ನ್ಯಾಯಾಲಯದ ಆದೇಶಗಳನ್ನು ಧಿಕ್ಕರಿಸಿ ಆಗಸ್ಟ್ 11 ರಂದು ಬೇಗೂರು ಕೆರೆಯಲ್ಲಿ ಶಿವನ ಪ್ರತಿಮೆಯನ್ನು ಅನಾವರಣಗೊಳಿಸಿದ ಬಿಜೆಪಿ ಬೆಂಬಲಿತ ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ದಿನ್ಯೂಸ್‌ಮಿನಿಟ್ ವರದಿ ಮಾಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಕರ್ನಾಟಕ ಹೈಕೋರ್ಟ್‌ಗೆ ಪ್ರತಿಮೆಯನ್ನು ಮುಚ್ಚಲಾಗಿದೆ ಎಂದು ತಿಳಿಸಿದ ಕೆಲವೇ ಗಂಟೆಗಳಲ್ಲಿ ಪ್ರತಿಮೆಯನ್ನು ಅನಾವರಣಗೊಳಿಸಲಾಗಿತ್ತು. ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ನೀಡಲಾಗಿದ್ದ ದೂರಿನ ಆಧಾರದ ಮೇಲೆ ಆಗಸ್ಟ್ 16 ರಂದು ಬೇಗೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸಂಘಪರಿವಾರದ ಕಾರ್ಯಕರ್ತರಾದ ಪುನಿತ್ ಕೆರೆಹಳ್ಳಿ ಮತ್ತು ಸಂತೋಷ್ ಕರತಾಲ್ ಅವರ ಜೊತೆಗೆ ಇತರರ ಹೆಸರುಗಳನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ನ್ಯೂಸ್‌ಮಿನಿಟ್ ವರದಿಯಲ್ಲಿ ತಿಳಿಸಿದೆ. ಆಗಸ್ಟ್ 11 ರಂದು ಬೇಗೂರು ಕೆರೆಗೆ ಆಗಮಿಸಿದ್ದ ಆರೋಪಿಗಳು ಟಾರ್ಪಾಲ್‌ನಿಂದ ಮುಚ್ಚಿದ್ದ ಶಿವನ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು.
ಇದನ್ನೂ ಓದಿ: ಬೇಗೂರು ಕೆರೆ ಉಳಿಸಿ ಹೋರಾಟಕ್ಕೆ ಕೋಮು ಬಣ್ಣ: ಹೈಕೋರ್ಟ್ ಆದೇಶ ಧಿಕ್ಕರಿಸಿ ಕೆರೆ ಮಧ್ಯೆ ಶಿವ ವಿಗ್ರಹ ಅನಾವರಣ
ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 34 (ಸಾಮಾನ್ಯ ಉದ್ದೇಶವನ್ನು ಮುಂದಿಟ್ಟುಕೊಂಡು ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು), 298 (ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗಳನ್ನು ನೋಯಿಸುವ ಉದ್ದೇಶಪೂರ್ವಕ ಉದ್ದೇಶ), 505 (2) (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಬುಧವಾರ ಬೇಗೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಬಗ್ಗೆ ಹೈಕೋರ್ಟ್‌ಗೆ ಮಾಹಿತಿ ನೀಡಲಾಗಿದ್ದು, ಸೆಪ್ಟೆಂಬರ್ 2 ರೊಳಗೆ ತನಿಖಾ ವರದಿಯನ್ನು ಸಲ್ಲಿಸುವಂತೆ ಬೆಂಗಳೂರು (ಆಗ್ನೇಯ) ಡಿಸಿಪಿಗೆ ಸೂಚಿಸಿದೆ.
ಇದನ್ನೂ ಓದಿ: ಕಾರಿಗೆ ಬೆಂಕಿ: ಕೋಮು ಬಣ್ಣ ಹಚ್ಚಿದ ಬಿಜೆಪಿ ಶಾಸಕ ಸತೀಶ್ ರೆಡ್ಡಿ – ಪ್ರಕರಣ ಭೇದಿಸಿದ ಪೊಲೀಸರು
ಮುಖ್ಯ ನ್ಯಾಯಾಧೀಶ ಅಭಯ್ ಓಕಾ ನೇತೃತ್ವದ ಹೈಕೋರ್ಟ್ ಪೀಠವು, ನ್ಯಾಯಾಲಯದಲ್ಲಿರುವ ಬೇಗೂರು ಪ್ರಕರಣವು ಧಾರ್ಮಿಕ ದೃಷ್ಟಿಕೋನವನ್ನು ಹೊಂದಿಲ್ಲ, ಕೆರೆಯ ಮಧ್ಯದಲ್ಲಿ ಕೃತಕ ದ್ವೀಪವನ್ನು ನಿರ್ಮಿಸಲು ಬಿಬಿಎಂಪಿಗೆ ಅಧಿಕಾರವಿದೆಯೇ ಎಂಬುವುದನ್ನು ಪರಿಶೀಲಿಸುವ ಪ್ರಕರಣವಾಗಿದೆ ಎಂದು ಕಳೆದ ವಾರ ಪುನರುಚ್ಚರಿಸಿದೆ.
ಬಿಬಿಎಂಪಿಯು ಬೆಂಗಳೂರಿನ ಬೇಗೂರು ಕೆರೆಯ ಮಧ್ಯದಲ್ಲಿ ಪ್ರತಿಮೆಯನ್ನು ನಿರ್ಮಿಸುತ್ತಿರುವುದಕ್ಕೆ ಹೈಕೋರ್ಟ್ 2019 ರ ಆಗಸ್ಟ್‌ನಲ್ಲಿ ತಡೆ ನೀಡಿತ್ತು. ಕೆರೆಯ ಗಾತ್ರವನ್ನು ಕಡಿಮೆ ಮಾಡಲು ಮತ್ತು ಅದರಲ್ಲಿ ದ್ವೀಪಗಳನ್ನು ಮಾಡಲು ಬಿಬಿಎಂಪಿಗೆ ಅಧಿಕಾರವಿಲ್ಲ ಎಂದು ಅದು ಹೇಳಿತ್ತು.
ಆದರೆ ಆಗಸ್ಟ್ 1 ರಿಂದ, ಬಿಜೆಪಿ ಬೆಂಬಲಿತ ಸಂಘಪರಿವಾದ ಕಾರ್ಯಕರ್ತರು, ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ‘ಪರಿಸರ ಉಳಿವಿನ ಪ್ರಕರಣವನ್ನು’ ಕೋಮುವಾದಿಕರಣಗೊಳಿಸಲು ನೋಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಪರಿಸರ ಹೋರಾಟಗಾರ ಲಿಯೋ ಸಾಲ್ಢಾನ್ಹಾ ಅವರನ್ನು ಗುರಿಯಾಗಿಸಿ ದ್ವೇಷವನ್ನು ಬಿತ್ತುತ್ತಿದ್ದಾರೆ.
ಇದನ್ನೂ ಓದಿ: ಕೋಮುವಾದದ ಲೇಪನದಲ್ಲಿ ಕಡೆಗಣನೆಗೆ ಒಳಪಟ್ಟ ಬೇಗೂರು ಕೆರೆ ಅಭಿವೃದ್ಧಿ!


