Homeಕರ್ನಾಟಕಜಗತ್ತಿನ ಹಲವೆಡೆ ಪ್ರವಾಹದ ಹಾವಳಿ; ಎಲ್ಲವೂ ಕೊಚ್ಚಿಕೊಂಡು ಹೋಗುವ ದಿನ ಬರುವ ಮುನ್ನ...

ಜಗತ್ತಿನ ಹಲವೆಡೆ ಪ್ರವಾಹದ ಹಾವಳಿ; ಎಲ್ಲವೂ ಕೊಚ್ಚಿಕೊಂಡು ಹೋಗುವ ದಿನ ಬರುವ ಮುನ್ನ…

- Advertisement -
- Advertisement -

ಅರ್ಧಕ್ಕೂ ಹೆಚ್ಚು ನೀರಿನಲ್ಲಿ ಮುಳುಗಿದ ಲೋಕಲ್ ರೈಲುಗಳು, ಅದರಲ್ಲಿ ಸಿಲುಕಿಕೊಂಡ ಜನ, ಊರಿನ ಪ್ರಮುಖ ಬೀದಿಗಳಲ್ಲೇ ರಭಸದಿಂದ ಹರಿಯುತ್ತಿರುವ ಮಳೆ ನೀರು, ಅದರಲ್ಲಿ ಆಟಿಕೆಗಳಂತೆ ಕೊಚ್ಚಿ ಹೋಗುತ್ತಿರುವ ಕಾರುಗಳು, ಅದೇ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ಜನರನ್ನು ಉಳಿಸಲು ಪಡುತ್ತಿರುವ ಕಷ್ಟ, ಎಲ್ಲವನ್ನೂ ದಹಿಸುತ್ತಿರುವ ಎತ್ತರದ ಕಾಳ್ಗಿಚ್ಚಿನ ಜ್ವಾಲೆಗಳು, ಇವೆಲ್ಲಾ ಪ್ರಳಯದ ಕುರಿತ ಹಾಲಿವುಡ್ ಸಿನೆಮಾದ ದೃಶ್ಯಗಳಂತೆ ಕಾಣುತ್ತವೆ. ಆದರೆ ದುರ್ದೈವವೆಂದರೆ ಕಳೆದೆರಡು ವಾರಗಳಲ್ಲಿ ನಮ್ಮ ಮೊಬೈಲಿಗೆ ಬಂದ ಈ ವಿಡಿಯೋ ತುಣುಕುಗಳು ನೈಜ ಘಟನೆಗಳೇ ಆಗಿವೆ. ಇವೆಲ್ಲವುಗಳು ಒಂದೇ ಪ್ರದೇಶದಲ್ಲಿ ಸಂಭವಿಸಿದ ಅವಘಡಗಳಲ. ಭಾರತವೂ ಸೇರಿದಂತೆ ಜಗತ್ತಿನ ವಿವಿಧ ದೇಶಗಳಲ್ಲಿ ಹವಾಮಾನ ವೈಪರೀತ್ಯದಿಂದ ಸಂಭವಿಸಿದ ಘಟನೆಗಳಾಗಿವೆ ಇವು.

ಈ ವರ್ಷವಷ್ಟೇ ಅಲ್ಲ, ಕಳೆದ ಕೆಲ ವರ್ಷಗಳಿಂದ ವಿಶ್ವಾದ್ಯಂತ ಇಂತಹ ದುರಂತದ ಘಟನೆಗಳು ಮರುಕಳಿಸುತ್ತಿರುವುದನ್ನು ನಾವು ನೋಡುತ್ತಲೇ ಇದ್ದೇವೆ. ಜಗತ್ತಿನೆಲ್ಲೆಡೆ ಹೆಚ್ಚು ಉಷ್ಣತೆಯ ಮತ್ತು ಅತಿ ಹೆಚ್ಚು ಮಳೆಯ ಸಾರ್ವಕಾಲಿಕ ದಾಖಲೆಗಳೆಲ್ಲವೂ ಹೊಸದಾಗಿ ಬರೆಯಲ್ಪಡುತ್ತಿವೆ. ಫಿನ್ಲ್ಯಾಂಡ್ ಆದಿಯಾಗಿ ಎಲ್ ನಾರ್ಡಿಕ್ ದೇಶಗಳಲ್ಲಿ ಇತಿಹಾಸದಲ್ಲೇ ಅತಿ ಹೆಚ್ಚು ಜುಲೈ ತಿಂಗಳ ಸರಾಸರಿ ಉಷ್ಣಾಂಶ ದಾಖಲಾಗಿದೆ. ಭಾರತದ ವಿಜ್ಞಾನಿಗಳ ಅಧ್ಯಯನದಂತೆ ಕಳೆದ ಎರಡು ದಶಕಗಳಲ್ಲಿ ಅರಬ್ಬೀ ಸಮುದ್ರದ ಮೇಲ್ಮೈ ಉಷ್ಣಾಂಶ ಸುಮಾರು 1.2 ರಿಂದ 1.4 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದೆ. ಈ ಹೆಚ್ಚಳದಿಂದಾಗಿ ಪಶ್ಚಿಮ ತೀರಕ್ಕೆ ಅಪ್ಪಳಿಸುವ ಚಂಡಮಾರುತಗಳು ರೌದ್ರಾವತಾರ ತಳೆಯುತ್ತಿವೆ ಮತ್ತು ಅವುಗಳ ಸಂಖ್ಯೆಯಲ್ಲಿ ಕೂಡ ಹೆಚ್ಚಳ ಕಂಡುಬಂದಿದೆ. ಇತ್ತೀಚೆಗಷ್ಟೇ ಪಶ್ಚಿಮ ಕರಾವಳಿಗೆ ಅಪ್ಪಳಿಸಿದ ತೌತೆ ಚಂಡಮಾರುತ ನೂರಾರು ಜನರನ್ನು ಬಲಿ ತೆಗೆದುಕೊಂಡಿದ್ದಲ್ಲದೆ ಸುಮಾರು 15 ಸಾವಿರ ಕೋಟಿಯಷ್ಟು ಆರ್ಥಿಕ ನಷ್ಟವನ್ನೂ ಉಂಟು ಮಾಡಿತು. ಇನ್ನು ವೈಜ್ಞಾನಿಕ ವಿಶ್ಲೇಷಣೆಗಳ ಪ್ರಕಾರ ಮುಂದಿನ ದಿನಗಳಲ್ಲಿ ಚಂಡಮಾರುತ, ನೆರೆ ಹಾವಳಿ ಮತ್ತು ಬರದ ಪ್ರಮಾಣವೂ ಹಿಂದೆಂದಿಗಿಂತ ಹೆಚ್ಚಾಗಲಿದೆ. ಅವುಗಳಿಂದ ಉಂಟಾಗುವ ಜೀವಹಾನಿ ಮತ್ತು ಆರ್ಥಿಕ ನಷ್ಟಗಳು ಕೂಡ ಊಹೆಗೂ ನಿಲುಕದ್ದಾಗಿವೆ.

PC : Kannada Prabha

ಮೊದಲೆಲ್ಲ ನೆರೆ ಮತ್ತು ಬರ ಹೆಚ್ಚಾಗಿ ಬಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಸಮಸ್ಯೆಯಷ್ಟೇ ಆಗಿತ್ತು. ಆದರೆ ಇದೇ ವರ್ಷ ಜರ್ಮನಿ, ನೆದರ್ಲ್ಯಾಂಡ್, ಬೆಲ್ಜಿಯಂ ಮುಂತಾದ ಯೂರೋಪಿಯನ್ ದೇಶಗಳಲ್ಲಿ ಉಂಟಾದ ಭಾರಿ ಪ್ರಮಾಣದ ಪ್ರವಾಹವು, ಹವಾಮಾನ ವೈಪರೀತ್ಯದಿಂದ ಯಾರೂ ಸುರಕ್ಷಿತವಲ್ಲ ಎಂಬುದನ್ನು ಸಾರಿ ಹೇಳಿತು. ಇದಕ್ಕೂ ಮುಂಚೆ ಇದೇ ಪ್ರದೇಶಗಳಲ್ಲಿ ಅತೀಹೆಚ್ಚು ಉಷ್ಣಾಂಶ ದಾಖಲಾಗಿತ್ತು. ಆಗಲೇ ವಿಜ್ಞಾನಿಗಳು ಇದರಿಂದ ಮಳೆಯ ಪ್ರಮಾಣದಲ್ಲಿ ಅನಿಶ್ಚಿತತೆ ಮತ್ತು ಇತರ ವಿಪರೀತ ಪರಿಣಾಮಗಳು ಕಂಡುಬರಬಹುದೆಂದು ಎಚ್ಚರಿಸಿದ್ದರು. ಈ ಪ್ರವಾಹಗಳಿಗೆ ಖಚಿತ ಕಾರಣ ಹುಡುಕುವ ಸಂಶೋಧನೆಗಳು ನಡೆದಿದ್ದರೂ ತಾಪಮಾನ ಏರಿಕೆಯೇ ಇವುಗಳಿಗೆ ಮೂಲಕಾರಣ ಎಂಬುದು ಎಲ್ಲ ಸಂಶೋಧಕರ ಅಭಿಪ್ರಾಯ. ಉಷ್ಣತೆಯು ಹೆಚ್ಚಾದಂತೆ ಹೆಚ್ಚಿನ ನೀರು ಆವಿಯಾಗಿ ಮೋಡವನ್ನು ಸೇರುತ್ತವೆ, ಆಗ ಹೆಚ್ಚು ತೇವಾಂಶ ಹೊಂದಿದ ಮೋಡಗಳು ಭಾರೀ ಪ್ರಮಾಣದ ಮಳೆಯನ್ನೂ ಉಂಟುಮಾಡುತ್ತವೆ.

ಒಂದು ಪ್ರದೇಶದ ಮಣ್ಣಿನ ರಚನೆ ಮತ್ತು ನದಿಯ ಹಳ್ಳಗಳ ವ್ಯವಸ್ಥೆಯು ಅತೀ ಹೆಚ್ಚು ಪ್ರಮಾಣದ ಮಳೆಯನ್ನು ತಾಳಿಕೊಳ್ಳಲು ಸಾಧ್ಯವಿಲ್ಲದಿದ್ದರೆ ಇಂತಹ ಭೀಕರ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಇದಷ್ಟೇ ಅಲ್ಲದೆ ನಾವು ಅತಿಯಾದ ನಗರೀಕರಣ ಮತ್ತು ಅಭಿವೃದ್ಧಿಯಿಂದ ಭೂಮಿಯ ಮೇಲ್ಮೈನಲ್ಲಿ ತುಂಬಾ ಬದಲಾವಣೆಗಳನ್ನು ಮಾಡಿದ್ದೇವೆ. ಮಳೆಯ ರಭಸವನ್ನು ತಡೆಯುವ ಮರಗಳನ್ನು ಕಡಿದಿದ್ದೇವೆ, ನೀರನ್ನು ನಿಧಾನವಾಗಿ ಭೂಮಿಗೆ ಇಳಿಸುವ ಹುಲ್ಲುಗಾವಲುಗಳನ್ನು ಬರಡು ಜಮೀನೆಂದು ಕರೆದು ನಾನಾರೀತಿಯ ಅಭಿವೃದ್ಧಿಗೆ ತೆರೆದಿಟ್ಟಿದ್ದೇವೆ. ಹೀಗಾಗಿ ಮಳೆ ನೀರಿನ ವೇಗವನ್ನು ತಡೆಯುವ ವ್ಯವಸ್ಥೆ ಇಲ್ಲದೆ ಪ್ರವಾಹದ ಪರಿಸ್ಥಿತಿಯು ಇನ್ನೂ ಭೀಕರವಾಗಿ ಪರಿಣಮಿಸುತ್ತಿದೆ. ಯೂರೋಪ್ ಅಷ್ಟೇಅಲ್ಲದೇ ಚೀನಾ ಮತ್ತು ಆಗ್ನೇಯ ಏಷ್ಯಾದ ರಾಷ್ಟ್ರಗಳಲ್ಲೂ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಚೀನಾ ದೇಶಕ್ಕೆ ಪ್ರವಾಹಗಳು ಹೊಸದೇನೂ ಅಲ್ಲ, ಆದರೆ ಈ ವರ್ಷ ಸುರಿದ ಮಳೆಯು ಕಳೆದ ಸಾವಿರ ವರ್ಷಗಳಲ್ಲೆ ಅತೀ ಹೆಚ್ಚಿನದಾಗಿದೆ ಎಂದರೆ ನಮಗೆ ಅಪಾಯದ ಅರಿವು ಸ್ವಲ್ಪ ಮಟ್ಟಿಗೆ ಆದರೂ ಸಾಕು.

ಚೀನಾದ ಹೆನಾನ್ ಪ್ರಾಂತ್ಯದಲ್ಲಿ ಒಂದು ವರ್ಷಕ್ಕೆ ಸುರಿಯುವ ಮಳೆ ಕೇವಲ ನಾಲ್ಕು ದಿನಗಳಲ್ಲಿ ಸುರಿದಿದೆ ಎಂದರೆ ಅದರ ಭೀಕರತೆ ಎಷ್ಟಿತ್ತು ಎಂಬುದನ್ನು ನಾವು ಅಂದಾಜಿಸಬಹುದು. ಅಷ್ಟೇಅಲ್ಲದೇ ಇಂಡೋನೇಷಿಯಾದ ಜೀವ ವೈವಿಧ್ಯತೆಯ ತಾಣವಾದ ಬೋರ್ನಿಯೋ ಕಾಡಿನ ಸುಲಾವೆಸಿ ಪ್ರಾಂತ್ಯದಲ್ಲೂ ಅಪಾಯಕಾರಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ದಟ್ಟ ಮಳೆಕಾಡುಗಳನ್ನು ಹೊಂದಿದ ಈ ಪ್ರದೇಶಕ್ಕೆ ಭಾರೀ ಮಳೆ ದಿನನಿತ್ಯದ ಸಮಾಚಾರ, ಹಾಗಿದ್ದೂ ಇಲ್ಲಿ ಪ್ರವಾಹ ಉಂಟಾಗಿದೆಯೆಂದರೆ ಅದಕ್ಕೆ ಜಾಗತಿಕ ತಾಪಮಾನ ಏರಿಕೆಯಷ್ಟೇ ಅಲ್ಲದೆ, ಸ್ಥಳೀಯವಾಗಿ ಉಂಟಾಗುತ್ತಿರುವ ವ್ಯಾಪಕ ಅರಣ್ಯನಾಶವೂ ಕಾರಣವಾಗಿದೆ. ಮರಮುಟ್ಟುಗಳಿಗೆ ಮತ್ತು ಅಗ್ಗದ ಎಣ್ಣೆಯಾಗಿ ಬಳಸಲ್ಪಡುವ ತಾಳೆ ಮರಗಳ ಕೃಷಿಗಾಗಿ ವಿಸ್ತಾರವಾದ ದಟ್ಟ ಮಳೆಕಾಡುಗಳನ್ನು ಕಡಿದಿರುವುದು ಕೂಡ ಈ ಎಲ್ಲ ವೈಪರೀತ್ಯಗಳಿಗೆ ಕಾರಣ.

ಇವೆಲ್ಲ ಜಾಗತಿಕ ಘಟನೆಗಳನ್ನು ವಿಶ್ಲೇಷಿಸುತ್ತಿರುವ ವಿಜ್ಞಾನಿಗಳು ಎಚ್ಚರಿಕೆಯ ಕರೆಗಂಟೆಗಳನ್ನು ಬಾರಿಸುತ್ತಲೇ ಇದ್ದಾರೆ. ಕಳೆದ ಎರಡು ದಶಕಗಳಿಂದ ವಿಜ್ಞಾನಿಗಳ ಎಲ್ಲ ಎಚ್ಚರಿಕೆಗಳನ್ನೂ ನಾವು ಕಡೆಗಣಿಸುತ್ತಲೇ ಬಂದಿದ್ದೇವೆ. ಅದೇ ಸಮಯದಲ್ಲಿ ಇಂಗಾಲದ ಹೊರಸೂಸುವಿಕೆ ಮತ್ತು ಅರಣ್ಯ ನಾಶಗಳು ಕಡಿಮೆಯಾಗುವ ಬದಲು ಹೆಚ್ಚಾಗುತ್ತಿವೆ. ನಮಗೆಲ್ಲ ಗೊತ್ತಿರುವಂತೆ ದಕ್ಷಿಣ ಅಮೆರಿಕದ ಅಮೆಜಾನ್ ಕಾಡುಗಳು ಇಂಗಾಲವನ್ನು ಹೀರುವ ಅತಿದೊಡ್ಡ ಪರಿಸರ ವ್ಯವಸ್ಥೆಯಾಗಿವೆ. ಆದರೆ ಕಳೆದ ಒಂದು ದಶಕದಲ್ಲಿ 2019 ಮತ್ತು 2020ರಲ್ಲಿಯೇ ಅಮೆಜಾನ್ ಪ್ರದೇಶ ಅತೀಹೆಚ್ಚಿನ ಪ್ರಮಾಣದ ಕಾಡುಗಳನ್ನು ಕಾಳ್ಗಿಚ್ಚು ಮತ್ತು ತೈಲ ನಿಕ್ಷೇಪಗಳ ವಿಸ್ತರಣೆ ಮತ್ತು ಇತರ ಕಾರಣಗಳಿಗಾಗಿ ಕಳೆದುಕೊಂಡಿವೆ. ಇದರ ಪರಿಣಾಮವಾಗಿ ಇಂಗಾಲ ಹೀರುವ ಶ್ವಾಸಕೋಶಗಳಾಗಿದ್ದ ಅಮೆಜಾನ್ ಇಂದು ಇಂಗಾಲವನ್ನು ಹೊರಸೂಸುವ ಪ್ರದೇಶವಾಗಿ ಮಾರ್ಪಟ್ಟಿದೆ. ಹಸಿರುಮನೆ ಪರಿಣಾಮವನ್ನು ಉಂಟುಮಾಡುವ ಇಂಗಾಲದ ಡೈಆಕ್ಸೈಡ್, ನೈಟ್ರಸ್ ಆಕ್ಸೈಡ್ ಮತ್ತು ಮೀಥೇನ್ ಅನಿಲಗಳು ಜಾಗತಿಕವಾಗಿ ಇಂದು ಅತ್ಯಂತ ಹೆಚ್ಚಿನ ಮಟ್ಟದಲ್ಲಿ ವಾತಾವರಣದಲ್ಲಿ ಶೇಖರಣೆಯಾಗಿವೆ. ಚೀನಾ ದೇಶದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಮತ್ತು ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಕಲ್ಲಿದ್ದಲು ನಿಕ್ಷೇಪಗಳು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುತ್ತಿವೆ.

PC : India Today

ಇವೆಲ್ಲವುಗಳ ಹಿನ್ನೆಲೆಯಲ್ಲಿ ಸುಮಾರು 14000 ವಿಜ್ಞಾನಿಗಳು ಸಹಿ ಮಾಡಿರುವ ವರದಿಯಲ್ಲಿ ನಾವು ಈಗಾಗಲೇ ಅಪಾಯದ ಮಟ್ಟ ಮೀರಿರುವ ಉಲ್ಲೇಖವಿದೆ. ನಾವು ಹೇಗೆ ಹೃದಯ, ಮೂತ್ರಪಿಂಡ, ರಕ್ತ ಮತ್ತು ದೇಹದ ಇತರ ಅಂಗಾಂಗಗಳ ತಪಾಸಣೆಯನ್ನು ಮಾಡಿ ವ್ಯಕ್ತಿಯ ಆರೋಗ್ಯವನ್ನು ತಿಳಿಯುತ್ತೇವೆಯೋ ಹಾಗೆ, ಪರಿಸರದ ಆರೋಗ್ಯವನ್ನು ಸೂಚಿಸುವ 31 ಮಹತ್ವದ ಅಂಶಗಳ ತಪಾಸಣೆ ಮಾಡಿದಾಗ ಅವುಗಳಲ್ಲಿ 18 ಅಂಶಗಳು ಈಗಾಗಲೇ ಐತಿಹಾಸಿಕವಾದ ಅತೀಹೆಚ್ಚು ಅಥವಾ ಕಡಿಮೆ ಪ್ರಮಾಣಕ್ಕೆ ಹೋಗಿವೆ ಎಂದು ಸೂಚಿಸಲಾಗಿದೆ. ಉದಾಹರಣೆಗೆ ಜಾಗತಿಕವಾಗಿ ಇಂಗಾಲದ ಹೊರಸೂಸುವಿಕೆ 2021ರಲ್ಲಿ ಇತಿಹಾಸದಲ್ಲೇ ಅತೀ ಹೆಚ್ಚು ಪ್ರಮಾಣಕ್ಕೆ ಏರಿದೆ. ಧ್ರುವ ಪ್ರದೇಶಗಳಲ್ಲಿ ಹಿಮದ ಪ್ರಮಾಣವೂ ಅತ್ಯಂತ ಕಡಿಮೆ ದಾಖಲಾಗಿದೆ, ಮಹಾಸಾಗರಗಳ ತಾಪಮಾನ ಮತ್ತು ಸಮುದ್ರಮಟ್ಟ ಅತಿಹೆಚ್ಚು ದಾಖಲಾಗಿದೆ ಮತ್ತು ಅಮೆಜಾನ್‌ನ ವಾರ್ಷಿಕ ಅರಣ್ಯನಾಶವು ದಶಕದಲ್ಲೇ ಅತೀ ಹೆಚ್ಚು ದಾಖಲಾಗಿದೆ. ಈ ವರದಿಯ ಸಾರಾಂಶವೆಂದರೆ, ಬಹುಶಃ ಇದು ನಮಗೆ ನಾವು ಕೊಟ್ಟುಕೊಳ್ಳಬಹುದಾದ ಕೊನೆಯ ಅವಕಾಶ ಎಂಬುದಾಗಿದೆ. ಈ ಅವಕಾಶದಲ್ಲಿಯೂ ಕೈಚೆಲ್ಲಿದರೆ ಈ ವೈಪರೀತ್ಯಗಳು ಒಂದಕ್ಕೊಂದು ಸರಣಿ ಪ್ರಕ್ರಿಯೆಯನ್ನು ಉಂಟುಮಾಡುವ ಡೊಮಿನೊ ಎಫೆಕ್ಟ್ ಅನ್ನು ಸೃಷ್ಟಿ ಮಾಡುತ್ತವೆ.

ಇವು ಜಾಗತಿಕ ವಿದ್ಯಮಾನಗಳಾದರೆ ನಮ್ಮ ದೇಶ ಮತ್ತು ರಾಜ್ಯಗಳಲ್ಲಿ ಕೂಡ ಪರಿಸ್ಥಿತಿ ಭಿನ್ನವಾಗಿಲ್ಲ. ವರ್ಷದಿಂದ ವರ್ಷಕ್ಕೆ ಪ್ರವಾಹ ಮತ್ತು ಬರ ಪರಿಸ್ಥಿತಿಗಳು ಹೆಚ್ಚಾಗುತ್ತಿವೆ. ಅದರ ಜೊತೆಗೆ ಬರ ಮತ್ತು ನೆರೆ ಪರಿಹಾರಕ್ಕೆ ಮೀಸಲಿಡುವ ಹಣವೂ ಕೂಡ. ಭಾರತದಲ್ಲಿ 2000-2017ರ ವರೆಗೆ ಪ್ರಾಕೃತಿಕ ವಿಕೋಪದಿಂದ ಉಂಟಾದ ನಷ್ಟವು ಸುಮಾರು 4 ಲಕ್ಷ ಕೋಟಿ ರೂಪಾಯಿಯಾದರೆ, 2019ರ ಒಂದು ವರ್ಷದಲ್ಲೇ ಸುಮಾರು 70 ಸಾವಿರ ಕೋಟಿ ರೂಪಾಯಿಗಳ ನಷ್ಟವನ್ನು ಪ್ರಕೃತಿ ವಿಕೋಪದಿಂದ ನಾವು ಅನುಭವಿಸಿದ್ದೇವೆ. ಇದರ ಜೊತೆಗೆ ಅಪಾರ ಪ್ರಮಾಣದ ಸಾವು ನೋವು ಮತ್ತು ಉದ್ಯೋಗ ನಷ್ಟದ ಲೆಕ್ಕ ಬೇರೆಯೇ ಇದೆ. ಕೊಡಗು ಮತ್ತು ಕೇರಳದಲ್ಲಿ ಉಂಟಾದ ಭೂಕುಸಿತಕ್ಕೆ ಅತಿಯಾದ ಮಾನವನ ಹಸ್ತಕ್ಷೇಪವೇ ಕಾರಣ ಎಂದು ಎಲ್ಲ ವೈಜ್ಞಾನಿಕ ವರದಿಗಳೂ ಹೇಳುತ್ತಿವೆ. ಕೊಡಗಿನಲ್ಲಿ ವಿಕೋಪ ಉಂಟಾದ ಸಂದರ್ಭದಲ್ಲಿ ಅಲ್ಲಿನ ಹಿರಿಯರೊಬ್ಬರು ಸಂದರ್ಶನವೊಂದರಲ್ಲಿ, ತಾವು ಮುಂಚೆ ಇದಕ್ಕಿಂತಲೂ ಭೀಕರ ಮಳೆಗಳನ್ನು ನೋಡಿದ್ದಾಗಿ ಹೇಳುತ್ತಿದ್ದರು, ಆದರೆ ಈ ರೀತಿಯ ಭೂಕುಸಿತ ತಮ್ಮ ಜೀವಮಾನದಲ್ಲೇ ಮೊದಲ ಬಾರಿ ನೋಡುತ್ತಿರುವುದಾಗಿ ತಿಳಿಸಿದ್ದರು. ಭೂಗರ್ಭ ಶಾಸ್ತ್ರಜ್ಞರ ಅಧ್ಯಯನದ ಪ್ರಕಾರ, ಘಟ್ಟದ ಇಳಿಜಾರುಗಳಲ್ಲಿ ಮಾಡಿದ ಅತಿಯಾದ ಮಾರ್ಪಾಡುಗಳು, ಗಣಿಗಾರಿಕೆ ಮತ್ತು ಅರಣ್ಯನಾಶವೇ ಈ ಭೂಕುಸಿತಕ್ಕೆ ಕಾರಣವಾಗಿದೆ. ಮತ್ತು ಇದು ವರ್ಷದಿಂದ ವರ್ಷಕ್ಕೆ ಮಲೆನಾಡಿನ ಇತರ ಭಾಗಗಳಿಗೂ ಹಬ್ಬುತ್ತಿದೆ.

ಇವೆಲ್ಲದರ ನಡುವೆ ಅತ್ಯಂತ ನಿರಾಸೆ ಮತ್ತು ಸೋಜಿಗ ಉಂಟುಮಾಡುವ ಸಂಗತಿ ಎಂದರೆ ನಾವು ಮತ್ತು ನಮ್ಮನ್ನು ಪ್ರತಿನಿಧಿಸುವ ರಾಜಕಾರಣಿಗಳು ಏನೂ ಆಗಿಯೇ ಇಲ್ಲ ಎನ್ನುವ ಉದಾಸೀನ ಮನಸ್ಥಿತಿಯಲ್ಲಿ ಇರುವುದು. ಇದನ್ನೂ ಮೀರಿ ಕೆಲ ರಾಜಕಾರಣಿಗಳು ಮತ್ತು ಅವರ ಆಪ್ತ ವರ್ಗದ ಉದ್ಯಮಿಗಳು ಜಾಗತಿಕ ತಾಪಮಾನ ಏರಿಕೆ ಸುಳ್ಳು, ಇವೆಲ್ಲ ಜನರಿಗೆ ದಿಗಿಲು ಹುಟ್ಟಿಸಲು ಹರಿಬಿಟ್ಟ ಊಹಾಪೋಹಗಳು ಎಂದು ಜನರನ್ನು ನಂಬಿಸಲು ಪ್ರಯತ್ನಿಸುತ್ತಿದ್ದಾರೆ, ಅದರ ಜೊತೆಗೇ ತಮ್ಮ ಪರಿಸರ ವಿರೋಧಿ ಉದ್ಯಮಗಳನ್ನು ಯಾವುದೇ ಅಡೆತಡೆ ಇಲ್ಲದೆ ನಡೆಸಲು ಎಲ್ಲ ರೀತಿಯ ಲಾಬಿಗಳನ್ನೂ ಮಾಡುತ್ತಿವೆ. ಆದರೆ ಇದೇ ಬಿಲಿಯನೇರ್‌ಗಳು ಯಾವ ಸದ್ದೂ ಇಲ್ಲದೇ, ಮುಂದೊಂದು ದಿನ ಪ್ರಳಯ ಉಂಟಾದರೆ ತಾವು ಮತ್ತು ತಮ್ಮ ಕುಟುಂಬದವರು ಬದುಕುಳಿಯಲು ಬೇಕಾದ ಏರ್ಪಾಟುಗಳನ್ನು ಈಗಾಗಲೇ ಮಾಡಿಕೊಳ್ಳುತ್ತಿದ್ದಾರೆ! ನ್ಯೂಜಿಲ್ಯಾಂಡ್ ದೇಶದಲ್ಲಿ ವೈಭವೋಪೇತ ಬಂಕರ್‌ಗಳನ್ನು ನಿರ್ಮಿಸಿಕೊಂಡು ಅವಕ್ಕೆ ಶಸ್ತ್ರಸಜ್ಜಿತ ಕಾವಲನ್ನೂ ಇಟ್ಟಿದ್ದಾರೆ. ಜನರಿಗೆಲ್ಲ ‘All is well’ ಎಂದು ತಿಪ್ಪೆ ಸಾರಿಸಿ ತಾವು ಅಂತರಿಕ್ಷದಲ್ಲೂ ಮನೆ ಮಾಡುವ ಹುಚ್ಚಾಟಕ್ಕೂ ಇಳಿದಿದ್ದಾರೆ.

ಇವೆಲ್ಲವನ್ನೂ ನೋಡಿದರೆ ಬಸವಣ್ಣನ “ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೇ ಧರೆ ಹತ್ತಿ ಉರಿದಡೆ ನಿಲಲುಬಾರದು” ಎಂಬ ವಚನದ ಸಾಲು prophetic ಆಗಿ ಕಾಣಿಸದೆ ಇರದು!

ಗುರುಪ್ರಸಾದ್ ತಿಮ್ಮಾಪುರ

ಗುರುಪ್ರಸಾದ್ ತಿಮ್ಮಾಪುರ
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಗುರು ಪರಿಸರ, ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಸರ ಕಾಳಜಿಗೆ ಸಂಬಂಧಿಸಿದಂತೆ ಹಲವು ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಭಾರೀ ಪ್ರವಾಹ: ನೂರಕ್ಕೂ ಹೆಚ್ಚು ಸಾವು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...