ಅವರೇನೂ ಮತಾಂತರಗೊಂಡಿಲ್ಲ!

ಹಿಂದೆ ಹಿಂದೂ, ಮುಸ್ಲಿಂ, ಕ್ರೈಸ್ತರು ಪರಸ್ಪರರ ಹಬ್ಬಗಳಲ್ಲಿ ಭಾಗವಹಿಸುತ್ತಿದ್ದರು. ಈಗ ಅವೆಲ್ಲಾ ಕಡಿಮೆಯಾಗಿರುವುದು, ನಿಂತಿರುವುದು ಕಂಡುಬರುತ್ತದೆ. ಈ ಐತಿಹಾಸಿಕ ಮತ್ತು ಸಾಮಾಜಿಕ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೋಮುವಾದದ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕು. ಇಂತಹಾ ನೆಲದಲ್ಲಿ ಸ್ವಾರ್ಥಸಾಧನೆಗಾಗಿ ವಿಷ ಹರಡುತ್ತಿರುವವರು ಎಂತಹಾ ನೀತಿಗೆಟ್ಟ ಅಧಮರೆಂಬುದನ್ನು ತಿಳಿದುಕೊಳ್ಳಬೇಕಾಗಿದೆ.
(ಆಧಾರ: ವಿವಿಧ ಮೂಲಗಳು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...