ಬೆಂಗಳೂರಿನಲ್ಲಿದ್ದ ಹಲವಾರು ಕೆರೆಗಳು ಕಣ್ಮರೆಯಾಗಿರುವ ಹಿನ್ನೆಲೆಯಲ್ಲಿ ಯಾರಾದರೂ ಕೆರೆ ಉಳಿಸುವುದಕ್ಕಾಗಿ ಹೋರಾಟ ಮಾಡಿದರೆ ಅವರಿಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿತ್ತು. ಆದರೆ ಐತಿಹಾಸಿಕ ಮಹತ್ವ ಹೊಂದಿರುವ ಬೆಂಗಳೂರಿನ ಅತಿ ಹಳೆಯ ಕೆರೆಯಾದ ಬೇಗೂರು ಕೆರೆ ಉಳಿವಿಗಾಗಿ ಹೋರಾಡಿದವರನ್ನು ನಿಂದಿಸಲಾಗುತ್ತಿದೆ. ಅವರ ಜಾತಿ ಧರ್ಮವನ್ನು ಮುಂದೆ ಮಾಡಿ ಅವಹೇಳನ ಮಾಡಲಾಗುತ್ತಿದೆ. ಈ ದುಸ್ಥಿತಿಗೆ ಏನನ್ನಬೇಕೊ ತಿಳಿಯದು.

ಬೇಗೂರು ಕೆರೆ ಅಭಿವೃದ್ಧಿಗೆ 2018 ರ ಮಾರ್ಚ್ 17 ರಂದು ಅಂದಿನ ಗೃಹ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದರು. ಎರಡು ವರ್ಷಗಳಲ್ಲಿ ಕಾಮಗಾರಿ ಮುಗಿಸಲು ಸೂಚನೆ ಕೂಡ ನೀಡಲಾಗಿತ್ತು. ಆದರೆ ಕೆರೆ ಅಭಿವೃದ್ದಿ ಬದಲು ಕೆರೆಯ ಮಧ್ಯದಲ್ಲಿ ಕೃತಕ ದ್ವೀಪ ನಿರ್ಮಾಣ ಮಾಡಿ ಅಲ್ಲಿ ಶಿವನ ವಿಗ್ರಹ ಸ್ಥಾಪಿಸಲು ಬಿಬಿಎಂಪಿ ಮುಂದಾಗಿತ್ತು. ಇದು ಕೆರೆಯ ಸ್ವರೂಪವನ್ನು ಹಾಳು ಮಾಡುವುದಲ್ಲದೆ, ಕೆರೆಯ ವಿಸ್ತೀರ್ಣ ಮತ್ತು ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಎಂಬ ಆತಂಕದಿಂದ ಕೆಲ ಪರಿಸರ ಹೋರಾಟಗಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಪ್ರಕರಣವನ್ನು ಆಲಿಸಿದ ಹೈಕೋರ್ಟ್ ಕೆರೆ ಪಾತ್ರವನ್ನು ಕಡಿಮೆ ಮಾಡುವ ಹಕ್ಕು ಯಾರಿಗೂ ಇಲ್ಲವೆಂದು ಸ್ಪಷ್ಟವಾಗಿ ತಿಳಿಸಿ ಶಿವನ ವಿಗ್ರಹ ಮತ್ತು ಕೃತಕ ದ್ವೀಪ ನಿರ್ಮಾಣಕ್ಕೆ ತಡೆ ನೀಡಿತ್ತು. ಆಗ ಕೋರ್ಟ್ ಆದೇಶದ ಮೇರೆಗೆ ನಿರ್ಮಾಣ ಹಂತದಲ್ಲಿದ್ದ ಶಿವನ ವಿಗ್ರಹವನ್ನು ನೀಲಿ ಬಣ್ಣದ ಟಾರ್ಪಲ್‌ನಿಂದ ಮುಚ್ಚಲಾಗಿತ್ತು. ಅಲ್ಲದೇ ವಿಗ್ರಹವನ್ನು ಅಲ್ಲಿಂದ ತೆರವುಗೊಳಿಸಲು ಬಿಬಿಎಂಪಿ ನಿರ್ಣಯ ಕೈಗೊಳ್ಳುವಂತೆ ಆದೇಶಿಸಿರುವ ನ್ಯಾಯಾಲಯ ಎರಡು ವಾರಗಳ ಸಮಯ ನೀಡಿದೆ.

ಆದರೆ ಪ್ರಕರಣ ಇನ್ನು ವಿಚಾರಣಾ ಹಂತದಲ್ಲಿರುವಾಗಲೇ ಮತ್ತು ತಡೆಯಾಜ್ಞೆಯಿದ್ದರೂ ಅದನ್ನು ಲೆಕ್ಕಿಸದೇ ಕೆಲ ಹಿಂದುತ್ವ ಸಂಘಟನೆಯ ಕಾರ್ಯಕರ್ತರು ಆ ಟಾರ್ಪಲ್ ಕಿತ್ತುಹಾಕಿ ವಿಗ್ರಹ ಅನಾವರಣ ಮಾಡಿದ್ದಾರೆ. ಅಲ್ಲದೆ ಕೇಸರಿ ಬಾವುಟಗಳನ್ನು ನೆಟ್ಟಿದ್ದಾರೆ.

ರಾಷ್ಟ್ರ ರಕ್ಷಣಾ ಪಡೆಯ ಕಾರ್ಯಕರ್ತ ಎಂದು ಹೇಳಿಕೊಳ್ಳುವ ಪುನಿತ್ ಕೆರೆಹಳ್ಳಿ ಎಂಬುವವರೊಬ್ಬರು ಜುಲೈ 31 ರಂದು ಕೆರೆಯ ಬಳಿ ತೆರಳಿ ವಿಡಿಯೋವೊಂದನ್ನು ಮಾಡಿದ್ದಾರೆ. ಅದರಲ್ಲಿ “ಬಿಬಿಎಂಪಿ ಈ ಶಿವನ ವಿಗ್ರಹವನ್ನು ಏಕೆ ಪೂರ್ಣಗೊಳಿಸಿಲ್ಲ ಗೊತ್ತೆ? ಏಕೆಂದರೆ ಇಲ್ಲಿ ಶಿವನ ವಿಗ್ರಹ ಸ್ಥಾಪಿಸಿದರೆ ಅದು ಕ್ರಿಶ್ಚಿಯನ್ನರ ಭಾವನೆಗಳಿಗೆ ಧಕ್ಕೆಯುಂಟುಮಾಡುತ್ತದೆ ಅಂತೆ. ಹಾಗಾಗಿ ಅವರು ಹೈಕೋರ್ಟ್‌ಗೆ ಹೋಗಿ ಸ್ಟೇ ತಂದಿದ್ದಾರೆ. ನಾವೇನು ಶಿವನ ವಿಗ್ರಹವನ್ನು ಇಟಲಿ ಅಥವಾ ಅರಬ್ ದೇಶದಲ್ಲಿ ಕಟ್ಟುತ್ತಿದ್ದೇವೆಯೇ? ಹಿಂದೂಗಳು ಈಗಲಾದರೂ ಎಚ್ಚೆತ್ತುಕೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.

ತದನಂತರ ಫೇಕ್‌ನ್ಯೂಸ್ ವೆಬ್‌ಸೈಟ್‌ ಎಂಬ ಆರೋಪ ಎದುರಿಸುತ್ತಿರುವ ಪೋಸ್ಟ್‌ಕಾರ್ಡ್ ಕನ್ನಡ ಎಂಬ ಫೇಸ್‌ಬುಕ್ ಪುಟದಲ್ಲಿ ಈ ಕೆರೆಗೆ ಸಂಬಂಧಿಸಿದ ಪೋಸ್ಟರ್ ಒಂದು ಪ್ರಕಟವಾಗಿದೆ. ಅದರಲ್ಲಿ “ಬೇಗೂರಿನಲ್ಲಿ 75% ಹಿಂದೂಗಳು ಮತಾಂತರವಾಗಿದ್ದಾರೆ. ಕ್ರೈಸ್ತ ಮಿಷನರಿಗಳು ಕೆರೆಯ ನೀರು ಸಂಗ್ರಹ ಕಡಿಮೆಯಾಗುತ್ತದೆ ಎಂಬ ಕುತಂತ್ರದಿಂದಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮುಂಚೆ ನೀಲಿ ಟಾರ್ಪಲ್ ಹಾಕಿ ಶಿವನ ವಿಗ್ರಹವನ್ನು ಮುಚ್ಚಲಾಗಿತ್ತು. ಆದರೆ ಕೇಸರಿ ಕಲಿಗಳು ಟಾರ್ಪಲ್ ತೆರೆದು ಶಿವನ ವಿಗ್ರಹ ಅನಾವರಣಗೊಳಿಸಿ ಭಗವಾ ಧ್ವಜ ಹಾರಿಸಿದ್ದಾರೆ. ಮುಂದೊಂದು ದಿನ ನಮ್ಮನ್ನೂ ಮಿಷನರಿಗಳು ಆಳುವ ದಿನ ಬಂದೀತು, ಜಾಗೃತನಾಗು ಹಿಂದೂ” ಎಂದು ಆರೋಪಿಸಲಾಗಿದೆ.

ಈ ಮೂಲಕ ಕೆರೆ ಉಳಿವಿನ ಹೋರಾಟಕ್ಕೆ ಕೋಮ ಆಯಾಮ ನೀಡಲಾಗಿದೆ. ಇದಕ್ಕೆ ಮೂಲ ಕಾರಣ ಈ ಕೆರೆ ಒತ್ತುವರಿ ವಿರೋಧಿಸಿ ಅರ್ಜಿ ಸಲ್ಲಿಸಿರುವವರು ಎನ್ವಿರಾನ್ಮೆಂಟ್ ಸಪೋರ್ಟ್ ಗ್ರೂಪ್‌ ಸಂಸ್ಥೆಯ ಖ್ಯಾತ ಪರಿಸರ ಹೋರಾಟಗಾರರಾದ ಲಿಯೋ ಸಾಲ್ಡನಾ ಅವರಾಗಿರುವುದಾಗಿದೆ. ಅವರು ಹಲವು ದಶಕಗಳಿಂದ ಪರಿಸರ ಹೋರಾಟದಲ್ಲಿದ್ದು, ಹತ್ತಾರು ಕೆರೆಗಳ ಉಳಿವಿಗೆ ಶ್ರಮಿಸಿದ್ದಾರೆ. ಅವರು ಸಲ್ಲಿಸಿದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಹಿನ್ನೆಲೆಯಲ್ಲಿ 2011 ರಲ್ಲಿ ಕೆರೆಗಳ ಉಳಿವಿಗೆ ಕೈಗೊಳ್ಳುವ ಕ್ರಿಯಾಯೋಜನೆ ರೂಪಿಸಿ ಎಂದು ಹೈಕೋರ್ಟ್ ಆದೇಶಿಸಿತ್ತು. ಅಲ್ಲದೇ 2012 ರಲ್ಲಿ ಕೆರೆಗಳ ಅನಿಯಂತ್ರಿತ ಖಾಸಗೀಕರಣದ ವಿರುದ್ಧ ತೀರ್ಪಿತ್ತಿತ್ತು.

ಈ ಹಿನ್ನೆಲೆಯಲ್ಲಿ ಕೆರೆ ಉಳಿಸುವ ಹೋರಾಟವನ್ನು ಕೋಮುವಾದೀಕರಣ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಾರ್ವಜನಿಕ ಹಕ್ಕೊತ್ತಾಯ ಪತ್ರ ಬಿಡುಗಡೆ ಮಾಡಲಾಗಿದೆ. “ಇಷ್ಟು ವರ್ಷಗಳಲ್ಲಿ ಇಲ್ಲಿ ಸುತ್ತ ಮುತ್ತ ವಾಸಿಸುತ್ತಿರುವ ಜನ ಆಹಾರ ಮತ್ತು ನೀರಿನ ಅಗತ್ಯವನ್ನು ಅರಿತು ಕೆರೆಗೆ ಯಾವುದೇ ಹಾನಿ ಮಾಡಿಲ್ಲ. ಆದರೆ ಈಗ ಇಲ್ಲಿ ಕೃತಕ ದ್ವೀಪ, ವಿಗ್ರಹ ಮತ್ತು ಸುತ್ತ ವಾಕಿಂಗ್ ಪಾಥ್ ಮಾಡುವ ಮೂಲಕ ಕೆರೆಯ ಸಾಮರ್ಥ್ಯವನ್ನು ಕುಗ್ಗಿಸಲಾಗುತ್ತಿದೆ. ಇದು ಸರಿಯಲ್ಲ. ಕೆರೆಯ ಪಕ್ಕದಲ್ಲಿಯೇ ಇರುವ ಬೇಗೂರು ಶಿವನ ದೇವಾಲಯದಲ್ಲಿ ವಿಗ್ರಹ ಪ್ರತಿಸ್ಥಾಪಿಸಿದರೆ ಎಲ್ಲರಿಗೂ ಕ್ಷೇಮ ಮತ್ತು ಕೆರೆ ಉಳಿಯುತ್ತದೆ. ಆದರೆ ಹೈಕೋರ್ಟ್ ಆದೇಶ ಉಲ್ಲಂಘಿಸಿ ಕೋಮು ಪ್ರಚೋದನೆ ಮಾಡುತ್ತಿರುವವರ ಮೇಲೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು” ವಕೀಲರಾದ ವಿನಯ್ ಶ್ರೀನಿವಾಸ ಮತ್ತು ಪರಿಸರ ಹೋರಾಟಗಾರರಾದ ಲಿಯೋ ಸಾಲ್ಡಾನ ಒತ್ತಾಯಿಸಿದ್ದಾರೆ.

ಇನ್ನು ಇಷ್ಟೆಲ್ಲಾ ವಿವಾದಗಳಿದ್ದರೂ ಶಾಸಕ ಎಂ. ಕೃಷ್ಣಪ್ಪ ತ್ವರಿತವಾಗಿ ಕಾಮಗಾರಿ ಆರಂಭಿಸಲು ಸೂಚನೆ ನೀಡಿದ್ದಾರೆ. ಇಂದು ಆಗಸ್ಟ್ 11 ರಂದು ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಹೈಕೋರ್ಟ್ ಈ ಬೆಳವಣಿಗೆಗಳಿಗೆ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಕಾದು ನೋಡಬೇಕಿದೆ.

 


ಇದನ್ನೂ ಓದಿ: ಮುಸ್ಲಿಮರ ವಿರುದ್ದ ಹಿಂಸಾಚಾರಕ್ಕೆ ಕರೆ ನೀಡಿದ ಸಂಘಪರಿವಾರದ ನಾಯಕ ಶರಣ್ ಪಂಪ್‌ವೆಲ್

LEAVE A REPLY

Please enter your comment!
Please enter your name here