Homeಮುಖಪುಟಬಿಲ್ಕಿಸ್ ಬಾನೋ ಒಂದು ವೇಳೆ ವಿಮಲಾ ದೇವಿ ಆಗಿದ್ದರೆ?

ಬಿಲ್ಕಿಸ್ ಬಾನೋ ಒಂದು ವೇಳೆ ವಿಮಲಾ ದೇವಿ ಆಗಿದ್ದರೆ?

- Advertisement -
- Advertisement -

15ನೆಯ ಆಗಸ್ಟ್‌ರಿಂದ ನನ್ನ ತಲೆಯಲ್ಲಿ ಪದೇಪದೇ ಹಿಂದಿಯ ಮಹಾನ್ ಕವಿ ಸರ್ವೇಶ್ವರ್ ದಯಾಲ್ ಸಕ್ಸೇನ ಅವರ ಪ್ರಸಿದ್ಧ ಕವಿತೆ ’ದೇಶ ಹಾಳೆಯ ಮೇಲೆ ಬರೆದಿರುವ ನಕ್ಷೆಯಂತೂ ಅಲ್ಲವಲ್ಲ’ ಗುಂಯ್ಗುಟ್ಟುತ್ತಿದೆ. ಇತ್ತ ದೇಶ ಸ್ವಾತಂತ್ರದ 75ನೆಯ ವರ್ಷದ ಸಂಭ್ರಮಾಚರಣೆ ಮಾಡುತ್ತಿತ್ತು, ಅತ್ತ ಗೋಧ್ರಾ ಜೈಲಿನಿಂದ 11 ಜನ ಬಲಾತ್ಕಾರಿ ಮತ್ತು ಕೊಲೆಗಾರರಿಗೆ ಸ್ವಾತಂತ್ರ್ಯ ನೀಡಲಾಗುತ್ತಿತ್ತು. ದೇಶದಲ್ಲಿ ತಿರಂಗಾ ಯಾತ್ರೆ ನಡೆಯುತ್ತಿತ್ತು ಹಾಗೂ ಅತ್ತ ಅಪರಾಧಿಗಳಿಗೆ ಹೂವಿನ ಮಾಲೆ ಹಾಕಲಾಗುತ್ತಿತ್ತು. ಕವಿ ನನಗೆ ಪ್ರಶ್ನೆ ಕೇಳುತ್ತಿದ್ದ, ಈ ಕವಿತೆಯನ್ನು 50 ವರ್ಷ ಹಿಂದೆಯಲ್ಲ, 2022ರ ಸಲುವಾಗಿ ಬರೆದಂತಿತ್ತು:

“ಒಂದು ವೇಳೆ ನಿಮ್ಮ ಮನೆಯ
ಒಂದು ಕೋಣೆಯಲ್ಲಿ ಬೆಂಕಿ ಬಿದ್ದಿದ್ದರೆ
ನೀವು, ಇನ್ನೊಂದು ಕೋಣೆಯಲ್ಲಿ ನಿದ್ರಿಸಬಹುದೇ?
ಒಂದು ವೇಳೆ ನಿಮ್ಮ ಮನೆಯ ಒಂದು ಕೋಣೆಯಲ್ಲಿ
ಹೆಣಗಳು ಕೊಳೆತು ನಾರುತ್ತಿದ್ದರೆ
ನೀವು ಇನ್ನೊಂದು ಕೋಣೆಯಲ್ಲಿ ಪ್ರಾರ್ಥನೆ ಸಲ್ಲಿಸಬಲ್ಲಿರಾ?
ಹೌದು ಎಂತಾದಲ್ಲಿ,
ನಿಮಗೆ ಹೇಳಲು ನನ್ನ ಬಳಿ ಏನೂ ಇಲ್ಲ”

ಸ್ವಾಭಾವಿಕವಾಗಿಯೇ, ನನಗೆ ’ಹೌದು’ ಎಂದು ಹೇಳಲು ಆಗುವುದಿಲ್ಲ. ಮನೆಯಲ್ಲಿ ಬೆಂಕಿ ಹತ್ತಿದ್ದರೆ ಎಚ್ಚರವಿದ್ದ ಯಾವ ವ್ಯಕ್ತಿಯೂ ನಿದ್ರೆ ಮಾಡಲಾರ. ಪಕ್ಕದ ಕೋಣೆಯಲ್ಲಿ ಹೆಣ ಬಿದ್ದಿದ್ದರೆ, ಒಬ್ಬ ನಿಜವಾದ ಉಪಾಸಕನಿಗೆ ಪ್ರಾರ್ಥನೆ ಸಲ್ಲಿಸಲು ಆಗುವುದಿಲ್ಲ. ಅದೇ ರೀತಿಯಲ್ಲಿ ಯಾವ ದೇಶದಲ್ಲಿ ಬಲಾತ್ಕಾರಿಗಳ ಮತ್ತು ಅಪರಾಧಿಗಳ ಗುಣಗಾನ ನಡೆಯುತ್ತಿದೆಯೋ, ಅಲ್ಲಿ ಒಬ್ಬ ನಿಜವಾದ ದೇಶಭಕ್ತನಿಗೆ ತಲೆಯೆತ್ತಿ ನಡೆಯಲಾಗುವುದಿಲ್ಲ. ಕವಿತೆಯ ಎರಡನೆಯ ಪಂಕ್ತಿಯು ಅದಕ್ಕೆ ಕಾರಣ ನೀಡುತ್ತದೆ:

“ದೇಶ ಹಾಳೆಯ ಮೇಲೆ ಬರೆದಿರುವ ನಕ್ಷೆಯಂತೂ ಅಲ್ಲ
ಒಂದು ಭಾಗ ಹರಿದುಹೋದಲ್ಲಿ
ಇನ್ನೊಂದು ಭಾಗ ಹಾಗೇ ತುಂಡಾಗದೇ ಅದೇ ರೀತಿಯಲ್ಲಿ ನಿಲ್ಲಲು
ಹಾಗೂ ನದಿಗಳು, ಪರ್ವತ, ನಗರ, ಹಳ್ಳಿ
ಹಾಗೇ ತಮ್ಮ ತಮ್ಮ ಜಾಗದಲ್ಲಿ
ಕದಲದೇ ನಿಲ್ಲಲು”

ಈಗ ಯೋಚಿಸಿ, ವಿಮಲಾದೇವಿ ಎಂಬ ಹೆಸರಿನ 21 ವರ್ಷದ ಒಬ್ಬ ಮಹಿಳೆ ಇದ್ದಾಳೆ, ಅವಳು ಐದು ತಿಂಗಳ ಗರ್ಭಿಣಿ. ಇದ್ದಕ್ಕಿದ್ದಂತೆ ಗಲಭೆಗಳಾಗುತ್ತವೆ. ಕುಟುಂಬದ ಜನರು ಮನೆ ತೊರೆದು, ತಮ್ಮ ನೆಂಟರಿಸ್ಟರ ಮನೆ ಕಡೆ ಓಡುತ್ತಾರೆ. ಹೇಗೋ ಒಂದು ಟ್ರಕ್ ವ್ಯವಸ್ಥೆ ಮಾಡಿ, ಅದರಲ್ಲಿ ತುರುಕಿಕೊಳ್ಳುತ್ತಾರೆ. ಇದ್ದಕ್ಕಿಂದ್ದಂತೆ ರಸ್ತೆಯಲ್ಲಿ ಒಂದು ಗುಂಪು ಎದರಾಗುತ್ತದೆ. ಟ್ರಕ್ ನಿಲ್ಲಿಸುತ್ತಾರೆ. ಗಂಡಸರನ್ನು ಕೊಲ್ಲುತ್ತಾರೆ. ವಿಮಲಾದೇವಿಯ ಕಣ್ಣುಗಳೆದುರಿಗೇ, ಅವಳ 3 ವರ್ಷದ ಮಗಳನ್ನು ರಸ್ತೆಯ ಮೇಲೆ ಪದೇಪದೇ ಅಪ್ಪಳಿಸಿ ಕೊಲ್ಲುತ್ತಾರೆ. ನಂತರ ಈ ಗರ್ಭವತಿ ಮಹಿಳೆಯ ಮೇಲೆ ಒಬ್ಬೊಬ್ಬರಾಗಿ ಅತ್ಯಾಚಾರ ಎಸಗುತ್ತಾರೆ. ನಂತರ ಅವಳು ಸತ್ತಿದ್ದಾಳೆ ಎಂದುಕೊಂಡು ಅವಳ ಬೆತ್ತಲೆ ಶರೀರವನ್ನು ರಸ್ತೆಯ ಮೇಲೆ ಬಿಟ್ಟುಹೋಗುತ್ತಾರೆ.

ಕವಿ ಕಿರುಚುತ್ತಾನೆ:
“ಈ ಜಗತ್ತಿನಲ್ಲಿ ಮನುಷ್ಯನ ಪ್ರಾಣಕ್ಕಿಂತ
ದೊಡ್ಡದು ಏನೂ ಇಲ್ಲ
ದೇವರೂ ಇಲ್ಲ
ಜ್ಞಾನವೂ ಇಲ್ಲ
ಚುನಾವಣೆಯೂ ಇಲ್ಲ
ಕಾಗದದ ಮೇಲೆ ಬರೆಯಲಾದ ಯಾವುದೇ ಬರಹವನ್ನೂ
ಹರಿದುಹಾಕಬಹುದು
ಹಾಗೂ ನೆಲದ ಏಳು ಪದರುಗಳ ಒಳಗೆ
ಹೂತು ಹಾಕಬಹುದು”

ಆದರೆ ಯಾವುದೇ ಸಿನೆಮಾದ ಕಥೆಯಂತೆ ವಿಮಲಾದೇವಿ ಸಾಯಲಿಲ್ಲ. ಅವಳು ಪ್ರಜ್ಞೆ ಮರಳಿ ಪಡೆದು, ಹೇಗೋ ತನ್ನ ದೇಹ ಮುಚ್ಚಿಕೊಂಡು ಸುರಕ್ಷಿತ ಸ್ಥಳ ತಲುಪುತ್ತಾಳೆ. ಪೊಲೀಸರು ಅವಳ ದೂರನ್ನು ದಾಖಲಿಸಲೂ ನಿರಾಕರಿಸುತ್ತಾರೆ. ದಾಖಲಿಸಿದ ನಂತರ ಸರಿಯಾಗಿ ತನಿಖೆ ಆಗುವುದಿಲ್ಲ. ಹೇಗೋ ವಿಷಯ ಸರ್ವೋಚ್ಚ ನ್ಯಾಯಾಲಯಕ್ಕೆ ತಲುಪುತ್ತದೆ. ನ್ಯಾಯ ಆಗಲಿ ಎಂದು ಪ್ರಕರಣವನ್ನು ಬೇರೊಂದು ರಾಜ್ಯದಲ್ಲಿ ನಡೆಸಲಾಗುತ್ತದೆ. ಆಗ ಅಪರಾಧಿಗಳಿಗೆ ಶಿಕ್ಷೆಯಾಗುತ್ತದೆ. ಕೊನೆಗೆ, 11 ಅಪರಾಧಿಗಳಿಗೆ ಬಲಾತ್ಕಾರ ಮತ್ತು ಕೊಲೆಯ ಆರೋಪದ ಮೇಲೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ.

ಸರ್ವೇಶ್ವರ್ ದಯಾಲ್ ಸಕ್ಸೇನ

ಕಥೆ ಇಲ್ಲಿಯೇ ಮುಗಿಯುವುದಿಲ್ಲ. ಜೈಲಿನಲ್ಲಿದ್ದರೂ, ಈ ಎಲ್ಲ ಅಪರಾಧಿಗಳು ಪದೇಪದೇ ಪೆರೋಲ್ ಮೇಲೆ ಹೊರಬರುತ್ತಾರೆ, ಸಂಭ್ರಮಿಸುತ್ತಾರೆ, ಪಕ್ಷದ ರ್‍ಯಾಲಿಗಳಲ್ಲಿ ಶಾಮೀಲಾಗುತ್ತಾರೆ ಹಾಗೂ ವಿಮಲಾದೇವಿಯ ಪರಿವಾರಕ್ಕೆ ಬೆದರಿಕೆ ಹಾಕುತ್ತಾರೆ. ಪೊಲೀಸರು, ಆಡಳಿತ ಮತ್ತು ಸರಕಾರ ಮಂದಹಾಸ ಬೀರುತ್ತವೆ. ಹಾಗೂ ಶಿಕ್ಷೆ ಪೂರ್ಣವಾಗುವ ಮುನ್ನ ಸರಕಾರ ಒಂದು ಸಮಿತಿಯನ್ನು ರಚಿಸುತ್ತದೆ, ಅದು ಈ ಅತ್ಯಂತ ಕ್ರೂರ ಅಪರಾಧಿಗಳನ್ನು ಅವರ ಒಳ್ಳೆಯ ನಡೆತೆ ಮತ್ತು ಮಾನವೀಯತೆಯ ಆಧಾರದ ಮೇಲೆ ಬಿಡುಗಡೆ ಮಾಡುತ್ತದೆ. ಹೀಗೆ 15ನೆಯ ಆಗಸ್ಟ್‌ರಂದು ಸ್ವಾತಂತ್ರ್ಯದ ದಿನವನ್ನು ಆಚರಿಸಲಾಗುತ್ತದೆ. ಈಗ ಕವಿತೆ ತನ್ನ ಉತ್ತುಂಗವನ್ನು ತಲುಪುತ್ತದೆ:

“ನೆನಪಿಡಿ
ಒಂದು ಮಗುವಿನ ಕೊಲೆ
ಒಬ್ಬ ಮಹಿಳೆಯ ಸಾವು
ಒಬ್ಬ ವ್ಯಕ್ತಿಯ ಗುಂಡುಗಳಿಂದ
ಛಿದ್ರಗೊಂಡ ದೇಹ
ಯಾವುದೇ ಶಾಸನದ್ದಷ್ಟೇ ಅಲ್ಲ
ಇಡೀ ರಾಷ್ಟ್ರದ ಪತನವಾಗಿದೆ”
ಹೀಗೆ ರಕ್ತ ಸುರಿದು
ಭೂಮಿಯಲ್ಲಿ ಚೈತನ್ಯವಿರುವುದಿಲ್ಲ
ಆಕಾಶದಲ್ಲಿ ಹಾರುವ ಬಾವುಟಗಳನ್ನು
ಕಪ್ಪಾಗಿಸುತ್ತದೆ”

ನಾನು ಆಗಸದಲ್ಲಿ ಹಾರುತ್ತಿರುವ ತ್ರಿವರ್ಣ ಧ್ವಜವನ್ನು ನೋಡುತ್ತೇನೆ. ಅವುಗಳ ಸಂಖ್ಯೆ ಹೆಚ್ಚಿದೆ, ಅವುಗಳ ಆಕಾರ ಮತ್ತು ಎತ್ತರವೂ ಹೆಚ್ಚಿದೆ. ಆದರೆ ಕವಿತೆಯ ಸಾಲುಗಳು ನನ್ನ ಬೆನ್ನು ಬಿಡುತ್ತಿಲ್ಲ. ವಿಮಲಾ ದೇವಿಯ ಬಲಾತ್ಕಾರಿಗಳನ್ನು ಬಿಡುಗಡೆ ಮಾಡಲು ಕಾನೂನಾತ್ಮಕ ದಾಳಗಳ ಆಸರೆ ಪಡೆಯಲಾಗುತ್ತದೆ. ಆದರೆ ಕವಿ ಮತ್ತೆ ನಮ್ಮನ್ನು ಎಚ್ಚರಿಸುತ್ತಾನೆ:

“ಹೆಣಗಳ ಆಸರೆ ಪಡೆದು
ನಿಂತಿರುವ ವಿವೇಕ
ಅದು ಕುರುಡು ವಿವೇಕ”
ವಿಮಲಾ ದೇವಿ ಹೇಳುತ್ತಾಳೆ:

“ನಾನು ಮೌನವಾಗಿದ್ದೇನೆ, ಪ್ರಜ್ಞಾಹೀನಳಾಗಿದ್ದೇನೆ. ಇಷ್ಟು ಮಾತ್ರ ಹೇಳಬಲ್ಲೆ, ಒಬ್ಬ ಮಹಿಳೆಯೊಂದಿಗೆ ನ್ಯಾಯವು ಈ ರೀತಿಯಲ್ಲಿ ಬದಲಾಗಲು ಹೇಗೆ ಸಾಧ್ಯ? ನಾನು ಎಲ್ಲಕ್ಕಿಂತ ದೊಡ್ಡ ನ್ಯಾಯಾಲಯದಲ್ಲಿ ನಂಬಿಕೆ ಇಟ್ಟಿದ್ದೆ. ನಾನು ಈ ವ್ಯವಸ್ಥೆಯ ಮೇಲೆ ವಿಶ್ವಾಸವಿಟ್ಟಿದ್ದೆ. ನಾನು ನನ್ನ ದುರಂತದೊಂದಿಗೆ ಬದುಕಲು ಕಲಿಯುತ್ತಿದ್ದೆ. ಆದರೆ ಈಗ ಶಾಂತಿ ಕದಡಿದೆ. ನ್ಯಾಯದಲ್ಲಿಯ ನನ್ನ ನಂಬಿಕೆ ಕದಡಿದೆ.” ವಿಮಲಾಳ ಧ್ವನಿಯನ್ನು ಕೇಳುವವರು ಯಾರೂ ಇಲ್ಲವಾಗಿದ್ದಾರೆ. ದೇಶ ಮೌನವಾಗಿದೆ. ಯಾವುದೇ ಕುರ್ಚಿ ಅಲುಗಾಡಿಲ್ಲ. ನಿರ್ಭಯಾಳ ಬಲಾತ್ಕಾರಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಬೇಡಿಕೆ ಇಡುವವರು ಹಾಗೂ ಆರುಶಿ ಹತ್ಯೆಯ ಮೇಲೆ ಹಗಲೂರಾತ್ರಿ ಕಿರುಚಾಡಿದ ಟವಿ ಚಾನೆಲ್‌ಗಳು ಮೂಕರಾಗುತ್ತಾರೆ.

ಒಬ್ಬ ಕವಿ ಮಾತ್ರ ಗಂಟಲು ಹರಿದುಕೊಂಡು ವಿಮಲಾಳ ಪರವಾಗಿ ಮಾತನಾಡುತ್ತಿದ್ದಾನೆ:

“ಕೊನೆಯ ಮಾತು
ಅತ್ಯಂತ ಸ್ಪಷ್ಟ
ಯಾವುದೇ ಕೊಲೆಗಾರನಿಗೆ
ಎಂದಿಗೂ ಕ್ಷಮಿಸಬೇಡ
ಅವನು ನಿನ್ನ ಗೆಳೆಯನೇ ಆಗಿರಲಿ
ಧರ್ಮದ ಗುತ್ತಿಗೆದಾರನೇ ಆಗಿರಲಿ
ಪ್ರಜಾಪ್ರಭುತ್ವದ ಪ್ರಸಿದ್ಧ ಕಾವಲುಗಾರನೇ ಆಗಿರಲಿ”

ಆದರೆ, ಆ ಮಹಿಳೆಯ ಹೆಸರು ವಿಮಲಾ ದೇವಿ ಅಲ್ಲ, ಬಿಲ್ಕಿಸ್ ಬಾನೋ ಎಂದು ನೀವು ಹೇಳುವಿರಿ. ಹಾಗಿದ್ದರೆ? ಹಾಗಿದ್ದರೆ ಅದರಿಂದ ನ್ಯಾಯದ ತಕ್ಕಡಿ ಪಲ್ಟಿ ಹೊಡೆಯುತ್ತದೆಯೇ? ಬಲಾತ್ಕಾರದ ಚೀತ್ಕಾರಗಳು ಮಧುರವಾಗುತ್ತವೆಯೇ? ಕೊಲೆಯ ಭೀಭತ್ಸತೆ ಮುಗ್ಧವಾಗುತ್ತದೆಯೇ? ಒಂದು ವೇಳೆ ಸರ್ವೇಶ್ವರ್ ದಯಾಲ್ ಸಕ್ಸೇನಾ 2022ರಲ್ಲಿ ಜೀವಿತವಿದ್ದಲ್ಲಿ, ಕವಿತೆಯಲ್ಲಿ ಎರಡು ಸಾಲು ಸೇರಿಸುತ್ತಿದ್ದರು:

“ಒಂದು ವೇಳೆ ನೀವು ವಿಮಲಾ ದೇವಿಯ ಬಲಾತ್ಕಾರದ ಬಗ್ಗೆ ಗಟ್ಟಿಯಾಗಿ ಕಿರುಚುತ್ತೀರಾ ಎಂದಾದಲ್ಲಿ
ಬಿಲ್ಕಿಸ್ ಬಾನೋನ ಹೆಸರು ಕೇಳಿ ಸುಮ್ಮನಿರಬಹುದೇ?
ಹೌದು ಎಂತಾದಲ್ಲಿ
ನಿಮಗೆ ಹೇಳಲು ನನ್ನ ಬಳಿ ಏನೂ ಇಲ್ಲ”

ಕನ್ನಡಕ್ಕೆ: ರಾಜಶೇಖರ ಅಕ್ಕಿ


ಇದನ್ನೂ ಓದಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಅತ್ಯಾಚಾರಿ-ಕೊಲೆಗಡುಕರನ್ನು ಗೌರವಿಸಿದ ಕರಾಳ ವಿದ್ಯಮಾನ

ಇದನ್ನೂ ಓದಿ: ಬಿಲ್ಕಿಸ್ ಬಾನೋ ಪ್ರಕರಣ: ಅಪರಾಧಿಗಳನ್ನು ಬಿಡುಗಡೆ ಮಾಡಿ ಎಂದು ಆದೇಶಿಸಿಲ್ಲ ಎಂದ ಸುಪ್ರೀಂ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...