ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ತೆಲಂಗಾಣ ಬಿಜೆಪಿ ಶಾಸಕ ಟಿ ರಾಜಾ ಸಿಂಗ್‌ರನ್ನು ಮತ್ತೊಮ್ಮೆ ಪೊಲೀಸರು ಬಂಧಿಸಿದ್ದಾರೆ. ಬಿಡುಗಡೆಗೊಂಡ ನಂತರ ನ್ಯಾಯಾಲಯದ ನಿರ್ಬಂಧದ ಹೊರತಾಗಿಯೂ ವಿಡಿಯೋ ಮೂಲಕ ಕೋಮು ಪ್ರಚೋದಿತ ಹೇಳಿಕೆ ನೀಡಿದ್ದರಿಂದ ಅವರನ್ನು ಮತ್ತೆ ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
“ತೆಲಂಗಾಣದ ಪೊಲೀಸರು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಯ ಕೈಗೊಂಬೆಯಾಗಿದ್ದಾರೆ. ಅವರ ಬೆಂಬಲಿಗರಿಗೆ ದೇವಾಲಯಗಳ ಮೇಲೆ ಕಲ್ಲು ಎಸೆಯಲು ಮುಕ್ತ ಅವಕಾಶ ನೀಡಲಾಗಿದೆ. ಆದರೂ ಎಫ್‌ಐಆರ್ ಇಲ್ಲ, ಯಾರ ಬಂಧನವಿಲ್ಲ” ಎಂದು ರಾಜಾ ಸಿಂಗ್ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದರು.
ಸಿಎಂ ಕೆಸಿಆರ್ ಮಗ ಕೆಟಿಆರ್ ನಾಸ್ತಿಕರಾಗಿದ್ದಾರೆ. ಅವರು ಯಾವ ಧರ್ಮವನ್ನೂ ನಂಬುವುದಿಲ್ಲ. ಆದರೆ ಆತನ ಪಕ್ಷ ಮತಗಳಿಗಾಗಿ ಎಐಎಂಐಎಂ ಪಕ್ಷದ ಓವೈಸಿ ಜೊತೆ ಕೈಜೋಡಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಕಾಮಿಡಿಯನ್ ಮುನಾವರ್ ಫಾರೂಕಿಯ ಪ್ರದರ್ಶನವನ್ನು ನಾವು ರದ್ದುಗೊಳಿಸಿದ್ದೆವು. ಆತ ಟ್ವಿಟರ್‌ನಲ್ಲಿ ಕೆಟಿಆರ್‌ರನ್ನು ಸಂಪರ್ಕಿಸಿ ಮತ್ತೆ ಪ್ರದರ್ಶನ ಮಾಡಿದ್ದಾರೆ. ಅಲ್ಲಿ 5000 ಪೊಲೀಸರನ್ನು ನಿಯೋಜಿಸಲಾಗಿದೆ. ನಾಲ್ಕು ಐಎಎಸ್ ಅಧಿಕಾರಿಗಳನ್ನು ಹಾಕಿ ಪ್ರದರ್ಶನ ಯಶಸ್ವಿಗೊಳಿಸಲಾಗಿದೆ. ಮುನಾವರ್ ಫಾರೂಕಿಯನ್ನು ಕರೆಸಿ ನಮ್ಮ ದೇವರನ್ನು ಹಂಗಿಸಲಾಗುತ್ತಿದೆ. ಇದೇ ತೆಲಂಗಾಣದಲ್ಲಿ ಕೋಮು ವಾತವರಣ ಇರುವುದಕ್ಕೆ ಕಾರಣ ಎಂದು ರಾಜಾ ಸಿಂಗ್ ಹೇಳಿದ್ದಾರೆ.
ಬಿಜೆಪಿಯು ಅವರನ್ನು ಉಚ್ಛಾಟಿಸುವುದರ ಕುರಿತು ಪ್ರತಿಕ್ರಿಯಿಸಿದ್ದು, “ನಾನು ಯಾವುದೇ ಧರ್ಮದ ವಿರುದ್ಧವಿಲ್ಲ, ವ್ಯಕ್ತಿಗಳ ವಿರುದ್ಧವಿದ್ದೇನೆ ಎಂದು ಪಕ್ಷದ ಮುಖಂಡರಿಗೆ ಮನವರಿಕೆ ಮಾಡಿಕೊಡುತ್ತೇನೆ” ಎಂದು ಅವರು ಹೇಳಿದ್ದಾರೆ.
“ಕೋರ್ಟ್ ಮಾಧ್ಯಮಗಳಿಗೆ ಹೇಳಿಕೆ ನೀಡದಂತೆ ನಿರ್ಭಂದ ವಿಧಿಸಿದೆ. ಆದರೂ ನಾನು ಮಾತನಾಡದೇ ಇರಲು ಸಾಧ್ಯವಿಲ್ಲ. ರಿಸ್ಕ್ ತೆಗೆದುಕೊಂಡು ನಿಮ್ಮ ಮುಂದೆ ಮಾತನಾಡುತ್ತಿದ್ದೇನೆ. ಏಕೆಂದರೆ ರಾಷ್ಟ್ರೀಯ ಮಾಧ್ಯಮಗಳು ನನ್ನ ವಿರುದ್ಧ ಪಿತೂರಿ ನಡೆಸಿವೆ ಎಂದು ಆರೋಪಿಸಿದ್ದಾರೆ. ಸದ್ಯ ಬಿಜೆಪಿ ಅವರನ್ನು ಪಕ್ಷದಿಂದ ಉಚ್ಛಾಟಿಸಿದೆ.
ಇದನ್ನೂ ಓದಿ; ತೆಲಂಗಾಣ: ಪ್ರವಾದಿ ಮುಹಮ್ಮದ್‌ರನ್ನು ನಿಂದಿಸಿದ್ದ ಶಾಸಕನನ್ನು ಅಮಾನತು ಮಾಡಿದ ಬಿಜೆಪಿ


